ADVERTISEMENT

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ‘ತೀರ್ಪು’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 21:55 IST
Last Updated 19 ಏಪ್ರಿಲ್ 2025, 21:55 IST
   

ಮಧ್ಯರಾತ್ರಿಯಲಿ ದಡಕ್ಕನೆ ಎದ್ದ ವಿಮರ್ಶಕ ನಾಗೇಶ್ ಅವರ ಹಣೆ, ಮೈ ತುಂಬಾ ಬೆವರಿಳಿಯತೊಡಗಿತು. ಇಂತಹ ಅನುಭವ ಎಂದೂ ಆಗಿರಲಿಲ್ಲ. ಯಾರೋ ಶತ್ರುಗಳು ಒಂಟಿಯಾಗಿರುವವನ ಮೇಲೆ ಇದ್ದಕಿದ್ದಂತೆ ದಾಳಿ ಮಾಡಿ ದೇಹವನ್ನು ಪುಡಿ ಪುಡಿ ಮಾಡಿದಂತಹ ಅನುಭವ. ಒಬ್ಬೊಬ್ಬ ವ್ಯಕ್ತಿ ಒಂದೊಂದು ತೆರ, ಒಬ್ಬೊಬ್ಬರ ಕಣ್ಣಲ್ಲಿ ಒಂದೊಂದು ರೀತಿಯ ಆಕ್ರೋಶ. ಆಗ ಮನೆಯಲ್ಲಿ ನಾಗೇಶ್ ಒಬ್ಬರೇ ಇದ್ದರು, ಎಲ್ಲವೂ ಮೌನ. ಮತ್ತೆ ನಿದ್ದೆ ಬರದೆ ನಿಧಾನವಾಗಿ ಮನೆಯ ಹಾಲಿನಲ್ಲಿ ತಿರುಗಾಡತೊಡಗಿದರು.

ಸೃಜನಶೀಲ ಪತ್ರಿಕೆಯ ಸಂಪಾದಕರಾದ ರಾಮಚಂದ್ರ ಅವರು, ತಮ್ಮ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯ ತೀರ್ಪುಗಾರರಾಗಲು ಸಾಧ್ಯವೇ ಎಂದು ಕೇಳಿದ್ದರು. ನಿಮ್ಮ ವಿಮರ್ಶೆಗಳನ್ನು ಓದುತ್ತಿರುತ್ತೇನೆ, ಆದ್ದರಿಂದ ನೀವು ಒಳ್ಳೆಯ ತೀರ್ಪುಗಾರರಾಗಲು ಸಾಧ್ಯ ಎಂದು ಮೆಚ್ಚುಗೆಯ ಮಾತನಾಡಿ, ಕಥೆಗಳನ್ನು ಮೊದಲು ತಾವು ಪರಿಶೀಲಿಸಿ ಯೋಗ್ಯ ಕಥೆಗಳನ್ನು ಮಾತ್ರ ತಮಗೆ ಕಳುಹಿಸುತ್ತೇನೆ ಎಂದೂ ಹೇಳಿ, ನಿಮ್ಮ ಭಾರ ಸ್ವಲ್ಪ ಮಟ್ಟಿಗೆ ಇಳಿಸುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದರು. ಅಗತ್ಯ ಸಂಭಾವನೆಯ ಭರವಸೆಯನ್ನೂ ಕೊಟ್ಟಿದ್ದರು. ಅವರು ಮಾತನಾಡಿದ ರೀತಿ ಮೆಚ್ಚುಗೆಯಾಗಿ "ಆಗಲಿ" ಎಂದು ನಾಗೇಶ್ ಹೇಳಿದ್ದರು. ಹಾಗೆಯೇ ಕಥೆಗಳನ್ನು ಪ್ರಿಂಟ್ ಮಾಡಿ ಕಳುಹಿಸಿಕೊಡಿ, ಆನ್ ಲೈನಿನಲ್ಲಿ ಓದುವುದು ಸರಿಯಾಗುವುದಿಲ್ಲ ಎಂದಿದ್ದರು.

ಅದಾದ ಒಂದು ತಿಂಗಳಲ್ಲಿ ಕಥಾರಾಶಿ ನಾಗೇಶ್ ಅವರ ಕೈ ಸೇರಿತು. ಒಟ್ಟು ಇಪ್ಪತೈದು ಕಥೆಗಳು. ಬಂದಿದ್ದ ನೂರಾ ಎಂಟು ಕಥೆಗಳಲ್ಲಿ ಇಪ್ಪತೈದು ಕಥೆಗಳನ್ನು ಆರಿಸಿದ್ದೇನೆ ಎಂದು ಸಂಪಾದಕರ ಟಿಪ್ಪಣಿಯೂ ಇತ್ತು. ಕೀಟ್ಸ್ ಮಹಾಶಯ ಹೇಳಿದಂತೆ ಕೇಳದೆ ಇರುವ ಹಾಡುಗಳಂತೆ, ಓದದೇ ಇರುವ ಕಥೆಗಳಲ್ಲಿ ಹೆಚ್ಚು ಕುತೂಹಲವಿರಬಹುದೇ ಎನಿಸಿತು. ಬರೆಯದೆ ಇರುವ ಕಥೆಗಳಲ್ಲಿ ಇನ್ನೆಷ್ಟು ಅಚ್ಚರಿ ಕಾದಿರಬಹದು ಎನಿಸಿತು. ಕಥೆಗಳು ಬರೆಯಲ್ಪಡುವುದಿಲ್ಲ, ಬರೆಸಿಕೊಳ್ಳುತ್ತವೆ ಎಂದು ತಾನೇ ಬರೆದ ವಾಕ್ಯ ನೆನಪಾಯಿತು. ಕೊನೆಯಲ್ಲಿ ಮನಸನು ನಿರಾಳಗೊಳಿಸುವ ಕಥೆ, ಇಲ್ಲ ಮನಸನು ಘಾಸಿಗೊಳಿಸುವ ಕಥೆ ಯಾವುದು ಹೆಚ್ಚು ಜನಪ್ರಿಯ. ಕಾಫ್ಕ ಹೇಳಿದಂತೆ “I think we ought to read only the kind of books that wound us”. "ಕೃತಿ ಹೃದಯವನ್ನು ಘಾಸಿಗೊಳಿಸಿ ಹಿಂಡಬೇಕು, ಅಂತಹ ಪುಸ್ತಕಗಳನ್ನು ಓದಬೇಕು" ಎನ್ನುತ್ತಾನೆ ಕಾಫ್ಕ.

ADVERTISEMENT

ಒಂದು ಸಲಕ್ಕೆ ಒಂದೇ ಕಥೆ ಓದಿ ಜೀರ್ಣಿಸಿಕೊಳ್ಳುವ ತನಗೆ, ಒಟ್ಟಿಗೆ ಇಪ್ಪತೈದು ಕಥೆಗಳನ್ನು ಓದಿ, ಮನನ ಮಾಡಿಕೊಂಡು, ನೆನಪಲಿರಿಸಿ, ಮತ್ತೆ ಮತ್ತೆ ಮೆಲುಕು ಹಾಕಿ, ವಿಶ್ಲೇಷಿಸಿ, ಬೇರೆಕಥೆಗಳಿಗೆ ಅನ್ಯಾಯವಾಗದಂತೆ ತೀರ್ಪು ಕೊಡುವುದು ಸವಾಲೇ ಸರಿ. ಇದನ್ನೇ ರಾಮಚಂದ್ರ ಅವರ ಹತ್ತಿರ ಹೇಳಿದಾಗ, "ಎಲ್ಲ ಸ್ಪರ್ಧೆಗಳಲ್ಲಿ ಯಾರಿಗಾದರೂ ಅನ್ಯಾಯ ಆಗುವುದು ಸಹಜ. ನಿಮಗೆ ಉತ್ತಮ ಅನಿಸಿದ್ದೇ ಉತ್ತಮ ಕಥೆ, ಅದೇ ಕಥೆ ಬೇರೆಯವರಿಗೆ ಇಷ್ಟವಾಗದೇ ಇರಬಹದು. ಕಥೆ, ಕಾವ್ಯ ಓದುವಾಗಿನ ನಮ್ಮ ಮನಸ್ಥಿತಿ, ನಮ್ಮ ಅವಗಾಹನೆ, ನಮ್ಮ ಜ್ಞಾನ, ನಮ್ಮ ಪಂಥ ಎಲ್ಲವೂ ನಮ್ಮ ತೀರ್ಮಾನಕ್ಕೆ ಪ್ರಭಾವಬೀರುತ್ತವೆ. ಈ ಸ್ಪರ್ಧೆಯಲ್ಲಿ ನಿಮಗೆ ಉತ್ತಮ ಅನಿಸಿದ್ದೇ ಉತ್ತಮ ಅಷ್ಟೇ" ಎಂದಿದ್ದರು. ಅವರು ಹೇಳುವುದು ಸರಿ ಅನಿಸಿತ್ತು. "ಕರ್ಮಣ್ಯೇವಾಧಿಕಾರಸ್ತೆ ............. " ಎಂದೂ ಹೇಳಿದ್ದರು, ಆದರೆ ಇಲ್ಲಿ ಕರ್ಮಗಳ ವಿಶ್ಲೇಸಿಸುವ, ಕರ್ಮದ ಜೊತೆ, ಫಲಾಫಲ ವಿನಿಯೋಗಿಸುವ ಕರ್ಮವೂ ತಾನೇ ಮಾಡಬೇಕಲ್ಲ, ಇದಕ್ಕೆ ಭಗವದ್ಗೀತೆಯಲ್ಲಿ ಏನು ಪರಿಹಾರವಿರಬಹದು? ತಾನು ಫಲಾಫಲವನ್ನು ನೀಡುವುದಿಲ್ಲ, ಕಥೆಗಳ ಕರ್ಮವೇ ಅದನ್ನು ನಿರ್ಣಯಿಸುತ್ತದೆ ಎನಿಸಿ ಸಮಾಧಾನವಾಯಿತು. ಇಲ್ಲಿ ಕರ್ಮವೆಂದರೆ ಕ್ರಿಯೆ ಅಷ್ಟೇ ಅಂದುಕೊಂಡರು.

ಒಂದು ಬೆಳಿಗ್ಗೆ ಕಥೆಗಳನ್ನು ಓದಲು ಶುರುಮಾಡಿದ ಮೇಲೆ ಊಟ, ಮಧ್ಯಾಹ್ನದ ನಿದ್ದೆ ಮಾಡಲಾಗಲಿಲ್ಲ. ಎಲ್ಲಾ ಕಥೆಗಳನ್ನೂ ಮೂರು ಮೂರು ಸಲ ಓದಿದರು. ಒಂದೊಂದು ಕಥೆ ಒಂದೊಂದು ತೆರ. ಕೆಲವು ಹಳ್ಳಿಯ ಜೀವನದ ಕಷ್ಟಗಳಾದರೆ, ಕೆಲವು ಆಧುನಿಕತೆ ತಂದು ಕೊಡುವ ಕಷ್ಟಗಳ ಕಥೆಗಳು, ಕೆಲವು ಹುಟ್ಟಿನ ಕಥೆಗಳಾದರೆ, ಕೆಲವು ಸಾವಿನ ಕಥೆಗಳು. ಪುರುಷಾಂಕಾರ ದಿಕ್ಕರಿಸುವ ಕಥೆಗಳು, ಸ್ತ್ರೀವಾದದ ಕಥೆಗಳು. ಎಲ್ಲವೂ ಎಲ್ಲೋ ಓದಿದಂತೆ. ಸ್ಮಶಾನದಲ್ಲಿ ಶವ ಸುಡುವವನ ಕಥೆ ಸ್ವಲ್ಪ ಭಿನ್ನವಾಗಿತ್ತು. ಆದರೆ ಅಲ್ಲಿನ ಕಷ್ಟಗಳನ್ನು ಚೆನ್ನಾಗಿ ವ್ಯಕ್ತಪಡಿಸಿ, ಕಥೆಯನ್ನು ಕೊನೆ ಮಾಡಲು ಹೆಣಗಾಡಿದಂತಿತ್ತು. ಇಂತಹ ಕಥೆಗಳೇ ಹಾಗೆ, ಸ್ಮಶಾನದ ಕೆಲಸ ಬಿಟ್ಟಂತೆ, ಇಲ್ಲ ಕೆಲಸಕ್ಕೆ ಹೊಂದಿಕೊಳ್ಳುವಂತೆ ಕೊನೆಗಾಣಿಸಬೇಕು. ಆದರೆ ಅಲ್ಲಿನ ಅರೆಬೆಂದ ಶವಗಳು ಎದ್ದು ಕುಣಿಯುವ ರೂಪಕ ಸೊಗಸಾಗಿ ಚಿತ್ರಣಗೊಂಡಿತ್ತು.

ಕಥೆಗಳನ್ನು ಓದಿ ಮುಗಿಸಿದಾಗ ರಾತ್ರಿ ಹನ್ನೊಂದು ಗಂಟೆ. ಎದ್ದು ನೀರು ಕುಡಿದು ಮಲಗಿಕೊಂಡರು. ನಿದ್ರೆ ಸೆಳೆಯಿತು. ನಿದ್ರೆಯಲ್ಲಿ ತಲೆಯ ತುಂಬಾ ಕಥೆಗಳ ಸನ್ನಿವೇಶಗಳು, ಪಾತ್ರಗಳು, ಮಾತುಗಳು ಕುಣಿದಾಡತೊಡಗಿದವು. ಒಂದು ಕಥೆಯ ಪಾತ್ರ ಮತ್ತೊಂದು ಕಥೆಯ ಪಾತ್ರದ ಜೊತೆ ವಾಗ್ವಾದಕ್ಕೆ ಇಳಿದವು. ಒಂದು ಕಥೆಯ ಸನ್ನಿವೇಶ ಮತ್ತೊಂದು ಕಥೆಯೊಳಗೆ ನುಸುಳಿ ಕಥೆಯ ಅಂತ್ಯವನ್ನೇ ಬದಲಾಯಿಸಿದವು. ಒಂದು ಪಾತ್ರದ ವ್ಯಕ್ತಿತ್ವ ಮತ್ತೊಂದು ಪಾತ್ರದ ಒಳ ಸ್ವರೂಪವಾಗಿ ಆ ಪಾತ್ರದ ನಿಜ ಸ್ವರೂಪ ಹೊರಬಂದಾಯಿತು. ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಮಾತಿನ ಸಂತೆ ಮಾಡಿದಂತೆ, ಯಾವ ಪಾತ್ರ ಏನು ಹೇಳುತ್ತಿದೆ ಎನ್ನುವ ಗೊಂದಲ ಉಂಟಾಯಿತು. ಎಲ್ಲಾ ಪಾತ್ರಗಳ ಕಲೆಸುಮೇಲೋರಗವಾಗಿ, ಒಂದು ಪಾತ್ರ ಇನ್ನೊಂದು ಪಾತ್ರದ ಜೊತೆ ಯುದ್ಧಕ್ಕೆ ನಿಂತು ಕೈ ಕೈ ಮಿಲಾಯಿಸತೊಡಗಿದವು. ಎಲ್ಲಾ ಪಾತ್ರಗಳೂ ನಾನೇ ಬಲವಾದ ನಾಯಕ, ನಾಯಕಿ ಎಂದು ಸಮರ್ಥನೆಗೆ ಇಳಿದವು. ನನಗೇ ಬಹುಮಾನ ಬರುವುದು ಎಂದು ಕಿರುಚತೊಡಗಿದವು.

ಹೀಗೆ ತುಂಬಾ ಹೊತ್ತು ಜಗಳ ಕಾದಮೇಲೆ, ಒಂದು ಹಿರೀಜೀವ (ಪಾತ್ರ) "ನಾವು ಹೀಗೆ ಜಗಳ ಕಾದರೆ ಪ್ರಯೋಜನವಿಲ್ಲ. ನಮಗೆ ಬಹುಮಾನ ಕೊಡುವುದು ಈ ನಾಗೇಶ. ಇವನಿಗೆ ಎಷ್ಟೇ ಗೊಂದಲವಾದರೂ ಯಾರಿಗೋ ಮೂವರಿಗೆ ಬಹುಮಾನ ಘೋಷಿಸಿ, ತಾನು ಉತ್ತಮ ತೀರ್ಪುಗಾರ ಎಂದು ಹೆಮ್ಮೆ ಪಡುತ್ತಾನೆ. ಹಣ, ಹೆಸರು ಗಿಟ್ಟುಸುತ್ತಾನೆ. ಇವನಿಂದ ನಮ್ಮಲ್ಲಿ ಇತರೆ ಇಪ್ಪತ್ತೆರಡು ಜನಗಳಿಗೆ ಅನ್ಯಾಯ ಖಂಡಿತ. ಆದ್ದರಿಂದ ನಾವು ಪರಸ್ಪರ ಜಗಳಕಾಯದೆ ಇದಕ್ಕೆ ಒಂದು ಉಪಾಯ ಕಂಡುಕೊಳ್ಳಬೇಕು" ಎಂದಿತು. "ನೀವು ಏನೇ ಮಾಡಿಕೊಳ್ಳಿ, ಮೊದಲ ಬಹುಮಾನ ನನಗೇ ಬರುವುದು" ಎಂದಿತು ಒಂದು ಸ್ತ್ರೀ ಪಾತ್ರ. ಮತ್ತೆ ಮುಂದುವರೆಸುತ್ತಾ " ಈ ಗಂಡಸರಿಗೆ ತಾವು ಮಹಿಳೆಯರನ್ನು ತುಂಬಾ ಗೌರವಿಸುತ್ತೇವೆ ಎಂದು ತೋರಿಸಿಕೊಳ್ಳುವುದು ಪ್ಯಾಶನ್ ಆಗಿದೆ. ಒಳಗಡೆ ಹೇಗಿದ್ದರೂ ಹೊರಗೆ ನಟಿಸುತ್ತಾರೆ. ಇರಲಿ, ಹೀಗೆ ಎಲ್ಲಾ ಗಂಡಸರೂ ಹೆಣ್ಣನ್ನು ಗೌರವಿಸುವ ನಟನೆ ಮಾಡಿದರೂ ಎಷ್ಟೋ ಒಳ್ಳೆಯದಾಗುತ್ತದೆ. ಹೆಣ್ಣಿಗೆ ಅಷ್ಟು ನೆಮ್ಮದಿ ಸಿಗುತ್ತದೆ" ಎಂದಿತು.

"ನಿಮಗೆ ಎಷ್ಟೇ ಮಾಡಿದರೂ ನಿಮ್ಮ ಗೊಣಗಾಟ ತಪ್ಪದು" ಎಂದಿತು ಒಂದು ಉದ್ಯಮಿ ಪಾತ್ರ. ಸ್ತ್ರೀ ಪಾತ್ರಗಳೆಲ್ಲಾ ಗುರ್ ಎಂದವು. "ನಾವು ಎಷ್ಟು ಜನಕ್ಕೆ ಕೆಲಸ ಕೊಡುತ್ತೇವೆ. ಅದರಿಂದ ಎಷ್ಟು ಜನರ ಜೀವನ ನಡೆಯುತ್ತದೆ, ಬಹುಮಾನ ನನಗೇ ಸಿಗಬೇಕು' ಎಂದಿತು.

"ನಿಮಗೆ ಹೆಮಿಂಗ್ವೆ ಗೊತ್ತಾ, ಕಾಫ್ಕ, ಕಾಮೂ, ಟಾಲ್ಸ್ ಟಾಯ್, ದೊಸ್ತೋವಸ್ಕಿ ಗೊತ್ತಾ" ಎಂದಿತು ಒಂದು ವಿದೇಶಿ ಪಾತ್ರ. "ನಮ್ಮದೇ ಗಟ್ಟಿ ಪಾತ್ರ, ನಮಗೇ ಬಹುಮಾನ ಕೊಡಬೇಕು" ಎಂದಿತು.

" ನಮ್ಮ ಕನ್ನಡದಲ್ಲಿ ಇನ್ನೂ ಒಳ್ಳೆಯ ಬರಹಗಾರರಿದ್ದಾರೆ, ಸುಮ್ಮನಿರಯ್ಯ ಸಾಕು" ಎಂದಿತು ಮತ್ತೊಂದು ಜೀವ.

"ಯಾವಾಗಲೂ ಹಳ್ಳಿ ಪಾತ್ರ, ಹಳ್ಳಿ ಭಾಷೆ ಮಾತನಾಡುವ ಪಾತ್ರ, ಬಡವರ ಪಾತ್ರ ಇಂತಹುದಕ್ಕೇ ಬಹುಮಾನ ಸಿಕ್ಕಿದೆ. ಈಗ ನಮ್ಮ ಸರದಿ. ನಮ್ಮಲ್ಲಿ ಎಂತಹ ಕಷ್ಟ ಇರುತ್ತೆ. ಉದ್ಯಮಿಗಳು ಸರಿಯಾಗಿ ಮಲಗುವುದಕ್ಕೂ ಸಮಯ ಇರುವುದಿಲ್ಲ. ಈ ಸಾರಿ ನಮಗೇ ಬಹುಮಾನ ಸಿಗಬೇಕು" ಎಂದಿತು ಉದ್ಯಮಿ ಪಾತ್ರ .

ಮತ್ತೆ ಹಿರಿಜೀವ " ಹೀಗೆ ಜಗಳ ಆಡ್ತಾ ಇದ್ದಾರೆ ಸಮಸ್ಯೆ ಪರಿಹಾರ ಆಗಲ್ಲ" ಎಂದಿತು.

"ನನ್ನ ಹತ್ತಿರ ಉಪಾಯವಿದೆ" ಎಂದಿತು ಯುವ ರೌಡಿ ಪಾತ್ರ. "ಏನು"ಎಂದು ಎಲ್ಲರೂ ಅದರ ಕಡೆ ತಿರುಗಿದರು. "ಏನಿಲ್ಲ, ಹೇಗಿದ್ದರೂ ನಮ್ಮಲ್ಲಿ ಮೂವರಿಗೆ ಮಾತ್ರ ಬಹುಮಾನ ಬರುವುದು, ಮಿಕ್ಕಿದವರಿಗೆ ಬೇಸರ ಆಗೇ ಆಗುತ್ತೆ, ಆದ್ದರಿಂದ ಈ ನಾಗೇಶನನ್ನು ಸಾಯಿಸಿಬಿಡೋಣ, ಆಗ ಯಾರಿಗೂ ಬಹುಮಾನ ಸಿಗುವುದಿಲ್ಲ, ಎಲ್ಲರಿಗೂ ನೆಮ್ಮದಿ" ಎಂದಿತು.

ಪಾತ್ರಗಳೆಲ್ಲಾ ಅದು ಬೇಡ, ಅದೆಲ್ಲ ಆಗಲ್ಲ, ಒಳ್ಳೆಯದಲ್ಲ ಎಂದು ಗುಸು ಗುಸು ಪಿಸ ಪಿಸ ಮಾಡಿ ಕೊನೆಗೆ ಅದೇ ಒಳ್ಳೆಯದು ಎಂದು ಒಪ್ಪಿಕೊಂಡವು.

ರೌಡಿ ಪಾತ್ರ " ಸರಿ ಎಲ್ಲರೂ ಒಟ್ಟಾಗಿ ದಾಳಿ ಮಾಡಿಬಿಡೋಣ, ಉಸಿರು ಕಟ್ಟಿ ಮುಗಿಸಿಬಿಡೋಣ" ಎಂದು ಹೇಳಿತು.

ದಾಳಿಯಿಂದ ತಪ್ಪಿಸಿಕೊಂಡು ಎದ್ದ ನಾಗೇಶರಿಗೆ, ಎಲ್ಲಾ ಗೊಂದಲಗಳಿಗೆ ಸಾವೇ ಪರಿಹಾರವಿರಬಹುದೇ?" ಎನಿಸಿತು.

ಹೀಗೆ ರಾತ್ರಿ ಗಾಬರಿಯಿಂದ ಎದ್ದು ಶತಪಥ ಹಾಕುತ್ತಿರುವಾಗ, ಯಾರೋ ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಅನಿಸಿತು. ತಮ್ಮ ಸುತ್ತ ಸುತ್ತುತ್ತಿದ್ದಾರೆ ಅನಿಸಿತು. ಯಾರೋ ಗಹಗಹಸಿ ನಕ್ಕಂತಾಯಿತು. ಯಾರೋ ಅಳುತ್ತಾ ಬಿಕ್ಕುವ ಸದ್ದು ಕೇಳಿಸಿತು. ಯಾರೋ ನೋವಿನಿಂದ ಕಿರುಚುವ ಸದ್ದು ಕೇಳಿಸಿತು. ಮಗುವೊಂದು ಕೀರಲು ದನಿಯಲ್ಲಿ ಅಳುತ್ತಾ ತೆವಳುತ್ತಿರುವ ದೃಶ್ಯ ಕಂಡಂತಾಯಿತು. ಮನೆಯ ತುಂಬಾ ನೋವಿನ ಅರುಚಾಟ, ಕಿರುಚಾಟ ಕೇಳತೊಡಗಿತು.

"ಕಥೆಗಳೆಂದರೆ ನೋವೇ ಅಲ್ಲವೇ?" ಒಂದು ಪಾತ್ರ ಕೇಳಿತು. ಅದಕ್ಕೆ ನಾಗೇಶ "ಹಾಗೇನು ಇಲ್ಲ. ಆದರೆ ಕಥೆಯೆಂದರೆ ಅದರ ಪ್ರಧಾನ ಪಾತ್ರಕ್ಕೆ ಒಂದು ಕಷ್ಟ, ತೊಂದರೆ ಇರಲೇಬೇಕು. ಅದರಿಂದ ಹೇಗೆ ಆ ಪಾತ್ರ ಹೊರಬಂದಿತು ಎನ್ನುವುದೇ ಕಥೆ. ಒಂದೊಂದು ಸಲ ಕೃತ್ರಿಮವಾಗಿ ಕಷ್ಟ ಸೃಷ್ಟಿಸಲ್ಪಡುತ್ತದೆ. ಹಾಗಾದಾಗ ಓದುಗನಿಗೆ ಸಂಶಯ ಬರುತ್ತದೆ. ಅದು ಸಹಜ ಅನಿಸುವುದಿಲ್ಲ. ಕಥೆ ಬೋರ್ ಆಗುತ್ತದೆ. ಓದಿ ಮುಗಿಸಿದರೂ ತಲೆಯಲ್ಲಿ ನಿಲ್ಲುವುದಿಲ್ಲ. ಕಥೆ ಕಾಡುವುದಿಲ್ಲ. ಕಥೆಯಲ್ಲಿ ಸಹಜವಾಗಿ ಕಷ್ಟ ಮೂಡಬೇಕು, ಪಾತ್ರವನ್ನೂ, ಓದುಗನನ್ನೂ ಅದಕ್ಕೆ ಸಿದ್ಧಗೊಳಿಸಬೇಕು".

ಇನ್ನೊಂದು ಪಾತ್ರ ಮುಂದೆ ಬಂದಿತು. "ನನ್ನ ಹೆಸರು ನಂಜಯ್ಯ, ನನ್ನ ಮಗ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನೀವು ಹೋಗಿ ಅವರಿಗೆ ಬುದ್ದಿ ಹೇಳಲು ಸಾಧ್ಯವೇ? ಎಂದಿತು. " ಸರಿ, ಆದರೆ ಎಲ್ಲಿ ಹೋಗಿ ಹೇಳಲಿ". "ನನ್ನ ಮಗನ ಹೆಸರು ನಿಮಗೆ ಈಗಾಗಲೇ ಗೊತ್ತಿದೆ. ರಾಘವ ಅಂತ, ಸ್ವಲ್ಪ ಮಧುಗಿರಿಗೆ ಹೋಗಿಬರಲು ಸಾಧ್ಯವೇ?, ಮಧುಗಿರಿಯ ನರಸಪ್ಪ ಕಾಲೋನಿಯಲ್ಲಿ ಯಾರನ್ನು ಕೇಳಿದರೂ ನನ್ನ ಮನೆ ತೋರಿಸುತ್ತಾರೆ" ಅಂದಿತು.

"ಸರಿ" ಎಂದು ತಲೆ ಆಡಿಸಿದ ನಾಗೇಶ್ ಬೆಳಿಗ್ಗೆ ಮೊದಲನೇ ಬಸ್ಸಿಗೆ ಮಧುಗಿರಿಗೆ ಬಂದು ಇಳಿದರು. ನರಸಪ್ಪ ಕಾಲೋನಿಗೆ ಬಂದು ನಂಜಯ್ಯ ಅವರ ಮನೆ ಕೇಳಿ ತಿಳಿದು, ಮನೆಯ ಹತ್ತಿರ ಬಂದು ನಂಜಯ್ಯನವರೇ ಎಂದು ಕೂಗಿದರು. ಬಾಗಿಲು ತೆಗೆದ ಮನುಷ್ಯನನ್ನು ನೋಡಿ ಅವರಿಗೆ ಬಾಯಿಂದ ಮಾತೇ ಹೊರಡಲಿಲ್ಲ. ಕಥೆಯಲ್ಲಿನ ಪಾತ್ರ ನಂಜಯ್ಯ ಎದುರು ನಿಂತಿತ್ತು. ನಂಜಯ್ಯ ಒಳಗೆ ಬನ್ನಿ ಎಂದು ಕರೆದರು, ಒಳಗಡೆ ಕುಳಿತು ಕೊಂಡ ಮೇಲೆ "ನೀವು ಯಾರೂ ಅಂತ ತಿಳಿಯಲಿಲ್ಲ" ಎಂದರು. "ನಿಮ್ಮ ಮಗ ರಾಘವನನ್ನು ಕರೆಯುತ್ತೀರಾ". ಅಲ್ಲೇ ಆಡುತ್ತಿದ್ದ ಮೊಮ್ಮಗಳಿಗೆ "ನಿಮ್ಮ ಅಪ್ಪನ ಕರೆಯಮ್ಮ" ಎಂದು ನಂಜಯ್ಯ ಹೇಳಿದರು. ರಾಘವ ಬಂದಾಗ "ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು" ಎಂದರು. "ಮೇಲೆ ಹೋಗೋಣ ಬನ್ನಿ" ಎಂದು ಮಾಳಿಗಿಗೆ ಕರೆದುಕೊಂಡು ಹೋದ. "ನೀವೂ ಬನ್ನಿ" ಎಂದು ನಂಜಯ್ಯನನ್ನು ಉದ್ದೇಶಿಸಿ ನಾಗೇಶ್ ಹೇಳಿದರು.

ಮಾಳಿಗೆಗೆ ಬಂದಮೇಲೆ ನಾಗೇಶ್ ಸುತ್ತಲೂ ನೋಡಿ " ನೋಡಿ ರಾಘವ ನೀವು ನಿಮ್ಮ ತಂದೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕಂಪ್ಲೇಂಟ್ ಬಂದಿದೆ. ನಾನು ಪೊಲೀಸ್ ಡಿಪಾರ್ಟ್ಮೆಂಟ್ ನಿಂದ ಬಂದಿದ್ದೇನೆ. ನೀವು ನಿಮ್ಮ ನಡವಳಿಕೆ ತಿದ್ದುಕೊಂಡರೆ ಸರಿ ಇಲ್ಲ ಅಂದರೆ ಕಂಬಿ ಎಣಿಸಬೇಕಾಗುತ್ತದೆ". ರಾಘವ ನಿಂತಲ್ಲೇ ಕಂಪಿಸಿದ, "ಇಲ್ಲ ಸರ್, ಇನ್ನು ಮೇಲೆ ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ದೈನೇಸಿ ದನಿಯಲ್ಲಿ ಹೇಳಿದ. "ನಾನು ಆಗಾಗ ಬಂದು ಚೆಕ್ ಮಾಡುತ್ತೇನೆ" ಎಂದು ಹೇಳಿ ನಾಗೇಶ ಅಲ್ಲಿಂದ ಹೊರಟೇಬಿಟ್ಟರು. ನಂಜಯ್ಯ ಕೈ ಮುಗಿದು ನಿಂತಿರುವುದು ಕಾಣಿಸಿತು.

ಮನೆಗೆ ಬಂದು ಕಥೆಯನ್ನು ಮತ್ತೆ ತಿರುವಿ ಹಾಕಿದರು. ಕಥೆ ಕೊನೆಯಲ್ಲಿ ಸಣ್ಣ ಅಕ್ಷರಗಳಲ್ಲಿ ಸತ್ಯ ಘಟನೆಯ ಆಧರಿಸಿ ಬರೆದ ಕಥೆ ಎಂದಿತ್ತು. ಇನ್ನು ಕೆಲವು ಕಥೆಗಳನ್ನು ತಿರುವಿಹಾಕಿದಾಗ, ಇನ್ನು ಮೂರು ಕಥೆಗಳಲ್ಲಿ ಇದೇ ರೀತಿಯ ಟಿಪ್ಪಣಿ ಇತ್ತು. ಆಗ ಅರ್ಥವಾಯಿತು ತನಗೆ ಕೇಳಿಸಿದ ನರಳಾಟ ಇದೇ ಕಥೆಗಳ ಪಾತ್ರಗಳದ್ದೇ ಎಂದು. ಆ ಮೂರು ಕಥೆಗಳನ್ನು ಮತ್ತೆ ಓದಿ, ಕಥೆಗಳ ಪಾತ್ರಧಾರಿಗಳನ್ನು ಭೇಟಿಯಾದರು. ಅವರು ಅನುಭವುಸುತ್ತಿದ್ದ ನೋವುಗಳನ್ನು ಪರಿಹರಿಸಲು ಶ್ರಮಪಟ್ಟರು. ಕಥೆಗಳಲ್ಲಿ ಪಾತ್ರಗಳು ಇರುವ ನೋವಿನಲ್ಲೇ ನಿಜ ಜೀವನದ ಪಾತ್ರಗಳೂ ಇದ್ದವು.

ಇದೊಂದು ವಿಸ್ಮಯ. ನಂಬಲು ಸಾಧ್ಯವೇ ಆಗದ ಬೆಳವಣಿಗೆ ಎಂದು ಅನಿಸಿತು ನಾಗೇಶ ಅವರಿಗೆ. ಬೇರೆ ಯಾರಿಗಾದರೂ ಹೇಳಿದರೆ ತಮಗೆ ಹುಚ್ಚು ಹಿಡಿದೆಡೆ ಅಂದುಕೊಳ್ಳುತ್ತಾರೆ ಎಂದುಕೊಂಡರು.

ಕೆಲ ದಿನಗಳ ನಂತರ ನಾಲಕ್ಕೂ ಕಥೆಗಳ ನಿಜ ಪಾತ್ರಗಳಿಂದ ಪತ್ರಗಳು ಬಂದವು. ನಮ್ಮ ಕಥೆಗಳನ್ನು ಓದಿ ನಮಗೆ ಸಹಾಯ ಮಾಡಿದಕ್ಕೆ ತಮಗೆ ಧನ್ಯವಾದಗಳು ಎಂದು.

ಮಿಕ್ಕೆಲ್ಲಾ ಪಾತ್ರಗಳೂ ಇನ್ನೂ ತಲೆಯಲ್ಲಿ ರಂಪಾಟ ಮಾಡುತ್ತಲೇ ಇದ್ದವು. ಎಷ್ಟೊಂದು ದೊಡ್ಡ ದೊಡ್ಡ ಕಾದಂಬರಿಗಳನ್ನು ತಾವು ಓದಿಲ್ಲ. ಇಷ್ಟೆಲ್ಲಾ ಪಾತ್ರಗಳ ಗೊಂದಲ ಇರಲಿಲ್ಲ. ಮಹಾಭಾರತದಲ್ಲಿ ಅಷ್ಟೊಂದು ಪಾತ್ರಗಳಿವೆ. ಅವು ಎಂದೂ ಹೀಗೆ ಗೊಂದಲ ಮೂಡಿಸಿರಲಿಲ್ಲ, ಕಾರಣ ಯೋಚಿಸಿದರು. ಬಹುಶ ಮಹಾಭಾರತದ ಎಲ್ಲಾ ಪಾತ್ರಗಳಿಗೂ ಪರಸ್ಪರ ಒಂದು ಸಂಬಂಧವಿದೆ, ಒಂದು ಕೊಂಡಿಯಿದೆ, ಇದರಿಂದಲೇ ಎಲ್ಲವೂ ಪ್ರತ್ಯೇಕವಾಗೇ ನಿಲ್ಲುತ್ತವೆ ಎನಿಸಿತು. ತಾನು ಕಂಡು ಕಂಡ ಕಾರಣದಿಂದ ಖುಷಿಯಾಗಿ ಹೆಮ್ಮೆ ಅನಿಸಿತು. ಆದ್ದರಿಂದಲೇ ನನ್ನನ್ನು ಒಳ್ಳೆಯ ವಿಮರ್ಶಕ ಎಂದು ಜನ ಒಪ್ಪಿಕೊಂಡಿರುವುದು ಎನಿಸಿತು.

ಆದರೆ ಎರಡು ಮೂರು ದಿನಗಳ ನಂತರ ಹೆಮ್ಮೆಯಲ್ಲಾ ಇಳಿದುಹೋಯಿತು. ತಾನು ಅಂತಹ ದೊಡ್ಡ ವಿಮರ್ಶಕನಲ್ಲ ಎಂದು ಅರಿವಾಗತೊಡಗಿತು. ತಾನು ಇನ್ನೂ ಹೆಚ್ಚು ಓದಬೇಕು, ಹೆಚ್ಚು ಪಳಗಬೇಕು, ಹೆಚ್ಚು ಜ್ಞಾನ ಸಂಪಾದಿಸಬೇಕು ಎನಿಸಿತು. ತೀರ್ಪುಕೊಡುವ ಸಮಯ ಹತ್ತಿರ ಬಂದಿತು. ಯಾವ ಕಥೆಗೆ ತೀರ್ಪು ಕೊಡುವುದು ಎಂದು ನಿರ್ಣಯಿಸಲು ಆಗದಾಯಿತು. ತೀರ್ಪು ಕಥೆಗಾರನಿಗಲ್ಲ ಕಥೆಗೆ ಎಂದು ಗೊತ್ತಿದ್ದರೂ, ರಾಮಚಂದ್ರ ಅವರು ಕಥೆಗಾರರ ಹೆಸರನ್ನು ತಿಳಿಸಿರದಿದ್ದರೂ, ಕಥಾ ಶೈಲಿಯಲ್ಲಿ ಕಥೆ ಯಾರು ಬರೆದಿರಬಹದು ಎಂದು ಊಹಿಸಿದರು. ಹಾಗೆ ಊಹಿಸಿ ಹಿರಿಯ, ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿರುವ ಕಥೆಗಾರರ ಕಥೆಗಳನ್ನು ಹೊರಗಿಟ್ಟರು. ಮನಸು ಹಗುರವಾಯಿತು.

ಈ ಮದ್ಯೆ ಹೇಗೋ ತೀರ್ಪುಗಾರರ ಹೆಸರು ತಿಳಿದುಕೊಂಡ ಕೆಲವು ಕಥೆಗಾರರು ನಾಗೇಶ್ ಅವರನ್ನು ಸಂಪರ್ಕಿಸತೊಡಗಿದರು. ಕೆಲವರು ಫೋನ್ ನಂಬರ್ ತಿಳಿದುಕೊಂಡು ಫೋನ್ ಮಾಡತೊಡಗಿದರು. ಕೆಲವರು ಇನ್ನೂ ಒಂದೇ ಹೆಜ್ಜೆ ಮುಂದೆಹೋಗಿ ಬಹುಮಾನದ ಹಣದ ಜೊತೆ ಇನ್ನೂ ಹೆಚ್ಚಿನ ಹಣದ ಆಸೆ ತೋರಿಸಿದರು. ಇದೇನು ಜ್ಞಾನಪೀಠ ಪ್ರಶಸ್ತಿ ಅಲ್ಲ, ಯಾಕಿಷ್ಟು ಕಷ್ಟಪಡುತ್ತಿದ್ದೀರಿ ಎಂದರೂ ಬಿಡದೆ, ಯಾವುದಾದರೂ ಬಹುಮಾನ, ಪ್ರಶಸ್ತಿ ಆಗಾಗ ಬರುತ್ತಿರಬೇಕು.ಇಲ್ಲವೆಂದರೆ ಜನ ತಮ್ಮನ್ನು ಮರೆತುಬಿಡುತ್ತಾರೆ ಎಂದರು. ನಾಗೇಶ್ ಏನೂ ಹೇಳದೆ ಫೋನ್ ಆರಿಸಿಬಿಟ್ಟರು.

ಈ ಮಧ್ಯೆ ಒಂದು ದಿನ ನಾಗೇಶ್ ಅವರ ಸ್ನೇಹಿತ ಕವಿ ರವಿರಾಘವ ಮನೆಗೆ ಬಂದರು. ಮಾತಿನ ಮಧ್ಯೆ, ನಾಗೇಶ್ ತನ್ನ ಕಥಾ ತೀರ್ಪಿನ ಸಂಕಟ ಅರುಹಿದರು. ಗಹ ಗಹಿಸಿ ನಕ್ಕ ರವಿ " ಈ ಹಿಂದೆ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಯಾವುದಾದರೂ ಕಥೆ ಅಥವಾ ಕಥೆಗಾರನ ಹೆಸರು ಹೇಳು" ಎಂದರು. ನಾಗೇಶ್ ಗೊಂದಲಕ್ಕೆ ಒಳಗಾದವರಂತೆ ರವಿಯನ್ನೇ ನೋಡಿದರು. ರವಿ ಮುಂದುವರೆಸುತ್ತಾ" ನೋಡಿದೆಯಾ, ನೀನು ವಿಮರ್ಶಕ ನಿನಗೇ ನೆನಪಿಲ್ಲ, ಇನ್ನು ಜನ ಸಾಮಾನ್ಯರಿಗೆ, ಇತರ ಕಥೆಗಾರರಿಗೆ ಖಂಡಿತ ನೆನಪಿರುವುದಿಲ್ಲ, ಅದಕ್ಕೆ ಅವರು ಆಗಾಗ ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ನೆನಪಿಸುತ್ತಿರುತ್ತಾರೆ" ಎಂದು ಜೋರಾಗಿ ನಕ್ಕು, "ಎಷ್ಟೊಂದು ಸ್ಪರ್ಧೆಗಳು, ಅಷ್ಟು ದೊಡ್ಡ ಸಂಖ್ಯೆಯ ಕಥೆಗಾರರು" ಎಂದರು. "ನೀನು ನಿನ್ನ ಸಿನಿಕತನ" ಎಂದರು ನಾಗೇಶ್.

ಕಥೆಗಳ, ಕಥಾ ಪಾತ್ರಗಳ ಒತ್ತಡ ಹೆಚ್ಚಾಗತೊಡಗಿತು. ಎಂದೂ ಇಲ್ಲದ ದೇಹದಲ್ಲಿ ನೋವು ಶುರುವಾಯಿತು. ಹೊಟ್ಟೆ ಉಬ್ಬರಿಸಿ ಬಂದು ಹೊಟ್ಟೆ ನೋವು ಶುರುವಾಯಿತು. ತಲೆ ನೋವಿನಿಂದ ತಲೆ ಸಿಡಿಯತೊಡಗಿತು. ಕೈ ಕಾಲು ನಡುಗಲು ಶುರುವಾದವು. ಯಾರಿಗೋ ಬಹುಮಾನ ಕೊಡುವುದಕ್ಕೆ ನಾನ್ಯಾಕೆ ಇಷ್ಟು ಒತ್ತಡ ತಂದು ಕೊಳ್ಳಲಿ ಎಂದುಕೊಂಡರೂ, ಈ ಒತ್ತಡ ಬಹುಮಾನ ಕೊಡುವುದರಲ್ಲಿ ಅಲ್ಲ, ಬಹುಮಾನ ಕೊಡಲು ಸರಿಯಾದ ಕಥೆಗಳನ್ನು ಹುಡುಕದೇ ಹೋದರೆ ತನ್ನ ಉತ್ತಮ ವಿಮರ್ಶಕ ಬಿರುದು ಎಲ್ಲಿ ಉರಿದು ಹೋಗುವುದೋ, ಎಲ್ಲಿ ಜನ ಇಂತಹ ಹಳಸಲು ಕಥೆಗೆ ಬಹುಮಾನ ಕೊಟ್ಟಿರುವನಲ್ಲ ಎಂದು ಎಲ್ಲಿ ತನ್ನನ್ನು ಹೀಯಾಳಿಸಿ ಮಾತನಾಡುವರೋ ಎನ್ನುವ ಭಯಕ್ಕೆ ಅನಿಸಿತು.

ಇದಕ್ಕೆ ಉತ್ತಮ ಉಪಾಯ ಎಂದರೆ ಈ- ಕಥೆಗಳಿಂದ ಸ್ವಲ್ಪ ದಿನ ದೂರ ಇರುವುದು ಎಂದುಕೊಂಡು ತವರು ಮನೆಯಲ್ಲಿರುವ ಹೆಂಡತಿ, ಮಕ್ಕಳ ಜೊತೆ ಸ್ವಲ್ಪ ದಿನ ಸಮಯ ಕಳೆಯುವುದೇ ಸರಿಯಾದದ್ದು ಎನಿಸಿತು. ಮರುದಿನ ಎದ್ದು ಹೆಂಡತಿಯ ತವರಾದ ಮೈಸೂರಿಗೆ ಹೊರಟುಬಿಟ್ಟರು.

ಹೇಳದೇ ಕೇಳದೇ ತಮ್ಮನ್ನು ನೋಡಲು ಬಂದ ಗಂಡನನ್ನು ಕಂಡು ನಾಗೇಶ ಅವರ ಹೆಂಡತಿ ಸುಶೀಲಮ್ಮ ಬಲು ಖುಷಿ ಪಟ್ಟರು. ಒಂದು ದಿನ ಕಳೆದು ಅದೂ ಇದೂ ಮಾತನಾಡುತ್ತಿರುವಾಗ ಹೆಂಡತಿಗೆ ತಮ್ಮ ಕಥಾತೀರ್ಪು ತಂದುಕೊಟ್ಟ ಸಂಕಟ ಹೇಳಿಕೊಂಡರು. ಅದಕ್ಕೆ ಸುಶೀಲಮ್ಮ,

"ನೋಡಿ ಕಥೆ ಬರೆಯುವವರು ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದಾರೆ ಎಂದರೆ ಅವರಿಗೆ ಕಥೆ ಕಟ್ಟುವ ಕಲೆ ಇರಲೇಬೇಕು ಮತ್ತು ತಮ್ಮ ಕಥೆ ಚೆನ್ನಾಗಿದೆ ಎನ್ನುವ ಧೈರ್ಯವೂ ಇರಬೇಕು. ಕೆಟ್ಟದಾಗಿ ಕಥೆ ಬರೆದು ಅದನ್ನು ಸ್ಪರ್ಧೆಗೆ ಕಳುಹಿಸುವ ಧೈರ್ಯ ಯಾರೂ ಮಾಡಲಾರರು. ಒಂದು ಕಾವ್ಯ, ಕಥೆ ಪ್ರಕಟಣೆಗೆ ಕಳುಹಿಸಬೇಕಾದರೆ ಈಗಾಗಲೇ ಪ್ರಕಟಗೊಂಡಿರುವ ಕವನ, ಕಥೆಗಳ ಅವಗಾಹನೆ ಇರುತ್ತದೆ ಮತ್ತು ತಾವು ಅಂತಹ ಕವನ, ಕಥೆಗಳಿಗೆ ಹತ್ತಿರವಿದ್ದೇವೆ ಎನ್ನುವ ಧೈರ್ಯ ಇರುತ್ತದೆ. ಸುಮ್ಮನೆ ಕಥೆ ಸ್ಪರ್ಧೆಗೆ ಯಾರ್ಯಾರೋ ಕಥೆ ಕಳುಹಿಸುವುದಿಲ್ಲ. ನೀವು ಯಾವ ಕಥೆ ಆಯ್ಕೆ ಮಾಡಿದರೂ ಅದು ಜನಕ್ಕೆ ಮೆಚ್ಚುಗೆ ಆಗೇ ಆಗುತ್ತದೆ. ಕವಿ ಕಾಣದ್ದನ್ನು ವಿಮರ್ಶಕ ನೋಡುತ್ತಾನೆ ಅಲ್ಲವೇ?"

ನಾಗೇಶ್ ತಮ್ಮ ಹೆಂಡತಿಯನ್ನು ಹೆಮ್ಮೆಯಿಂದ ನೋಡಿದರು. ಅವರ ಮನ ತಿಳಿಯಾಯಿತು. ಮರುದಿನ ಊರಿಗೆ ವಾಪಾಸ್ ಆದರು. ಯಾವ ಪೂರ್ವಾಗ್ರಹ ಯೋಚನೆಯಿಲ್ಲದೆ, ನಿರ್ಮಲ ಮನಸ್ಸಿನಿಂದ ಎಲ್ಲಾ ಇಪ್ಪತೈದು ಕಥೆಗಳನ್ನೂ ನಿಧಾನವಾಗಿ ಓದಿದರು. ಎಲ್ಲಾ ಕಥೆಗಳೂ ತಮ್ಮದೇ ಅಂತರ್ಗತ ಗುಣಗಳಿಂದ ಚೆನ್ನಾಗಿವೆ ಅನಿಸಿದವು. ಅದರಲ್ಲಿ ಉತ್ತಮ ಎನಿಸಿದ ಮೂರು ಕಥೆಗಳನ್ನು ಸಂಪಾದಕರಿಗೆ ಕಳುಹಿಸಿ ಕೊಟ್ಟರು. ತಾನು ಬರೀ ವಿಮರ್ಶಕ ತೀರ್ಪುಗಾರನಲ್ಲ ಎಂದುಕೊಂಡರು.

ಕಥೆಗಳ ತೀರ್ಪು ಕಳುಹಿಸಿದ ಒಂದು ವಾರದ ನಂತರ ಪತ್ರಿಕೆಯಲ್ಲಿ ಬಹುಮಾನಿತರ ಹೆಸರು ಮತ್ತು ಅವರ ಕಥೆ ಹೆಸರುಗಳು ಪ್ರಕಟವಾದವು. ಅವುಗಳಲ್ಲಿ ನಾಗೇಶ್ ಅವರು ಆಯ್ಕೆಮಾಡಿದ್ದ ಯಾವ ಕಥೆಯ ಹೆಸರೂ ಇರಲಿಲ್ಲ.
***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.