ADVERTISEMENT

ಬೈಕ್‌ ಸವಾರರ ಮಾಹಿತಿ ಹಂಚಿಕೆ ವೇದಿಕೆ: ಟ್ರೇಲ್ಸ್‌ ಆಫ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 15:44 IST
Last Updated 1 ನವೆಂಬರ್ 2018, 15:44 IST
   

ಭಾರತದಲ್ಲಿನ ಮೋಟಾರ್ ಬೈಕ್ ಸವಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಪ್ರಯಾಣದ ವೇಳೆ ಉದ್ಭವವಾಗುವ ಅನುಮಾನಗಳನ್ನು ಬಗೆಹರಿಸಿಕೊಳ್ಳಲು, ಸಲಹೆ ಮತ್ತು ಎಚ್ಚರಿಕೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕಾಗಿ ರೂಪುಗೊಂಡಿರುವುದು ಟ್ರೇಲ್ಸ್ ಆಫ್ ಇಂಡಿಯಾ (Trails of India).

ದೂರ ಬೈಕ್‌ ಸವಾರಿಯ ಹವ್ಯಾಸ ಬೆಳೆಸಿಕೊಂಡಿದ್ದ ಅಂಬಿಕಾ ಶರ್ಮಾ ಕೆಲ ವರ್ಷಗಳ ಹಿಂದೆ ದೆಹಲಿಯಿಂದ ಕನ್ಯಾಕುಮಾರಿಯವರೆಗೂ ಸವಾರಿಗೆ ಸಜ್ಜಾದರು. ತಂದೆಯೊಂದಿಗೆ ಹದಿನಾಲ್ಕು ದಿನಗಳ ಬೈಕ್‌ ಸವಾರಿಯಲ್ಲಿ ಹತ್ತಾರು ಸವಾಲಿನ ಸಂಗತಿಗಳು ಎದುರಾದವು. ತಲುಪಬೇಕಾದ ಗಮ್ಯ ಸ್ಪಷ್ಟವಿದ್ದರೂ ಸಾಗುವ ಹಾದಿಯಲ್ಲಿ ಎಲ್ಲವೂ ಸರಿ ಕಾಣಲಿಲ್ಲ. ಊಟ-ತಿಂಡಿ, ರಾತ್ರಿ ವಿಶ್ರಾಂತಿ, ಬೈಕ್ ತಪಾಸಣೆಗೆ ಸರಿಯಾದ ಶಾಪ್‌.. ಇತ್ಯಾದಿ ಸೂಕ್ತ ಮಾಹಿತಿ ಸಿಗಲಿಲ್ಲ. ಆಗಲೇ ಸವಾರರಿಗೆ ಮಾರ್ಗದರ್ಶನ ತೋರುವ ಒಂದು ವ್ಯವಸ್ಥೆ ರೂಪಿಸುವ ಯೋಚನೆ ಅಂಬಿಕಾ ಅವರಲ್ಲಿ ಚಿಗುರಿದ್ದು.

ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಸ್ಟಾರ್ಟ್ ಅಪ್ 'ಟ್ರೇಲ್ಸ್ ಆಫ್ ಇಂಡಿಯಾ'; ಬೈಕರ್ ಗಳಿಂದ ಬೈಕರ್ ಗಳಿಗಾಗಿಯೇ ವಿಸ್ತರಿಸಿಕೊಳ್ಳುತ್ತಿರುವ ವೇದಿಕೆಯಾಗಿದೆ. ದೇಶದ 300ಕ್ಕೂ ಹೆಚ್ಚು ‌ಊರುಗಳ ಸಾವಿರಾರು ಮಂದಿ ಸವಾರರು ಇದರ ಜಾಲತಾಣದ/ಆ್ಯಪ್ ನ ಬಳಕೆದಾರರಾಗಿದ್ದಾರೆ.

ADVERTISEMENT

ಪ್ರತಿಯೊಬ್ಬ ಬೈಕ್ ಸವಾರನ ಪ್ರತಿಯೊಂದು ಸವಾರಿಯು ಹೇಳಿಕೊಳ್ಳುವ ಹೊಸತೊಂದು ಅನುಭವವನ್ನು ನೀಡಿರುತ್ತದೆ. ಒಂದೇ ಹಾದಿಯೇ ಅದೇ ಸವಾರಿಯ ಅನುಭವ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬೈಕ್ ಸವಾರರು ಅವರದೇ ಪುಟ್ಟ ಗುಂಪು ರಚಿಸಿಕೊಂಡು ಸವಾರಿ ನಡೆಸುತ್ತ, ಅನುಭವಗಳು ಸಹ ಅಲ್ಲಿಯೇ ಗಿರಕಿ ಹೊಡೆಯುತ್ತಿರುತ್ತವೆ. ಇಂಥ ಎಲ್ಲ ತಂಡಗಳು ಅಥವಾ ಏಕಾಂಗಿ ಪಯಣಿಗರು ಒಂದೇ ವೇದಿಕೆಯಲ್ಲಿ ತಾವು ಕಂಡುಕೊಂಡ ಸಾಗುವ ಜಾಡನ್ನು ದೇಶದ ಬಹುತೇಕ ಉತ್ಸಾಹಿ‌ ಬೈಕರ್ ಗಳೊಂದಿಗೆ ಹಂಚಿಕೊಳ್ಳುವುದು ಸಾಧ್ಯವಾಗಿದೆ.

ಇಲ್ಲಿ ಏನೆಲ್ಲ ಇದೆ

  1. ಸಾಗುವ ಹಾದಿಯಲ್ಲಿ ಭೇಟಿ ನೀಡಲೇ ಬೇಕಾದ‌ ಹಾಗೂ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ
  2. ಬೈಕ್ ಸವಾರಿಯಲ್ಲಿ ಬಳಸಬಹುದಾದ ಗ್ಯಾಜೆಟ್‌ಗಳು, ತಂತ್ರಜ್ಞಾನದ ಸೂಕ್ತ ಬಳಕೆ
  3. ಕಂಡುಕೊಂಡ ಹೊಸ ಮಾರ್ಗ ಮತ್ತು ತಲುಪುವ ಬಗೆ
  4. ಸವಾರಿ, ಸ್ಥಳ ಹಾಗೂ ವಿಶಿಷ್ಟ ಅನುಭವಗಳ ವಿಡಿಯೊ, ಚಿತ್ರಗಳು
  5. ‎ಸವಾರಿಗೆ ಬೇಕಾದ ವಸ್ತುಗಳು, ಬೈಕ್ ಬಿಡಿಭಾಗಗಳ ಇ-ಮಾರುಕಟ್ಟೆ
  6. ಮಾರ್ಗ ಸಹಿತ ದೂರದ ಪ್ರಯಾಣಗಳ ವಿವರ
  7. ಜತೆಯಲ್ಲಿ ಇರಬೇಕಾದ ಅಗತ್ಯ ವಸ್ತುಗಳು, ಯಾವುದು ಉತ್ತಮ ಹಾಗೂ ಬಳಕೆ ಹೇಗೆ
  8. ಇಡೀ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ಬ್ಲಾಗ್
  9. ಸವಾರಿಗೆ ಸಂಬಂಧಿಸಿದಂತೆ ಅನುಮಾನ, ಗೊಂದಲಗಳಿಗೆ ಉತ್ತರ
  10. ‎ಹಿಮಾಚಲ ಪ್ರದೇಶ, ದೆಹಲಿ, ಕನ್ಯಾಕುಮಾರಿ,..ಹೀಗೆ ದೇಶದ ಹಲವು ಭಾಗಗಳಿಗೆ ರೈಡ್ ಹೊರಡುವ ದಿನಾಂಕ, ಸ್ಥಳ- ಇವೆಂಟ್ ವಿವರ
  11. ಇಮೇಲ್ ವಿಳಾಸ ಬಳಸಿ ಲಾಗಿನ್ ಆಗಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.