ADVERTISEMENT

ನಿಜಕ್ಕೂ ತಪ್ಪು ಯಾರದು?

ಭಾವಸೇತು

ಸತ್ಯಬೋಧ, ಬೆಂಗಳೂರು
Published 3 ನವೆಂಬರ್ 2018, 19:30 IST
Last Updated 3 ನವೆಂಬರ್ 2018, 19:30 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಬಹು ಹಿಂದೆ ನಡೆದ ಘಟನೆ. ನಾಳೆ ದೀಪಾವಳಿ ಹಬ್ಬ. ಕಂಪ್ಲಿ ಪಟ್ಟಣದಲ್ಲಿ ಇನ್‌ಸ್ಪೆಕ್ಷನ್ ಮಾಡುತ್ತಿರುವಾಗ ಒಂದೇ ಕಟ್ಟಡದಲ್ಲಿನ ನಾಲ್ಕು ಹೊಸದಾಗಿ ನಿರ್ಮಿತವಾದ ಅಂಗಡಿಗಳು ಹಬ್ಬಕ್ಕೆ ಶೃಂಗರಿಸಿಕೊಂದು ವಿದ್ಯುತ್ ಪ್ರಭೆಯಲ್ಲಿ ಕಂಗೊಳಿಸುತ್ತಿದ್ದವು. ನಾನು ಜೀಪಿಂದ ಇಳಿದು ಪರಿಶೀಲಿಸಿದಾಗ ಅವುಗಳಿಗೆ ಹಿಂದಿನ ದಿನ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ತಿಳಿದುಬಂತು. ನನ್ನ ಡೈರಿ ಪರಿಶೀಲಿಸಿದೆ. ಅವುಗಳಿಗೆ ಇನ್ನೂ ವಿದ್ಯುತ್ ಸರಬರಾಜು ಸ್ಯಾಂಕ್ಷನ್ ಆಗಿರಲಿಲ್ಲ.

ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇದು ಶಿಕ್ಷಾರ್ಹ ಅಪರಾಧ. ಇನ್‌ಸ್ಪೆಕ್ಷನ್ ಮುಗಿಸಿ ಸೀದಾ ಶಾಖಾ ಕಚೇರಿಗೆ ಹೋದೆ...

‘ಸ್ಯಾಂಕ್ಷನ್ ಆಗದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಸ್ ಬುಕ್ ಮಾಡಿ’ ಎಂದೆ

ADVERTISEMENT

‘ಅವರಾಗಿ ತೆಗೆದುಕೊಂಡಿಲ್ಲ ಸರ್ ನಾನೇ ಕೊಟ್ಟಿದ್ದೇನೆ’ ಎಂದ ಎಂಜಿನಿಯರ್ ರಾಮ್ ಸಿಂಗ್.

’ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಪರಾಧ ಅಲ್ಲವೇ?’ ಎಂದೆ ಗಡುಸಾಗಿ.

‘ನಾಳೇನೇ ಹಬ್ಬ ಸರ್ ನಾನು ಸಂಬಂಧಪಟ್ಟ ದಾಖಲೆಗಳನ್ನು ನಿಮ್ಮ ಕಚೇರಿಗೆ ಸಲ್ಲಿಸಿದ್ದೇನೆ. ಎಲ್ಲ ನಿಯಮಗಳನ್ನೂ ಅನುಸರಿಸಿ ಪೂರೈಸಿದ್ದಾಗಲೂ ಹಬ್ಬಕ್ಕೆ ವಿದ್ಯುತ್ ಕೊಡದೆ ಅವರು ಕತ್ತಲಲ್ಲಿ ಅಂಗಡಿ ಪೂಜೆ ಮಾಡಬೇಕೆ?’

ಸಹಾಯಕ ಎಂಜಿನಿಯರ್‌ನ ಈ ಮಾತು ನನಗೆ ಉದ್ಧಟತನವಾಗಿ ಕಂಡಿತು.

‘ಸ್ಯಾಂಕ್ಷನ್ ಇಲ್ಲದೆ ವಿದ್ಯುತ್ ಸರಬರಾಜು ಮಾಡಿದ್ದು ರೂಲ್ಸ್ ಪ್ರಕಾರ ಒಂದು ಶಿಕ್ಷಾರ್ಹ ಅಪರಾಧ ಅಲ್ಲೇನ್ರಿ?’ ಎಂದೆ ಮತ್ತೆ ಸಹನೆ ಕಳೆದುಕೊಂಡು.

‘ಆದರೆ ಎಲ್ಲ ನೀತಿ ನಿಯಮ ಪಾಲಿಸಿದ್ದರೂ ನಿಮ್ಮ ಆಫೀಸಲ್ಲಿ ಪೆಂಡಿಂಗ್ ಇದೆ. ನಮ್ಮ ತಪ್ಪಿಗೆ ಅಂಗಡಿಯವರು ಲೈಟ್ ಇಲ್ಲದೆ ದೀಪಾವಳಿ ಹಬ್ಬ ಮಾಡಬೇಕೆ?’ ಎಂದು ನೇರವಾಗಿ ಆತ ಸವಾಲು ಎಸಗಿದ.

ಇದರಿಂದ ನನಗೆ ಅವಮಾನವಾದಂತಾಗಿತ್ತು. ತಡೆಯಲಾಗಲಿಲ್ಲ. ತಕ್ಷಣವೇ ಇದನ್ನು ಬಳ್ಳಾರಿಯಲ್ಲಿರುವ ಕಾರ್ಯನಿರ್ವಾಹಕ ಎಂಜಿನಿಯರ್ ಗಮನಕ್ಕೆ ತಂದು, ನಿಯಮ ಮೀರಿ ನಡೆದುಕೊಂಡ ಆ ಎಂಜಿನಿಯರನ್ನು ತಕ್ಷಣವೇ ಅಮಾನತ್ತಿನಲ್ಲಿಡಬೇಕು ಎಂದು ನಿರ್ಧರಿಸಿ ಜೀಪು ಹತ್ತಿ ಡ್ರೈವರ್ ರೆಹಮಾನಗೆ ‘ಬಳ್ಳಾರಿಗೆ ಹೋಗೋಣ’ ಎಂದೆ. ಬಳ್ಳಾರಿ ನಮ್ಮ ಡಿವಿಜನ್ ಆಫೀಸ್. ರೆಹಮಾನ್ ಇದೆಲ್ಲವನ್ನೂ ಗಮನಿಸಿದ್ದ. ತಕ್ಷಣವೇ ಜೀಪ್ ಸ್ಟಾರ್ಟ್ ಮಾಡಿದ.

ಎರಡು ಮೂರು ಕಿಮಿ ಹೋಗಿರಬಹುದು. ಜೀಪ್ ನಿಲ್ಲಿಸಿ ನನ್ನ ಕಡೆ ನೋಡಿ ‘ಸರ್, ರಾಂ ಸಿಂಗ ತುಂಬ ಹಾನೆಷ್ಟ್. ನಿಮ್ಮಷ್ಟೇ ಸ್ಟ್ರಿಕ್ಟ್. ಲಂಚಕ್ಕೆ ಕೈ ಒಡ್ಡೋರಲ್ಲ ಸರ್’ ಅಂದ.

ಹೌದು. ಅವನೊಬ್ಬ ಅತ್ಯಂತ ಪ್ರಾಮಾಣಿಕ ದಕ್ಷ ಎಂಜಿನಿಯರ್ ಎಂದು ನನಗೂ ಗೊತ್ತಿತ್ತು.

‘ಅದು ಸರಿ ರೆಹಮಾನ್. ಸ್ಯಾಂಕ್ಷನ್ ಡಿಲೇ ಅಗಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಈ ರೀತಿ ರೂಲ್ಸ್ ವಿರುದ್ಧವಾಗಿ ಸಪ್ಲೈ ಕೊಡಬಹುದೆ? ಅದೂ ಅಲ್ಲದೆ ಅವನು ಮಾತಾಡಿದ ರೀತಿ ನೋಡು’ ಎಂದೆ.

‘ಹಾನೆಷ್ಟ್‌ ಆಗಿರೋರು ಯಾವಾಗಲೂ ಹಾಗೇ. ಮಾತಲ್ಲಿ ಹಾಗೇ ಸರ್. ರೂಲ್ಸ್ ಅಂತ ಹಬ್ಬದ ದಿನ ಅವರು ಅಂಗಡಿಗೆ ಕತ್ತಲಲ್ಲಿ ಇಡೋದು ಧರ್ಮವಾ ಸರ್. ಅವರೇನು ಲಂಚ ತೆಗೆದುಕೊಂಡು ಕೊಟ್ಟಿಲ್ಲ. ಅವರು ಜನರ ಮಧ್ಯ ಇರೋರು ಸರ್. ಒಳ್ಳೆ ಹೆಸರು ಮಾಡಿದ್ದಾರೆ. ರೂಲ್ಸ್ ಅಂತ ತಡ ಮಾಡಿದ್ದರೆ ಸರಿ ಆಗುತಿತ್ತಾ ಸರ್?’

ರೆಹಮಾನ್ ಒಬ್ಬ ಸಾಧಾರಣ ಡ್ರೈವರ್. ಆದರೆ ಅವನ ಯೋಚಿಸುವ ರೀತಿ ನನಗೆ ಆಶ್ಚರ್ಯ ಹುಟ್ಟಿಸಿತು.

‘ಲಂಚ ತಿನ್ನೋರು ನಿಮ್ಮ ಎದುರು ಸರ್ ಸರ್ ಅಂತ ಕೈಮುಗಿದುಕೊಂಡು ನಿಂತಿರುತ್ತಾರೆ. ಅವರ ತಪ್ಪು ಕಣ್ಣಿಗೇ ಬೀಳಲ್ಲ. ಅದರೆ ರಾಂ ಸಿಂಗ್ ಒಳ್ಳೇ ಆಫೀಸರ್. ನಿಮ್ಮಂಥ ಶ್ಟ್ರಿಕ್ಟ್ ಆಪೀಸರ್ ಅವರನ್ನು ಎನ್ಕರೇಜ್ ಮಾಡದಿದ್ದರೆ ಹೇಗೆ ಸರ್?’

ನನಗೆ ರೂಲ್ಸ್ ದೊಡ್ಡದಾಗಿತ್ತು. ರೂಲ್ಸ್ ಇರೋದು ಜನರ ಹಿತಕ್ಕಾಗಿ ಎನ್ನುವುದು ರಾಂ ಸಿಂಗ್ ತಿಳಿದ ಸತ್ಯ. ಇವೆರಡನ್ನೂ ತಿಳಿದು ಸಮಯೋಚಿತ ಸಲಹೆ ನೀಡುವ ಹೃದಯವಂತಿಕೆ ರೆಹಮಾನನದು. ಅವರೆದರು ನಾನು ಸಣ್ಣವನಾಗಿದ್ದೆ.

‘ರೆಹಮಾನ್ ಗಾಡಿ ವಾಪಸ್‌ ತೊಗೊ. ರಾಮ್ ಸಿಂಗ್ ತುಂಬ ಅಪ್‌ಸೆಟ್ ಆಗಿದಾನೆ’ ಎಂದೆ. ನನ್ನ ದುಡುಕು ನನಗೆ ಆರ್ಥವಾಗಿತ್ತು. ಅವನು ಖುಷಿಯಾಗಿ ಕ್ಷಣ ಮಾತ್ರದಲ್ಲಿ ಗಾಡಿ ಟರ್ನ್ ತಗೊಂಡು ಶರವೇಗದಲ್ಲಿ ಹಿಂದಕ್ಕೆ ಓಡಿಸಿದ.

ಅಧಿಕಾರಿಗಳಿಗೆ ರೂಲ್ಸ್ ಮುಖ್ಯ. ಹಾಗಂತ ಅದರ ಹೆಸರಲ್ಲಿ ಜನರಿಗೆ ತೊಂದರೆಕೊಡುವುದು ರೂಲ್ಸ್ ಪಾಲನೆಯೇ? ಎಂಬ ಪ್ರಶ್ನೆ ದಾರಿಯುದ್ದಕ್ಕೂ ನನ್ನನ್ನ ಕಾಡತೊಡಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.