ADVERTISEMENT

ವಿದ್ಯುತ್‌ ಚಾಲಿತಕಾರ್‌ ರೇಸ್‌ನಲ್ಲಿ...

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 19:46 IST
Last Updated 16 ಏಪ್ರಿಲ್ 2019, 19:46 IST
ಹುಂಡೈ ಕೋನಾ
ಹುಂಡೈ ಕೋನಾ   

ಮುಂದಿನ ಎರಡು ವರ್ಷಗಳಲ್ಲಿ 10ಕ್ಕೂ ಹೆಚ್ಚು ಬ್ಯಾಟರಿ ಚಾಲಿತ ಹೊಸ ಕಾರುಗಳು ದೇಶದ ರಸ್ತೆಗೆ ಇಳಿಯಲಿವೆ. 2030ರ ಹೊತ್ತಿಗೆ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚಿಸುವ ಸರ್ಕಾರದ ನಿಲುವಿಗೆ ಸ್ಪಂದಿಸಿರುವ ವಿದೇಶಿ ಮತ್ತು ಸ್ವದೇಶಿ ಕಾರು ತಯಾರಿಕಾ ಕಂಪನಿಗಳು ಹೊಸ ಅಗ್ಗದ, ವಿಲಾಸಿ ಸೌಲಭ್ಯವಿರುವ ಬಗೆ ಬಗೆಯ ವಿದ್ಯುತ್ ಚಾಲಿತ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ಹಾಕಿಕೊಂಡಿವೆ.

ಎಲೆಕ್ಟ್ರಿಕ್ ಕಾರುಗಳು ಕೇವಲ ಅಡಿ, ವೋಲ್ವೊ, ಜಾಗ್ವಾರ್ ಲ್ಯಾಂಡ್‌ ರೋವರ್‌ನಂತಹ ಕಾರುಗಳ ಮಾತ್ರವಲ್ಲ, ಕೆಲ ಮಧ್ಯಮವರ್ಗದ ಕೈಗೆ ಎಟುಕಬಲ್ಲ ಕಾರುಗಳೂ ಈ ಪಟ್ಟಿಯಲ್ಲಿರುವುದು ವಿಶೇಷ.ಆ ಮೂಲಕ ಭಾರತದಲ್ಲಿ ಆರಂಭವಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳು ರೇಸಿನಲ್ಲಿ ಪಾಲ್ಗೊಳ್ಳುವ ಅಂತಿಮ ಸಿದ್ಧತೆಯಲ್ಲಿ ಕಂಪನಿಗಳು ತೊಡಗಿವೆ.

ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್, ಎಂಜಿ ಮೋಟರ್ಸ್ ಮತ್ತು ನಿಸಾನ್ ಕಂಪನಿಗಳು ಮುಂದಿನ 2 ವರ್ಷಗಳಲ್ಲಿ ಹಲವು ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಕುರಿತು ಈಗಾಗಲೇ ಸುದ್ದಿಯಲ್ಲಿ ಇವೆ.

ADVERTISEMENT

ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಅತಿ ಮುಖ್ಯವಾದ ಬ್ಯಾಟರಿ ಮತ್ತಿತರ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಶೇ 15 -30 ರಿಂದ ಶೇ 10–15ಕ್ಕೆ ಇಳಿಸಿರುವುದು ಕಾರು ತಯಾರಿಕಾ ಕಂಪನಿಗಳ ಉತ್ಸುಕತೆ ಹೆಚ್ಚಿಸಿದೆ. ಮಾರುತಿ ಸುಜುಕಿ ತನ್ನ ವ್ಯಾಗನ್ ಆರ್ ಕಾರನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಮರು ಪರಿಚಯಿಸುವ ಸಿದ್ಧತೆಯಲ್ಲಿದೆ. ಈ ವಿಷಯದಲ್ಲಿ ಅದು ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ನೆರವನ್ನು ಪಡೆಯಲಿದೆ ಎಂದೆನ್ನಲಾಗುತ್ತಿದೆ. ಈ ಎರಡೂ ಕಂಪನಿಗಳ ನಡುವಣ ಒಪ್ಪಂದವು ಇದಕ್ಕೆ ಪುಷ್ಟಿ ನೀಡುತ್ತದೆ. ಜಪಾನಿನ ಈ ಎರಡೂ ಕಂಪನಿಗಳು 2021ರ ಹೊತ್ತಿಗೆ ಇತರ ನಾಲ್ಕು ಎಲೆಕ್ಟ್ರಿಕ್ ಮಾದರಿಗಳನ್ನು ಪರಿಚಯಿಸುವ ಕುರಿತೂ ಯೋಜನೆ ರೂಪಿಸಿವೆ.

ಕೊರಿಯಾ ಮೂಲದ ಹುಂಡೈ ಮೋಟರ್‌ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ‘ಕೋನಾ’ ಹೆಸರಿನ ಎಸ್‌ಯುವಿಯನ್ನು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಪರಿಚಯಿಸುವ ಪ್ರಯತ್ನ ನಡೆಸಿದೆ. ಈ ವರ್ಷದ ದ್ವಿತಿಯಾರ್ಧದ ನಂತರ ಅದು ರಸ್ತೆಗಿಳಿಯುವ ಸಾಧ್ಯತೆ ಇದೆ.

ಬ್ರಿಟನ್ನಿನ ಚೀನಾ ಮಾಲೀಕತ್ವದ ಎಂಜಿ ಮೋಟರ್ಸ್‌ ಭಾರತದಲ್ಲಿ ತನ್ನ ಮಾರುಕಟ್ಟೆ ಸ್ಥಾಪಿಸುವ ಮೊದಲೇ ವಿದ್ಯುತ್ ಚಾಲಿತ ಕಾರು ಪರಿಚಯಿಸುವ ಘೋಷಣೆ ಮಾಡಿದೆ. ಎಸ್‌ಯುವಿ ಮಾದರಿಯ ಇಜಡ್‌ಎಸ್‌ ಕಾರು ಈ ವರ್ಷದ ಕೊನೆಯ ಹೊತ್ತಿಗೆ ಪರಿಚಯಿಸುವ ಯೋಜನೆ ಹೊಂದಿದೆ.

ಒಂದೆಡೆ ರಸ್ತೆಯಲ್ಲಿರುವ ಒಟ್ಟು ವಾಹನಗಳಲ್ಲಿ ಶೇ 30ರಷ್ಟು ವಿದ್ಯುತ್ ಚಾಲಿತವಾಗಿರಬೇಕು ಎಂಬ ಆಶಯ ಒಂದೆಡೆಯಾದರೆ, ಮತ್ತೊಂದೆಡೆ ಬ್ಯಾಟರಿ ಕಾರು ಖರೀದಿಯಿಂದ ಗ್ರಾಹಕರಿಗೆ ಸಿಗಬಹುದಾದ ಲಾಭಗಳ ಕುರಿತು ಈವರೆಗೂ ಯಾವುದೇ ಮಾಹಿತಿ ಇಲ್ಲ.

‘ಫೇಮ್‌–2’ ಸ್ಕೀಂ ಅಡಿಯಲ್ಲಿ ಒಟ್ಟು 55 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆ ಇದೆ. ಈ ನಡುವೆ ಪುಟ್ಟ ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಪ್ರಯತ್ನದಲ್ಲಿ ಟಾಟಾ ಮೋಟರ್ಸ್ ಮತ್ತು ಮಹೀಂದ್ರ ಕಂಪನಿಗಳು ಸಾಕಷ್ಟು ಪ್ರಗತಿ ಸಾಧಿಸಿವೆ.

ಮಹೀಂದ್ರಾ ತನ್ನ ಕೆಯುವಿ 100 ಎಲೆಕ್ಟ್ರಿಕ್ ಕಾರನ್ನು 2019ರ ಮಧ್ಯಭಾಗದಲ್ಲಿ ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದರೆ, ಟಾಟಾ ಮೋಟರ್ಸ್‌ ತನ್ನ ಆಲ್ಟ್ರೋಜ್‌ ಅನ್ನು 2020ರ ಸೆಪ್ಟೆಂಬರ್‌ನಲ್ಲಿ ರಸ್ತೆಗಿಳಿಸುವ ಇರಾದೆ ಹೊಂದಿದೆ.

ವಿಲಾಸಿ ಕಾರುಗಳ ವಿಭಾಗದಲ್ಲೂ ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಯಲ್ಲಿ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಮೊದಲಿಗರಾಗುವುದು ಮತ್ತು ಹೆಚ್ಚು ಜನಪ್ರಿಯತೆ ಪಡೆಯುವ ಪೈಪೋಟಿಯಲ್ಲಿರುವ ಹಲವು ಕಾರು ಕಂಪನಿಗಳು ಈಗಾಗಲೇ ಹೊಸ ಕಾರುಗಳನ್ನು ಪರಿಚಯಿಸಲು ತುದಿಗಾಲಲ್ಲಿ ನಿಂತಿವೆ.

ಆದರೆ, ವಿದ್ಯುತ್ ಚಾಲಿತ ಕಾರುಗಳಿಗೆ ಮೂಲ ಸೌಕರ್ಯವಾದ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯು ಈ ಕ್ಷೇತ್ರ ಎದುರಿಸುತ್ತಿರುವ ಮುಖ್ಯ ಸಮಸ್ಯೆಯಾಗಿದೆ.

ಬಿಡುಗಡೆಗೆ ಸಿದ್ಧವಿರುವ ಕಾರುಗಳು ಒಂದು ಚಾರ್ಜ್‌ನಲ್ಲಿ ಕನಿಷ್ಠ 200ರಿಂದ 450 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಆದರೂ, ಕನಿಷ್ಠ 25 ರಿಂದ 50ಕಿ.ಮೀ. ಅಂತರದಲ್ಲಿ ಚಾರ್ಜಿಂಗ್ ಕೇಂದ್ರಗಳು ಬೇಕು ಎಂಬ ಬೇಡಿಕೆ ಕಾರು ತಯಾರಿಕಾ ಕಂಪನಿಗಳ ಹಕ್ಕೊತ್ತಾಯವಾಗಿದೆ. ಹೀಗಾದಲ್ಲಿ ವಿದ್ಯುತ್ ಚಾಲಿತ ಕಾರುಗಳ ಪರ್ವ ಈ ವರ್ಷದ ದ್ವಿತಿಯಾರ್ಧದಿಂದಲೇ ಆರಂಭವಾಗಲಿದೆ.

*2019ರಲ್ಲಿ ಬರಲಿರುವ ವಿದ್ಯುತ್ ಚಾಲಿಕ ಕಾರು: ಹುಂಡೈ ಕೋನಾ, ಎಂಜಿ ಮೋಟರ್ಸ್‌ ಇಜೆಡ್‌ಎಸ್‌, ಮಹೀಂದ್ರಾ ಇಎಯುವಿ, ನಿಸಾನ್ ಲೀಫ್‌, ರಿನೊ ಜಿಯೊ, ಔಡಿ ಇಟ್ರಾನ್‌.

*2020ರಲ್ಲಿ ಬರಲಿರುವ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ ಆರ್‌–ಇವಿ, ಟಾಟಾ ಮೋಟರ್ಸ್ ಆಲ್ಟ್ರೋಜ್ ಇವಿ, ಟಾಟಾ ಮೋಟರ್ಸ್‌ ನೆಕ್ಸಾನ್ ಇವಿ, ಜಾಗ್ವಾರ್ ಲ್ಯಾಂಡ್‌ರೋವರ್‌ ಐ–ಪೇಸ್‌ ಮತ್ತು ವೋಲ್ವೊ ಎಕ್ಸ್‌ಸಿ 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.