ADVERTISEMENT

ಹೋಂಡಾ ಐಷಾರಾಮಿ ಸ್ಕೂಟರ್ ಅಬ್ಬರ

ನೇಸರ ಕಾಡನಕುಪ್ಪೆ
Published 20 ಮಾರ್ಚ್ 2019, 20:00 IST
Last Updated 20 ಮಾರ್ಚ್ 2019, 20:00 IST
ಹೋಂಡಾ ಪಿಸಿಎಕ್ಸ್‌ 150
ಹೋಂಡಾ ಪಿಸಿಎಕ್ಸ್‌ 150   

ಒಂದು ಕಾಲವಿತ್ತು. ಆಗಿನ್ನೂ ಸ್ಕೂಟರುಗಳೆಂದರೆ ವೆಸ್ಪಾ, ಬಜಾಜ್‌ ಎನ್ನುತ್ತಿದ್ದರು. ಈ ಸ್ಕೂಟರುಗಳು ತಯಾರಾಗಿದ್ದು ಮಹಿಳೆಯರಿಗೇ ಆದರೂ ಭಾರತದಲ್ಲಿ ಬಳಸಿದ್ದು ಮಾತ್ರ ಪುರುಷರು! ಆದರೆ, ಈ ಏಕತಾನತೆಯನ್ನು ಒಡೆದಿದ್ದು ಕೈನೆಟಿಕ್‌. ಮಹಿಳೆಯರೂ ಸ್ಕೂಟರ್‌ ಬಿಡಲು ಆರಂಭಿಸಿದರು. ಹೋಂಡಾ ಜತೆಗಿನ ಸಹಭಾಗಿತ್ವದಲ್ಲಿ ಹೊರಬಂದ ಕೈನೆಟಿಕ್‌ ಹೋಂಡಾ ಸ್ಕೂಟರುಗಳು ಬಹುಕಾಲ ರಸ್ತೆಗಳನ್ನು ಆಳಿಬಿಟ್ಟವು. ಬಳಿಕ ಕೈನೆಟಿಕ್‌ನಿಂದ ಬೇರ್ಪಡಿಸಿಕೊಂಡ ಹೋಂಡಾ, ‘ಆ್ಯಕ್ಟಿವಾ’ ಮೂಲಕ ಜನಮನ ಗೆದ್ದಿತು. ಈಗಲೂ ಸ್ಕೂಟರ್‌ ಕ್ಷೇತ್ರದಲ್ಲಿ ಹೋಂಡಾದೇ ಅಧಿಪತ್ಯ.

ಇಂದು ದೇಶದಲ್ಲಿ ಮಾರಾಟವಾಗುವ 10 ಸ್ಕೂಟರುಗಳ ಪೈಕಿ 7 ಸ್ಕೂಟರ್‌ಗಳು ಹೋಂಡಾದವೇ ಆಗಿವೆ. ಅದರಲ್ಲೂ ಹೋಂಡಾ ಆ್ಯಕ್ಟಿವಾ ಎಲ್ಲರ ಅಚ್ಚುಮೆಚ್ಚಿನ ಸ್ಕೂಟರ್‌. ಮಾರುಕಟ್ಟೆಯ ವೈಪರೀತ್ಯಗಳಿಗೆ ಸ್ಪಂದಿಸುವ ಹೋಂಡಾ ಆ್ಯಕ್ಟಿವಾ ಸ್ಕೂಟರಿಗೇ ಸೀಮಿತಗೊಳ್ಳದೇ ಡಿಯೊ, ಏವಿಯೇಟರ್‌, ಗ್ರಾಸಿಯಾಗಳ ಮೂಲಕ ಮುಂಚೂಣಿಯಲ್ಲೇ ಉಳಿಯಿತು. ‘ನವಿ’ಯಂತಹ ಬೈಕ್‌–ಸ್ಕೂಟರ್‌ ಹೈಬ್ರಿಡ್ ವಾಹನಗಳನ್ನೂ ಹೊರತಂದು ಮೆಚ್ಚುಗೆ ಗಳಿಸಿತು. ಇದೀಗ ಹೋಂಡಾ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಐಷಾರಾಮಿ ಸ್ಕೂಟರ್‌ ಕ್ಷೇತ್ರಕ್ಕೆ ಕಾಲಿಟ್ಟಿದೆ. ಹೊಸ ಹೋಂಡಾ ‘ಪಿಸಿಎಕ್ಸ್‌ 150’ ಮೂಲಕ ರಸ್ತೆಗಳಲ್ಲಿ ಸಂಚಲನ ಮೂಡಿಸಲಿದೆ.

ಸದ್ಯಕ್ಕೆ ಭಾರತದಲ್ಲಿ ಯಾವ ಸ್ಕೂಟರ್‌ ಕಂಪನಿಯೂ ಐಷಾರಾಮಿ ಸ್ಕೂಟರ್‌ ಹೊಂದಿಲ್ಲ. ಹಾಲಿ ಇರುವ ಹೋಂಡಾದ ಗ್ರಾಸಿಯಾ, ಸುಜಿಕಿಯ ಬರ್ಗ್‌ಮನ್ ಹಾಗೂ ಟಿವಿಎಸ್‌ನ ಎನ್‌ಟಾರ್ಕ್‌ 125 ಐಷಾರಾಮಿ ಸ್ಕೂಟರ್‌ಗಳಲ್ಲ. ಆದರೆ, ಆಯಾ ಕಂಪನಿಗಳ ಟಾಪ್‌ ಎಂಡ್ ಸ್ಕೂಟರ್‌ಗಳಷ್ಟೇ. ಈ ಪೈಕಿ ಹೋಂಡಾ ಪರಿಪೂರ್ಣ ಐಷಾರಾಮಿ ಸ್ಕೂಟರನ್ನು ಮೊದಲು ಹೊರಬಿಡಲಿದೆ.

ADVERTISEMENT

ಹೆಸರೇ ಹೇಳುವಂತೆ ಇದು 150 ಸಿಸಿ ಎಂಜಿನ್‌ ಉಳ್ಳ ಸ್ಕೂಟರ್. ಹಾಲಿ ಹೋಂಡಾ ಬಳಿ ಗರಿಷ್ಠ 125 ಸಿಸಿ ಎಂಜಿನ್‌ ಸ್ಕೂಟರ್‌ಗಳಿವೆ. ಆ್ಯಕ್ಟಿವಾ ಹಾಗೂ ಗ್ರಾಸಿಯಾದಲ್ಲಿ ಈ ಎಂಜಿನ್‌ ಬಳಕೆಯಲ್ಲಿದೆ. ಈ ಹೊಸ ಸ್ಕೂಟರ್‌ನಲ್ಲಿ 150 ಸಿಸಿ ಎಂಜಿನ್ ಇರಲಿರುವುದು ವಿಶೇಷ. ಅತ್ಯುತ್ತಮ ಗಿಯರ್‌ ಇಲ್ಲದ ಟ್ರಾನ್ಸ್‌ಮಿಷನ್‌ ಹೆಚ್ಚುಗಾರಿಕೆ. 13.4 ಬಿಎಚ್‌ಪಿ ಶಕ್ತಿ, 14 ಎನ್‌ಎಂ ಟಾರ್ಕ್‌ ಇರಲಿದೆ. ಈ ರೀತಿಯ ತಾಂತ್ರಿಕ ವಿವರ ಸಾಮಾನ್ಯವಾಗಿ ಬೈಕ್‌ಗಳಿಗೆ ಮಾತ್ರ ಇರುತ್ತದೆ. ಈ ಸ್ಕೂಟರಿನಲ್ಲಿ ಈ ರೀತಿಯ ವಿಶೇಷತೆ ಇರುವ ಕಾರಣ, ಅತಿ ತ್ವರಿತವಾದ ವೇಗವರ್ಧನೆ, ಗರಿಷ್ಠ ವೇಗ ಸ್ಕೂಟರಿಗೆ ಸಿಗುತ್ತದೆ. ಹೀಗಾಗಿ, ವಾಹನ ದಟ್ಟನೆ ಹೆಚ್ಚಿಗೆ ಇರುವ ನಗರಗಳಲ್ಲಿ ವೇಗ ಹೆಚ್ಚಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಜತೆಗೆ, 150 ಸಿಸಿ ಎಂಜಿನ್‌ ಇರುವ ಕಾರಣ ಹೆದ್ದಾರಿಗಳಲ್ಲಿ ಸರಾಗವಾಗಿ ಚಲಿಸಲೂ ಇದರಿಂದ ಸಾಧ್ಯವಾಗುತ್ತದೆ.

ಗ್ರೌಂಡ್‌ ಕ್ಲಿಯರೆನ್ಸ್

ಅಂತೆಯೇ, ಸ್ಕೂಟರಿಗೆ 138 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್ ಇದೆ. ಇದು ಕೊಂಚ ಕಡಿಮೆಯೇ. ರಸ್ತೆ ಉಬ್ಬುಗಳಿಂದ ಕೊಂಚ ತೊಂದರೆಯಾಗುತ್ತದೆ. ಆ್ಯಕ್ಟಿವಾ ಹಾಗೂ ಗ್ರಾಸಿಯಾದಲ್ಲಿ 150 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಇದೆ. ಆದರೆ, ಸೀಟ್‌ ಎತ್ತರ 760 ಎಂಎಂ ಇದೆ. ಆದ್ದರಿಂದ ಎತ್ತರದಲ್ಲಿ ಕುಳಿತ ಅನುಭವ ಸವಾರರಿಗೆ ಸಿಗುತ್ತದೆ. ಇದರ ಅನುಕೂಲ ತೆಗಳು ಹೆಚ್ಚು. ನೇರವಾಗಿ ಕುಳಿತ ಭಂಗಿ ಸಿಗುವ ಕಾರಣ ಬೆನ್ನುನೋವು ಬಾರದು. ಕುಳ್ಳಗಿನ ಸ್ಕೂಟರುಗಳಲ್ಲಿ ಬೆನ್ನುನೋವು ಸಾಧ್ಯತೆ ಹೆಚ್ಚು. ಆದರೆ, ತೂಕ ಮಾತ್ರ ಹೆಚ್ಚಿದೆ. ಅದು ಸಹಜ ಕೂಡ. ಒಟ್ಟು 130 ಕೆಜಿ ತೂಕ ಇರಲಿದೆ. ಗ್ರಾಸಿಯಾ 105 ಕೆ.ಜಿ ಇದೆ

ಗರಿಷ್ಠ 112 ಕಿಲೋಮೀಟರ್‌ ವೇಗ ತಲುಪುವ ಶಕ್ತಿ ಸ್ಕೂಟರಿಗೆ ಇದೆ. ಆ್ಯಕ್ಟಿವಾ ಹಾಗೂ ಗ್ರಾಸಿಯಾ 125 ಗರಿಷ್ಠ 85 ಕಿಲೋಮೀಟರ್‌ ವೇಗ ತಲುಪಬಲ್ಲವು. ಆದರೆ, ಮೈಲೇಜ್‌ ಕಡಿಮೆಯಾಗುವುದು ಖಚಿತ. 125 ಎಂಜಿನ್‌ ಸ್ಕೂಟರ್‌ ಗರಿಷ್ಠ 55 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. 150 ಸಿಸಿಯ ಹೊಸ ಸ್ಕೂಟರ್‌ 35ರಿಂದ 40 ಕಿಲೋಮೀಟರ್ ಮೈಲೇಜ್‌ ನೀಡಬಹುದು.

ವೇಗ ಹಾಗೂ ಚುರುಕಾದ ವಾಹನ ಚಾಲನೆ ಸಿಗುವುದರಿಂದ ಕೊಂಚ ಮೈಲೇಜ್‌ ಬಿಟ್ಟುಕೊಟ್ಟರೆ ನಷ್ಟವೇನಿಲ್ಲ. 8 ಲೀಟರ್‌ ಪೆಟ್ರೋಲ್ ಸಂಗ್ರಹಣಾ ಸಾಮರ್ಥ್ಯ ಇರಲಿದೆ. ಇದರಿಂದ 320 ಕಿಲೋಮೀಟರ್‌ವರೆಗೂ ಪ್ರಯಾಣ ಮಾಡಬಹುದಾದ ಅವಕಾಶ ಸವಾರರಿಗೆ ಸಿಗುತ್ತದೆ.

ಸೌಲಭ್ಯಗಳಲ್ಲಿ ಪಿಸಿಎಕ್ಸ್ 150 ವಿಶೇಷವಾಗಿರಲಿದೆ. ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಪೆನಲ್‌ ಇರಲಿದೆ. ಈಗಾಗಲೇ ಗ್ರಾಸಿಯಾದಲ್ಲಿ ಈ ಸೌಲಭ್ಯವಿದೆ. ಆದರೆ, ಗ್ರಾಸಿಯಾದಲ್ಲಿರುವುದು ಏಕವರ್ಣ ಪರದೆ. ಆದರೆ, ಹೊಸ ಸ್ಕೂಟರಿನಲ್ಲಿ ಎಲ್‌ಸಿಡಿ ಬಹುವರ್ಣ ಪರದೆ ಇರಲಿದೆ. ಜತೆಗೆ, ಮೊಬೈಲ್‌ಗೆ ಸಂಪರ್ಕ ಸಾಧಿಸುವ ಸೌಲಭ್ಯ ಇರಲಿದೆ. ಇದರ ಮೂಲಕ ನ್ಯಾವಿಗೇಷನ್ ಸೌಲಭ್ಯ ಪಡೆಯಬಹುದು. ಈ ಸೌಲಭ್ಯ ಸದ್ಯಕ್ಕೆ ಬೇರಾವ ಸ್ಕೂಟರಿನಲ್ಲೂ ಇಲ್ಲ. ‘ಏಥರ್‌ ಎಲೆಕ್ಟ್ರಿಕ್‌’ ಸ್ಕೂಟರಿನಲ್ಲಿ ಈ ವಿಶೇಷತೆ ಇದೆ.

ಜತೆಗೆ, ಎರಡೂ ಚಕ್ರಗಳಿಗೆ ಡಿಸ್ಕ್‌ ಬ್ರೇಕ್‌ ಇರಲಿದೆ. ಸೀಟಿನ ಕೆಳಗೆ ವಿಶಾಲವಾದ ಸಂಗ್ರಹಣಾ ಜಾಗ ಇರಲಿದೆ. ಸಂಪೂರ್ಣ ಎಲ್‌ಇಡಿ ದೀಪಗಳು ಇರಲಿವೆ. ಹೆಡ್‌ಲೈಟ್‌, ಟೇಲ್‌ ಲೈಟ್, ಇಂಡಿಕೇಟರ್‌ಗಳು ಎಲ್‌ಇಡಿ ದೀಪಗಳಾಗುವ ಕಾರಣ ಐಷಾರಾಮಿ ನೋಟ ಸಿಗಲಿದೆ. ಗ್ರಾಸಿಯಾದಲ್ಲಿ ಈಗ ಕೇವಲ ಹೆಡ್‌ಲೈಟ್‌ ಮಾತ್ರ ಎಲ್‌ಇಡಿ ಇದೆ.

ಸ್ಕೂಟರಿನ ವಿನ್ಯಾಸವೇ ಬಹುದೊಡ್ಡ ವಿಶೇಷ. ಚೂಪಾದ, ಗಾಳಿಯನ್ನು ಸೀಳಿಕೊಂಡು ಹೋಗಬಲ್ಲ ದೇಹವಿದೆ. ಇದು ಐಷಾರಾಮಿ ಸ್ಕೂಟರುಗಳಲ್ಲಿ ಮಾತ್ರ ಇರಬಲ್ಲ ದೇಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.