ADVERTISEMENT

ಹೋಂಡಾ ‘ಹಾರ್ನೆಟ್‌ 2.0’ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:47 IST
Last Updated 28 ಆಗಸ್ಟ್ 2020, 15:47 IST
ಹಾರ್ನೆಟ್‌ 2.0
ಹಾರ್ನೆಟ್‌ 2.0   

ಭಾರತದ ಬೈಕ್‌ ಮಾರುಕಟ್ಟೆಯಲ್ಲಿ ತನ್ನ ವಹಿವಾಟು ವಿಸ್ತಿರಿಸಿಕೊಳ್ಳುವ ಭಾಗವಾಗಿ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಕಂಪನಿಯು 180 ಸಿಸಿಯಿಂದ 200 ಸಿಸಿ ಸಾಮರ್ಥ್ಯದ ಬೈಕ್‌ ವಿಭಾಗಕ್ಕೆ ಕಾಲಿಟ್ಟಿದೆ.

ಇದರ ಆರಂಭವಾಗಿ 184 ಸಿಸಿ ಸಾಮರ್ಥ್ಯದ ಹೊಸ ಬೈಕ್‌ ‘ಹಾರ್ನೆಟ್‌ 2.0’ ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ಬಿಎಸ್‌6 ಎಂಜಿನ್‌ ಹೊಂದಿದ್ದು, ಬೆಲೆ ₹ 1.26 ಲಕ್ಷ ಇದೆ (ಗುರುಗ್ರಾಮದಲ್ಲಿ ಎಕ್ಸ್‌ಷೋರೂಂ).

‘ಹೋಂಡಾದ ಹೊಸ ಯುಗದ ಆರಂಭವು ಇದಾಗಿದೆ. ಭಾರತದಲ್ಲಿನ ವಿಭಿನ್ನ ಅಭಿರುಚಿಯ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿದ್ದೇವೆ’ ಎಂದು ಕಂಪನಿಯು ವ್ಯವಸ್ಥಾಪಕ ನಿರ್ದೇಶಕ ಅಟುಶಿ ಒಗಾಟಾ ಹೇಳಿದರು.

ADVERTISEMENT

ಮುಂಬರುವ ದಿನಗಳಲ್ಲಿ ಈ ಪ್ರೀಮಿಯಂ ವಿಭಾಗದಲ್ಲಿಯೇ ಇನ್ನೂ ಹಲವು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.

‘ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ದೇಶದಲ್ಲಿ ಸ್ವಂತ ವಾಹನ ಹೊಂದಲು ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ದೃಷ್ಟಿಯಿಂದ ದ್ವಿಚಕ್ರವಾಹನಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ. ತಯಾರಿಕೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಮೆಟ್ಟಿನಿಂತು ಹಬ್ಬದ ಸಂದರ್ಭದಲ್ಲಿ ಬೇಡಿಕೆ ಪೂರೈಸುವ ಕಡೆಗೆ ಗಮನ ನೀಡಲಾಗುತ್ತಿದೆ’ ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕ ಯದುವೀಂದರ್ ಸಿಂಗ್‌ ಗುಲೇರಿಯಾ ತಿಳಿಸಿದರು.

ಹೊಸ ಎಂಜಿನ್‌, ಪಿಸ್ಟನ್‌ ಕೂಲಿಂಗ್‌ ಜೆಟ್‌ನಿಂದ ಸುಸಜ್ಜಿತವಾಗಿದ್ದು, ಅಧಿಕ ಶಾಖವನ್ನು ಹೀರಿಕೊಂಡು ಎಂಜಿನ್‌ನ ಉಷ್ಣತೆಯ ಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ ಹಾಗೂ ಗರಿಷ್ಠ ಇಂಧನ ಕ್ಷಮತೆಯನ್ನು ಖಾತರಿಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯ

*ಡಿಜಿಟಲ್‌ ನ್ಯಾವಿಗೇಷನ್‌ ಲಿಕ್ವಿಡ್‌ ಕ್ರಿಸ್ಟಲ್‌ ಮೀಟರ್‌

*ಟ್ಯೂಬ್‌ ರಹಿತ ಟೈರ್‌ಗಳು

*ಎಂಜಿನ್‌ ಸ್ಟಾಪ್‌ ಸ್ವಿಚ್

*ಡ್ಯುಯಲ್‌, ಪೆಟಲ್‌ ಡಿಸ್ಕ್‌ ಬ್ರೇಕ್‌ ಹಾಗೂ ಸಿಂಗಲ್‌ ಚಾನೆಲ್; ಎಬಿಎಸ್ ವ್ಯವಸ್ಥೆ

*ಆರು ವರ್ಷಗಳ ವಾರಂಟಿ ಪ್ಯಾಕೇಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.