ಪ್ರಾತಿನಿಧಿಕ ಚಿತ್ರ
(ಎ.ಐ ಚಿತ್ರ)
ವಿಶಾಲವಾದ ಭೂಖಂಡದ ಮೇಲೆ ನಾವು ಮಾನವರು ನಿರ್ಮಿಸಿಕೊಂಡಿರುವ ದೇಶಗಳೆಂಬ ಕಲ್ಪಕ ಗೆರೆಗಳ ಅಂದ ಆಯ ಆಕಾರಗಳೆಲ್ಲ ಕಾಲಕಾಲಕ್ಕೆ ಬದಲಾಗುತ್ತಲೇ ಇರುವಂಥವು. ಯುದ್ಧ, ಪ್ರಾಕೃತಿಕ ದುರಂತಗಳು, ರಾಜಕೀಯ ಸ್ಥಿತ್ಯಂತರಗಳು ನಿರಂತರವಾಗಿ ಜಗತ್ತಿನ ದೇಶದ ಗಡಿಗಳ ನಕಾಶೆಯನ್ನು ಬದಲಿಸುತ್ತಲೇ ಬಂದಿವೆ. ದೇಶಗಳ ಉದಯಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಭಾಷೆ, ರಿಲಿಜನ್ನು, ಪ್ರಾಕೃತಿಕ ಅನುಕೂಲ-ಅನನುಕೂಲಗಳು, ರಾಜನೈತಿಕ ಒತ್ತಾಸೆಗಳು – ಹೀಗೆ ನಾನಾ ಕಾರಣಗಳಿವೆ. ಎರಡನೇ ಮಹಾಯುದ್ಧ ಮತ್ತು ವಸಾಹತುಗಳ ಯುಗಾಂತ್ಯ ಇವೆರಡು ಇದೀಗ ನಾವು ನೋಡುತ್ತಿರುವ ಹಲವಾರು ದೇಶಗಳ ನಕಾಶೆಯನ್ನು ಬರೆದ ಸಂಗತಿಗಳು.
ಭಾಷೆ, ರಿಲಿಜನ್, ರಾಜನೈತಿಕ ಕಾರಣ ಇತ್ಯಾದಿಗಳನ್ನು ಬಿಟ್ಟು ಒಂದು ದೇಶಕ್ಕಾಗುವಷ್ಟು ಜನಸಮುದಾಯವನ್ನು ಒಂದುಗೂಡಿಸುವ ಇನ್ನೊಂದು ಸಂಗತಿ ಯಾವುದಾದರೂ ಇದ್ದರೆ ಅದು ಆ ಜನರು ಬೆಳೆಸಿಕೊಂಡು ಬಂದಿರುವ ಲೋಕದೃಷ್ಟಿಯಾಗಿರಲಿಕ್ಕೆ ಸಾಕು. ಲೋಕದೃಷ್ಟಿಯೆಂದರೆ ಇನ್ನೇನಲ್ಲ- ಜಗತ್ತನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅದರ ಜೊತೆ ವ್ಯವಹರಿಸುವುದಕ್ಕೆ ಮತ್ತು ಅಲ್ಲಿ ಬದುಕುವುದಕ್ಕೆ ಈ ಜನಗಳು ಬೆಳೆಸಿಕೊಂಡಿರುವ ಪರಿಭಾಷೆ, ಪರಿಮಾಣ ಮತ್ತು ಪರಿಕಲ್ಪನೆಗಳು. ಮುಂದುವರಿದು, ಅವರು ಬೆಳೆಸಿಕೊಂಡು ಬಂದಿರುವ ಪದ್ಧತಿಗಳು, ಜೀವನವಿಧಾನ ಹಾಗೂ ಕಂಡುಕೊಂಡ ತತ್ತ್ವಗಳು ಸಹ ಇದರಲ್ಲಿ ಅಂತರ್ಭೂತವಾಗಿವೆ. ಇವೆಲ್ಲವನ್ನು ಒಟ್ಟಂದದಲ್ಲಿ ಸ್ಥೂಲವಾಗಿ ನಾಗರಿಕತೆ, ಸಭ್ಯತೆ ಅಥವಾ ಸಿವಿಲೈಸೇಶನ್ ಎಂದು ಗುರುತಿಸಬಹುದು. ಇದು ನಮ್ಮ ಅವಗಾಹನೆಗೆ ಸುಲಭವಾಗಿ ಸಿಗುವ ದೇಶ, ರಾಜ್ಯ, ಸಮಾಜ ಎಂಬಿತ್ಯಾದಿ ಹಲವಾರು ಪರಿಕಲ್ಪನೆಗಳಿಗಿಂತ ಹೆಚ್ಚು ವ್ಯಾಪಕವೂ ಗಹನವೂ ಆದದ್ದು. ಹಾಗಾಗಿಯೇ ಒಂದೇ ನಾಗರಿಕತೆಗೆ ಸಂಬಂಧಿಸಿದ ಜನಗಳಾದರೂ ಹಲವಾರು ದೇಶಗಳಾಗಿ ಗಡಿಗಳನ್ನು ಬರೆದುಕೊಂಡು ಬೇರೆ ಬೇರೆಯಾಗಿ ಬದುಕುತ್ತಿರುವ ಉದಾಹರಣೆಗಳು ಜಗತ್ತಿನಲ್ಲಿ ಇವೆ.
ಕಳೆದ ಶತಮಾನದಲ್ಲಿ ನಾಗರಿಕತೆಗಳ ಮೇಲೆ ಬಹುವಾಗಿ ಕೆಲಸ ಮಾಡಿದವರಲ್ಲಿ ಅರ್ನಾಲ್ಡ್ ಟಾಯ್ನ್-ಬೀ ಒಬ್ಬ. ಆತನ ಪ್ರಕಾರ ನಾಗರಿಕತೆಯು ಭೌತಿಕ ಮತ್ತು ರಾಜಕೀಯ ಅಂಶಗಳಿಗಿಂದ ಹೆಚ್ಚಾಗಿ ಮನುಷ್ಯನ ಆಂತರ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ್ದಾಗಿದೆ. ಅದು ಸಮುದಾಯಗಳ ಆಂತರಿಕ ಗತಿಶೀಲತೆಯ ಪರಿಣಾಮವೂ ಹಾಗೂ ತನ್ನ ಸುತ್ತಲಿನ ಸಂಕಟಗಳಿಗೆ ಜನಸಮುದಾಯಗಳು ಪ್ರತಿಕ್ರಿಯಿಸಿದ ರೀತಿಯೂ ಹೌದು. ಸ್ಟೇಟ್‌ನ ಹಾಗೆ ಇದು ರಾಜಕೀಯ ಶಕ್ತಿಯಿಂದ ಮುನ್ನಡೆಯುವ ವ್ಯವಸ್ಥೆ ಅಲ್ಲ, ಬದಲಿಗೆ ಸರ್ಜನಾತ್ಮಕ ಚಿಂತನೆಯುಳ್ಳ ಕೆಲವೇ ಜನರಿಂದ ಮುಂದಕ್ಕೆ ಸಾಗುವ ಸಂಗತಿಯಾಗಿದೆ.
ಟಾಯ್ನ್ ಬೀ ಈ ಮಾತುಗಳನ್ನು ಹೇಳಿ ಮುಕ್ಕಾಲು ಶತಮಾನವೇ ಕಳೆದುಹೋಗಿದೆ, ನಾಗರಿಕತೆಯ ಕುರಿತಾದ ಚಿಂತನೆಯಲ್ಲಿಯೂ ಸಾಕಷ್ಟು ಬೆಳವಣಿಗೆಗಳಾಗಿವೆ. ಹಾಗಿದ್ದೂ ನಾಗರಿಕತೆಯೆಂಬುದು ಗಡಿ, ಭಾಷೆ, ಆಹಾರ, ವ್ಯವಹಾರ ಇತ್ಯಾದಿ ತೋರಿಕೆಯ ಸಂಗತಿಗಳನ್ನು ಮೀರಿದ, ಮತ್ತೆ ಅವೆಲ್ಲಕ್ಕೂ ಆಧಾರಭೂತವಾದ ಆಂತರಿಕ ಸತ್ತ್ವಕ್ಕೆ ಸಂಬಂಧಿಸಿದ ಸಂಗತಿ ಎಂಬುದು ಅಂದಿಗೂ ಇಂದಿಗೂ ಸತ್ಯವೇ. ಗಾಢವಾದ ಗಡಿರೇಖೆಗಳು, ರಿಲಿಜನ್‌ಗಳ ಹೇರಿಕೆಗಳು, ಭಾಷಾ ಆಗ್ರಹಗಳು ಹಾಗೂ ರಾಜಕೀಯ ಪ್ರೇರಣೆಗಳಿಂದಾಗಿ ಮಾಸಿ ಹೋದಂತಿರುವ ‘ಆಂತರಿಕ ಏಕತೆ’ಯನ್ನು ಇನ್ನೊಮ್ಮೆ ಜಾಗೃತಗೊಳಿಸಿಕೊಳ್ಳುವುದಕ್ಕೆ ಭಾರತಕ್ಕಂತೂ ಲಭ್ಯವಿರುವ ಏಕೈಕ ಸಾಧನವೆಂದರೆ ನಾಗರಿಕತೆಯ ಚಿಂತನೆಯೇ ಸರಿ. ನಾನಾ ಕಾರಣಗಳಿಗೆ ವ್ಯಕ್ತಿಗಳ ರಿಲಿಜನ್ ಬದಲಾಗಬಹುದು; ಆದರೆ ನಾಗರಿಕತೆಯ ಗುರುತುಗಳು ತಲೆಮಾರುಗಳುದ್ದಕ್ಕೂ ಉಳಿದುಕೊಳ್ಳುತ್ತವೆ. ರಿಲಿಜನ್ನಿನ ಆಧಾರದ ಮೇಲೆ ಕಟ್ಟಿದ ದ್ವಿರಾಷ್ಟ್ರಸಿದ್ಧಾಂತದ ಪರಿಣಾಮವಾಗಿ ಭಾರತ ವಿಭಜನೆಯಾದದ್ದು ಇತಿಹಾಸ. ವಿಭಜನೆಯಾಗಿ ನಿರ್ಮಾಣವಾದ ಇನ್ನೊಂದು ದೇಶದ ನಾಗರಿಕತೆಯೇನಾದರೂ ಭಾರತಭೂಮಿಯ ನಾಗರಿಕತೆಗಿಂತ ಭಿನ್ನವಾಗಿದೆಯೇ ಎಂಬ ಪ್ರಶ್ನೆಯನ್ನು ಆ ಕಾಲಕ್ಕೆ ವ್ಯಾಪಕವಾಗಿ ಚಿಂತಿಸಿದ್ದರೆ ಪ್ರಾಯಃ ವಿಭಜನೆಯಾಗುತ್ತಿರಲಿಲ್ಲವೇನೋ?
ನಮ್ಮ ನಾಗರಿಕತೆಯನ್ನು ಗುರುತಿಸಿಕೊಳ್ಳುವಲ್ಲಿ ನೆರವಾಗುವ ಒಂದಿಷ್ಟು ಆಧಾರಪ್ರಾಯ ಚಿಂತನೆಗಳಲ್ಲಿ ಜನ್ಮಾಂತರಶ್ರದ್ಧೆಯದ್ದು ಅಗ್ರಸ್ಥಾನ. ಕಳೆದ ಎರಡುವರೆ ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಬೆಳೆದು ಬಂದ ದಾರ್ಶನಿಕ ಪರಂಪರೆಯಲ್ಲಿ ವೈದಿಕ ಮತ್ತು ಅವೈದಿಕ ದರ್ಶನಗಳ ಮಧ್ಯೆ ಪ್ರಮಾಣಶಾಸ್ತ್ರೀಯವಾದ ಭಿನ್ನತೆಗಳಿದ್ದಾಗ್ಯೂ ಜನ್ಮಾಂತರದ ವಿಷಯದಲ್ಲಿ ಗೊಂದಲವಿರಲೇ ಇಲ್ಲ. ಬದುಕು ಅನ್ನುವುದು ಇದೊಮ್ಮೆ ಮಾತ್ರವೇ ಸಂಭವಿಸಿ ಮುಗಿದುಬಿಡುವಂಥದಲ್ಲ, ಅದು ಮತ್ತೆ ಮತ್ತೆ ಸಂಭವಿಸುವ ಚಕ್ರಗತಿಯುಳ್ಳದ್ದು. ಭಾರತವನ್ನುಳಿದು ಪ್ರಾಚೀನ ಗ್ರೀಕ್, ಈಜಿಪ್ಟ್ ಮತ್ತು ಯೂರೋಪ್ ಖಂಡದ ಕೆಲವು ಸೆಲ್ಟಿಕ್ ಸಮುದಾಯಗಳವರು ಸಹ ಭಾರತೀಯ ಪುನರ್ಜನ್ಮ ಶ್ರದ್ಧೆಗೆ ಹೋಲುವ ಶ್ರದ್ಧಾವ್ಯವಸ್ಥೆಯನ್ನು ಹೊಂದಿದ್ದರು. ಆದರೆ ಕಾಲಕ್ರಮೇಣ ಅಲ್ಲಿಯ ಆ ನಾಗರಿಕತೆಗಳು ಅಬ್ರಹಾಮಿಕ್ ದೃಷ್ಟಿಯನ್ನು ಅಪ್ಪಿಕೊಳ್ಳಬೇಕಾಯಿತು. ಭಾರತಲ್ಲಿಯೂ ಅದು ಸಂಭವಿಸಿದ್ದರೂ ಪೂರ್ಣ ಗುರುತೇ ಕಳೆದುಹೋಗುವಂತಾಗಲಿಲ್ಲ.
ಭಾರತದಲ್ಲಿಯಾದರೋ ಭೂಮಿಯ ಮೇಲಿನ ಜೀವನವು ಬಂಧನಸ್ವರೂಪದ್ದು, ಮತ್ತು ಈ ಚಕ್ರಗತಿಯ ಹುಟ್ಟು ಸಾವಿನಿಂದ ಬಿಡುಗಡೆ ಬೇಕು ಅನ್ನುವುದರ ಕುರಿತು ದಾರ್ಶನಿಕರಲ್ಲಿ ಭೇದ ಇಲ್ಲ. (ಲೋಕಾ ಯತಿಕರಾದ ಚಾರ್ವಾಕರು ಪುನರ್ಜನ್ಮವನ್ನು ಒಪ್ಪಿಲ್ಲ ಅನ್ನುವ ತರ್ಕವನ್ನು ತರಬಹುದು. ಆದರೆ ಚಾರ್ವಾಕ ಮತವೆಂಬುದು ಸರ್ವಾಂಗ ಪುಷ್ಟವಾದ ದರ್ಶನವಾಗಿರದೆ ಸೀಮಿತ ದೃಷ್ಟಿಯ ಒಂದು ನಿರಾಕರಣವಾದ ಎಂಬುದನ್ನು ಯಾರೇ ಆದರೂ ಆ ದರ್ಶನವನ್ನು ಓದಿ ಅರ್ಥಮಾಡಿಕೊಳ್ಳಬಲ್ಲರು.) ಬಿಡುಗಡೆಯ ಸ್ಥಿತಿಗೆ ಮೋಕ್ಷ, ಸಮಾಧಿ, ನಿರ್ವಾಣ, ಸ್ವರ್ಗಪ್ರಾಪ್ತಿ ಇತ್ಯಾದಿ ಬೇರೆ ಬೇರೆ ದಾರ್ಶನಿಕರು ಬೇರೆ ಬೇರೆ ಹೆಸರುಗಳನ್ನು ಕೊಟ್ಟುಕೊಂಡಿದ್ದಾರೆ; ಆದಾಗ್ಯೂ ಅದರ ಹಿಂದಿನ ಸಾಮಾನ್ಯ ಸಂಗತಿ ಒಂದೇ – ಸಂಸಾರವೆಂಬೋ ಪುನರಾವರ್ತನೀಯ ಸಂಗತಿಯಿಂದ ಬಿಡುಗಡೆ ಅನ್ನುವುದು. ಇದಕ್ಕಾಗಿ ಆಯಾಯ ದಾರ್ಶನಿಕ ಮಾರ್ಗಗಳು ತೋರಿಸುವ ಉಪಾಯಗಳು ಭಿನ್ನಭಿನ್ನ; ಮತ್ತು ಈ ಭಿನ್ನತೆಯು ಭಾರತೀಯ ಸಮಾಜದಲ್ಲಿ ಬದುಕುವ ನಮ್ಮ ದೈನಂದಿನ ಅನುಭವದಲ್ಲಿಯೇ ಇದೆ.
ಬೇರೆ ಬೇರೆ ಮಾರ್ಗಗಳ ಮೂಲಕವಾದರೂ ತಲುಪಬೇಕಾದ ಗಮ್ಯಸ್ಥಾನ ಒಂದೇ ಎನ್ನುವ ಗ್ರಹಿಕೆ ಇದೆಯಲ್ಲ – ಅದು ಯಾವುದೋ ಒಂದು ಮತ ಅಥವಾ ಪಂಥದ ನಂಬಿಕೆಯಾಗಿರದೆ (ಪುನರ್ಜನ್ಮ ಮತ್ತು ಮೋಕ್ಷಗಳಂಥ ಸಂಗತಿಗಳನ್ನು ‘ನಂಬಿಕೆ’ ಎಂದು ಗುರುತಿಸುವುದು ಭಾರತೀಯ ಪರಂಪರೆಯ ಭಾಗೀದಾರನಾಗಿರದ ಮೂರನೆಯ ವ್ಯಕ್ತಿಯ ರೀತಿ. ಭಾರತಜೀವನದಲ್ಲಿ ಇದು ಸಂಶಯಕ್ಕೆ ಎಡೆಯಿರದ ಶ್ರದ್ಧೆಯಷ್ಟೆ) ಈ ನೆಲದಲ್ಲಿ ರೂಪುತಳೆದು ಬಾಳಿದ ಎಲ್ಲ ಸಿದ್ಧಾಂತ, ಮತ ಮತ್ತು ದರ್ಶನಗಳ ಒಟ್ಟಂದವಾದ ನಮ್ಮ ನಾಗರಿಕತೆಯ ಮೂಲದೃಷ್ಟಿಯಾಗಿದೆ. ಈ ಬಗೆಯ ಗೃಹೀತವೊಂದು ಬಾಳಿನ ನೋಟವೇ ಆಗಬೇಕೆಂದರೆ ಅದು ಬಾಳಿನ ಎಲ್ಲ ಕೋನಗಳನ್ನು ಪ್ರಭಾವಿಸಿರಬೇಕಾಗುತ್ತದೆ. ಭಾರತೀಯರಾಗಿ ನಮಗೆ ಪರಿಚಿತವಾಗಿರುವ ಕಥೆಗಳಲ್ಲೆಲ್ಲ ನೋಡಿದರೆ ಲೌಕಿಕ ಉಪಭೋಗಗಳಿಗಿಂತ ಆತ್ಯಂತಿಕ ಬಿಡುಗಡೆಯನ್ನು ಮಹತ್ತಿನದೆಂದೇ ಚಿತ್ರಿಸಲಾಗಿದೆ. ಉಪನಿಷತ್ತಿನ ಕಥೆಗಳು, ಜಾತಕ ಕಥೆಗಳು, ಜೈನಸಾಹಿತ್ಯ – ಹೀಗೆ ಎಲ್ಲ ಕಡೆಗೂ ಇದೇ ದೃಷ್ಟಿ ಪುನರಾವರ್ತಿತವಾಗಿದೆ. ನಮ್ಮ ಸಹಜ ದೈನಂದಿನ ಭಾಷಾ ವ್ಯವಹಾರದಲ್ಲಿ ಎಷ್ಟೆಲ್ಲಸಲ ಹಿಂದಿನ ಜನ್ಮಗಳ (ಯಾವ ಜನ್ಮದ ಪುಣ್ಯವೋ, ಯಾವ ಜನ್ಮದ ಪಾಪವೋ, ಕರ್ಮವೋ ಇತ್ಯಾದಿ) ಮತ್ತು ಮುಂದಿನ ಜನ್ಮಗಳ (ಈ ಪಾಪವನ್ನು ಮಾಡಿ ನಾನು ನಾಯಿ ನರಿಯಾಗಿ ಹುಟ್ಟಲೇನು ಇತ್ಯಾದಿ) ಮಾತು ಬಂದುಹೋಗುತ್ತದೆ!
ಕರ್ಮ, ಕರ್ಮಫಲ, ಪಾಪ, ಪುಣ್ಯ – ಇವೆಲ್ಲವೂ ಪುನರ್ಜನ್ಮ ಅಥವಾ ದೇಹಾಂತರಪ್ರಾಪ್ತಿಯನ್ನು ಒಪ್ಪಿಕೊಂಡಾಗ ಮಾತ್ರವೇ ಅರ್ಥಪಡೆದುಕೊಳ್ಳುವ ಮಾತುಗಳು. ವಾದಕ್ಕೆ ಬಂದಾಗ ಮರುಜನ್ಮ ಎಂದೆಲ್ಲ ಇಲ್ಲವೆಂದು ವಾದಿಸುವ ವಾದಜೀವಿಗಳು ಸಹ ಈ ಮಾತುಗಳನ್ನು ಬಳಸುತ್ತಿರುತ್ತಾರೆ. ನಮ್ಮ ಕನ್ನಡದಲ್ಲಿಯೇ ಎಷ್ಟೆಲ್ಲ ಆಧುನಿಕ ಸಿನಿಮಾ ಗೀತೆಗಳಲ್ಲಿ ‘ನೂರುಜನ್ಮ’, ‘ಏಳು ಜನ್ಮ’ ಇತ್ಯಾದಿ ಉಲ್ಲೇಖಗಳು ಬಂದಿವೆ ಎಂಬುದನ್ನು ಗಮನಸಿದರೆ ಈ ಜನ್ಮಪ್ರಜ್ಞೆಯು ಭಾರತಕ್ಕೆ ಎಷ್ಟು ಸಜಹವಾದದ್ದು ಎಂಬುದು ಅರಿವಾದೀತು. ಇವೆಲ್ಲ ಯಾವುದನ್ನೋ ಓದಿಕೊಂಡಾಗ ನಮ್ಮೊಳಗೆ ಮೂಡುವ ಭಾಷಾವ್ಯವಹಾರಗಳಲ್ಲ, ಬದಲಿಗೆ ಇದು ಭಾರತಜೀವನದಲ್ಲಿ ಭಾಗವಹಿಸುತ್ತ ಸಹಜವಾಗಿಯೇ ಒದಗಿಬಿಡುವ ಜೀವನದೃಷ್ಟಿ.
ಈ ಜೀವನದೃಷ್ಟಿ ಬರಿಯ ಮಾತಿನ ವ್ಯವಹಾರಕ್ಕೆ ಸೀಮಿತವಾದ್ದೂ ಅಲ್ಲ, ಅದು ನಮ್ಮ ಆಚಾರಗಳನ್ನು ಕೂಡ ಪ್ರಭಾವಿಸಿದೆ. ಮದುವೆ, ಔರ್ಧ್ವದೈಹಿಕ ಕ್ರಿಯೆಗಳು, ಸಂಸ್ಕಾರಗಳು, ದಾನ, ಯಜ್ಞ, ತಪಸ್ಸು – ಹೀಗೆ ಎಲ್ಲವಕ್ಕೂ ಜನ್ಮಾಂತರಪ್ರಜ್ಞೆಯೇ ಜೀವಾತುಭೂತವಾದ ಶ್ರದ್ಧೆ. ಜಗತ್ತನ್ನು ಮಾನವನ ಉಪಭೋಗದ ವಸ್ತುವನ್ನಾಗಿ ಕಾಣದ ಮತ್ತು ಭೂತದಯೆಯ ಜಗದ್ದೃಷ್ಟಿಯು ನಮಗೆ ಸಿದ್ಧಿಸಿದ್ದು ಕೂಡ ಜನ್ಮಾಂತರಶ್ರದ್ಧೆಯ ಹಿನ್ನೆಲೆಯಲ್ಲಿಯೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.