ADVERTISEMENT

ಎರಡು ‌ರೂಪಾಯಿ ಕಥೆ...

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:31 IST
Last Updated 17 ಅಕ್ಟೋಬರ್ 2018, 19:31 IST

ನಾನು ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿದ್ದ ದಿನಗಳವು. ಒಂದು ದಿನ ಎಂದಿನಂತೆ ಬೆಳಿಗ್ಗೆ ಶಾಲೆಯಲ್ಲಿ ಪ್ರಾರ್ಥನೆಗಾಗಿ ಸಾಲಿನಲ್ಲಿ ನಿಂತಿದ್ದೆ. ನಮ್ಮಪ್ಪ ಶಾಲೆಯ ಕಡೆಗೆ ಬಿರುನಡಿಗೆಯಲ್ಲಿ ಬರುತ್ತಿದ್ದದ್ದನ್ನು ನೋಡಿದೆ. ನನ್ನೆದೆ ನಗಾರಿಯಂತೆ ಹೊಡೆದುಕೊಳ್ಳಲಾರಂಭಿಸಿತು. ಅಪಾಯದ ಮುನ್ಸೂಚನೆ ಸಿಕ್ಕರೂ ನಾನು ತಪ್ಪಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಪ್ರಾರ್ಥನೆ ಮಾಡುವಾಗ, ತುಸು ದೂರದಲ್ಲಿದ್ದ ಅಪ್ಪನ ಕಣ್ಣಲ್ಲಿದ್ದ ಕೋಪಾಗ್ನಿ ನನ್ನನ್ನು ಸುಡುತ್ತಿತ್ತು. ಚಡಪಡಿಸುತ್ತ ಪ್ರಾರ್ಥನೆ ಮುಗಿಸಿ ಕೊಠಡಿಯ ಕಡೆಗೆ ಕಳ್ಳ ಹೆಜ್ಜೆ ಹಾಕಿದೆ. ಅಪ್ಪ ಮುಖ್ಯಶಿಕ್ಷಕರ ಬಳಿ ಏನೋ ಮಾತನಾಡುತ್ತಿದ್ದರು.

ತರಗತಿಯ ಮೇಷ್ಟ್ರು ಬಂದು ನನ್ನನ್ನು ಪಾಟಿಚೀಲ ತೆಗೆದುಕೊಂಡು ಮನೆಗೆ ಹೋಗಲು ಸೂಚಿಸಿದರು. ನಡುಗುತ್ತ ಚೀಲವನ್ನು ಬಿಗಿದಪ್ಪಿಕೊಂಡು ಅಪ್ಪನ ಬಳಿಗೆ ಬಂದೆ. ಏನೊಂದೂ ಮಾತನಾಡದೆ ಅಪ್ಪ ಚೀಲ ಕಸಿದುಕೊಂಡು ಮನೆಯತ್ತ ಹೊರಟರು. ನಾನು ಅವರ ಹಿಂದೆ ಹೊರಟೆ.

ADVERTISEMENT

ಮನೆಯ ಒಳಗೆ ಕಾಲಿಟ್ಟ ಕೂಡಲೆ ನನ್ನ ಅಂಗಿಯ ಜೇಬು,ಚಡ್ಡಿ ಜೇಬು ಚೆಕ್ ಮಾಡಿದರು. ಅದರೊಳಗೆ ಒಂದೆರಡು ಬಟ್ಟೆ ಚೂರು, ಗೋಲಿ, ಮುರಿದ ಬಳಪ ಸಿಕ್ಕವು. ನಿರಾಶರಾದ ಅಪ್ಪ ಚೀಲ ಸುರಿದು ಹುಡುಕಿದರು. ಕೊನೆಗೂ ಅವರು ಹುಡುಕುತ್ತಿದ್ದದ್ದು ಒಂದು ಪುಸ್ತಕದ ಹಾಳೆಗಳ ನಡುವೆ ಸಿಕ್ಕಿತು. ಬೆಚ್ಚಗೆ ಮಲಗಿದ್ದ ಎರಡು ರೂಪಾಯಿ ನೋಟು.

’ಮೋಸ ಮಾಡೋದ ಕಲ್ತಿಯೇನೋ?’ ಎಂದು ನನ್ನ ತೊಡೆಗೆ ರಪ್ಪನೆ ಬಾರಿಸಿದರು. ಮನೆಯ ಕಪ್ಪು ಹೆಂಚು ಹಾರಿ ಹೋಗುವಂತೆ ‘ಅಮ್ಮಾ’ ಎಂದು ಚೀರಿ ಅಳಲಾರಂಭಿಸಿದೆ. ಹಿತ್ತಲಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಅಮ್ಮ ಹಸಿ ಕೈಯಲ್ಲೆ ಓಡಿ ಬಂದು ನನ್ನ ತಬ್ಬಿಕೊಂಡು, ‘ಯಾಕ್ರೀ? ಏನಾಯ್ತ್ರೀ?’ ಎಂದು ಅಪ್ಪನನ್ನು ಕೇಳಿದಳು.

ಕೈಯಲ್ಲಿ ಎರಡು ರೂಪಾಯಿಯ ನೋಟನ್ನು ಹಿಡಿದುಕೊಂಡು ಗರಬಡಿದವರಂತೆ ಕುಳಿತಿದ್ದ ಅಪ್ಪ, ದೀರ್ಘ ಉಸಿರು ಹೊರಚೆಲ್ಲಿ, ‘ನೋಡು ನಿನ್ನ ಮುದ್ದಿನ ಮಗ ಎಂಥಾ ಕೆಲ್ಸ ಮಾಡಿದ್ದಾನೆ. ಬೆಳಿಗ್ಗೆ ಸ್ಕೂಲ್ಗೆ ಹೋಗುವ ಮೊದ್ಲು ಶೆಟ್ಟರ ಅಂಗಡಿಯಿಂದ 501 ಬಾರ್ ಸೋಪು ತಂದು ಕೊಡು ಎಂದು ಎರಡು ರೂಪಾಯಿ ಕೊಟ್ಟಿದ್ದೆ. ಇವನು ಎರಡು ಸೋಪು ತಂದಿದ್ದ. ಯಾಕೊ ಎರಡು ಸೋಪು ತಂದಿದ್ದೀಯಾ? ಒಂದು ಸೋಪಿಗೆ ಎರಡು ರೂಪಾಯಿ ಅಲ್ವೇನೊ? ಅಂತ ಕೇಳ್ದೆ. ‘ಅವ್ರು ಕೊಟ್ರು, ನಾನು ತಂದೆ' ಅಂದ. ಒಂದನ್ನು ಇವನ ಕೈಯಲ್ಲಿ ಕೊಟ್ಟು ಶೆಟ್ರ ಅಂಗಡಿಗೆ ವಾಪಸ್ ಕೊಟ್ಟು ಸ್ಕೂಲ್ಗೆ ಹೋಗಲು ಹೇಳಿದ್ದೆ.

ನಾನು ಮಾಮೂಲಿನಂತೆ ಶೆಟ್ರ ಹತ್ತಿರ ಮಾತನಾಡಲು ಹೋದಾಗ ‘ಯಾಕ್ರೀ ಸ್ವಾಮೇರೆ ಸೋಪು ಹಿಂದಕ್ಕೆ ಕಳಿಸಿದ್ರಿ’ ಅಂದ್ರು. ನನಗೆ ಗಾಬರಿಯಾಗಿ, ‘ಇಲ್ಲ ಶೆಟ್ರೆ. ಅವನ ಹತ್ತಿರ ನೀವು ಮರೆತು ಎರಡು ಸೋಪು ಕಳ್ಸಿದ್ರಿ ಅನ್ಸುತ್ತೆ. ಒಂದನ್ನು ವಾಪಸ್ ಕೊಡಲು ಹೇಳಿ ಕಳ್ಸಿದ್ದೆ’ ಎಂದೆ. ಅದಕ್ಕವರು ‘ನಿಮ್ಮ ಮಗ ಸೋಪನ್ನು ಟೇಬಲ್ ಮೇಲಿಟ್ಟು ಬೇಡವಂತೆ ಅಂದ. ನಾನು ಎರಡು ರೂಪಾಯಿ ವಾಪಸ್ ಕೊಟ್ಟೆ’ ಅಂದ್ರು ಶೆಟ್ರು.

ಅವರ ಮಾತನ್ನು ನಂಬದೆ ನಾನು ಶಾಲೆಗೆ ಹೋಗಿ ಇವನನ್ನು ಕರೆದುಕೊಂಡು ಬಂದು ಹುಡುಕಿದರೆ ಪುಸ್ತಕದಲ್ಲಿ ಬಚ್ಚಿಟ್ಟಿದ್ದ ಎರಡು ರೂಪಾಯಿ ಸಿಕ್ತು. ಈ ವಯಸ್ಸಿಗೆ ಇವನಿಗೆ ಇಂತಹ ಬುದ್ಧಿ ಯಾಕೆ ಬಂತು?’ ಎಂದು ನಡೆದದ್ದನ್ನೆಲ್ಲ ಹೇಳಿ ನಿಟ್ಟುಸಿರಿಟ್ಟರು.

ಅಮ್ಮ ಕೂಡ ಅಳುತ್ತ, ‘ಯಾಕೊ ಹೀಗ್ಮಾಡ್ದೆ. ಅದು ಮೋಸಮಾಡ್ದಂಗಲ್ವೇನೊ? ಸುಳ್ಳು ಹೇಳೋದು, ಮೋಸ -ಕಳ್ತನ ಮಾಡೋದು ತಪ್ಪಲ್ವಾ? ಇನ್ಮೇಲೆ ಹೀಗ್ಮಾಡಲ್ಲ ಅಂತ ಅಪ್ನತ್ರ ಕ್ಷಮೆ ಕೇಳು’ ಅಂದಳು. ಅಪ್ಪನ ಏಟಿನ ಬಿರುಸಿಗೆ ತತ್ತರಿಸುತ್ತಿದ್ದ ನಾನು ಅಳುತ್ತ 'ತಪ್ಪಾಯ್ತಪ್ಪ. ಇನ್ಮೇಲೆ ಯಾವತ್ತೂ ಸುಳ್ಳು ಹೇಳಲ್ಲ. ಮೋಸ ಮಾಡಲ್ಲ" ಎಂದು ಅಪ್ಪನನ್ನು ತಬ್ಬಿಕೊಂಡೆ.

ಸ್ವಲ್ಪ ಸಮಯದ ನಂತರ ಸಹಜ ಸ್ಥಿತಿಗೆ ಬಂದ ಅಪ್ಪ 'ಇವ್ನಿಗೆ ಮುಖ ತೊಳೆದು ಕಳ್ಸು, ಸ್ಕೂಲಿಗೆ ಬಿಟ್ಟು ಬರ್ತೀನಿ' ಎಂದು ಅಮ್ಮನಿಗೆ ಹೇಳಿದ್ರು. ಅಮ್ಮ ಮುಖ ತೊಳೆದು, ಒರೆಸಿ, ತೊಡೆಯಲ್ಲಿ ಕೆಂಪಗೆ ಮೂಡಿದ್ದ ಬೆರಳಚ್ಚಿನ ಬಾಸುಂಡೆಗೆ ಕೊಬ್ಬರಿ ಎಣ್ಣೆ ಸವರಿ, ತಲೆ ಬಾಚಿ ಮುತ್ತಿಟ್ಟಳು.

ಅಪ್ಪ ನನ್ನ ಕೈಹಿಡಿದು ಶೆಟ್ಟರ ಅಂಗಡಿಗೆ ಕರೆದೊಯ್ದು, ಶೆಟ್ಟರ ಹತ್ತಿರ ಕ್ಷಮೆ ಕೇಳಲು ಹೇಳಿದರು. ನಾನು ಬಿಗಿದುಕೊಂಡೆ 'ತಪ್ಪಾಯ್ತು ಮಾಮ' ಎಂದು, ದಾರಿಯಲ್ಲಿ ಅಪ್ಪ ಕೊಟ್ಟಿದ್ದ ಎರಡು ರೂಪಾಯಿಯನ್ನು ಶೆಟ್ಟರಿಗೆ ಕೊಟ್ಟೆ.

'ಜಾಣ' ಎನ್ನುತ್ತ ಶೆಟ್ರು ಒಂಚೂರು ಬೆಲ್ಲ ಮುರಿದು ಕೊಟ್ಟರು. ಅಪ್ಪ ಪುನಃ ಶಾಲೆಯ ತನಕ ಬಂದು ಬಿಟ್ಟು ಹೋದರು. ಅವರ ಮುಖದಲ್ಲಿ ಸಂತೃಪ್ತ ಭಾವ ನೆಲೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.