ADVERTISEMENT

ಬೌನ್ಸ್‌ ಇನ್ಫಿನಿಟಿ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 11:25 IST
Last Updated 2 ಡಿಸೆಂಬರ್ 2021, 11:25 IST
ಬೌನ್ಸ್ ಇನ್ಫಿನಿಟಿ ಇ1
ಬೌನ್ಸ್ ಇನ್ಫಿನಿಟಿ ಇ1   

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ‘ಬೌನ್ಸ್’ ಕಂಪನಿಯು ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನ ತಯಾರಿಕಾ ಕ್ಷೇತ್ರವನ್ನು ಪ್ರವೇಶಿಸಿದ್ದು ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ಇನ್ಫಿನಿಟಿ ಇ1’ಅನ್ನು ಗುರುವಾರ ಪರಿಚಯಿಸಿದೆ.ಇದರ ಎಕ್ಸ್‌ ಷೋರೂಂ ಬೆಲೆ ಕರ್ನಾಟಕದಲ್ಲಿ ₹ 68,999 ಆಗಿರಲಿದೆ.

‘ಸ್ವಂತ ಇ.ವಿ. ಸ್ಕೂಟರ್ ಮಾತ್ರ ಸಾಕು, ಸ್ವಂತ ಬ್ಯಾಟರಿ ಬೇಡ’ ಎನ್ನುವವರು ಕರ್ನಾಟಕದಲ್ಲಿ ₹ 45,099 ಪಾವತಿಸಿ (ಎಕ್ಸ್‌ ಷೋರೂಂ ಬೆಲೆ) ಸ್ಕೂಟರ್ ತಮ್ಮದಾಗಿಸಿಕೊಳ್ಳಬಹುದು. ಅವರು ತಿಂಗಳ ಚಂದಾ ಪಾವತಿಸಿ (ತಿಂಗಳಿಗೆ ₹ 1,249),ಬ್ಯಾಟರಿಯನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಬೇಕು. ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಮಾಡಿದರೆ, ಗರಿಷ್ಠ 85 ಕಿ.ಮೀ. ಪ್ರಯಾಣಿಸಬಹುದು. ಬ್ಯಾಟರಿ ಚಾರ್ಜ್‌ ಮಾಡಲು 4–5 ತಾಸು ಸಮಯ ಬೇಕು.

ಬ್ಯಾಟರಿಯನ್ನು ಸ್ಕೂಟರ್‌ನಿಂದ ಬೇರ್ಪಡಿಸಿ, ಮನೆಯಲ್ಲಿನ ಮಾಮೂಲಿ ಪ್ಲಗ್‌ ಪಾಯಿಂಗ್‌ಗೆ ಚಾರ್ಜರ್‌ ಅಳವಡಿಸಿ ಚಾರ್ಜ್‌ ಮಾಡಿಕೊಳ್ಳಬಹುದು. ಈ ವಾಹನವು ಗಂಟೆಗೆ ಗರಿಷ್ಠ 65 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ನಿಂತ ಸ್ಥಿತಿಯಿಂದ ಗಂಟೆಗೆ 45 ಕಿ.ಮೀ. ವೇಗವನ್ನು ತಲುಪಲು ಕೇವಲ ಎಂಟು ಸೆಕೆಂಡ್‌ಗಳು ಸಾಕು ಎಂದು ‘ಬೌನ್ಸ್‌’ ಹೇಳಿದೆ.

ADVERTISEMENT

‘ಬ್ಯಾಟರಿಯನ್ನು ಸ್ಕೂಟರ್‌ನಿಂದ ಬೇರ್ಪಡಿಸಿ ಮನೆಯೊಳಗೇ ಚಾರ್ಜ್‌ ಮಾಡಿಕೊಳ್ಳುವ ಹಾಗೂ ಬ್ಯಾಟರಿಯನ್ನು ಸ್ವ್ಯಾಪಿಂಗ್ ಕೇಂದ್ರಗಳಲ್ಲಿ ಬದಲಾಯಿಸಿಕೊಳ್ಳುವ ಅವಕಾಶ ಒದಗಿಸುವ ಮೊದಲ ಕಂಪನಿ ನಮ್ಮದು’ ಎಂದು ಬೌನ್ಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿವೇಕಾನಂದ ಹಳ್ಳೆಕೆರೆ ತಿಳಿಸಿದರು.

ಈ ವಾಹನವು ಕೆಂಪು, ಕಪ್ಪು, ಬಿಳಿ, ಬೆಳ್ಳಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿರಲಿದೆ. ಆನ್‌ಲೈನ್‌ ಮೂಲಕ (bounceinfinity.com) ಅಥವಾ ಕಂಪನಿಯ ಡೀಲರ್‌ಗಳ ಮೂಲಕ ₹ 499 ಪಾವತಿಸಿ ಸ್ಕೂಟರ್‌ ಬುಕ್‌ ಮಾಡಬಹುದು. ಗ್ರಾಹಕರಿಗೆ ಮಾರ್ಚ್‌ ಮಧ್ಯಭಾಗದಿಂದ ಸ್ಕೂಟರ್‌ ಲಭ್ಯವಾಗಲಿದೆ ಎಂದು ವಿವೇಕಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.