ADVERTISEMENT

ರಾಜಶ್ರೀ ಟಿ. ರೈ ಪೆರ್ಲ ಬರೆದ ಕಥೆ: ಕಾಡಮನೆ

ರಾಜಶ್ರೀ ಟಿ.ರೈ ಪೆರ್ಲ
Published 30 ಏಪ್ರಿಲ್ 2022, 19:30 IST
Last Updated 30 ಏಪ್ರಿಲ್ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಊರಿನಲ್ಲಿ ಅದೆಷ್ಟು ಮಹಡಿ ಮನೆಗಳು ಇದ್ದರೇನು? ಕಾಡಮನೆಯ ಬಗ್ಗೆ ಊರವರಿಗೆ ದಿನಕ್ಕೆ ಹತ್ತು ಸಲ ಆದ್ರು ಮಾತನಾಡದಿದ್ದರೆ ಸಮಾಧಾನ ಇರಲಿಲ್ಲ. ಈಗಂತೂ ಜಗಲಿ, ಕೆರೆಕಟ್ಟೆಗಳ ಬಳಿ ಗುಂಪಾಗಿ ಸೇರಿ ಹೆಂಗಳೆಯರ ಗುಸು ಗುಸು ಮಾತು. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಘಟನೆ. ಗಿಂಡಿ ಜೋಯಿಸರ ಮಗ ಶಿವಣ್ಣ ಬೆಳ್ಳಂಬೆಳಗ್ಗೆ ಕಾಡಮನೆಯೊಳಗಿಂದ ಹೊರಬಂದದ್ದನ್ನು ಕಾಡಿಗೆ ತರಗಲೆ ತರುವುದಕ್ಕೆ ಮುಂಜಾನೆ ಹೋದ ಹೆಂಗಸರು ನೋಡಿದ್ದರಂತೆ! ಈ ಸುದ್ದಿ ಕಾಳ್ಗಿಚ್ಚಿನ ಹಾಗೆ ಪುಟ್ಟ ಊರಿನ ತುಂಬಾ ಹರಡಿತ್ತು. ಶಿವಣ್ಣನಿಗೆ ಏನಾಗಿದೆ? ಅದೂ ಊರಾಚೆಯ ಕಾಡಮನೆಗೆ ಹೋಗುವಂಥದ್ದು? ಗಿಂಡಿ ಜೋಯಿಸರಿಗೆ ವಿಷಯ ತಿಳಿದರೆ ಮುಂದಿನ ಕಥೆ ಊಹಿಸುವಂತೆ ಇರಲಿಲ್ಲ. ಆದರೆ ಗಿಂಡಿ ಜೋಯಿಸರಲ್ಲಿ ಹೇಳುವ ಧೈರ್ಯ ಯಾರಿಗಿದೆ. ಒಂದು ವೇಳೆ ಗೊತ್ತಾದರೆ ಕರಿಯನ ಕಥೆ ಏನಾಗುತ್ತೋ. ಸದಾ ಶುದ್ಧ ಶುದ್ಧ ಅಂತ ತೀರ್ಥದ ಗಿಂಡಿ ಹಿಡಿದುಕೊಂಡೇ ತಿರುಗಾಡುವ ಜೋಯಿಸರ ಹೆಸರಿನೊಂದಿಗೆ ಸಹಜವಾಗಿ ಗಿಂಡಿ ಜೋಡಿಕೊಂಡಿತ್ತು. ಹೆಂಡ್ತಿ ಕೂಸಮ್ಮ ಅವರ ಮಡಿ ಮೈಲಿಗೆ ಆಚಾರಕ್ಕೆ ತುಟಿ ಪಿಟಿಕ್‌ ಅನ್ನದೆ ಹೊಂದಿಕೊಂಡು ಹೋಗುವವರು. ಮದುವೆಯಾದ ಹತ್ತು ವರ್ಷದ ನಂತರ ಹುಟ್ಟಿದ್ದು ಗಂಡು ಮಗು. ಬಹಳ ಮುದ್ದಾಗಿ ಸಾಕಿದರೂ ಗಿಂಡಿ ಜೋಯಿಸರ ಕಟ್ಟುನಿಟ್ಟಿನಲ್ಲಿ ಯಾವ ರಿಯಾಯಿತಿಯೂ ಇರಲಿಲ್ಲ. ವೇದಪಾಠ ಅದೂ ಇದೂ ಅಂತ ಇತ್ತೀಚೆಗೆ ಆತ ಊರಲ್ಲಿ ಇದ್ದದ್ದೇ ಕಡಿಮೆ. ಮದುವೆ ಪ್ರಾಯಕ್ಕೆ ಬಂದರೂ ಇವರ ಮಡಿವಂತಿಕೆಗೆ ಒಗ್ಗುವ ಹುಡುಗಿ ದೊರೆತಿರಲಿಲ್ಲ. ಈಗ ಚಿಗುರು ಮೀಸೆಯ ನಡುವೆ ಸಣ್ಣ ಬಿಳಿ ಇಣುಕುತ್ತಿತ್ತು. ವಯಸ್ಸಿನ ಏರುವಿಕೆಯ ಜಗ್ಗಿ ಹಿಡಿದಿಡುವ ವ್ಯರ್ಥ ಪ್ರಯತ್ನದಲ್ಲಿ ಸದಾ ಮೀಸೆ ಗೀಸುವ ಮುದ್ದು ಮುಖದ ಹುಡುಗ! ಹೋಗಿ ಹೋಗಿ ಕಾಡಮನೆಯ ಒಳಗೆ ಆತನಿಗೆ ಏನು ಕೆಲಸ ಇತ್ತು. ಜೋಯಿಸರ ಪಕ್ಕದ ಮನೆಯ ಶಂಕ್ರು ಸೆಟ್ಟಿಯ ಹೆಂಡತಿ ಒಂದು ಹೆಜ್ಜೆ ಮುಂದೆ ಹೋಗಿ ಕೂಸಕ್ಕನ ಹತ್ರ ಈ ವಿಚಾರ ಬಾಯಿಬಿಟ್ಟು ಕೇಳಬೇಕೆ! ಅಲ್ಲಿ ಸೇರಿದ್ದ ಅಷ್ಟೂ ಹೆಂಗಸರ ಮುಖದಲ್ಲಿ ಏನು ಉತ್ತರ ಬರುತ್ತೋ ಎಂದು ಆತಂಕ ಹೆಪ್ಪುಗಟ್ಟಿತ್ತು. ಆದರೆ ಕೂಸಕ್ಕ ಒಂದು ಸುದೀರ್ಘ ನಿಟ್ಟುಸಿರು ಬಿಟ್ಟದ್ದೇ, ‘ಕಾಡಿನ ಹಾದಿಯಲ್ಲಿ ಬರುವಾಗ ಹುಲಿ ಎದುರಾದರೆ ಮನೆಯೋ ಮರವೋ ಅಂತ ನೋಡುವುದಕ್ಕೆ ಏನಿದೆ? ಪ್ರಾಣ ಉಳಿದರೆ ಮತ್ತೆ ಬೇರೆಲ್ಲವೂ..’ ಮರು ಪ್ರಶ್ನೆಗೆ ಅವಕಾಶ ನೀಡದೆ ಎದ್ದು ಹೋಗಿದ್ದರು.

ಅವರ ಮಾತಿನಲ್ಲಿ ಇದ್ದ ನಿರಾಳತೆ ಮೊಗದಲ್ಲಿ ಇರಲಿಲ್ಲ. ಉಳಿದವರು ಮುಖ ಮುಖ ನೋಡಿಕೊಂಡರೇ ಹೊರತು ಏನೂ ಹೇಳಿಕೊಳ್ಳಲಿಲ್ಲ. ಅವರ ಮುಖಭಾವವೇ ಕೂಸಮ್ಮನ ಮಾತನ್ನು ನಾವು ಒಪ್ಪುವುದಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಇಲ್ಲದಿದ್ದರೂ ಇದು ಒಪ್ಪುವ ಮಾತೇ? ಕತ್ತೆ ಕಿರುಬಗಳ ಹಾವಳಿ ಊರಿಗೆ ಹೊಸತಲ್ಲ. ನಾಯಿ ಸಾಕುವುದನ್ನು ನಿಲ್ಲಿಸಿದ ಮೇಲೆ ಅದರ ಕಾಟ ಕಡಿಮೆಯಾಗಿತ್ತು. ಆದರೆ ಹುಲಿಯ ಅಸ್ತಿತ್ವದ ಕುರುಹು ಕೆಲವು ವರ್ಷಗಳಿಂದ ಆ ಊರಿನಲ್ಲಿ ಇಲ್ಲ. ಅಚಾನಕ್ಕಾಗಿ ಶಿವಣ್ಣನಿಗೆ ಹುಲಿ ಕಾಣಸಿಗುವುದಾದರೂ ಹೇಗೆ? ಅಲ್ಲಾ ಶಿವಣ್ಣ ನಡು ರಾತ್ರೆ ಆ ಹಾದಿಯಲ್ಲಿ ಹೋದದ್ದಾದರೂ ಎಲ್ಲಿಗೆ ಅಂತ ಬೇಕಲ್ವಾ! ಅಲ್ಲಾ...ನಿಜವಾಗಿ ಹುಲಿ ಬಂದಿದ್ರೆ ಅವ ಕಾಡಮನೆಯೊಳಗೆ ಹೋಗಿದ್ದರಲ್ಲಿ ವಿಶೇಷವೇನು ಇಲ್ಲ ಬಿಡಿ. ಪ್ರಾಣ ದೊಡ್ಡದು ಅಲ್ವಾ? ಹೀಗೆ ಅವರವರ ಭಾವಕ್ಕೆ ಅವರವರು ಅಂದುಕೊಂಡು ಎದ್ದು ಹೋದರು.

ಅಷ್ಟಕ್ಕೂ ಈ ಕಾಡಮನೆ ಎನ್ನುವುದು ಪ್ರವೇಶಿಸಿದ ಕೂಡಲೇ ಪ್ರೇತ ಆವಾಹನೆಯಾಗುವ ಭೂತ ಬಂಗಲೆಯೇನು ಅಲ್ಲ. ಊರಾಚೆ ಹರಡಿಕೊಂಡಿರುವ ದಟ್ಟ ಕಾಡಿನ ನಡುವೆ ಇರುವ ಕರಿಯನ ಜೋಂಪುಡಿ ಮನೆಗೆ ಕಾಡಮನೆ ಎಂಬ ಹೆಸರಿಟ್ಟವರ ಬಗ್ಗೆ ಮಾಹಿತಿಯಿಲ್ಲ. ಕಾಡಮನೆ ಆ ಊರಿನವರಿಗೆಲ್ಲಾ ಪರಿಚಿತ. ಸದ್ಯ ಆ ಮನೆಯಲ್ಲಿ ಇರುವುದು ಕರಿಯ ಮತ್ತು ಅವನ ಮಗಳು ಪೊಣ್ಣಿ ಮಾತ್ರ. ಕರಿಯನ ಹೆಂಡತಿ ಹೆರಿಗೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡಿದ್ದಳು. ಆ ಬಗ್ಗೆಯೂ ಸಾವಿರ ಕಥೆಗಳು ಹರಡಿಕೊಂಡಿದ್ದವು. ಪೊಣ್ಣಿ ಬೆಳೆದಂತೆ ಆ ಕಥೆಗಳೆಲ್ಲಾ ಬಣ್ಣ ಕಳೆದುಕೊಂಡು ಮೂಲೆ ಸೇರಿದ್ದವು. ಪೊಣ್ಣಿಯ ಮೈಬಣ್ಣ, ಎತ್ತರದ ನಿಲುವು ಚೆಲುವು ಕಾಣುವಾಗೆಲ್ಲಾ ಊರ ಮುದುಕಿಯರು ಅಸ್ಪಷ್ಟವಾಗಿ ವಟಗುಟ್ಟುವ ಹೊತ್ತಿಗೊಮ್ಮೆ ಹಳೇ ಕಥೆಗಳಿಗೆ ರಂಗೇರುವುದಿತ್ತು. ಅಷ್ಟಕ್ಕೂ ಕರಿಯನಿಗೆ ದುರಾಭ್ಯಾಸವೇನೂ ಇರಲಿಲ್ಲ. ತಾನಾಯಿತು ತನ್ನ ಕೆಲಸ ಆಯಿತು. ಕಾಡಿನ ಸೊಪ್ಪು ಮದ್ದು, ಜೇನು ಅದೂ ಇದೂ ಅಂತ ಕಾಡು ಉತ್ಪನ್ನಗಳನ್ನು ತಂದುಕೊಡುವವನು ಅವನೊಬ್ಬನೇ. ಸರಕಾರದ ಮಂದಿ ಊರಿಗೆ ಕರೆದರೂ ಆತ ತನ್ನ ಮೂಲ ನೆಲ ಬಿಟ್ಟು ಬರುವುದಕ್ಕೆ ಮನಸ್ಸು ಮಾಡಿರಲಿಲ್ಲ. ಅವನ ಸಂಬಂಧಿಗಳೆಲ್ಲರೂ ನಾಡಾಡಿಗಳಾಗಿ ವರ್ಷಗಳೇ ಕಳೆದಿದ್ದವು. ಪೊಣ್ಣಿ ಮನೆ ಬಿಟ್ಟು ಕಾಡಿನ ನಡುವೆ ತಿರುಗಾಡಿದರೂ ಊರ ಬೀದಿಗೆ ಇಳಿದದ್ದನ್ನು ಕಂಡವರು ಖಂಡಿತಾ ಯಾರೂ ಇಲ್ಲ. ಕಾಡಮಲ್ಲಿಗೆಯವಳು ಅಂತ ಹಲವರು ಅಲ್ಲಲ್ಲಿ ಹೇಳಿಕೊಂಡು ಆಸೆ ಕಣ್ಣುಗಳಿಗೆ ಕಲ್ಪನೆಯ ಲೇಪ ಹಚ್ಚಿಕೊಂಡಿದ್ದನ್ನು ಕರಿಯನ ಸೊಂಟದಲ್ಲಿ ಸದಾ ಇಣುಕುತ್ತಿದ್ದ ಹರಿತವಾದ ಕತ್ತಿಯ ಅಲಗಿನ ಹೊಳಪು ಕೆರೆಸಿ ತೆಗೆಯುತ್ತಿತ್ತು. ಜೋಯಿಸರಿಗೋ ಅವರ ಮಗನಿಗೋ ಕಾಡಾಚೆ ಹೋಗುವ ಪ್ರಮೇಯವೇ ಬರಲಾರದು. ಹಾಗಿದ್ದು ಶಿವಣ್ಣ ಅತ್ತ ಹೋಗಿ ಹುಲಿಯ ಭಯಕ್ಕೆ ಕಾಡಮನೆ ಹೊಕ್ಕದ್ದು ನಿಜವಿರಬಹುದೇ? ಈ ವಿಚಾರ ಗಿಂಡಿ ಜೋಯಿಸರಿಗೆ ಗೊತ್ತಾಗದೇ ಉಳಿದೀತೆ? ಊರಿನವರಿಗೆ ಇದೊಂದು ಯಕ್ಷಪ್ರಶ್ನೆಯಾಗಿ ಕಾಡತೊಡಗಿತ್ತು. ಹೆಂಗಳೆಯರಿಗೆ ಕೂಸಮ್ಮನಲ್ಲಿ ಮಾತು ಮುಂದುವರಿಸುವಂತೆ ಇರಲಿಲ್ಲ. ಗಂಡಸರಿಗೆ ಜೋಯಿಸರ ಹತ್ತಿರ ಈ ವಿಚಾರ ಪ್ರಸ್ತಾಪ ಮಾಡಲು ಧೈರ್ಯ ಇರಲಿಲ್ಲ. ಮತ್ತೆ ಉಳಿದದ್ದು ಕರಿಯ ಮಾತ್ರ. ಅವನಲ್ಲಿಯೇ ಕೇಳೋಣ ಅಂದ್ರೆ ಆತ ಕೈಗೇ ಸಿಗುತ್ತಿರಲಿಲ್ಲ. ಇನ್ನು ಅವನ ಮಗಳ ಭೇಟಿ ಅಸಾಧ್ಯವೇ ಸರಿ. ಈಗ ಊರಿನವರಿಗೆ ನೆನಪಾದದ್ದು ಮುಪ್ಪೇರಿ ಕಾಕನನ್ನು. ಊರಿನಲ್ಲಿರುವ ಜಿನಸಿ ಅಂಗಡಿಯ ಮಾಲಕ. ಅವನಲ್ಲಿಂದಲೇ ಕರಿಯನ ಮನೆಗೆ ದಿನ ನಿತ್ಯದ ಸಾಮಾನುಗಳು ಹೋಗುವುದು. ಅವನ ಅಂಗಡಿ ಬಾಗಿಲ ಸಣ್ಣ ಜಗಲಿಯಲ್ಲಿ ಕರಿಯ ಆಗಾಗ ಬೀಡಿ ಸೇದಿಕೊಂಡು ಕುಳಿತಿರುತ್ತಿದ್ದ. ಅವರಿಬ್ಬರ ನಡುವಿನ ಆತ್ಮೀಯತೆಯ ಆಳ ಅಗಲ ಅರಿತವರು ಇಲ್ಲ. ಆದರೂ ಒಂದು ಪ್ರಯತ್ನ ಮಾಡಿ ನೋಡುವ ಎಂದು ಮೇಸ್ತ್ರಿ ಕಿಟ್ಟಿ ಮತ್ತು ದ್ಯಾವಪ್ಪು ಕಾಕನ ಹತ್ತಿರ ವಿಚಾರ ತೆಗೆದರು. ಅವರ ಪ್ರಶ್ನೆ ಕೇಳಿ ಕಾಕನಿಗೆ ಗಾಬರಿಯಾಯಿತು.
‘ಎಂಡೆ ರಬ್ಬೇ....!ಕಾಡಮನೆಯಲ್ಲಿ ಜೋಯಿಸರ ಮಗನಾ...! ಛೇ..ಛೇ..ನಿಮಗೆ ಎಂಥದ್ದೋ ಕನಸು ಬಿದ್ದಿರಬೇಕು. ಈ ಊರ ಹೆಂಗಸರು ಉಂಟಲ್ವಾ ಒಳ್ಳೆ ಕಥೆ ಕಟ್ಟುತ್ತಾರೆ. ಈ ಹೆಂಗಸರು ನನ್ನನ್ನು ಮತ್ತು ಜಮೀಲಳನ್ನೂ ಬಿಟ್ಟವರಲ್ಲ. ನೀವೊಂದು ಅವರ ಮಾತು ನಂಬಿಕೊಂಡು...’. ಕಾಕ ಇದನ್ನು ಸುತಾರಂ ಒಪ್ಪುವುದಕ್ಕೆ ಸಿದ್ಧವಿರಲಿಲ್ಲ.

ADVERTISEMENT

ಕಾಕನಿಗೆ ಗಿಂಡಿ ಭಟ್ರನ್ನು ಗೊತ್ತಿಲ್ವಾ. ಆದ್ರೆ ಇವರು ಬಿಡಬೇಕೇ, ‘ಇಲ್ಲ ಕಾಕಾ... ಅವರು ಸುಳ್ಳು ಯಾಕೆ ಹೇಳುತ್ತಾರೆ? ಸುಮಸುಮ್ನೆ ಕಥೆ ಕಟ್ಟಿ ಏನು ಲಾಭ ಹೇಳಿ? ನಿಜವಾಗಲೂ ಶಿವಣ್ಣ ಕಾಡಮನೆಗೆ ಹೋದದ್ದು ಹೌದು. ಯಾಕೆ? ಜೋಯಿಸರಿಗೆ ಈ ವಿಚಾರ ತಿಳಿದಿಲ್ವಾ! ಇದೇ ನಮಗೆ ಕಾಡಿದ ಪ್ರಶ್ನೆ. ಕಾಕ ನೀವು ಮನಸ್ಸು ಮಾಡಿದ್ರೆ ಇದಕ್ಕೆ ಉತ್ತರ ಸಿಗುತ್ತೆ’. ಕೆಟ್ಟ ಕುತೂಹಲ ಅವರ ಮೊಗದಲ್ಲಿ ಕುಣಿಯುತ್ತಿತ್ತು. ಉಪ್ಪೇರಿ ಕಾಕ ಸ್ವಲ್ಪ ಹೊತ್ತು ಮಾತನಾಡಲಿಲ್ಲ. ನಂತರ ಒಂದು ಅರ್ಧ ಮನಸ್ಸಿನಿಂದ ಉತ್ತರಿಸಿದರು.
‘ಹೂಂ, ನೀವು ಬಯಸುವುದು ಏನು ಅಂತ ಗೊತ್ತಾಯ್ತು ಬಿಡಿ. ನಾನು ಕಂಡವರ ವಿಚಾರಕ್ಕೆ ಎಲ್ಲಾ ಮೂಗು ತೂರಿಸುವವನಲ್ಲ. ಆದ್ರು ಇದೇನು ಅಂತ ನನಗೂ ಕುತೂಹಲ. ಸಂಜೆ ಕರಿಯ ಬಂದೇ ಬರುತ್ತಾನೆ. ಅವನಲ್ಲಿಯೇ ಕೇಳಿ ಬಿಡ್ತೇನೆ. ಆದ್ರೆ ಯಾರು ನೋಡಿದ್ದು ಅಂದ್ರೆ ನಿಮ್ಮ ಹೆಸರು ಹೇಳದೆ ವಿಧಿಯಿಲ್ಲ ನನಗೆ’ ಅವರ ಮಾತಿಗೆ ಇವರಿಬ್ಬರೂ ಬೆವೆತು ಒದ್ದೆ ಆಗಿಬಿಟ್ಟರು.
‘ಕಾಕ..ಹಾಗೆ ಹೇಳಿದರೆ ನಮ್ಮ ಕಥೆ ಮುಗೀತು. ನಿಮಗೆ ನಾವು ಹೇಳಿಕೊಡಬೇಕಾ? ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಕೇಳಿ ನೋಡಿ. ಅವರಿವರ ಹೆಸರು ಯಾಕೆ ಇಲ್ಲಿ’ ಅವರಿಗೆ ಮಜ್ಜಿಗೆಯೂ, ಬೆಣ್ಣೆಯೂ ಬೇಕಿತ್ತು, ಮೊಸರು ಕಡೆಯುವ ಶ್ರಮ ಬೇರೆಯವರಿಗೆ ಇರಲಿ ಎನ್ನುವ ಭಾವ! ಕಾಕನ ಮೊಗದಲ್ಲಿ ಒಂದು ಸಣ್ಣ ನಗು ಹೌದೋ ಅಲ್ಲವೋ ಅನ್ನುವ ಹಾಗೆ ತೆಳುವಾಗಿ ಹರಡಿಕೊಂಡಿತು.

ಬಿಸಿಲಿನ ಝಳ ಕಡಿಮೆ ಆಗುತ್ತಾ ಬಂದಾಗ ಕರಿಯನ ಕಂದು ಮುಟ್ಟಾಲೆಯ ತಲೆ ಕಾಕನ ಅಂಗಡಿಯ ಎದುರು ಕಾಣಿಸಿತು. ಅಂದು ಒಂದಿಷ್ಟು ಕಾಡ ಜೇನು ಕಂಗಿನ ಹಾಳೆಯಲ್ಲಿ ಸಂಗ್ರಹಿಸಿ ತಂದಿದ್ದ. ಅವನು ಹಾಗೆ ತರುವುದು ಹೊಸತೇನಲ್ಲ. ಕಾಕನೇ ಅದನ್ನು ಹಿಂಡಿಕೊಂಡೆ ಅಳತೆಗೆ ಚಂದ ಬಾಟಲಿಯಲ್ಲಿ ತುಂಬಿಸಿ ಊರಿನವರಿಗೆ ಮಾರಾಟ ಮಾಡುತ್ತಿದ್ದದ್ದು. ಕಾಕ ಹೇಳಿದ ದುಡ್ಡು. ಅದರ ಬದಲಿಗೆ ಅಕ್ಕಿ ಬೇಳೆ ಸಾಮಾನು ತೆಗೆದುಕೊಂಡು ಕರಿಯ ಮರಳುತ್ತಿದ್ದ. ಕಾಕ ಜೇನನ್ನು ಹಿಂಡುತ್ತಾ ಮಾತೆತ್ತಿದ್ದರು,
‘ಅಲ್ಲಾ, ಕಾಡಲ್ಲಿ ಹುಲಿಯ ಸದ್ದು ಕೇಳಿಸುತ್ತಿದೆ ಅಂತ ಯಾರೋ ಹೇಳಿದ್ರು...ಹೌದೇನು ಕರಿಯಾ?’ ಸಾಧ್ಯವಾದಷ್ಟೂ ಸಹಜವಾಗಿಯೇ ಧ್ವನಿಯನ್ನು ಹೊರ ಎಸೆದರವರು.

‘ಹುಲಿಯಾ!? ಇಲ್ಲಪ್ಪ...ಹುಲಿ ಬಂದ್ರೆ, ಆನೆ ಹಿಂಡು ಬಂದ್ರೆ ನನಗೆ ಗೊತ್ತಾಗದೇ ಇರುತ್ತಾ? ಬೇಸಗೆ ರಜೆ ಬಂತು ಅಲ್ವಾ, ಈ ಪೋಕರಿ ಮಕ್ಕಳು ಕಾಡಿನ ಕಡೆ ಹೋಗಿ ಮರ ಹತ್ತಿ, ಜೇನು ಗೂಡಿಗೆ ಕಲ್ಲೆಸೆದು ಕಿತಾಪತಿ ಮಾಡುವುದು ಬೇಡ ಅಂತ ಹಿರಿಯರು ಕಥೆ ಕಟ್ಟಿರಬೇಕು ಕಾಕ...ಹುಲೀನೂ ಇಲ್ಲ, ಚಿರತೆನೂ ಇಲ್ಲ’ ಅವನು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದಾಗ ಕಾಕನ ಬಾಯಿ ಕಟ್ಟಿತು. ಅವನು ಪೂರ್ತಿ ಮುಗಿಸಿದ ಮೇಲೆ ಶಿವಣ್ಣನ ಸುದ್ದಿ ಎತ್ತ ಕಡೆಯಿಂದ ಎತ್ತಿ ಮತ್ತೆ ಪ್ರಶ್ನೆ ಕೇಳುವುದು ಅಂತಲೇ ಗೊತ್ತಾಗಲಿಲ್ಲ. ಕರಿಯ ಯಾವುದೇ ಗಲಿಬಿಲಿಯಲ್ಲಿ ಇರಲಿಲ್ಲ. ಬೀಡಿ ಎಳೆಯುತ್ತಾ ಮೂಗಿನ ಮೂಲಕ ರಭಸದಿಂದ ಹೊಗೆ ಹೊರಬಿಡುತ್ತಿದ್ದ. ಸುಮ್ನೆ ಇವರ ಮಾತು ಕಟ್ಟಿಕೊಂಡು ಏನೇನೋ ಕೇಳೋಕೆ ಹೋಗಿ ಇನ್ನೇನೋ ಆಗುವುದು ಬೇಡ, ಹೊಟ್ಟೆ ಬಟ್ಟೆಗೆ ಬೇಕಾಗಿ ವ್ಯಾಪಾರಕ್ಕೆ ನಿಂತವನಿಗೆ ಇದೆಲ್ಲಾ ಊರ ಉಸಾಬರಿ ಯಾಕೆ ಅಂತ ಕಾಕ ಆ ವಿಚಾರದಲ್ಲಿ ಮಾತು ಮುಂದುವರಿಸಲಿಲ್ಲ. ಕರಿಯನ ಬೆನ್ನು ಮರೆಯಾದ ತಕ್ಷಣ ಬಂದ ಕಿಟ್ಟಿ ಮತ್ತು ದ್ಯಾವಪ್ಪು ಬಂದಷ್ಟೇ ವೇಗವಾಗಿ ನಿರಾಸೆಯ ಮುಖ ಹೊತ್ತು ಮರಳಿದರು. ಯಾರಿಗೂ ವಿವರ ದೊರೆಯಲಿಲ್ಲ. ತರಗಲೆ ತರಲು ಹೋಗುವ ಹೆಂಗಳೆಯರಿಗೆ ಮತ್ತೂ ನಿರೀಕ್ಷೆ, ಶಿವಣ್ಣ ಮತ್ತೆ ಕಣ್ಣಿಗೆ ಬೀಳುತ್ತಾರ ಅಂತ! ಹುಲಿಯ ಭಯ ಕೂಡ ಇಲ್ಲದಿಲ್ಲ. ಒಟ್ಟಾರೆಯಾಗಿ ಪ್ರಶ್ನೆ ಪ್ರಶ್ನೆಯಾಗಿಯೇ ಊರಿಡೀ ಅತ್ತಿತ್ತ ಗಿರಕಿ ಹೊಡೆಯುತ್ತಿತ್ತು.

ಆವತ್ತು ತಡ ರಾತ್ರಿ ಕಾಕ ಅಂಗಡಿ ಬಂದ್ ಮಾಡಿ ಮರಳುವಾಗ ಕಾಡಿನ ನಡುವೆ ಬೆಂಕಿ ಧಗಧಗಿಸುತ್ತಿತ್ತು. ಅರೇ! ಕರಿಯನ ಗುಡಿಸಲು ಹೊತ್ತಿ ಉರಿಯುತ್ತಿತ್ತು. ಊರಿನವರು ನಿಂತು ಬೊಬ್ಬೆ ಹೊಡೆದದ್ದು ಬಿಟ್ರೆ ಯಾರೂ ಅತ್ತ ಹೋಗುವ ಧೈರ್ಯ ಮಾಡಲಿಲ್ಲ. ಬೆಂಕಿಯ ಕುಣಿತಕ್ಕೆ ಹತ್ತಿರದ ಮರಗಳು ಕೂಡ ಸುಟ್ಟು ಕರಕಲಾಗಿ ಬಿದ್ದಿದ್ದವು. ಕರಿಯ ಮತ್ತು ಅವನ ಮಗಳಿಗೆ ಏನಾಯಿತು ಅಂತ ನೋಡುವುದಕ್ಕೆ ಹೋದವರಿಗೆ ಯಾವ ಸುಳಿವೂ ಸಿಗಲಿಲ್ಲ. ದಾರಿಯಲ್ಲಿ ಜೋಯಿಸರ ಗಿಂಡಿ ಮಾತ್ರ ಬಿದ್ದು ಸಿಕ್ಕಿತ್ತು! ಕಾಡಮನೆ ಬೆಂಕಿಗಾಹುತಿ ಆದ ಕಾರಣವೋ ಏನೋ ಅಂದು ರಾತ್ರಿ ವಿಪರೀತ ಮಳೆ ಸಿಡಿಲು. ಯಾರೂ ಹೊರಬರಲಿಲ್ಲ. ಮುಂಜಾನೆ ಬಹಳ ಬೇಸರದಿಂದ ಕಾಕ ಅಂಗಡಿ ಬಾಗಿಲು ತೆರೆಯುವುದಕ್ಕೆ ಬಂದಾಗ ಕರಿಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ. ಅವನ ಕೈಯಲ್ಲಿ ಸರಕಾರದಿಂದ ಮನೆ, ಜಮೀನು ಇಲ್ಲದವರಿಗೆ ಕೊಡುವ ಮೂರು ಸೆಂಟ್ಸ್ ಸ್ಥಳದ ಅರ್ಜಿಯಿತ್ತು. ಅದನ್ನು ಭರ್ತಿ ಮಾಡುವುದಕ್ಕೆ ಕಾಕನ ದಾರಿ ಕಾಯುತ್ತಿದ್ದ. ಒಂದೂ ಮಾತನಾಡದೇ ಕಾಕ ಅದನ್ನು ತುಂಬಿಸಿ ಅವನ ಕೈಯಲ್ಲಿಟ್ಟ.
‘ನಿಂಗೂ ಮಗಳಿಗೂ ಏನೂ ಆಗಿಲ್ಲ ಅಲ್ವಾ...? ಮನೆ ಹೋದರೆ ಹೋಗಲಿ ಬಿಡು’ ಸಾಂತ್ವನದ ಹಾಗೆ ಹೇಳಿದರೂ ಕರಿಯನ ವಿವರಣೆಯ ನಿರೀಕ್ಷೆ ಆ ಮಾತಿನಲ್ಲಿ ಇತ್ತು. ಆದರೆ ಕರಿಯ ಒಂದು ಕ್ಷಣ ಸುಮ್ಮನೇ ಇದ್ದ. ನಂತರ ಅರ್ಜಿಯನ್ನು ಮಡಚಿ ಕಂಕುಳ ನಡುವೆ ಇರಿಸಿ,
‘"ಹೂಂ, ಕಾಡೇ ಕ್ಷೇಮ ಅಂದುಕೊಂಡೆ. ಕಾಡಿನ ಪ್ರಾಣಿಗಳು ನಾಡಿಗೂ, ನಾಡಿನ ಪ್ರಾಣಿಗಳು ಕಾಡಿಗೂ ನುಗ್ಗಿದರೆ ಏನಿದೆ? ಮತ್ತೆ ಎರಡೂ ಸುಡುಗಾಡು? ತಲೆ ಮೇಲೆ ಒಂದು ಸೂರು ಇದ್ದರೆ ಸಾಕು ಅಂತ ಅನ್ನಿಸಿದೆ. ಇದಕ್ಕಿನ್ನು ಎಷ್ಟು ದಿನ ಹಿಡಿಯುತ್ತೋ ಗೊತ್ತಿಲ್ಲ’ ತಲೆ ಕೆಳಗೆ ಹಾಕಿ ಉತ್ತರಕ್ಕೂ ಕಾಯದೆ ಪಂಚಾಯತು ಆಪೀಸಿನತ್ತ ಹೆಜ್ಜೆ ಹಾಕಿದಾಗ ಕಾಕ ಕಪ್ಪು ಸವರಿ ಅರೆದು ಹಾಸಿಟ್ಟ ಆತನ ಬೆನ್ನು ನೋಡುತ್ತಾ ನಿಂತರು. ಇದಾಗಿ ಒಂದು ತಿಂಗಳಲ್ಲಿ ಕರಿಯನಿಗೆ ಜಮೀನೂ ಸಿಕ್ಕಿತು. ಸಣ್ಣ ಬುಡಾರವು ಆಯಿತು. ಆದರೆ ಊರಿಗೆ ವಾಸಿಸಲು ಬಂದಾಗ ಅವನ ಜೊತೆ ಮಗಳು ಇರಲಿಲ್ಲ! ಈಗ ಇದು ದೊಡ್ಡ ಪ್ರಶ್ನೆ. ತಾಯಿ ಇಲ್ಲದ ಮಗು ಮನೆಯ ಜೊತೆ ಸುಟ್ಟು ಹೋದಳಾ ಅಂತ ನೊಂದುಕೊಂಡವರು ಹಲವರು. ಇತ್ತ ಇನ್ನೊಂದು ವಿಶೇಷ ಅಂದ್ರೆ ಜೋಯಿಸರ ಮಗನನ್ನು ಆಮೇಲೆ ಯಾರೂ ಕಂಡವರಿಲ್ಲ. ಈಗ ಗಿಂಡಿ ಹಿಡಿಯದ ಗಿಂಡಿ ಜೋಯಿಸರ ಹತ್ತಿರ ಇದನ್ನು ಕೇಳುವ ಧಂ ಯಾರಿಗೂ ಇಲ್ಲ ಬಿಡಿ. ಕೂಸಮ್ಮ ಏನು ಹೇಳುತ್ತಾರೆ ಅಂತ ನೋಡೋಣ ಅಂತ ನೆರೆಕರೆ ಹೆಂಗಸರೇ ಒಂದಿನ ಪೀಠಿಕೆ ಹಾಕಿದ್ದು.
‘ಚಿಕ್ಕ ಅಣ್ಣವ್ರನ್ನು ಕಾಣುವುದಕ್ಕೇ ಇಲ್ಲ, ಆವತ್ತು ಕಾಡಮನೆಗೆ ಹೋಗಿದ್ದು ಗೊತ್ತಾಗಿ ಜೋಯಿಸರು ಶಪಿಸಿದ್ರು ಅನ್ನಿಸುತ್ತೆ. ಕರಿಯನ ಮನೆ ಭಸ್ಮ ಆಯಿತು. ಜೋಯಿಸರು ಮಗನಿಗೆ ಏನಾದರೂ ಅಂದ್ರಾ...ಸಿಟ್ಟು ಮಾಡಿಕೊಂಡು ಮನೆ ಬಿಟ್ಟು ಹೋದ್ರಾ ಹೇಗೆ?’ ಹಳೇಯ ವಿಷಯ ಮತ್ತು ಹೊಸ ವಿಷಯವನ್ನು ಜೋಡಿಸಿದ ಪ್ರಶ್ನೆಯಾಗಿತ್ತು. ಉತ್ತರದಲ್ಲಿಯೂ ಎರಡೂ ಗೊಂದಲ ನಿವಾರಣೆ ಆಗುತ್ತೆ ಎನ್ನುವ ಆಸೆಯಿತ್ತು ಅಂತ ಬೇರೆ ಹೇಳಬೇಕಿಲ್ಲ.

‘ಏಯ್...ಹಾಗೇನಿಲ್ಲ. ಹುಲಿ ಬಂದಾಗ ಅವನೇನೂ ಹೋಗುವುದು...ಅವನ ಅಪ್ಪ ಕೂಡ ಕಾಡಮನೆಯೊಳಗೆ ಹೋಗಿದ್ರಂತೆ... ಹುಲಿಗೆ ಅಪ್ಪ ಮಗ ಅಂತ ಉಂಟಾ? ಈ ಮನುಷ್ಯನ ದಾಹ, ಭಯ, ಹಸಿವು ಇವೆಲ್ಲಾ ಅವಕಾಶ ಸಿಕ್ಕ, ಇಂಗುವ ದಾರಿಯಲ್ಲಿ ಹೋಗಿ ಶಮನ ಆಗುತ್ತೆ. ಯಾವುದಕ್ಕೂ ಕಾಡಮನೆ ಈಗಿಲ್ಲ ಅಲ್ವಾ? ಹೊತ್ತಿ ಹೋಯಿತು, ಇನ್ನತ್ತ ಯಾರೂ ಹೋಗಬೇಕಾಗಿಲ್ಲ ಅಂತ ಅಂದು ಬಂದವರೇ ತಲೆ ಮೇಲೆ ನೀರು ಸುರುಕ್ಕೊಂಡ್ರು. ಇವನು ಯಾರೋ ಪರಜಾತಿಯವಳನ್ನು ಕಟ್ಟಿಕೊಂಡ ಅಂತೆ. ಹೋಗ್ಲಿ, ಸಂಸಾರ ಸುಖ ಸಿಗದೆ ನರಕ ಪ್ರಾಪ್ತಿ ತಪ್ಪಿತು. ಬಂದಾನು ಯಾವತ್ತಾದರೂ...’ ವೇದಾಂತಿಯ ಹಾಗೆ ಹೇಳಿದ ಆ ಮಾತುಗಳಲ್ಲಿ ಒಂದು ಉಳಿಸಿಕೊಂಡು ಇನ್ನೊಂದು ಕಳೆದುಕೊಂಡ ನೋವು ನಲಿವಿನ ಮಿಶ್ರಣವಿತ್ತು. ‘ಕರಿಯನ ಮಗಳು ಎಂಥ ಚೆಲುವೆ! ಆದ್ರೆ...ಕಾಡಮನೇಲಿ ಹುಟ್ಟಬೇಕಿತ್ತಾ?’ ಖಾಲಿಯಾದ ಗಿಂಡಿ ಕೆಳಗಿರಿಸಿ ಗಂಡನಂದ ಮಾತು ಮತ್ತೆ ನೆನಪಾಗಿ ಕೂಸಮ್ಮನ ಮುಖ ಕಳೆಗುಂದಿತು. ತಾನು ಕಾಡಮನೆಯತ್ತ ಹೋದದ್ದು ಯಾರೂ ನೋಡಲಿಲ್ಲ ಎಂಬ ನೆಮ್ಮದಿಯಿಂದ ಅವರ ನಡುವಿನಿಂದ ಎದ್ದು ನಿಂತ ಆಕೆ ಆ ವಿಚಾರ ಮುಂದುವರಿಸಲು ಇಷ್ಟಪಡಲಿಲ್ಲ.

ಅಯ್ಯೋ ಶಿವನೇ! ಗಿಂಡಿ ಜೋಯಿಸರೂ ಕಾಡಮನೆಗೆ ಹೋದರೇ? ಊರಿನವರಿಗೆ ಕಾಣಿಸದ ಹುಲಿ ಈ ಅಪ್ಪ ಮಗನಿಗೆ ಮಾತ್ರ ಕಾಣಿಸಿದ್ದಾದರೂ ಹೇಗೆ? ಕರಿಯನ ಮಗಳು ಪೊಣ್ಣಿ ಏನಾದಳು? ಮುಂತಾದ ಪ್ರಶ್ನೆಗಳು ಊರಿನವರ ತಲೆಯಲ್ಲಿ ಕೊರೆದು ಕೊರೆದು ಇದೀಗ ದೊಡ್ಡ ತೂತೇ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.