ADVERTISEMENT

ದಾಖಲೆ ಮಟ್ಟಕ್ಕೇರಿದ ವಾಹನಗಳ ಮಾರಾಟ: ಎಫ್‌ಎಡಿಎ

ನವೆಂಬರ್‌ ತಿಂಗಳಿನಲ್ಲಿ 28.54 ಲಕ್ಷ ವಾಹನ ಮಾರಾಟ

ಪಿಟಿಐ
Published 6 ಡಿಸೆಂಬರ್ 2023, 15:37 IST
Last Updated 6 ಡಿಸೆಂಬರ್ 2023, 15:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಾಹನಗಳ ರಿಟೇಲ್ ಮಾರಾಟವು ನವೆಂಬರ್‌ನಲ್ಲಿ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ. ಪ್ರಯಾಣಿಕ ವಾಹನ ಮತ್ತು ದ್ವಿಚಕ್ರ ವಾಹನ ವಿಭಾಗದಲ್ಲಿ ಕಂಡುಬಂದ ಉತ್ತಮ ಮಾರಾಟದಿಂದ ಇದು ಸಾಧ್ಯವಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ)  (ಎಫ್ಎಡಿಎ) ಹೇಳಿದೆ. 

ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ವಾಹನಗಳ ಮಾರಾಟ ಶೇ 18ರಷ್ಟು ಏರಿಕೆ ಕಂಡು 28.54 ಲಕ್ಷಕ್ಕೆ ಏರಿಕೆ ಆಗಿದೆ. 2022ರ ನವೆಂಬರ್‌ನಲ್ಲಿ 24.09 ಲಕ್ಷ ಇತ್ತು.

ಪ್ರಯಾಣಿಕ ವಾಹನಗಳ ಮಾರಾಟವು ಶೇ 17ರಷ್ಟು ಹೆಚ್ಚಾಗಿ 3.60 ಲಕ್ಷಕ್ಕೆ ತಲುಪಿದೆ. 2022ರ ನವೆಂಬರ್‌ನಲ್ಲಿ 3.07 ಲಕ್ಷ ವಾಹನಗಳು ಮಾರಾಟ ಆಗಿದ್ದವು.

ADVERTISEMENT

ದ್ವಿಚಕ್ರ ವಾಹನ ಮಾರಾಟ ಶೇ 21ರಷ್ಟು ಹೆಚ್ಚಾಗಿದ್ದು, ಒಟ್ಟು 22.47 ಲಕ್ಷ ವಾಹನಗಳು ಮಾರಾಟ ಆಗಿವೆ. ತ್ರಿಚಕ್ರ ವಾಹನ ಮಾರಾಟ ಶೇ 23ರಷ್ಟು ಏರಿಕೆ ಕಂಡು 99,890ಕ್ಕೆ ತಲುಪಿದೆ.

ಭಾರತದ ರಿಟೇಲ್ ವಾಹನ ಉದ್ಯಮಕ್ಕೆ 2023ರ ನವೆಂಬರ್ ಚಾರಿತ್ರಿಕ ತಿಂಗಳಾಗಿದ್ದು 28.54 ಲಕ್ಷ ವಾಹನಗಳು ಮಾರಾಟ ಆಗಿವೆ. ಈ ಹಿಂದೆ 2020ರ ಮಾರ್ಚ್‌ನಲ್ಲಿ ಆಗಿದ್ದ ಮಾರಾಟವನ್ನೂ ಮೀರಿ (25.69 ಲಕ್ಷ) ಬೆಳವಣಿಗೆ ಕಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಮನಿಷ್‌ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.

ದ್ವಿಚಕ್ರ ಮತ್ತು ಪ್ರಯಾಣಿಕ ವಾಹನ ವಿಭಾಗವು ಹೊಸ ದಾಖಲೆ ಬರೆದಿದೆ. 2023ರ ನವೆಂಬರ್‌ನಲ್ಲಿ 22.47 ಲಕ್ಷದಷ್ಟು ಮಾರಾಟ ಆಗಿದೆ. 2020ರ ಮಾರ್ಚ್‌ನಲ್ಲಿ ಆಗಿದ್ದ ಮಾರಾಟಕ್ಕೆ ಹೋಲಿಸಿದರೆ 1.77 ಲಕ್ಷದಷ್ಟು ಹೆಚ್ಚಾಗಿದೆ. ಪ್ರಯಾಣಿಕ ವಾಹನ ಮಾರಾಟವು 2023ರ ನವೆಂಬರ್‌ನಲ್ಲಿ 3.6 ಲಕ್ಷ ಕೋಟಿ ಆಗಿದೆ.  2022ರ ಅಕ್ಟೋಬರ್‌ಗೆ ಹೋಲಿಸಿದರೆ ಮಾರಾಟವು 4 ಸಾವಿರಕ್ಕೂ ಹೆಚ್ಚು ಏರಿಕೆ ಆಗಿದೆ ಎಂದು ಸಿಂಘಾನಿಯಾ ಮಾಹಿತಿ ನೀಡಿದ್ದಾರೆ.

ಪೂರೈಕೆ ವ್ಯವಸ್ಥೆಯಲ್ಲಿನ ಸುಧಾರಣೆ, ಹೊಸ ವಾಹನಗಳ ಬಿಡುಗಡೆಯು ನವೆಂಬರ್‌ ತಿಂಗಳ ಹಬ್ಬದ ಬೇಡಿಕೆಯನ್ನು ಪೂರೈಸಲು ನೆರವಾದವು ಎಂದು ಅವರು ತಿಳಿಸಿದ್ದಾರೆ.

ಮಾರಾಟದ ಮುನ್ನೋಟ

* ಪ್ರತಿಕೂಲ ಹವಾಮಾನವು ಹಿಂಗಾರು ಬೇಸಾಯದ ಮೇಲೆ ಪರಿಣಾಮ ಬೀರುತ್ತಿದ್ದು ಗ್ರಾಮೀಣ ಭಾಗದ ಆದಾಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಇದು ದ್ವಿಚಕ್ರ ವಾಹನ ಮಾರಾಟವನ್ನು ತಗ್ಗಿಸಬಹುದು.

* ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ದೇಶದಲ್ಲಿ ಉದ್ದಿಮೆ ಚಟುವಟಿಕೆಗಳಿಗೆ ವೇಗ ದೊರೆತಿದೆ. ಅದರಲ್ಲಿಯೂ ಮುಖ್ಯವಾಗಿ ಸಿಮೆಂಟ್ ಮತ್ತು ಕಲ್ಲಿದ್ದಲು ವಲಯದಲ್ಲಿ ಸಕಾರಾತ್ಮಕ ಚಲನೆ ಕಂಡುಬರುತ್ತಿದೆ. ಹೀಗಾಗಿ ವಾಣಿಜ್ಯ ವಾಹನ ವಿಭಾಗದ ಒಂದಿಷ್ಟು ಚೇತರಿಕೆ ಕಂಡುಕೊಳ್ಳುವ ನಿರೀಕ್ಷೆ ಇದೆ.

* ವರ್ಷಾಂತ್ಯದ ಕೊಡುಗೆಗಳು ಮತ್ತು ರಿಯಾಯಿತಿಗಳಿಂದಾಗಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.