ADVERTISEMENT

ಏಥರ್‌ ಸ್ಕೂಟರ್‌ಗೆ ರಿಯಾಯ್ತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 12:00 IST
Last Updated 17 ಮೇ 2019, 12:00 IST
ವಿದ್ಯುತ್‌ ಚಾಲಿತ ಸ್ಕೂಟರ್‌
ವಿದ್ಯುತ್‌ ಚಾಲಿತ ಸ್ಕೂಟರ್‌   

ಹೀರೊ ಮೋಟೊಕಾರ್ಪ್‌ನ ಏಥರ್‌ ಎನರ್ಜಿ ಬಿಡುಗಡೆ ಮಾಡಿದ್ದ ಏಥರ್‌ 450 ವಿದ್ಯುತ್‌ ಚಾಲಿತ ಸ್ಕೂಟರ್‌ಗೆ ಫೇಮ್‌–2 ಯೋಜನೆಯಡಿ ರಿಯಾಯ್ತಿ ಸೌಲಭ್ಯ ದೊರೆತಿದೆ. ಪ್ರಸ್ತುತ ವಾಹನದ ಬೆಲೆ ₹1,23,230 ಇದ್ದು, ರಿಯಾಯ್ತಿ ಸೌಲಭ್ಯದಡಿ ₹ 27 ಸಾವಿರದವರೆಗೆ ಗ್ರಾಹಕರಿಗೆ ಉಳಿತಾಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಹಿಂದೆ ವಾಹನದ ಬೆಲೆ ₹1,28,230 ನಿಗದಿಪಡಿಸಲಾಗಿತ್ತು. ಫೇಮ್‌ –1 ಯೋಜನೆ ಅಡಿಯಲ್ಲಿ ₹22 ಸಾವಿರದವರೆಗೆ ರಿಯಾಯ್ತಿ ಸಿಗುತ್ತಿತ್ತು. ಏಪ್ರಿಲ್‌ನಿಂದಲೇ ಬೆಂಗಳೂರಿನಲ್ಲಿ ವಾಹನ ಮಾರಾಟ ನಡೆಯುತ್ತಿತ್ತು. ಹೀಗಾಗಿ ಸದ್ಯಕ್ಕೆ ವಾಹನವನ್ನು ಗ್ರಾಹಕರಿಗೆ ತಲುಪಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದೇವೆ. ರಿಯಾಯ್ತಿ ಕೊಡುಗೆಯ ಪ್ರಯೋಜನವು ಗ್ರಾಹಕರಿಗೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕಂಪನಿ ತಿಳಿಸಿದೆ.

ಜೂನ್‌ನಲ್ಲಿ ಚೆನ್ನೈನಲ್ಲಿ ಮೊದಲ ಚಾರ್ಜಿಂಗ್‌ ಘಟಕ ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಇತರೆ ನಗರಗಳಲ್ಲಿ ಘಟಕಗಳನ್ನು ಆರಂಭಿಸಲಾಗುವುದು. 2023ರೊಳಗೆ ದೇಶದ 30 ನಗರಗಳಲ್ಲಿ ಸುಮಾರು 6,500 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ.

ADVERTISEMENT

ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ, ಸುಧಾರಿತ ತಂತ್ರಜ್ಞಾನ ಮತ್ತು 2 ಕಿಲೊವಾಟ್ ಬ್ಯಾಟರಿ ಸಾಮರ್ಥ್ಯದ 10 ಲಕ್ಷ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಿಗೆ ₹20 ಸಾವಿರದವರೆಗೆ ರಿಯಾಯ್ತಿ ನೀಡಲು ಸರ್ಕಾರ ಫೇಮ್‌–2 ಯೋಜನೆ ರೂಪಿಸಿದೆ. ₹1.5ಲಕ್ಷದ ವರೆಗಿನ ಮೌಲ್ಯದ ವಾಹನಗಳಿಗೆ ಈ ರಿಯಾಯ್ತಿ ಸಿಗಲಿದೆ.ಒಮ್ಮೆ ಚಾರ್ಜ್‌ ಮಾಡಿದರೆ ಇದು 86 ಕಿ.ಮೀ ದೂರ ಕ್ರಮಿಸಲಿದೆ. ಪೂರ್ತಿ ಚಾರ್ಜ್‌ ಆಗಲು 4 ಗಂಟೆ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.