ADVERTISEMENT

ಪ್ರಶಸ್ತಿಯ ಹೆಸರಲ್ಲೊಂದು ಒಳ್ಳೆಯ ಕೆಲಸ

ಉದಯು ಯು.
Published 17 ಜುಲೈ 2019, 19:30 IST
Last Updated 17 ಜುಲೈ 2019, 19:30 IST
ಇಂಟರ್‌ಸೆಪ್ಟರ್‌ 650
ಇಂಟರ್‌ಸೆಪ್ಟರ್‌ 650   

ರಾ ಯಲ್‌ ಎನ್‌ಫೀಲ್ಡ್‌ ಸಂಸ್ಥೆಯ ದ್ವಿಚಕ್ರ ವಾಹನಗಳನ್ನು ಖರೀದಿಸುವವರು ಸಹಜವಾಗಿಯೇ ಆ ಸಂಸ್ಥೆಯ ಬೈಕ್‌ ಕ್ಲಬ್‌ಗಳ ಸದಸ್ಯರಾಗುತ್ತಾರೆ. ಇಂಥ ನೂರಾರು ‘ಬುಲೆಟ್‌ ಕ್ಲಬ್‌’ಗಳು ದೇಶದಲ್ಲಿವೆ. ಯಾವುದಾದರೂ ವಿಶೇಷ ಸಂದರ್ಭದಲ್ಲಿ ಅಥವಾ ವಿಶೇಷ ಉದ್ದೇಶಕ್ಕಾಗಿ ಕ್ಲಬ್‌ ಸದಸ್ಯರೆಲ್ಲ ಒಟ್ಟಾಗಿ ಆಗಾಗ ಬೈಕ್‌ನಲ್ಲಿ ದೀರ್ಘ ಪ್ರಯಾಣ ಹಮ್ಮಿಕೊಳ್ಳುವುದು ಸಾಮಾನ್ಯವಾಗಿದೆ.

ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆಯು ದೇಶದ ಪ್ರಮುಖ ನಗರಗಳಲ್ಲಿ ಈಚೆಗೆ ಇಂಥ ವಿಶೇಷ ‘ರೈಡ್‌’ಗಳನ್ನು ಆಯೋಜಿಸಿತ್ತು. ಈ ರೈಡ್‌ಗೆ ಕಾರಣವೂ ಇತ್ತು. ಅದೆಂದರೆ ಸಂಸ್ಥೆಯ ‘ಇಂಟರ್‌ಸೆಪ್ಟರ್‌ 650’ ಬೈಕ್‌ಗೆ 2019ನೇ ಸಾಲಿನ ಭಾರತೀಯ ಅತ್ಯುತ್ತಮ ಬೈಕ್‌ (the Indian Motorcycle of the Year -IMOTY) ಪ್ರಶಸ್ತಿ ಬಂದಿರುವುದು.

ಈ ಪ್ರಶಸ್ತಿಯ ಸಂಭ್ರಮವನ್ನು ತಮ್ಮ ಗ್ರಾಹಕರ ಜೊತೆ ಹಂಚಿಕೊಳ್ಳಲು ಸಂಸ್ಥೆಯು ವಿವಿಧ ನಗರಗಳಲ್ಲಿ ವಿಶೇಷ ರೈಡ್‌ಗಳನ್ನು ಆಯೋಜಿಸಿತ್ತು. ಬೆಂಗಳೂರಿನಲ್ಲಿಯೂ ಈಚೆಗೆ ಇಂತಹ ರೈಡ್‌ ನಡೆದಿತ್ತು.

ADVERTISEMENT

ರಾಜ್ಯದಲ್ಲಿ ಸುಮಾರು 1,500 ಇಂಟರ್‌ಸೆಪ್ಟರ್‌ ಬೈಕ್‌ಗಳು ಮಾರಾಟವಾಗಿವೆ. ಅದರಲ್ಲಿ ಸುಮಾರು 300 ಬೈಕ್‌ಗಳ ಮಾಲೀಕರು ಬೆಂಗಳೂರಿನಿಂದ ರಾಮನಗರದವರೆಗೆ (ಸುಮಾರು 45 ಕಿ.ಮೀ.) ನಡೆದ ರೈಡ್‌ನಲ್ಲಿ ಪಾಲ್ಗೊಂಡಿದ್ದರು. ಮೈಸೂರಿನಿಂದಲೂ ಒಂದಷ್ಟು ಸವಾರರು ಬಂದು ರೈಡ್‌ನಲ್ಲಿ ಪಾಲ್ಗೊಂಡರು. ರಾಮನಗರದ ರೆಸಾರ್ಟ್‌ ಒಂದರ ಸುತ್ತ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸುಮಾರು 150 ಗಿಡಗಳನ್ನು ನೆಟ್ಟು ಎಲ್ಲರೂ ವಾಪಸಾದರು.

ಈ ವಿಶೇಷ ರೈಡ್‌ ಬಗ್ಗೆ ಮಾತನಾಡಿದ ಸಂಸ್ಥೆಯ ಸಿಬ್ಬಂದಿಯೊಬ್ಬರು, ‘ರಾಯಲ್‌ ಎನ್‌ಫೀಲ್ಡ್‌’ ಸಂಸ್ಥೆಯು ಗ್ರಾಹಕರನ್ನು ಕುಟುಂಬದ ಸದಸ್ಯರೆಂದು ಪರಿಗಣಿಸುತ್ತದೆ. ಅವರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಬಾಂಧವ್ಯ ಬೆಳೆಸಿಕೊಂಡಿರುತ್ತದೆ. ನಮ್ಮ ಸಂಸ್ಥೆಗೆ ಬಂದಿರುವ ಈ ಪ್ರಶಸ್ತಿಯು ಎಲ್ಲಾ ಗ್ರಾಹಕರಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಸಂಭ್ರಮದಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡಲು ರೈಡ್‌ ಆಯೋಜಿಸಿದ್ದೆವು’ ಎಂದರು.

ಏನಿದು ‘ಇಮೋಟಿ’ ಪ್ರಶಸ್ತಿ?

ಭಾರತದಲ್ಲಿ ದ್ವಿಚಕ್ರ ವಾಹನವೊಂದು ಪಡೆಯಬಹುದಾದ ಅತ್ಯುನ್ನತ ಪ್ರಶಸ್ತಿ ಎಂದು ಇದನ್ನು ಪರಿಗಣಿಸಲಾಗುತ್ತದೆ.

ದೇಶದ ಅಟೊಮೊಬೈಲ್‌ ಕ್ಷೇತ್ರದ ವಿವಿಧ ಪತ್ರಿಕೆಗಳ ಹಿರಿಯ ಪತ್ರಕರ್ತರು ಸೇರಿ 2007ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಭಾರತೀಯ ಹವಾಮಾನ ಮತ್ತು ಇಲ್ಲಿನ ರಸ್ತೆಗಳಿಗೆ ಹೊಂದಿಕೊಳ್ಳುವಿಕೆ, ಇಂಧನ ಕ್ಷಮತೆ, ಬೆಲೆ ಮುಂತಾದ ಅನೇಕ ಮಾನದಂಡಗಳನ್ನಿಟ್ಟುಕೊಂಡು ಸಂಸ್ಥೆ ಪ್ರತಿವರ್ಷ ಬಿಡುಗಡೆಯಾಗುವ ದ್ವಿಚಕ್ರ ವಾಹನಗಳಲ್ಲಿ ಒಂದು ವಾಹನಕ್ಕೆ ‘ವರ್ಷದ ಬೈಕ್‌’ ಪ್ರಶಸ್ತಿ ನೀಡುತ್ತದೆ. ಬಿಎಂಡಬ್ಲ್ಯು–ಜಿ310, ಹೀರೊ ಎಕ್ಸ್‌ಟ್ರೀಮ್‌–200, ಟಿವಿಎಸ್‌ ಅಪಾಚೆ ಆರ್‌ಆರ್‌–310 ಮುಂತಾದ ಅನೇಕ ಬೈಕ್‌ಗಳನ್ನು ಹಿಂದಿಕ್ಕಿ ಈ ಬಾರಿ ‘ಇಂಟರ್‌ಸೆಪ್ಟರ್‌ 650’ ‘ಇಮೋಟಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.