ADVERTISEMENT

ಶಿಹಾಬುದ್ದೀನ್ ಪೊಯ್ತುಂಕಡವು ಬರೆದ ಕಥೆ: ತಾಜ್‌ಮಹಲ್ಲಿನ ಖೈದಿಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 19:30 IST
Last Updated 6 ಆಗಸ್ಟ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಕ್ಕಳಿಬ್ಬರಿಗೂ ಜ್ವರ. ಅತ್ತೂ ಅತ್ತೂ ಅವರಿಬ್ಬರು ಮಲಗಿದ ಆ ರಾತ್ರಿಯ ಕೊನೆಯ ಜಾವದಲ್ಲಿ ಕರೆಂಟೂ ಹೋಯಿತು. ಸೆಖೆಯಿಂದ ಉಸಿರುಗಟ್ಟಿದ್ದ ಕೋಣೆಯ ಹೊರಗಡೆ ಜಿಟಿಜಿಟಿ ಮಳೆ ಸುರಿಯಿತು. ಷಾಜಹಾನ್ ಕಿಟಕಿ ಬಾಗಿಲು ತೆರೆದಾಗ ಬೆಳದಿಂಗಳ ಜೊತೆ ತಂಗಾಳಿ ಒಳನುಗ್ಗಿತು. ದೂರದಲ್ಲಿ ಆ ಹೊಳೆ ಮುಗಿಯುವಲ್ಲಿ ಯಾರೋ ಹಾಡುತ್ತಿದ್ದಂತೆ ಅನಿಸಿತು. ಸೊಳ್ಳೆಗಳಾಗಿರಬಹುದು.

ಆತ ಏನೋ ನೆನಪಾದವನಂತೆ ಮುಂತಾಜಳನ್ನು ನೋಡಿದ. ಅವಳ ಅರ್ಧ ಮೊಲೆ ಹೊರಗೆ ಜಾರಿತ್ತು. ಯಾವುದರ ಪರಿವೆಯೂ ಇಲ್ಲದೆ ಅವಳು ಸುಸ್ತಾಗಿ ಬಿದ್ದಿದ್ದಳು. ಇನ್ನೊಂದು ಮೊಲೆಯಿಂದ ಮಗು ಇನ್ನೂ ತುಟಿ ಬಿಟ್ಟಿಲ್ಲ.

ಬೆಳದಿಂಗಳಿಗೆ ಹಿಂದಿನ ಸೌಂದರ್ಯವಿಲ್ಲ. ಒಂಥರಾ ಬಿಳುಚಿಕೊಂಡ ಹಾಗೆ ಬೆಳ್ಳಗಿನ ಬೆಳಕು.

ADVERTISEMENT

ಮುಂತಾಜಳನ್ನು ನೋಡುತ್ತಿರುವಾಗ ಆತನಿಗೆ ಪಶ್ಚಾತ್ತಾಪ ಇನ್ನಿಲ್ಲದಂತೆ ಕಾಡಿತು.

‘ಪಾಪ ಅವಳು. ಎಲ್ಲವನ್ನು ಬಿಟ್ಟು ನನ್ನೊಂದಿಗೆ ಬಂದವಳು.’

ನಿದ್ದೆಯಲ್ಲೂ ಅವಳಿಗೆ ಅದೇ ಮುಖಭಾವ.

‘ನಮ್ಮ ಮಧುಚಂದ್ರ ತಾಜ್‌ಮಹಲ್ಲಿನಲ್ಲಿ ಎಂದು ಹೇಳಿ ವರ್ಷಗಳು ಎಷ್ಟು ಕಳೆದವು ಗೊತ್ತಾ? ತಾಜ್‌ಮಹಲ್ ಈಗಲೂ ಕ್ಯಾಲೆಂಡರಿನಲ್ಲೇ ಇದೆ.’

‘ನಮ್ಮ ಪರಿಸ್ಥಿತಿ ತಿಳಿಯಾಗದೆ ಹೇಗೆ ಕಣೇ?’

‘ಹೌದು ಮತ್ತೆ. ಪರಿಸ್ಥಿತಿ ತಿಳಿಯಾದವರು ಮಾತ್ರ ಅಲ್ವಾ ಅಲ್ಲಿಗೆ ಹೋಗುವುದು? ಹಳೆಯ ಪ್ರೀತಿ ಕಡಿಮೆಯಾಗಿದೆ ಅಂತ ಹೇಳಿಬಿಡಬಹುದಲ್ಲ ನಿಮಗೆ.’

ಹಾಗೆ ಅದು ನಡೆಯಿತು. ಆಗ್ರ ಸ್ಟೇಷನ್ ಅಂತ ಭಾವಿಸಿ ಅದರ ಮುಂದಿನ ಸ್ಟೇಷನ್ನಿನಲ್ಲಿ ಇಳಿದಾಗ ಜವಾಬ್ದಾರಿ ನೆನಪಿಸುವಂತೆ ಮುಂತಾಜ್ ಒಮ್ಮೆ ನೋಡಿದಳು. ಇದರ ನಡುವೆ ಆತ ಮುಂದಿನ ಸಂಗತಿಗಳನ್ನು ಅಲ್ಲಿಲ್ಲಿ ಕೇಳಿ ಗೊತ್ತುಮಾಡಿಕೊಂಡಿದ್ದ. ಹತ್ತಿರದ ಹೋಟೆಲ್, ಹೋಗುವ ದಾರಿ, ಕಡಿಮೆ ಖರ್ಚಿನ ವಾಹನ ಹೀಗೆ ಹತ್ತು ಹಲವು ಸಂಗತಿಗಳು.

ಆ ಅಪರಿಚಿತ ಸ್ಟೇಷನ್ನಿನಲ್ಲಿ ಇಳಿಯುವಾಗ ಮಕ್ಕಳಿಬ್ಬರೂ ಸುಸ್ತಾಗಿದ್ದರು.

ಹೋಟೆಲ್ ಕೋಣೆ ಸೇರಿದ್ದೇ ತಡ, ಇಬ್ಬರೂ ಬ್ಯಾಗುಗಳನ್ನು ಮೂಲೆಗೆಸೆದು ಹಾಸಿಗೆಗೆ ಬಿದ್ದುಕೊಂಡರು. ಅಬ್ಬಾ, ಎಂತಾ ಯಾತ್ರೆ ಇದು! ಈ ದುರಿತ ಯಾತ್ರೆಯ ಪ್ರತಿಯೊಂದು ಸ್ಟೇಷನ್ನಿನಲ್ಲಿಯೂ ಆತ ಅಂದುಕೊಳ್ಳುತ್ತಿದ್ದ: ‘ಈ ಯಾತ್ರೆ ಬೇಕಾಗಿರಲಿಲ್ಲ.’ ಮುಂತಾಜಳ ಒತ್ತಾಯವೇ ಇದಕ್ಕೆಲ್ಲ ಕಾರಣ. ಇಂತಹ ದೂರ ಯಾತ್ರೆಗಳು ವಿಮಾನದಲ್ಲೇ ಹೋಗಬೇಕು. ಆದರೆ ಮಕ್ಕಳಿಗೂ ಸೇರಿಸಿ ಟಿಕೆಟ್ ದುಡ್ಡು ಲೆಕ್ಕ ಹಾಕಿದರೆ ಆತನ ಒಂದು ವರ್ಷದ ಸಂಬಳ ಪೂರ್ತಿ ಕೂಡಿಟ್ಟರೂ ಸಾಲದು.

ಮುಂತಾಜಳಿಗೆ ಯಾತ್ರೆಯ ಸುಸ್ತನ್ನು ನೀಗಿಸಿಕೊಳ್ಳಲು ಕೂಡ ಮಕ್ಕಳು ಬಿಡಲಿಲ್ಲ. ಅವರು ಹಠ ಹಿಡಿದು ಅಳ ತೊಡಗಿದರು. ಇಬ್ಬರನ್ನೂ ಅವಳು ಎತ್ತಿಕೊಳ್ಳಬೇಕು. ಮುಂತಾಜ್ ಷಾಜಹಾನನ ಮೇಲೆ ರೇಗಿದಳು: ‘ಒಂದನ್ನಾದರೂ ಎತ್ತಿಕೊಂಡು ಸ್ವಲ್ಪ ಆಚೆ ಹೋಗ್ತೀರಾ? ಸಾಕಾಯಿತು ನನಗೆ.’

ಆದರೆ ಮಕ್ಕಳು ಮಾತ್ರ ಆತನ ಹತ್ತಿರವೂ ಹೋಗುವುದಿಲ್ಲ. ಈಗ ಮುಂತಾಜಳ ಕೋಪ ಏರಿತು.

‘ನೀವೊಬ್ಬ ಅತಿಬುದ್ಧಿವಂತ. ಮಕ್ಕಳನ್ನು ಒಮ್ಮೆಯೂ ಹತ್ತಿರ ಮಾಡಲಿಲ್ಲ. ಈಗ ಕರೆದರೆ ಬರುತ್ತಾರಾ? ಅವರ ಪೀಡೆಯೂ ನಿಮಗಿಲ್ಲ.’

ಆತ ಸಹತಾಪದಿಂದ ಮಾತನಾಡಿದ:

‘ಮಕ್ಕಳನ್ನು ಪೀಡೆ ಅಂತ ಹೇಳಬೇಡ ಮುಂತಾಜ್. ದೇವರ ಅನುಗ್ರಹ ಮಕ್ಕಳು.’

ಅವಳಿಗೆ ಮರುಮಾತು ಹೊಳೆಯಲಿಲ್ಲ. ನಿಜದಲ್ಲಿ ಆ ಮಾತುಗಳು ಅವನ ಪ್ರತಿಕಾರವಾಗಿತ್ತು.

ಆ ಅಸಹಾಯಕ ನಿಶಬ್ದತೆಯ ನಡುವೆಯೂ, ಆತ ದೊಡ್ಡದೊಂದು ವಾದ ಪ್ರತಿವಾದಗಳ ನಂತರ ತೀರ್ಪು ತನ್ನ ಕಡೆಗೆ ಬಂದ ವಕೀಲನಂತೆ ಸಂತೋಷಪಟ್ಟ. ಕೆಲವೊಮ್ಮೆ ಯಾವುದೋ ಜೀರ್ಣವಾಗದ ಹಗೆಯೊಂದು ಆತನೊಳಗೆ ಕುದಿಯುತ್ತಿರುತ್ತಿತ್ತು.

‘ತಂಗಿಯನ್ನೂ ಕರೆದುಕೊಂಡು ಬರಬಹುದಿತ್ತಲ್ಲ. ನಿನಗೆ ಸಹಾಯ ಆಗಿರೋದು.’

ಅವಳು ಕೇಳಿಸಿಕೊಳ್ಳದವಳಂತೆ ಸುಮ್ಮನಿದ್ದಳು.

ಒಂದು ಸಣ್ಣ ಮೌನದ ವಿರಾಮ ಮುಗಿಸಿ ಆತ ಗೆದ್ದವನಂತೆ ಮಾತು ಪೂರ್ತಿಮಾಡಿದ.

‘ಆದರೆ ನೀನು ಅದಕ್ಕೆ ಒಪ್ಪಲೇ ಇಲ್ಲ ನೋಡು.’

ಅವಳು ಆತನನ್ನು ನುಂಗುವಂತೆ ನೋಡಿದಳು. ಆತನಿಗೆ ತಿರುಗುಬಾಣ ಹೂಡುತ್ತಿದ್ದಾಗಲೇ ರೂಂಬಾಯ್ ಬಂದು ಬೆಲ್ ಬಾರಿಸಿದ. ಆತ ಹಿಂದಿಯಲ್ಲಿ ಏನೋ ಹೇಳಿದ.

ಷಾಜಹಾನಿಗೆ ಅರ್ಥವಾಗದೆ ಮುಂತಾಜಳ ಕಡೆ ನೋಡಿದ.

‘ನೀನು ಮಾತಾಡು.’ (ನಿನ್ನ ಹಿಂದಿ ಎಂ.ಎಯಿಂದ ಹೀಗಾದರೂ ಒಂದು ಉಪಕಾರವಾಗಲಿ ಎಂದು ಅದರ ಅರ್ಥ.)

ಮುಂತಾಜ್ ರೂಂಬಾಯ್ ಜೊತೆ ಏನೋ ಮಾತಾಡಿದಳು.

ಆದರೆ, ಇಬ್ಬರಿಗೂ ಪರಸ್ಪರ ಅರ್ಥ ಆಗಲಿಲ್ಲ.

ಕೊನೆಗೆ, ಷಾಜಹಾನ್ ಒಂದಷ್ಟು ಇಂಗ್ಲಿಷಿನ ಜೊತೆ ಹಿಂದಿಯ ಕೆಲ ಪದಗಳನ್ನು ಸೇರಿಸಿ ಕೆಲಸ ಮುಗಿಸಿದ.

‘ರಾತ್ರಿ ತಿನ್ನೋದಕ್ಕೆ ಏನು ಬೇಕು ಅಂತ ಕೇಳುತ್ತಿದ್ದಾನೆ.’

‘ನನಗೆ ಬಟೂರ ಮತ್ತು ಚಿಕನ್ ಮಸಾಲ ಸಾಕು.’

‘ತರಕಾರಿ ಪಲ್ಯ ಸಾಲದಾ? ಊರು ಬಿಟ್ಟರೆ ಹೊರಗಿನ ಮಾಂಸಾಹಾರ ತಿನ್ನಬಾರದು.’

ಅವಳಿಗೆ ಅದು ರುಚಿಸದೆ ಮೌನವಾದಳು.

ಆತ, ಚಪಾತಿ ಮತ್ತು ದಾಲ್, ಮಕ್ಕಳಿಗೆ ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಅವನಿಗೆ ತಿಳಿದ ಎಲ್ಲ ಭಾಷೆಗಳ ಜೊತೆಗೆ ಆಂಗಿಕ ಭಾಷೆಯನ್ನೂ ಸೇರಿಸಿ ಹೇಳಿ ಮುಗಿಸಿದ.

ಆತ ಹೇಳಿದ: ‘ಆ ಆಸಾಮಿಗೆ ಒಂದು ಅರ್ಥ ಆಗಲ್ಲ. ಏನೆಲ್ಲ ತರುತ್ತಾನೆ ಅಂತ ಬಂದ ಮೇಲೆಯೇ ನೋಡಬೇಕು. ಅನುಭವಿಸೋಣ. ಬೇರೆ ದಾರಿ ಇಲ್ಲವಲ್ಲ.’ ಮತ್ತೆ ಅವಳ ಕಡೆಗೆ ತಿರುಗಿ ಗೇಲಿಮಾತನ್ನು ನಯವಾಗಿಯೇ ನುಡಿದ: ‘ನೀನು ಹಿಂದಿ ಎಂ.ಎ ಫಸ್ಟ್ ಕ್ಲಾಸಲ್ಲಿ ಪಾಸಾಗಿ ಕೂಡ ಹತ್ತನೇ ತರಗತಿಗೆ ಹನ್ನೆರಡು ಮಾರ್ಕು ತೆಗೆದ ನಾನೇ ಬೇಕಾಗಿ ಬಂತು ನೋಡು.’

ಅದು ಅವಳಿಗೆ ನಾಟಿತು.

‘ಹಿಂದಿಯೆಂದರೆ ಒಂದೇ ಹಿಂದಿಯಲ್ಲ. ಬೇರೆ ಬೇರೆ ಹಿಂದಿಗಳಿವೆ.’ ಅವಳು ಕೋಪವನ್ನು ನುಂಗಿಕೊಂಡು ಹೇಳಿದಳು.

‘ಆದರೆ, ಅಗತ್ಯಕ್ಕೆ ಬಾರದ ಹಿಂದಿಯೂ ಇದೆ ಅಂತ ನನಗೆ ಇವತ್ತೇ ಗೊತ್ತಾಗಿದ್ದು.’

ಅಷ್ಟು ಹೊತ್ತಲ್ಲಿ ಮಗು ಎದ್ದು ಮೊಲೆಹಾಲಿಗೆ ಅಳತೊಡಗಿತ್ತು.

ಉತ್ತರಿಸಲಾಗದ ಅಸಹಾಯಕತೆ ಅವಳನ್ನು ಉಸಿರುಗಟ್ಟಿಸಿತು.

‘ಆದರೆ ನನಗೆ ಎಸ್‌ಎಸ್‌ಎಲ್‌ಸಿಯಲ್ಲಿ ೨೧೦ ಅಲ್ಲ. ಜಿಲ್ಲೆಗೆ ರ‍್ಯಾಂಕ್. ಎತ್ತಿನಗಾಡಿಯಲ್ಲಿ ಕಟ್ಟಿಗೆ ಲೋಡ್ ಮಾಡುತ್ತಾ ಓದಿ ಸಿಕ್ಕಿದ್ದಲ್ಲ ಅದು. ಉಪ್ಪ ಚೆನ್ನಾಗಿಯೇ ಓದಿಸಿದ್ದರು.’

ಷಾಜಹಾನ್ ವಾದದಿಂದ ತಪ್ಪಿಸಿಕೊಳ್ಳಲು ಟವೆಲ್ ಎತ್ತಿಕೊಂಡು ಹೆಡ್ಡನಂತೆ ಸ್ನಾನಕ್ಕೆ ಹೊರಟ. ತಲೆಗೆ ತಣ್ಣೀರು ಬೀಳುತ್ತಲೇ ಪ್ರಶ್ನೆಯೊಂದು ಕಾಡಿತು. ‘ಯಾಕಾಗಿ ಈ ತರ್ಕಗಳು? ಎಷ್ಟು ಬೇಡವೆಂದರೂ ಜಗಳಗಳು ನಮ್ಮ ನಡುವೆ ಬಂದು ಬೀಳುವುದೇಕೆ?’

ಸ್ನಾನ ಮುಗಿಸಿ ಬರುವಾಗ ರೂಂಬಾಯ್ ಊಟದೊಂದಿಗೆ ಹಾಜರಾದ.

ನೋಡಿದರೆ, ಬಟೂರ ಮತ್ತು ಚಿಕನ್ ಮಸಾಲ!

ಬಂದ ಕೋಪಕ್ಕೆ...ಆದರೆ ಈ ಹುಡುಗನ ಹತ್ತಿರ ಏನು ಹೇಳುವುದೆಂದರಿಯದೆ ಮುಂತಾಜಳ ಕಡೆಗೆ ನೋಡಿದರೆ...

ನೋಡಿದರೆ, ಅವಳು ಬಿದ್ದು ಬಿದ್ದು ನಗುತ್ತಿದ್ದಾಳೆ.

ಷಾಜಹಾನ್ ಎಷ್ಟೇ ಕಷ್ಟಪಟ್ಟರು ಆತನಿಂದಲೂ ನಗು ನಿಲ್ಲಿಸಲಾಗಲಿಲ್ಲ.

ರಾತ್ರಿ ಮಕ್ಕಳು ಮಲಗುವವರೆಗೂ ಆ ನಗುವಿನ ಅಲೆಗಳು ನೆಲೆ ನಿಂತಿತು.

ಪ್ರೀತಿಯಿಂದ ಅವಳನ್ನು ತಬ್ಬಿಕೊಳ್ಳುತ್ತಾ ಷಾಜಹಾನ್ ಕೇಳಿದ:

‘ನಾವು ಯಾಕೆ ಯಾವಾಗಲೂ ಜಗಳಾಡೋದು?’

ಅವನನ್ನು ತಬ್ಬಿಕೊಳ್ಳುತ್ತಾ ಮುಂತಾಜ್ ಹೇಳಿದಳು:

‘ನಾನು ಕೂಡ ಅದನ್ನೇ ಯೋಚಿಸ್ತಾ ಇದ್ದೇನೆ.’

‘ನಮಗೆ ಏನಾಗ್ತಿದೆ?’

‘ನನ್ನ ಸ್ವಭಾವದಿಂದಾಗಿ ನೀವು ತುಂಬಾ ಕಷ್ಟಪಡುತ್ತಿದ್ದೀರಿ ಅಲ್ವಾ?’ ಅದು ಹೇಳಿ ಮುಗಿಸುವ ಮೊದಲೇ ಅವಳು ಅಳತೊಡಗಿದಳು.

ಷಾಜಹಾನ್ ಸಮಾಧಾನಿಸಿದ.

‘ಹಾಗೆಲ್ಲ ಹೇಳಬೇಡ. ನಿಜ ಹೇಳಬೇಕೆಂದರೆ ನನ್ನ ಸ್ವಭಾವ ಸರಿಯಿಲ್ಲ. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ನನ್ನ ಈ ಕೆಟ್ಟ ಬುದ್ಧಿ... ಅದೆಲ್ಲ ಬಿಡು ಇವಾಗ.’

ಅವಳು ಏನೋ ನೆನಪಾದಂತೆ ನಿಟ್ಟುಸಿರಿಟ್ಟಳು.

‘ಹೋ, ವರ್ಷಗಳು ಎಷ್ಟು ಬೇಗ... ನಿಜ ಹೇಳ್ತೀನಿ ಕೇಳಿ. ಮದುವೆಗೆ ಮುಂಚೆ ಇದ್ದಷ್ಟು ಕಾಳಜಿ ಈಗ ನಿಮಗೆ ಇಲ್ಲವೇ ಇಲ್ಲ.’

ಅಷ್ಟರಲ್ಲಿ, ದೊಡ್ಡ ಮಗು ಎದ್ದು ಅಳತೊಡಗಿತು. ಅವಳು ಓಡಿ ಬಂದು ಬೆನ್ನುತಟ್ಟಿ ಮಲಗಿಸಿದಳು. ಏನೋ ಸದ್ದು ಕೇಳಿ ನೋಡುವಾಗ ಮಗುವಿಗೆ ಏದುಸಿರು. ಮುಟ್ಟಿನೋಡಿದರೆ ಜ್ವರ.

‘ಅಲ್ಲಾಹ್, ಜ್ವರ ಸುಡುತ್ತಾ ಇದೆ. ನಮಗೆ ತಾಜ್‌ಮಹಲ್ಲೂ ಬೇಡ, ಎಂತದೂ ಬೇಡ. ಒಮ್ಮೆ ಊರಿಗೆ ಹೋದರೆ ಸಾಕು.’

ಕ್ಷಣಕ್ಕೊಮ್ಮೆ ಬದಲಾಗುವ ಅವಳ ನಡೆನುಡಿಯಿಂದ ಷಾಜಹಾನನಿಗೆ ಇನ್ನಿಲ್ಲದ ಕೋಪ ಬಂತು. ‘ಮಕ್ಕಳು ಅಂದರೆ ಹೀಗೆ ಜ್ವರ ಬರೋದು ಸಾಮಾನ್ಯ. ನಾವೀಗ ತುಂಬ ಯಾತ್ರೆ ಮಾಡಿ ಇಲ್ಲಿ ತಲುಪಿದ್ದೇವೆ. ಮಕ್ಕಳನ್ನು ಅಮ್ಮಂದಿರ ಹತ್ತಿರ ಬಿಟ್ಟು ನಾವಿಬ್ಬರೇ ಬರೋಣ ಅಂತ ಹೇಳಿದ್ದೆ. ನನ್ನ ಮಾತು ನೀನೆಲ್ಲಿ ಕೇಳುತ್ತೀಯಾ.’

‘ಈಗ ಏನು ಮಾಡೋದು? ಮಗು ಒಂದು ತೊಟ್ಟು ನೀರು ಕೂಡ ಕುಡಿದಿಲ್ಲ.’

‘ಪರವಾಗಿಲ್ಲ. ನೀನು ಆ ಕಾಲ್‌ಪೋಲ್ ಕೊಡು. ಜ್ವರ ಹೋಗುತ್ತದೆ.’

‘ಅಯ್ಯೋ, ಅದು ನಾನು ತಂದಿಲ್ಲ.’

ಷಾಜಹಾನನ ಮಾತು ಈಗ ಜೋರಾಯಿತು. ‘ನಿನ್ನತ್ರ ನೂರು ಸಲ ಹೇಳಿದ್ದೆ. ಈಗ ನೋಡಿದರೆ ಔಷಧಿಯ ಕಿಟ್ ಹಾಗೇ ಬಿಟ್ಟು ಬಂದಿದ್ದೀ. ಅಗತ್ಯ ಇಲ್ಲದ ಕೆಲಸದಲ್ಲಿ ನಿನ್ನದು ಎತ್ತಿದ ಕೈ. ಏನಾದ್ರು ಅಗತ್ಯದ ಕೆಲಸ ಹೇಳಿದರೆ ಹೀಗೆ. ಚೂರು ನೆಮ್ಮದಿ ಕೊಡಲ್ಲ ಅಂದರೆ...’

ಅವಳು ಬಾಯಿ ತೆರೆಯದೆ ಮಗುವನ್ನು ಅಪ್ಪಿಕೊಂಡಳು.

‘ಮಕ್ಕಳನ್ನು ಕಂಡರೆ ನಿಮಗೆ ಆಗುವುದೇ ಇಲ್ಲವಲ್ಲ. ಯಾವಾಗ ನೊಡಿದರೂ ಶಪಿಸುತ್ತಾ.’

ಆತ ಎದ್ದು ಹೊರ ಹೋಗುತ್ತಾ ಬಾಗಿಲನ್ನು ಬಲವಾಗಿ ಹಾಕಿಕೊಂಡ. ತುಂಬ ಹೊತ್ತು ಬಾಲ್ಕನಿಯಲ್ಲಿ ದೂರಕ್ಕೆ ಕಣ್ಣು ಹಾಯಿಸುತ್ತಾ ನಿಂತ. ಆ ನಗರ ಹಲವು ತರದ ಬೆಳಕುಗಳಿಂದ, ಎತ್ತರೆತ್ತರದ ಮತ್ತು ಸಣ್ಣಸಣ್ಣ ಕಟ್ಟಡಗಳಿಂದ, ಹಿಂದಿ ಬೆರೆತ ಗದ್ದಲದಿಂದ, ಮುಖೇಶರ ಗೃಹವಿರಹ ಹಾಡುಗಳಲ್ಲಿ ಮುಳುಗೆದ್ದು ಬೋರ್ಗರೆವ ನದಿಯಂತೆ ಹರಿಯಿತ್ತಿದೆ ಎಂದು ಆತನಿಗೆ ಅನಿಸಿತು.

‘ಈ ಯಾತ್ರೆ ಯಾಕಾಗಿ ಹೊರಟೆವು? ಯಾರಿಗೆ ಬೇಕಾಗಿ?’

ಯಾರದು ಬಿಕ್ಕಿ ಅಳುತ್ತಿರುವುದು?

ಯಾರೋ ಸರಳುಗಳಿಗೆ ತಲೆ ಬಡಿಯುವ ಸದ್ದು.

ಈಗ ಷಾಜಹಾನನೊಳಗೆ ಬೇಸರ ತುಂಬಿದ ಕರುಣೆ ಕಾಣಿಸಿಕೊಂಡಿತು. ಆತ ಬಾಲ್ಕನಿ ಬಾಗಿಲು ತೆರೆದು ಒಳಗೆ ಬಂದ.

ಪುಣ್ಯಕ್ಕೆ ಬೆಳಗಾಗುವಾಗ ಮಗುವಿನ ಜ್ವರ ಇಳಿದಿತ್ತು. ಅವರಿಬ್ಬರೂ ಚುರುಕಾಗಿದ್ದಾರೆ ಕೂಡ.

ತಾಜ್‌ಮಹಲ್ಲಿನ ದಾರಿ, ಅಲ್ಲಿಯ ನಿಯಮಗಳು, ಕಡಿಮೆ ಖರ್ಚಿನ ಓಡಾಟ... ಎಲ್ಲವನ್ನೂ ಆತ ಮೊದಲೇ ತಿಳಿದುಕೊಂಡಿದ್ದ.

ಟ್ಯಾಕ್ಸಿ ಹಿಡಿದು ಹೋಗೋಣ ಎಂದು ಮುಂತಾಜ್ ಹಠ ಹಿಡಿದಾಗ ಷಾಜಹಾನ್ ಹೇಳಿದ: ‘ಊರಿಗೆ ಹೋಗೋದಕ್ಕೆ ದುಡ್ಡು ಬಾಕಿ ಇರಲ್ಲ. ಈಗಲೇ ಸ್ಟೇಷನ್ ತಪ್ಪಿ ಇಳಿದು ನಮ್ಮ ಬಜೆಟ್ ಕೈ ಮೀರಿ ಹೋಗುವ ಹಾಗಿದೆ.’

ಹಲವು ಬಸ್ಸು ಹತ್ತಿಳಿಯುವ ಆ ಸಾಹಸ ಯಾತ್ರೆ ಮುಂತಾಜಳ ಸಹನೆ ಕೆಡಿಸಿತು. ಮಕ್ಕಳು ಆ ಗದ್ದಲದಲ್ಲಿ ರಚ್ಚೆ ಹಿಡಿದು ಅಳತೊಡಗಿದರು. ಷಾಜಹಾನನ ಮೇಲಿದ್ದ ಕೋಪವನ್ನೆಲ್ಲ ಅವಳ ಮಕ್ಕಳ ಮೇಲೆ ಸುರಿದಳು. ಟ್ಯಾಕ್ಸಿ ಹಿಡಿದಿದ್ದರೆ ಈ ಕಷ್ಟಗಳು ಇರುತ್ತಿರಲಿಲ್ಲವೆಂದು ಅವಳ ಮನಸ್ಸು ಹೇಳುತ್ತಲೇ ಇತ್ತು.

‘ಷಾಜಹಾನನ ಕೈಯಲ್ಲಿ ಟ್ಯಾಕ್ಸಿಗೆ ಆಗುವಷ್ಟು ದುಡ್ಡಿದೆ. ಆದರೂ ಬೇಕಂತಲೇ...’ ಅವಳು ಹಾಗೆಯೇ ನಂಬಿದಳು.

ಕೊನೆಗೆ ಕುದುರೆಗಾಡಿಯೊಂದನ್ನು ಹತ್ತಿ ತಾಜ್‌ಮಹಲ್ಲಿನ ಮುಂದೆ ಇಳಿದರು.

ಆದರೆ, ಮೊದಮೊದಲು ಆತನಿಗೆ ತಾಜ್‌ಮಹಲ್ ಅಂತಹ ವಿಶೇಷವೆಂದು ಅನ್ನಿಸಲಿಲ್ಲ. ಕ್ಯಾಲೆಂಡರಿನಲ್ಲೇ ತಾಜ್‌ಮಹಲ್ ಚಂದ ಕಾಣೋದು. (ಅಲ್ವಾ ಮುಂತಾಜ್ ಎಂದು ಕೇಳಬೇಕಿದ್ದ. ಕೇಳಲಿಲ್ಲ.)

ಅವರು ನಾಲ್ಕು ಜನರೂ ಒಟ್ಟಿಗೆ ಫೋಟೋ ತೆಗೆಸಿಕೊಂಡರು. ಒಂದು ನಿಮಿಷದಲ್ಲಿ ಸಿಗುವ ಫೋಟೋ.

ಫೋಟೋಗ್ರಾಫರನ ಬಳಿ ಹಲವು ಸಲ ಚೌಕಾಸಿ ಮಾಡಿದ.

ಮಕ್ಕಳು ಮಾತ್ರ ಬಹಳ ಸಂತೋಷದಿಂದ ಕುಣಿಯುತ್ತಿದ್ದರು. ನಿದ್ದೆಗಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಆ ಮಹಾಗೋಪುರವನ್ನು ಬೆರಗಿನಿಂದ ನೋಡಿದರು.

ಗಾರ್ಡನ್ ಮೂಲಕ ತಾಜ್‌ಮಹಲ್ಲಿನ ಬಳಿಗೆ ನಡೆಯುವಾಗ ಮುಂತಾಜ್ ಹೇಳಿದಳು: ‘ಮಾರ್ಬಲ್ ಚೂರು ಮಂಕಾದ ಹಾಗಿದೆಯಲ್ವಾ?’

‘ಅದು ಹಾಗಲ್ಲ. ಇಲ್ಲಿಯ ಮಾರ್ಬಲ್ ಸೂರ್ಯನ ಬೆಳಕು ಬದಲಾದಂತೆ ಒಂದೊಂದು ಬಣ್ಣಕ್ಕೆ ತಿರುಗುತ್ತದೆಯಂತೆ. ಹುಣ್ಣಿಮೆಗೆ ಬೇರೆಯದೇ ಬಣ್ಣ.’

‘ಇದೊಂದು ಭಯಂಕರ ಅದ್ಭುತವೇ ಸರಿ.’

ಇದ್ದಕ್ಕಿದ್ದಂತೆ ಅವಳು ಕಿಬ್ಬೊಟ್ಟೆಗೆ ಕೈಹಿಡಿದು ನಿಂತಳು.

‘ಎನಾಯ್ತು?’

‘ಏಯ್, ಏನಿಲ್ಲ.’

ಷಾಜಹಾನ್ ವಿವರಿಸಿದ: ‘ತಾಜ್‌ಮಹಲ್ ಮಾತ್ರ ಅಲ್ಲ, ಸುತ್ತ ಇರುವ ಈ ಗಾರ್ಡನ್ ಮತ್ತು ಮ್ಯೂಸಿಯಂ ಕೂಡ ಅದ್ಭುತವೇ.’

ಅವಳು ಪುನಃ ಹೊಟ್ಟೆ ಹಿಡಿದುಕೊಂಡಳು.

‘ನನಗೆ ಟಾಯ್ಲೆಟ್ಟಿಗೆ ಹೋಗ್ಬೇಕು. ಬೆಳಿಗ್ಗೆ ಸರಿ ಹೋಗಲಿಲ್ಲ.’

ಉಕ್ಕಿ ಬಂದ ಕೋಪವನ್ನು ನುಂಗಿಕೊಳ್ಳುತ್ತಾ ಆತನೆಂದ: ‘ಹೊರಗಡೆ ಚಿಕನ್ ತಿನ್ನಬೇಡ ಅಂತ ನೂರು ಸಲ ಹೇಳಿದ್ದೆ. ನನ್ನ ಮಾತು ಕೇಳುತ್ತೀಯಾ? ಈಗ ಈ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು?’

ಎಲ್ಲಿತ್ತೋ ಆ ಕೋಪ. ಅವಳು ಸಿಡಿಲಿನಂತೆ ಹೇಳಿದಳು: ‘ನಾನು ಸತ್ತು ಹೋದರೆ ಏನು ಮಾಡುತ್ತೀರಿ? ಈ ಮಕ್ಕಳನ್ನೂ ನನ್ನೊಂದಿಗೆ ದಫನ್ ಮಾಡುತ್ತೀರಾ?’

ಆತ ಮಾತನಾಡಲಿಲ್ಲ. ಅವರ ನಡುವೆ ಮೌನದ ಕೆಲವು ನಿಮಿಷಗಳು ಕಳೆದು ಹೋದವು.

ನೋಡುತ್ತಿದ್ದಂತೆ, ತಾಜ್‌ಮಹಲ್ಲಿನ ಮಾರ್ಬಲ್ ಹಳತಾಗಿ ಹಳದಿ ಬಣ್ಣಕ್ಕೆ ತಿರುಗಿದಂತೆ ಆತನಿಗೆ ಅನ್ನಿಸಿತು.

ಕೊನೆಗೂ ಅವರು ಅದನ್ನು ಕಂಡುಹಿಡಿದರು.

ಆ ಮೂಲೆಯಲ್ಲಿ ಮ್ಯೂಸಿಯಮ್ಮಿನ ಹಿಂದೆ ಟಾಯ್ಲೆಟ್. ತಾಜ್‌ಮಹಲ್ಲನ್ನು ಬಿಟ್ಟು, ಪ್ರೇಮಗೋರಿಗಳನ್ನು ಬಿಟ್ಟು, ಯಮುನಾ ನದಿಯನ್ನೂ ಬಿಟ್ಟು, ಉದ್ಯಾನಗಳನ್ನು ಬಿಟ್ಟು ಐತಿಹಾಸಿಕ ವಸ್ತುಗಳನ್ನು ಜೋಡಿಸಿಟ್ಟಿರುವ ಆ ಮ್ಯೂಸಿಯಮ್ಮಿನ ಹಿಂದಿನ ಟಾಯ್ಲೆಟ್ಟಿಗೆ ಮುಂತಾಜ್ ಓಡಿದಳು.

ಆದರೆ, ಬಾಗಿಲು ಹಾಕಿತ್ತು.

ಆಗಲೇ ಅವಳು ಗಮನಿಸಿದ್ದು. ಅಲ್ಲಿ ಇನ್ನೂ ಸುಮಾರು ಜನ ಕ್ಯೂ ನಿಂತಿದ್ದಾರೆ.

ಅವಳು ತಡೆಯಲಾಗದೆ ನಿಂತಿದ್ದಳು. ಮಕ್ಕಳು ಮತ್ತೆ ಅಳುಗೋಷ್ಟಿ ಶುರುಹಚ್ಚಿಕೊಂಡರು. ಮಕ್ಕಳಿಗೆ ತಾಜ್‌ಮಹಲ್ ಮತ್ತು ಉದ್ಯಾನ ಕಳೆದುಹೋಗಿದ್ದವು. ಹುಡುಕುತ್ತಿದ್ದಾರೆ.

ಏನು ಮಾಡುವುದೆಂದು ಅರಿಯದೆ ಕ್ಯೂನಲ್ಲಿ ನಿಂತಿರುವ ಮುಂತಾಜಳ ಮೇಲೆ ಆತನಿಗೆ ಕರುಣೆ ಉಕ್ಕಿ ಬಂತು. ರಚ್ಚೆ ಹಿಡಿದು ಅಳುತ್ತಿರುವ ಮಕ್ಕಳ ನಡುವೆ ಆತನ ಕರುಣೆ ದೇಶಕಾಲ ನಿಯಮಗಳನ್ನು ಮೀರಿ ಯಮುನೆಯಲ್ಲಿ ಮುಖ ನೋಡಿತು.

ಮರಳುವಾಗ ಅವಳು ಬಿಕ್ಕಿಬಿಕ್ಕಿ ಅತ್ತಳು.

‘ಈ ಯಾತ್ರೆ ಯಾಕೆ ಬೇಕಿತ್ತು? ನಾವು ನೋಡಿದ್ದಾದರೂ ಏನು? ಏನೂ ನೋಡಿಯೇ ಇಲ್ಲ ನಾವು.’

ಆತ ಅವಳನ್ನು ಮೃದುವಾಗಿ ತಬ್ಬಿಕೊಂಡ: ‘ಪರವಾಗಿಲ್ಲ, ಇನ್ನೊಮ್ಮೆ ಬಂದು ಎಲ್ಲವನ್ನು ನೋಡೋಣ.’

ತಾಜ್‌ಮಹಲಿನ ಮುಖ್ಯದ್ವಾರದ ಬಳಿ ಅವರಿಗೆ ಬಸ್ ಸಿಕ್ಕಿತು. ಜನರು ತುಂಬಿಕೊಂಡಿದ್ದರು. ಅದರಲ್ಲಿ ಗಝಲ್ ಒಂದು ದಾರಿ ತಪ್ಪಿ ಬಂದು ಹಾಡುತ್ತಲೇ ಇತ್ತು. ಭಾಷೆ ಅರ್ಥವಾಗದಿದ್ದರೂ ಆತನ ಒಳಗಿನಿಂದ ಯಾರೋ ಅದನ್ನು ಹೀಗೆ ಅನುವಾದಿಸುತ್ತಿದ್ದರು:

‘ಲೋಕವೇ ಒಂದು ದೊಡ್ಡ ವಿಸ್ಮಯ. ಹೂವೂ ಹೂದೋಟವೂ ಮಣ್ಣಿನ ಕಣವೂ. ಈ ಸೌಂದರ್ಯವನ್ನು ಅನುಭವಿಸಲು ನಮ್ಮ ನಡುವೆ ಯಾವುದೋ ಒಂದು ತಡೆಯಿದೆ. ನಮ್ಮ ಕಣ್ಣಗುಡ್ಡೆಯ ಮೇಲೆ ಬಂಡೆಗಲ್ಲನ್ನು ಯಾರೋ ತಂದಿಟ್ಟಿದ್ದಾರೆ. ಕವಿಗಳೇ, ನೀವು ಮಲಿನಗೊಳ್ಳದ ಯಮುನೆಯ ಬಗ್ಗೆ ಹಾಡಿರಿ. ಸಾರಂಗಿಯ ಮೇಲಿನ ಬೆರಳುಗಳೇ, ನೀವು ನಮ್ಮನ್ನು ಸಂತೈಸಿರಿ.’

ಆ ಕತ್ತಲಲ್ಲಿ ಆತ ಮಾತ್ರ ನಿದ್ದೆ ಮಾಡಲಿಲ್ಲ. ರೈಲುಗಾಡಿ ಅಮ್ಮನಂತೆ ಜೋಗುಳವಾಡುತ್ತಿದ್ದರೂ ನಿದ್ದೆ ಸುಳಿಯಲಿಲ್ಲ.

ಆತ ತನ್ನಷ್ಟಕ್ಕೇ ಹೇಳಿಕೊಂಡ: ‘ಬೇಕಾಗಿರಲಿಲ್ಲ ಇದು. ತಾಜ್‌ಮಹಲ್ ನೋಡಬಾರದಿತ್ತು. ಅದಾದರೂ ಒಂದು ಬಾಕಿ ಉಳಿದಿರುತ್ತಿತ್ತು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.