ADVERTISEMENT

ಜಾತಕದಲ್ಲಿ ಜನ್ಮದ ಲಗ್ನ ಭಾವ: ಇದುವೇ ವ್ಯಕ್ತಿಯೊಬ್ಬರ ಹಣೆ ಬರಹದ ಕೈಗನ್ನಡಿ

ಮಹಾಬಲಮೂರ್ತಿ ಕೊಡ್ಲೆಕೆರೆ
Published 13 ನವೆಂಬರ್ 2025, 2:06 IST
Last Updated 13 ನವೆಂಬರ್ 2025, 2:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಎಐ

ಭಾರತೀಯ ಜ್ಯೋತಿಷ ವಿಜ್ಞಾನ ಬೆಳಕಿನ ಮೂಲಗಳು ಎಂಬ ಕಾರಣ ಮಾಡಿಕೊಂಡು ಸೂರ್ಯ ಹಾಗೂ ಚಂದ್ರರಿಗೆ ಹೆಚ್ಚಿನ ಮಹತ್ವದೊಂದಿಗೆ ಜಾತಕದ (ಜನ್ಮ ಕುಂಡಲಿ) ತಳಹದಿಗಳನ್ನಾಗಿ ನಿರೂಪಿಸುತ್ತದೆ. ಹೀಗಾಗಿ ಆಯಾ ದಿನದ ಸೂರ್ಯ ಹಾಗೂ ಚಂದ್ರನ ಚಲನವಲನಗಳನ್ನು ಒಂದು ಅಳತೆಗೋಲುಗಳನ್ನಾಗಿಸಿ ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯನ್ನು ವಿಶ್ಲೇಷಿಸಬೇಕಾಗುತ್ತದೆ. ಎಷ್ಟರ ಮಟ್ಟಿಗಿನ ಒಳಿತು ಕೆಡುಕುಗಳನ್ನು ಹೊಂದಿವೆ ಎಂಬುದರ ಅಳತೆಯನ್ನು ನಿರ್ಧರಿಸುವ ವಿಚಾರದಲ್ಲೂ ಲೆಕ್ಕ ಹಾಕಿ ನೋಡಬೇಕಾಗುತ್ತದೆ. ಹೀಗೆ ಲೆಕ್ಕ ಹಾಕಿ ನೋಡಿದಾಗ ಸೂರ್ಯನ ಮೂಲಕವೇ ಒಬ್ಬ ವ್ಯಕ್ತಿಯ ಇಡೀ ಜೀವನದ ಎಲ್ಲಾ ಆಗುಹೋಗುಗಳ ಕುರಿತು ನಡೆಯುವ ಮೂಲ ಬಿಂದು 'ಲಗ್ನ ಭಾವ' ಎಂಬ ಹೆಸರಿನಲ್ಲಿ ಸಿಗುತ್ತದೆ.

ADVERTISEMENT

ಈ 'ಲಗ್ನ' ಎಂದರೆ ಇದು ನಮ್ಮ ಸಾಮಾನ್ಯ ಅರ್ಥವಾದ ಮದುವೆ ಎಂದಲ್ಲ. ಬದಲಾಗಿ ವ್ಯಕ್ತಿಯೊಬ್ಬನ ಹುಟ್ಟು ಸಂಭವಿಸುತ್ತಿದ್ದಂತೆ ಅಮ್ಮನ ಗರ್ಭದಿಂದ ಮಗು 'ಭೂ ಪತನ' ಗೈದ ಹೊತ್ತು ಎಂಬ ಹೆಸರಿನಲ್ಲಿ ನಿರ್ದಿಷ್ಟವಾಗಿ ಹರಳುಗಟ್ಟಿಕೊಂಡ ಕಾಲ ಸಾಂದ್ರತೆಯಾಗಿರುತ್ತದೆ. ಹೀಗಾಗಿಯೇ ಒಬ್ಬ ವ್ಯಕ್ತಿಯ ಜನನದ ಸಂದರ್ಭ ಅಂದರೆ ಸಾಮಾನ್ಯವಾದ ನಿಖರ ವೇಳೆ ಮಗುವಿನ ಜನ್ಮ ಕುಂಡಲಿ ಬರೆಯಲು, ಬರೆಸಲು ಮೂಲಭೂತವಾಗಿ ಅತ್ಯಂತ ಅಗತ್ಯವಿರುತ್ತದೆ.'ಭೂ ಪತನ' ಎಂದರೆ ಅಮ್ಮನ ಹೊಕ್ಕುಳ ಬಳ್ಳಿಯ ಆಸರೆಯಿಂದ ಬೆಳೆದ ಮಗು ತಾಯಿಯ ಗರ್ಭದಿಂದ ಭೂಮಿಯ ಮೇಲೆ ಸ್ಥಳಾಂತರಗೊಂಡು (ಅಂದರೆ, ಜನನವನ್ನು ಸಾಧ್ಯ ಮಾಡಿಕೊಂಡು) ಸ್ವತಃ ಮಗು ತಾನೇ ಪಡೆದ ದೇಹದ ಮೂಲಕ ಭೂಮಿಯಲ್ಲಿ ಉಸಿರಾಟ ನಡೆಸಲು ಸಾಧ್ಯವಾಗುವ ಕ್ರಿಯೆ ಇರುತ್ತದೆ.

ಈ ಭೂ ಪತನವಾಗುತ್ತಿದ್ದಂತೆ (ಹೊರಗೆ ಅಂದರೆ ತಾಯಿಯ ಗರ್ಭದೊಳಗೇ ಇದ್ದರೂ ಯಾವುದೋ ಅನ್ಯ ಯಾನದಿಂದ ಭೂಮಿಯ ಮೇಲಕ್ಕೆ ಹೋಗುವ ಕ್ರಿಯೆ) ಮಗು ತಾಯಿ ಗರ್ಭದಿಂದ ಹೊರಗೆ ಆಚ್ಛಾದಿತ ಪಂಚ ಭೂತ ಸ್ತರಗಳಿಗೆ ಹೊಂದಿಕೊಳ್ಳಲು ಬೇಕಾದ ದಿಗ್ಭ್ರಮೆಯೋ, ಶ್ವಾಸಕೋಶವು ಉಸಿರಾಟದ ಹೊಸ ಬಗೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಿಂದಾದ ಬದಲಾವಣೆಯ ಕಾರಣದಿಂದಲೋ ಅಳುತ್ತದೆ.ಅಂತೂ ತನ್ನದೇ ಆದ ಸ್ವತಂತ್ರ ಉಸಿರಾಟ ಶುರುವಾದರೂ ಜನಿಸಿದ ಮಗು ಮಗು ಅಳುತ್ತದೆ. ಹೊರಬಂದ ಕರುಳಕುಡಿ ಮಗುವಿನ ಕಾರಣದಿಂದಾಗಿ ಹೆರಿಗೆಯ ಸಂದರ್ಭದ ರಕ್ತಸ್ರಾವದ ಎಲ್ಲಾ ಉರಿ ನೋವನ್ನು ಮರೆತು ತಾಯಿ ಮನದಲ್ಲೇ ನಗುತ್ತಾಳೆ.

ಈ ನಗೆಯ ಬಿಂದುವಿಗೇವಿಗೆ ಅಂಟಿ ಜನ್ಮ ಕುಂಡಲಿಯ ಲಗ್ನ ಭಾವ ಅಥವಾ ತನು ಭಾವ ಇರುತ್ತದೆ. ಇದನ್ನೇ ಆಯಾ ವ್ಯಕ್ತಿಯ ಜನ್ಮ ಕುಂಡಲಿಯ ಮೊದಲ ಮನೆ ಎಂದೂ ಕರೆಯುತ್ತಾರೆ. ಈ ಮೊದಲ ಮನೆ ಪ್ರಧಾನವಾಗಿ ಜೀವನದ ಅನೇಕ ವಿಧವಾದ ಏಳು ಬೀಳುಗಳನ್ನು ಆಯಾ ವ್ಯಕ್ತಿಗಳ ಬಗೆಗೆ ಸಂಯೋಜಿಸಿ ಕೊಡುವುದರಿಂದ ಇದು 'ಲಗ್ನ ಭಾವ'. ಲಗ್ನ ಎಂದರೆ ಒಂದನ್ನು ನಿರ್ದಿಷ್ಟ ಕಾರಣಕ್ಕಾಗಿ ಇನ್ನೊಂದರ ಜತೆ ಅಂಟಿಸುವುದು ಎಂದರ್ಥ.

ಲಗ್ನ ಭಾವವೇ ನಮ್ಮ ಹಣೆ ಬರಹದ ಕೈಗನ್ನಡಿ

ಈ ಮೇಲಕ್ಕೆ ವಿವರಿಸಿದ ಲಗ್ನದ ಮನೆ ಅಥವಾ ಆಯಾ ಜಾತಕದ ಮೊದಲ ಮನೆ ಎಂದು ಗುರುತಿಸಲ್ಪಡುವ(ತನು ಭಾವ ಎಂದೂ ಕರೆಯುತ್ತಾರೆ) ವ್ಯಕ್ತಿಯೋರ್ವನ/ಳ ಜನನದ ಬಿಂದು ನೇರವಾಗಿ ಸೂರ್ಯ, ಚಂದ್ರರ ಜತೆಗೆ ಹಲವು ಸಂಬಂಧಗಳನ್ನು ಹೊಂದಿರುತ್ತದೆ. ಈ ಸೂರ್ಯ ಚಂದ್ರರ ಬೆಳಕಿನ ಮಹಾ ಬಲವೇ ಆಸರೆಯಾಗುವುದರೊಂದಿಗೆ (ಜ್ಯೋತಿಷವನ್ನು ಒಂದು ವಿಜ್ಞಾನ ಎಂದು ನಂಬುವುದಾದರೆ) ಹಾಗೂ ಭೂಮಿಯ ಮೇಲೆ ಪ್ರಭಾವ ಬೀರುವ ತಂತಮ್ಮ ಕಕ್ಷೆಗಳಲ್ಲಿ ಅಸ್ತಿತ್ವ ಪಡೆದ ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಗ್ರಹಗಳ ಪ್ರಭಾವಕ್ಕೆ ಒಳಗಾಗುತ್ತದೆ.

ಅಸ್ತಿತ್ವದ ಹೆಗ್ಗುರುತನ್ನು ಆವರಿಸಿದ ದಟ್ಟ ಕತ್ತಲ ಮೂಲಕವೇ ಛಾಯಾ ಗ್ರಹಗಳಾಗಿ ಗುರುತಿಸಿಕೊಂಡ ರಾಹು ಹಾಗೂ ಕೇತುಗಳ ಮೂಲಕವಾಗಿ ಯಾವುದೋ ಮಾಯೆಯೊಂದಿಗೆ ಕೊಂಡಿ ಕೂಡಿಸಿಕೊಳ್ಳುತ್ತದೆ. ಅಶ್ವಿನಿ, ಭರಣಿ ಕೃತ್ತಿಕಾ ಆದಿಯಾಗಿ ರೇವತಿ ನಕ್ಷತ್ರಗಳ ಕಣ್ಣಾ ಮುಚ್ಚಾಲೆಯಿಂದ ಭಿನ್ನ ಸನ್ನಿವೇಶಗಳಲ್ಲಿ ವಿಭಿನ್ನ ಪರಿಣಾಮ ಇಂಗಿಸಿಕೊಂಡು ಹಲವಾರು ಸಂವೇದನೆ ಪಡೆದು ಜೀವಿಯ ಬದುಕಿನ ಸಂದರ್ಭದ ಸುಖ ದುಃಖಗಳನ್ನು ತೂಗಿಸುತ್ತ ವರ್ತಮಾನ ಹಾಗೂ ಭವಿಷ್ಯತ್ತುಗಳನ್ನು ಕಟ್ಟಿಕೊಡುತ್ತದೆ. ಹೀಗೆ ಈ ರೀತಿಯ ಸೂತ್ರ ಒಂದಕ್ಕೆ ಜೀವಿಗಳನ್ನು ಕಟ್ಟಿ ಹಾಕುತ್ತದೆ ಅಂತಾದರೆ ನಮ್ಮ ಪ್ರಯತ್ನಗಳು

ಕೇವಲ ಗ್ರಹ, ತಾರೆ, ನಿಹಾರಿಕೆಗಳ ಸರ್ವಾಧಿಕಾರಕ್ಕೆ ಬದ್ಧವೇ ಎಂಬ ಪ್ರಶ್ನೆ ಎದ್ದೇಳುತ್ತದೆ. ಈ ಪ್ರಶ್ನೆಗೆ ಉತ್ತರ ‘ಹೌದು’ ಎಂಬುದೇ ಸರಿಯೂ ಅಲ್ಲ, ತಪ್ಪೂ ಅಲ್ಲ. ವಾದ, ವಾಗ್ವಾದಗಳ ನಡುವೆ ‘ಹೌದು’ ಎಂಬುದು ಉತ್ತರ ಕೇವಲ ಅಸಂಗತ ಕೂಡ.

ಅಂದರೆ ನೀವು ನಂಬುವ ಅಥವಾ ನಂಬದಿರುವ ಗುಣ ಧರ್ಮವನ್ನೂ ಅವರವರ ಜನ್ಮ ಕುಂಡಲಿಯ 'ಲಗ್ನ ಭಾವ' ಒದಗಿಸುತ್ತದೆ. ಮುಖ್ಯವಾಗಿ ಜೀವಿಯ ಇಡೀ ವ್ಯಕ್ತಿತ್ವದ ಶೋಭೆ, ವ್ಯಕ್ತಿತ್ವದಲ್ಲಿನ ದೋಷ, ತಂದೆ ತಾಯಿಗಳಿಂದಾಗಿ ಮನೆತನದ ಚಾರಿತ್ರ್ಯದ ಮೂಲಕವಾದ ಶಕ್ತಿ ಹಾಗೂ ಮಿತಿಗಳು,ಸ್ವತಃ ತಾನೇ ರೂಪಿಸಿಕೊಳ್ಳುವ ವ್ಯಕ್ತಿತ್ವ, ವ್ಯಕ್ತಿಯ ಸಂಬಂಧ ಆರೋಗ್ಯ, ರೋಗ ಬಾಧೆ, ಆಯಸ್ಸು, ಉತ್ಸಾಹ, ಲವಲವಿಕೆ ಈ ಎಲ್ಲವೂ ಈ ಲಗ್ನ ಭಾವದ ಮುಖಾಂತರವಾಗಿ ಸಂಪನ್ನತೆಯ ವಿಚಾರದ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪ್ರದರ್ಶಿಸುತ್ತವೆ.

ಇದರ ಅರ್ಥವೇನೆಂದರೆ ಲಗ್ನ ಭಾವದ ಯಜಮಾನ ಯಾರು ಹಾಗೂ ಯಾವ ಗ್ರಹ ಲಗ್ನ ಭಾವದಲ್ಲಿ ಇದೆ ಎಂಬುದರ ಮೇಲೆ ಜಾತಕ ಕುಂಡಲಿಯ ಏಳು ಬೀಳುಗಳ ಚಿತ್ರಣವನ್ನು ನಾವು ಪಡೆಯಬಹುದಾಗಿದೆ. ಜೀವನದ ಪ್ರತಿ ಕಾಲ ಘಟ್ಟದಲ್ಲಿ ಏನು ನಡೆದಿತ್ತು? ಏನು ನಡೆಯಲಿದೆ? ಎಂಬುದರ ನಿಖರ ಸ್ಥಿತಿ ಗುರುತಿಸಬಹುದಾಗಿದೆ. ಆದರೆ ನಿಖರತೆಯ ವಿಷಯ ಬಂದಾಗ ನೂರಕ್ಕೆ ನೂರನ್ನೂ ಗುರುತಿಸಬಹುದು ಎಂದರೆ ಉಡಾಫೆಯ ಮಾತೇ ಆದೀತು. ಸೂಕ್ತವಾದ ವಿಶ್ಲೇಷಣೆ ಮಾಡಬಹುದಾದವರು ನೂರಕ್ಕೆ ಸುಮಾರು ತೊಂಭತ್ತರಷ್ಟು ಭಾಗ ನಿಖರವಾಗಿ ಹೇಳಲು ಸಾಧ್ಯ.

ಲಗ್ನ ಭಾವವೇ ಮೊದಲಾಗಿ ಏನೇನು?

ಲಗ್ನ ಭಾವವನ್ನು ಮೊದಲ ಮನೆ ಎಂದು ಗುರುತಿಸುತ್ತ ಗಡಿಯಾರದ ಸುತ್ತಿನಂತೆ ಸಾಗಿದರೆ ಎರಡನೆ ಮನೆ, ಮೂರನೇ ಮನೆ ಇತ್ಯಾದಿ 12 ಮನೆಗಳು ವ್ಯಕ್ತಿಯ ಹಣಕಾಸು, ಸರ್ರನೆ ಒದಗಿ ಬರಬಹುದಾದ ಆರ್ಥಿಕ ಸಂಬಂಧಿ ಏಳು ಬೀಳುಗಳು. ದುಡಿಯುವ ಕೆಲಸ, ಸಂಬಳ, ಅಲ್ಲಿನ ಎಲ್ಲಾ ಅಪಾಯಕಾರಿ ನಿಶ್ಚಿತತೆ, ಅನಿಶ್ಚಿತತೆಗಳು, ಸಾತ್ವಿಕ ಮಾತಿನ ಬಂಧುತರತೆಗಳು, ಕೌಟುಂಬಿಕ ಬಿಕ್ಕಟ್ಟುಗಳ ಇಕ್ಕಟ್ಟಿನ ವಿಚಾರವಾಗಿ ಪರದಾಟಗಳು,ಹೆಚ್ಚಿನ ವಿದ್ಯಾಭ್ಯಾಸದ ವಿಚಾರವಾಗಿ, ಧೈರ್ಯದ ಕುರಿತ ಸಮಸ್ಯೆ ಸೇರಿದಂತೆ ವ್ಯಕ್ತಿಯಲ್ಲಿ ಆಗುವ ಬದಲಾವಣೆಗಳು. ಒಟ್ಟಿನಲ್ಲಿ ಈ ಎಲ್ಲಾ ರೀತಿಯ ವಿಚಾರಗಳು ಜನ್ಮಕುಂಡಲಿಯ ಜನ್ಮ ಭಾವ ಅರ್ಥಾತ್ ಲಗ್ನ ಭಾವದ ಮೂಲಕವೇ ಲಭ್ಯವೇ ವಿನಾ ವ್ಯಕ್ತಿಯ ರಾಶಿ ಹಾಗೂ ನಕ್ಷತ್ರಗಳ ಮೂಲಕವಾಗಿ ಇದ್ದಿರುವುದಿಲ್ಲ. ರಾಶಿ ಹಾಗೂ ನಕ್ಷತ್ರಗಳ ಮೂಲಕ ಈಗ ಈ ಸಮಯದಲ್ಲಿ ಜನ್ಮ ಭಾವದ ಗಂಟಲ್ಲಿ ಇದೇ ತುಂಬಿಕೊಂಡಿದೆ ಎಂದು ಅರಿತ ಸುಖವೋ, ದುಃಖವೋ, ದುರದೃಷ್ಟಕರವೋ ಎಂಬ ಯಾವ ಸಂಗತಿ ಸಂಭವಿಸಲಿದೆ ಎಂಬುದರ ಕಾಲ ಘಟ್ಟವನ್ನೂ ಗುರುತಿಸಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.