ADVERTISEMENT

ಉಪವಾಸದ ಧಾರ್ಮಿಕ ಮಹತ್ವ: ನಿರಶನ ಮಾಡುವುದು ಹೇಗೆ?

ಎಲ್.ವಿವೇಕಾನಂದ ಆಚಾರ್ಯ
Published 20 ಆಗಸ್ಟ್ 2025, 9:24 IST
Last Updated 20 ಆಗಸ್ಟ್ 2025, 9:24 IST
   

ಪವಿತ್ರವಾದ ಏಕಾದಶಿ ವ್ರತವನ್ನು ಆಚರಿಸುವುದರಿಂದ ಇಹಲೋಕದಲ್ಲಿ ಸಕಲ ಸುಖವನ್ನು ಅನುಭವಿಸಿ ಜೀವಾತ್ಮರು ಕೊನೆಗೆ ವಿಷ್ಣು ಲೋಕಕ್ಕೆ ಹೋಗುತ್ತಾರೆ ಎಂಬ ಧಾರ್ಮಿಕ ನಂಬಿಕೆಯಿದೆ.

ಏಕಾದಶಿ ವ್ರತವನ್ನು ಆಚರಿಸುವ ಬಗೆ ಹೀಗಿದೆ 

ಪ್ರತಿ ಏಕಾದಶಿಯನ್ನು ಮಾಡುವುದರಿಂದ ವಾಜಪೇಯ ಯಾಗ-ಯಜ್ಞ ಮಾಡಿದ ಫಲವನ್ನು ಪಡೆಯಬಹುದು. ನಿರಶನ ಉಪವಾಸ ವ್ರತದ ಸಮಯದಲ್ಲಿ, ಶಂಖ, ಚಕ್ರ, ಗದಾ, ಪದ್ಮಪಾಣಿಯಾದ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ.

ADVERTISEMENT

ಏಕಾದಶಿ ವ್ರತಾಚರಣೆ ಮಾಡುವವರು ದಶಮಿ ದಿನ ‘ಏಕಭುಕ್ತ’ ಅಂದರೆ ಆ ದಿನ ಸ್ನಾನ ಮಾಡಿ ಏಕಾದಶಿ ಮಾಡುವುದಾಗಿ ಸಂಕಲ್ಪ ಮಾಡಿ ಒಂದು ಹೊತ್ತು ಮಾತ್ರ ಭೋಜನವನ್ನು ಸೇವಿಸಬೇಕು. ಮರುದಿನ ಸ್ನಾನ, ಸಂಧ್ಯಾವಂದನೆ ಹಾಗೂ ದೇವರ ಪೂಜಾ ಕಾರ್ಯ ಮಾಡಿ ಅಂದು ಹರಿನಾಮ ಸ್ಮರಣೆ ಮಾಡುತ್ತಾ ಇಡೀ ದಿನ ಉಪವಾಸ ಇರಬೇಕು. ರಾತ್ರಿ ಜಾಗರಣೆ ಮಾಡಬೇಕು. ಏಕಾದಶಿ ವ್ರತಾಚರಣೆ ಮಾಡಲು ಆಗದೇ ಇದ್ದವರು ಶ್ರೀ ಹರಿಸ್ಮರಣೆ, ವಿಷ್ಣು ಸಹಸ್ರನಾಮ ಪಠಣೆ ಮಾಡಿ ‌ಮಧ್ಯಾಹ್ನ ಮತ್ತು ರಾತ್ರಿ ಫಲಾಹಾರ ಅಥವಾ ಹಾಲನ್ನು ಸೇವಿಸಬಹುದು.

ಮುಂದೆ ಬರಲಿರುವ ಏಕಾದಶಿ ವ್ರತವನ್ನು ಶ್ರದ್ಧೆಯಿಂದ ಆಚರಿಸಿ ಮಾಡಿರಿ. ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ದೊರೆಯಲಿದೆ.

ನಾವುಗಳು ಮಾಡಿರುವ ಕರ್ಮಗಳ ಪರಿಹಾರಾರ್ಥವಾಗಿ ಪ್ರತಿ ಮಾಸದಲ್ಲಿ ಬರುವ ಏಕಾದಶಿ ತಿಥಿಯಂದು ಪತಿ ಪತ್ನಿ ಇಬ್ಬರೂ ಸೇರಿ ಉಪವಾಸವನ್ನು ಆಚರಿಸಿ ಶ್ರೀಮನ್‌ ನಾರಾಯಣನ ಧ್ಯಾನ ಮಾಡುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಒಂದು ವೇಳೆ ಗಂಡ ಏಕಾದಶಿ ಉಪವಾಸ ವ್ರತವನ್ನು ಮಾಡಲು ಆಗದಿದ್ದರೆ, ಹೆಂಡತಿಯಾದವಳು ಮಾಡಿದರೆ ಏಕಾದಶಿಯ ಫಲ ಗಂಡಹೆಂಡತಿಯರಿಬ್ಬರಿಗೂ ಪ್ರಾಪ್ತಿಯಾಗುತ್ತದೆ. ನಮಗೆ ಪೂರ್ವಾರ್ಜಿತ ಕರ್ಮಗಳಿಂದ ಬಂದಿದ್ದ ಶಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ಆಕಸ್ಮಿಕವಾಗಿ ನಮಗೆ ಗೊತ್ತಿಲ್ಲದೆ ಮಾಡಿದ ತಪ್ಪುಗಳಿಗೆ ಇದು ಅನ್ವಯವಾಗುತ್ತದೆ. ತಿಳಿದು ಮಾಡಿದ ತಪ್ಪಿಗೆ ಕಠಿಣ ಶಿಕ್ಷೆ ಆಗುವುದನ್ನು (ಕರ್ಮಫಲ) ತಪ್ಪಿಸಲು ಸಾಧ್ಯವಿಲ್ಲ. 

ಏಕಾದಶಿಯ ನಿರಶನ ಉಪವಾಸ ಮಾಡುವುದರಿಂದ ಬ್ರಹ್ಮ ಹತ್ಯಾ ದೋಷ ದೂರವಾಗುತ್ತದೆ. ಪಾಪಗಳು ನಾಶವಾಗುತ್ತವೆ. ಸಂಯಮ ತಾಳ್ಮೆ ವೃದ್ಧಿಸುತ್ತದೆ. ಏಕಾದಶಿ ಅಧಿಪತಿ ಭಗವಂತನಾದ ’ಶ್ರೀಧರ’ ನ ಹೆಸರಿನಲ್ಲಿ ಆರಾಧಿಸಬೇಕು. ಮುಖ್ಯವಾಗಿ ತುಳಸಿಯಿಂದ ಪೂಜಿಸಬೇಕಾಗುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.