ADVERTISEMENT

ದೇಶದ ಮೊದಲ ಸ್ಮಾರ್ಟ್ ಕಾರ್ ಎಂಜಿ ಹೆಕ್ಟರ್

ಜಯಸಿಂಹ ಆರ್.
Published 16 ಏಪ್ರಿಲ್ 2019, 19:46 IST
Last Updated 16 ಏಪ್ರಿಲ್ 2019, 19:46 IST
ಹೆಕ್ಟರ್‌
ಹೆಕ್ಟರ್‌   

ಕಾರಿನಲ್ಲಿ ಹಾಡು ಬದಲಿಸಬೇಕೆಂದರೆ, ಹೋಗಬೇಕಾದ ದಾರಿ ಗೊತ್ತಾಗಬೇಕೆಂದರೆ ಕಾರು ಕೇವಲ ಚಾಲಕನ ಧ್ವನಿ ಕಮಾಂಡ್‌ಗೆ ಓಗೊಡುವಂತಿದ್ದರೆ ಹೇಗಿರುತ್ತದೆ. ಇಂತಹ ವ್ಯವಸ್ಥೆ ಈಗಾಗಲೇ ಪ್ರೀಮಿಯಂ ಲಕ್ಷುರಿ ವಾಹನಗಳಲ್ಲಿ ಇದೆ. ಪ್ರವೇಶಮಟ್ಟದ ಕಾರುಗಳಲ್ಲಿ ಇಂತಹ ವ್ಯವಸ್ಥೆ ಬಂದರೆ ಹೇಗಿರುತ್ತದೆ. ಇಂಥಹದ್ದೊಂದು ವ್ಯವಸ್ಥೆಯನ್ನು ಭಾರತೀಯರಿಗೆ ಕೊಡಲು ಎಂಜಿ ಮೋಟರ್ಸ್ ಮುಂದಾಗಿದೆ. ಇನ್ನೇನು ಮಾರುಕಟ್ಟೆಗೆ ಬರಲಿರುವ ಎಂಜಿ ಹೆಕ್ಟರ್‌ನಲ್ಲಿ ಇಂತಹ ವ್ಯವಸ್ಥೆ ಇರಲಿದೆ ಎಂದು ಕಂಪನಿ ಹೇಳಿದೆ.

ಎಂಜಿ ಹೆಕ್ಟರ್‌ ಪ್ರವೇಶಮಟ್ಟದ ಪ್ರೀಮಿಯಂ ಎಸ್‌ಯುವಿ. ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಹೆಕ್ಟರ್‌ನ ಪ್ರತಿಸ್ಪರ್ಧಿಗಳು ಎಂದು ಪರಿಗಣಿಸಲಾಗಿದೆ. ಈ ಮೂರೂ ಎಸ್‌ಯುವಿಗಳಲ್ಲಿ ಇರುವುದು ಫಿಯಟ್‌ನ 2.0 ಲೀಟರ್‌ನ ಎಂಜೆಡಿ ಎಂಜಿನ್. ಈ ಮೂರೂ ಸಹ ಎಸ್‌ಯುವಿಗಳು. ಮೂರೂ ಎಸ್‌ಯುವಿಗಳ ಗಾತ್ರ ಸ್ವಲ್ಪ ಭಿನ್ನವಾದರೂ ಸಹ, ಸೀಟಿಂಗ್ ಸಾಮರ್ಥ್ಯ ಒಂದೇ. ಹೆಚ್ಚು ಪೈಪೋಟಿ ಇರುವ ಈ ಸೆಗ್ಮೆಂಟ್‌ನಲ್ಲಿ ಕಾರು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕೆಂದರೆ ಅದರಲ್ಲಿ ವಿಶಿಷ್ಟವಾದದ್ದು ಏನಾದರೂ ಒಂದು ಇರಲೇಬೇಕು. ಅಂಥದ್ದೇ ಒಂದು ಪ್ರಯತ್ನವನ್ನು ಎಂಜಿ ಮಾಡಿದೆ. ಅದೇ ಇಂಟರ್ನೆಂಟ್ ಆಫ್ ಕಾರ್ಸ್‌.

ಇಂಟರ್ನೆಟ್ ಆಫ್ ಕಾರ್ಸ್‌, ಎಂಜಿ ಕಂಪನಿಯ ಕಾರುಗಳ ಸಂಪೂರ್ಣ ದತ್ತಾಂಶವನ್ನು ಒಳಗೊಂಡಿರುವ ಒಂದು ಸರ್ವರ್. ಈ ಸರ್ವರ್‌ ಜತೆ ಸಂಪರ್ಕ ಹೊಂದಿರುವ ಹೆಡ್‌ ಯುನಿಟ್ ಅರ್ಥಾತ್ ಇನ್ಫೊಟೈನ್‌ಮೆಂಟ್ ಸಿಸ್ಟಂ ಹೆಕ್ಟರ್‌ನಲ್ಲಿ ಇರಲಿದೆ. ಈ ಸಿಸ್ಟಂಗೆ ಐಸ್ಮಾರ್ಟ್ ಎಂದು ಹೆಸರಿಡಲಾಗಿದೆ.

ADVERTISEMENT

10.4ಇಂಚಿನ ಪರದೆ

ಐ ಸ್ಮಾರ್ಟ್‌ನ ಬಳಕೆದಾರರ ಇಂಟರ್‌ಫೇಸ್‌ಗಾಗಿ ಹೆಕ್ಟರ್‌ ನಲ್ಲಿ10.4 ಇಂಚು ಅಳತೆಯ ಪರದೆ ನೀಡಲಾಗಿದೆ. ಈ ಪರದೆಯಲ್ಲೇ ಕಾರಿನ ಎಲ್ಲಾ ಸವಲತ್ತುಗಳ ನಿಯಂತ್ರಣಕ್ಕೆ ಅವಕಾಶವಿದೆ. ಎಸಿ, ಮ್ಯೂಸಿಕ್ ಸಿಸ್ಟಂ ಮತ್ತಿತರ ಸವಲತ್ತುಗಳ ಬಳಕೆಯನ್ನು ಈ ಪರದೆಯ ಟಚ್ ಕೀಗಳ ಮೂಲಕವೇ ಮಾಡಬಹುದು. ಇಂತಹ ವ್ಯವಸ್ಥೆ ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲು. ಇಷ್ಟು ದೊಡ್ಡ ಗಾತ್ರದ ಪರದೆಯನ್ನು ನೀಡುತ್ತಿರುವುದೂ ಸಹ ಇದೇ ಮೊದಲು. ಹೀಗಾಗಿ ಇದು ಈ ಕಾರಿನ ಹೆಗ್ಗಳಿಕೆಗಳಲ್ಲಿ ಒಂದು.

5ಜಿ ಸಿಮ್

ಸರ್ವರ್ ಮತ್ತು ಐಸ್ಮಾರ್ಟ್‌ ಜತೆಗೆ ಸಂಪರ್ಕಕ್ಕೆ ಏರ್‌ಟೆಲ್ ಕಂಪನಿಯ 5ಜಿ ಸಿಮ್ ಅನ್ನು ಈ ಕಾರಿನಲ್ಲಿ ನೀಡಲಾಗುತ್ತದೆ. ಸದ್ಯ 4ಜಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. 5ಜಿ ಬಳಕೆಗೆ ಬಂದಾಗ ಅದನ್ನು ಯಥಾವತ್ತಾಗಿ ಬಳಸಬಹುದು. ಹೀಗಾಗಿ ಈ ವ್ಯವಸ್ಥೆ ಪ್ಯೂಚರ್‌ ರೆಡಿ. ಈ ಸಿಮ್ ಮೂಲಕ ಇಂಟರ್ನೆಟ್ ಆಫ್ ಕಾರ್ಸ್‌ ಜತೆಗೆ ಕಾರು ಸಂಪರ್ಕದಲ್ಲಿ ಇರಲಿದೆ.

ಇದು ಕಾರಿಗೆ ಹೊಸ ಸವಲತ್ತೊಂದನ್ನು ನೀಡಿದೆ.ಅದೇನೆಂದರೆ ಓವರು ಟು ಏರ್ ಅಪ್‌ಡೇಟ್. ಅಂದರೆ ಕಾರಿನ ಸಿಸ್ಟಂಗೆ ಸಂಬಂಧಿಸಿದ ಎಲ್ಲಾ ಅಪ್‌ಡೇಟ್‌ಗಳನ್ನು ಮಾಡಿಕೊಳ್ಳಲು ಸರ್ವಿಸ್ ಸೆಂಟರ್‌ಗೆ ಹೋಗುವ ಅಗತ್ಯವಿಲ್ಲ. ಎಲ್ಲಾ ಅಪ್‌ಡೇಟ್‌ಗಳು ಕಾರು ನಿಂತಿರುವಲ್ಲಿಯೇ ಆಗುತ್ತವೆ. ಅಂದರೆ ಕಾರಿನ ಇನ್ಫೊಟೈನ್‌ಮೆಂಟ್ ಸಿಸ್ಟಂ, ಎಂಜಿನ್‌ ಕಂಟ್ರೋಲ್ ಯುನಿಟ್‌ನ ಅಪ್‌ಡೇಟ್‌ಗಳು ಇದರಲ್ಲೇ ಆಗುತ್ತವೆ. ಅಂದರೆ ಕಾರು ನಿಂತಲ್ಲಿಯೇ ಸಾಫ್ಟ್‌ವೇರ್‌ ಫೇಸ್‌ಲಿಫ್ಟ್ ಪಡೆಯಲಿದೆ. ಭಾರತದ ಮಟ್ಟಿಗೆ ಇಂತಹ ವ್ಯವಸ್ಥೆ ಇದೇ ಮೊದಲು.

ಇದರ ಜತೆಯಲ್ಲೇ ಕಾರಿನ ಸರ್ವಿಸ್ ಹಿಸ್ಟರಿ, ಸರ್ವಿಸ್‌ನ ಅಗತ್ಯತೆಗಳನ್ನು ಇಂಟರ್ನೆಂಟ್ ಆಫ್ ಕಾರ್‌ ನಿರ್ವಹಿಸಲಿದೆ. ಅಗತ್ಯವಿದ್ದಾಗ ಮಾಲೀಕನ ಸ್ಮಾರ್ಟ್‌ಫೋನ್‌ಗೆ ಸಂದೇಶ ರವಾನೆಯಾಗುತ್ತಿರಲಿದೆ. ಇದರಿಂದ ಮಾಲೀಕನಿಗೆ ಕಾರು ನಿರ್ವಹಣೆ ಸುಲಭವಾಗಲಿದೆ.

ವಾಯ್ಸ್ ಕಮಾಂಡ್

ಹೆಕ್ಟರ್‌ನಲ್ಲಿ ವಾಯ್ಸ್‌ ಕಮಾಂಡ್ ವ್ಯವಸ್ಥೆ ಇದೆ. ಕಾರಿನ ಮ್ಯೂಸಿಕ್ ಸಿಸ್ಟಂ, ನ್ಯಾವಿಗೇಷನ್, ವಿಡಿಯೊ ಪ್ಲೇಯರ್ ಮಾತ್ರವಲ್ಲದೆ, ಹವಾನಿಯಂತ್ರಣ ವ್ಯವಸ್ಥೆ, ಸನ್‌ರೂಫ್ ಮತ್ತು ಪವರ್ ವಿಂಡೊಗಳನ್ನು ವಾಯ್ಸ್ ಕಮಾಂಡ್ ಮೂಲಕವೇ ನಿಯಂತ್ರಿಸಬಹುದು. ಅಂದರೆ ಸನ್‌ ರೂಫ್ ತೆಗೆಯಲು, ‘ಹಲೋ ಎಂಜಿ, ಪ್ಲೀಸ್ ಓಪನ್‌ ದ ಸನ್‌ರೂಫ್’ ಎಂದರಾಯಿತು. ಕೆಲಸ ನಡೆಯುತ್ತದೆ. ಎಲ್ಲಾ ಸವಲತ್ತುಗಳ ನಿಯಂತ್ರಣಕ್ಕೆ ಇದೇ ವ್ಯವಸ್ಥೆ ಸಾಕು. ಇದನ್ನು ಸಿಸ್ಕೊ, ಮೈಕ್ರೊಸಾಫ್ಟ್‌, ನ್ಯೂಯನ್ಸ್, ಇಂಟೆಲಿಜೆನ್ಸ್ ಕಂಪನಿಯ ವ್ಯವಸ್ಥೆಗಳು ಏಕಕಾಲದಲ್ಲಿ ನಿರ್ವಹಿಸಲಿವೆ. ಒಂದು ರೀತಿಯಲ್ಲಿ ರೋಬೊನಂತೆಯೇ ಕೆಲಸ ಮಾಡಲಿದೆ.

ಐಸ್ಮಾರ್ಟ್‌

ಐಸ್ಮಾರ್ಟ್‌ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಂಡರೆ ಸಾಕು. ಕಾರಿನ ನಿಯಂತ್ರಣ ನಮ್ಮ ಬೆರಳ ತುದಿಯಲ್ಲಿ ಇರಲಿದೆ. ಕಾರಿನ ಕೆಲವು ವ್ಯವಸ್ಥೆಗಳನ್ನು ಅಪ್ಲಿಕೇಷನ್ ಮೂಲಕವೇ ನಿಯಂತ್ರಿಸಬಹುದು. ಕಾರು ಬಿಸಿಲಲ್ಲಿ ನಿಂತಿದೆ ಎಂದಿಟ್ಟುಕೊಳ್ಳಿ. ಕಾರಿಗೆ ನಾವು ಹೋಗಲು ಇನ್ನೂ ಐದಾರು ನಿಮಿಷ ಸಮಯವಿದೆ. ಆದರೆ ಆಗಲೇ ಕಾರಿನ ಎಸಿ ಚಾಲೂ ಮಾಡಲು ಅಥವಾ ಅದರ ಪವರ್‌ ವಿಂಡೊಗಳನ್ನು ಅಥವಾ ಸನ್‌ರೂಫ್ ಅನ್ನು ತೆರೆಯಲು ಈ ಅಪ್ಲಿಕೇಷನ್ ಮೂಲಕವೇ ಕಮಾಂಡ್ ನೀಡಬಹುದು. ಆಗ ನಾವು ಅದರ ಬಳಿ ತಲುಪುವುದಕ್ಕೂ ಮೊದಲೇ ಕಾರು ತಂಪಾಗಿ ನಮ್ಮ ಪಯಣಕ್ಕೆ ಸಿದ್ಧವಾಗಿರುತ್ತದೆ.
ಈ ಎಲ್ಲಾ ವ್ಯವಸ್ಥೆ ಹೊಂದಿರುವ ಹೆಕ್ಟರ್‌ನ ಬೆಲೆ ಎಷ್ಟಿರಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಈ ಎಸ್‌ಯುವಿ ಮಾರುಕಟ್ಟೆಗೆ ಬಂದಲ್ಲಿ ತನ್ನದೇ ಛಾಪು ಮೂಡಿಸಲಿದೆ.

ಐಸ್ಮಾರ್ಟ್ ಸವಲತ್ತುಗಳು

l ಕಾರಿನ ಎಲ್ಲಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಮಾಹಿತಿ ನೀಡುತ್ತದೆ

l ಬ್ರೇಕ್‌ಫ್ಲುಡ್, ಕೂಲಂಟ್, ಡೀಸೆಲ್ ಮತ್ತು ಆಯಿಲ್‌ ಲೆವೆಲ್ ಸರಿಯಾಗಿವೆಯೇ ಎಂದು ಪರಿಶೀಲಿಸಲಿದೆ. ಇರುವ ಡೀಸೆಲ್‌ನಲ್ಲಿ ಕಾರು ಎಷ್ಟು ದೂರ ಕ್ರಮಿಸಲಿದೆ ಎಂದು ಇದು ಹೇಳಲಿದ

l ಕಾರನ್ನು ಸ್ವತಃ ತಾನೇ ಲಾಕ್ ಮಾಡಲಿದೆ. ಕಾರು ಅನ್‌ಲಾಕ್ ಆಗಿದ್ದರೆ ಆ ಮಾಹಿತಿಯನ್ನು ಮಾಲೀಕನಿಗೆ ರವಾನಿಸಲಿದೆ

l ಕಾರಿನ ಕ್ಲೈಮೇಟ್ ಕಂಟ್ರೋಲ್ ಅನ್ನು ಚಾಲೂ ಮಾಡಲಿದೆ

l ಪವರ್ ವಿಂಡೊಗಳನ್ನು ಕ್ಲೋಸ್ ಮಾಡದಿದ್ದರೆ, ಅದನ್ನು ತಾನೇ ಬಂದ್ ಮಾಡಲಿದೆ. ಅಪ್ಲಿಕೇಷನ್ ಮೂಲಕ ಅದನ್ನು ಇಳಿಸುವ ಕೆಲಸ ಮಾಡಬಹುದು. ಸನ್‌ರೂಫ್ ಸಹ ಇದೇ ರೀತಿ ಕೆಲಸ ಮಾಡಲಿದೆ

l ಟೈರ್ ಪ್ರೆಷರ್ ಮ್ಯಾನೇಜ್‌ಮೆಂಟ್ ಸಿಸ್ಟಂ

l ಸ್ಪೀಡ್ ಅಲರ್ಟ್ l ಟ್ರಾವೆಲ್ ಪ್ಲಾನಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.