ADVERTISEMENT

ಹೊಸ ಕಾರು: ಏನೆಲ್ಲಾ ಬೇಕು..?

ವಿಜಯ್ ಜೋಷಿ
Published 20 ಡಿಸೆಂಬರ್ 2018, 4:30 IST
Last Updated 20 ಡಿಸೆಂಬರ್ 2018, 4:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಮೂವತ್ತು ಅಥವಾ ನಲವತ್ತು ವರ್ಷ ವಯಸ್ಸಿನ ಆಸುಪಾಸಿನಲ್ಲಿರುವಾಗ ಕಾರು ಕೊಳ್ಳುವ ಕನಸು ಹೊಂದಿರುತ್ತಾನೆ. ಕನಸು ನನಸಾಗಿಸಲು ಕೈಗೆಟಕುವ ದರದ, ಹ್ಯಾಚ್‌ಬ್ಯಾಕ್‌ ಕಾರು ಹುಡುಕುತ್ತಾನೆ’ ಎಂಬುದು ಇಂದಿನ ಮಟ್ಟಿಗೆ ಹಳೆಯ ಮಾತು. ಈಗ ಮಧ್ಯಮ ವರ್ಗದ ಮಕ್ಕಳೂ ಕೆಲಸ ಸಿಕ್ಕ ಒಂದೆರಡು ವರ್ಷಗಳಲ್ಲೇ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ.

ಮೊದಲ ಬಾರಿಗೆ ಕಾರು ಕೊಳ್ಳುವ ಯುವ ಸಮೂದ ಮೊದಲ ಆಯ್ಕೆ ಹ್ಯಾಚ್‌ಬ್ಯಾಕ್‌ ಕಾರುಗಳಾಗಿರುತ್ತವೆ. ಇದೇ ಕಾರಣಕ್ಕೋ ಏನೋ, ಮಾರುತಿ-ಸುಝುಕಿಯಿಂದ ಇತ್ತೀಚಿನ ಡಾಟ್ಸನ್‌, ರೆನೊವರೆಗಿನ ಕಂಪನಿಗಳು ಹ್ಯಾಚ್‌ಬ್ಯಾಕ್‌ ಮಾದರಿಯ ಕಾರುಗಳನ್ನೇ ಮಾರುಕಟ್ಟೆಗೆ ಇಳಿಸಿವೆ. ಪರಿಣಾಮವಾಗಿ, ದೇಸಿ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್‌ ಕಾರು ಖರೀದಿಗೆ ಮುಂದಾಗುವ ಗ್ರಾಹಕರ ಎದುರು ಹತ್ತೆಂಟು ಆಯ್ಕೆಗಳು ತೆರೆದುಕೊಂಡಿವೆ.

ಚೆಂದದ ಇಂಟೀರಿಯರ್‌ನ ಬಯಕೆ

ADVERTISEMENT

ಯುವಕರು ಕಾರು ಖರೀದಿಸುವ ವೇಳೆ, ಕಾರಿನ ಹೊರ ಮೈ ಅಂದ ನೋಡುತ್ತಾ, ಒಳ ವಿನ್ಯಾಸ (ಇಂಟೀರಿಯರ್‌ ಡಿಸೈನ್) ಚಂದದ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಸಂಬಳ ಹೆಚ್ಚಾಗಿ, ಹ್ಯಾಚ್‌ಬ್ಯಾಕ್ ಕಾರು ಖರೀದಿ ನಿರ್ಧಾರ ಮಾಡಿದ ಅಜಯ್, ಆರೇಳು ಲಕ್ಷದೊಳಗಿನ ಕಾರು ಖರೀದಿಗಾಗಿ ಚಿಂತನೆ ನಡೆಸಿದ್ದರು. ‘ನಾನು ಕಾರು ಹುಡುಕುವಾಗ ಎಂಜಿನ್‌ ಸಾಮರ್ಥ್ಯ, ಎಬಿಎಸ್‌, ಏರ್‌ಬ್ಯಾಗ್‌ ಸೇರಿದಂತೆ ಕಾರಿನಲ್ಲಿ ಅಳವಡಿಸಿರುವ ಸುರಕ್ಷತಾ ಸೌಲಭ್ಯಗಳು, ಕಾರಿನ ವಿನ್ಯಾಸವನ್ನು ಪರಿಶೀಲಿಸಿದ್ದೆ. ಹಾಗೆಯೇ ಅಷ್ಟೇ ಪ್ರಾಮುಖ್ಯವನ್ನು ಕಾರಿನ ಒಳ ವಿನ್ಯಾಸದದ ಬಗೆಗಗೂ ನೀಡಿದ್ದೆ’ ಎನ್ನುತ್ತಾರೆ ಅಜಯ್.

‘ಗೆಳೆಯರ ಜತೆ ಚರ್ಚಿಸಿ, ಟೆಸ್ಟ್‌ ಡ್ರೈವ್‌ ಮಾಡಿ, ಮೂರು ಕಾರುಗಳನ್ನು ಫೈನಲ್ ಮಾಡಿದ್ದೆ. ಆ ಮೂರೂ ಕಾರುಗಳ ಎಂಜಿನ್‌ ಸಾಮರ್ಥ್ಯ ಸರಿಸುಮಾರು ಒಂದೇ ಆಗಿತ್ತು. ಮೂರೂ ಕಾರುಗಳಲ್ಲೂ ತೃಪ್ತಿದಾಯಕ ಅನಿಸುವಷ್ಟು ಸುರಕ್ಷತಾ ಸೌಲಭ್ಯಗಳು ಇದ್ದವು. ಅದರಲ್ಲಿ ಒಂದು ಕಾರು ಆಯ್ಕೆ ಮಾಡಿಕೊಂಡೆ. ಆ ಕಾರಿನ ಒಳ ವಿನ್ಯಾಸ ನನಗೆ ತುಂಬಾ ಹಿಡಿಸಿತ್ತು. ಉಳಿದೆರಡು ಕಾರುಗಳ ಡ್ಯಾಶ್‌ಬೋರ್ಡ್‌ ವಿನ್ಯಾಸ ಮನಸ್ಸಿಗೆ ಹಿಡಿಸಲಿಲ್ಲ. ಅದೊಂದೇ ಕಾರಣಕ್ಕೆ ಆ ಎರಡು ಕಾರುಗಳನ್ನು ಕೈಬಿಟ್ಟೆ’ ಎಂದು ಅವರು ಹೇಳುತ್ತಾರೆ.

ಚೆಂದ ನೋಡುತ್ತ ಕೂರುವುದುಂಟೇ?!

ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಸಂದೇಶ್ ನಾಯಕ್ ಹೊಸ ಕಾರು ಖರೀದಿಸುವ ಮನಸ್ಸು ಮಾಡಿದ್ದಾರೆ. ಅವರು ಕಾರಿನ ಅಂದಚೆಂದದ ಜೊತೆಯಲ್ಲೇ ಒಳಾಂಗಣ ವಿನ್ಯಾಸ ಹಾಗೂ ಅಲ್ಲಿ ಲಭ್ಯವಿರುವ ಸೌಲಭ್ಯಗಳು ಏನು ಎಂಬುದನ್ನು ಗಮನಿಸಿಯೇ ಕಾರು ಖರೀದಿಸುವುದಾಗಿ ಹೇಳುತ್ತಾರೆ. ಏಕೆಂದರೆ ಕಾರು ಖರೀದಿಸಿದವ ಹೊರಗಿನ ವಿನ್ಯಾಸ ಮಾತ್ರ ನೋಡುತ್ತ ಕೂರುವುದು ಸಾಧ್ಯವಿಲ್ಲ, ಒಳಗೆ ಕುಳಿತಾಗ ಆತನಿಗೆ ಖುಷಿ ಅನಿಸಬೇಕಲ್ಲವೇ ಎನ್ನುವುದು ಅವರು ನೀಡುವ ಸಮಜಾಯಿಷಿ.

‘ಕಾರಿನ ಡ್ಯಾಶ್‌ಬೋರ್ಡ್‌ ವಿನ್ಯಾಸ ಚೆನ್ನಾಗಿರಲೇಬೇಕು. ಅದರಲ್ಲಿ ರಾಜಿ ಇಲ್ಲ. ಇನ್ಫೋಟೇನ್ಮೆಂಟ್‌ಗೆ ಸಂಬಂಧಿಸಿದ ಬಟನ್‌ಗಳೆಲ್ಲ ಸ್ಟಿಯರಿಂಗ್‌ ವೀಲ್‌ ಮೇಲೆ ಇರಬೇಕು ಎಂಬುದೇನೂ ಇಲ್ಲ. ಆದರೆ, ಡ್ಯಾಶ್‌ಬೋರ್ಡ್‌ ವಿನ್ಯಾಸ ಓಬೀರಾಯನ ಕಾಲದ್ದಾಗಿರಬಾರದು’ ಎಂದು ಅವರು ಹೇಳುತ್ತಾರೆ.

ಒಳಾಂಗಣ ವಿನ್ಯಾಸ ಎಂದ ತಕ್ಷಣ ಅದು ಕಾರಿನ ಡ್ಯಾಶ್‌ಬೋರ್ಡ್‌, ಸ್ಟಿಯರಿಂಗ್‌ ವೀಲ್‌ಗೆ ಮಾತ್ರ ಸೀಮಿತ ಅಲ್ಲ. ಹೊಸ ಕಾಲದ ಹುಡುಗರು ಕಾರಿನ ಹಿಂದಿನ ಸೀಟಿನಲ್ಲಿ ಕೂರುವವರಿಗೆ ಕೂಡ ಖುಷಿ ಸಿಗುವಂತಹ ಒಳಾಂಗಣ ವಿನ್ಯಾಸ ಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ‘ಹ್ಯಾಚ್‌ಬ್ಯಾಕ್‌ ಕಾರುಗಳು ಚಿಕ್ಕವೇ ಆಗಿದ್ದರೂ ಹಿಂದಿನ ಸೀಟುಗಳ ನಡುವೆ ಆರಾಮವಾಗಿ ಕೈ ಇರಿಸಿಕೊಳ್ಳುವ ವ್ಯವಸ್ಥೆ ಇದ್ದರೆ ಉತ್ತಮ. ಕಾಲು ಇರಿಸಿಕೊಳ್ಳಲು ಸಾಕಷ್ಟು ಜಾಗ ಇರಬೇಕು ಎಂಬುದರ ಜೊತೆಯಲ್ಲೇ, ಹಿಂದಿನವರಿಗೆ ಪ್ರತ್ಯೇಕವಾದ ಎ.ಸಿ. (ಹವಾನಿಯಂತ್ರಣ) ವ್ಯವಸ್ಥೆ ಬೇಕು’ ಎನ್ನುತ್ತಾರೆ ಸಂದೇಶ್.

ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಸೌಲಭ್ಯ

ಕೆಲವು ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಹಿಂದಿನ ಸೀಟುಗಳಿಗೆ ಹೆಡ್‌ರೆಸ್ಟ್‌ ಸೌಲಭ್ಯ ಇಲ್ಲ. ಈ ಸೌಲಭ್ಯ ಇಲ್ಲದಿರುವುದು ದೂರ ಪ್ರಯಾಣದ ವೇಳೆ ಹಿಂದೆ ಕುಳಿತುಕೊಳ್ಳುವವರಿಗೆ ಕತ್ತು ನೋವು ತರಲು ಸಾಕು. ಹಾಗಾಗಿ, ಆ ಸೌಲಭ್ಯ ಕೂಡ ಬೇಕು ಎಂದೂ ಹಲವರು ಬಯಸುತ್ತಿದ್ದಾರೆ. ಅದನ್ನು ಮನಗಂಡೇ, ಮೊದಲೆಲ್ಲ ಪ್ರೀಮಿಯಂ ವರ್ಗದ ಕಾರುಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಕೆಲವು ಸೌಲಭ್ಯಗಳನ್ನು ಈಗ ಕಾರು ತಯಾರಿಕಾ ಕಂಪನಿಗಳು ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿಯೂ ನೀಡುತ್ತಿವೆ.

ಅನನ್ಯಾ ಶಾಸ್ತ್ರಿ ಅವರು ಇನ್ನೊಂದೆರಡು ವರ್ಷಗಳಲ್ಲಿ ಹೊಸ ಕಾರು ಕೊಳ್ಳುವ ಬಯಕೆ ಹೊಂದಿದ್ದಾರೆ. ಅವರ ಮೊದಲ ಕಾರು ಹ್ಯಾಚ್‌ಬ್ಯಾಕ್‌ ಆಗಿರಲಿದೆಯಂತೆ. ‘ಏಕೆಂದರೆ, ಹ್ಯಾಚ್‌ಬ್ಯಾಕ್‌ ಕಾರುಗಳು ತುಸು ಕಡಿಮೆ ಬೆಲೆಗೆ ಸಿಗುತ್ತವೆ. ಸ್ಪೋರ್ಟಿ ಲುಕ್‌ ಇರುತ್ತದೆ’ ಎನ್ನುವ ಅನನ್ಯಾ, ‘ನಾನು ಕಾರಿನ ಹೊರಗಣ ಅಂದ-ಚೆಂದಕ್ಕಿಂತ ಹೆಚ್ಚಾಗಿ ಗಮನಿಸುವುದು ಒಳಾಂಗಣ ವಿನ್ಯಾಸವನ್ನು. ಕಾಲು ಇರಿಸಿಕೊಳ್ಳಲು ವಿಶಾಲ ಜಾಗ ಇರಬೇಕು. ಒಳ್ಳೆಯ ಎ.ಸಿ. ಇರಬೇಕು. ತಲೆನೋವು ತರಿಸುವಂತಹ ಎ.ಸಿ. ಇದ್ದರೆ ಅಂಥ ಕಾರು ಬೇಡವೇ ಬೇಡ. ಜತೆಯಲ್ಲಿ ಮ್ಯೂಸಿಕ್ ಸಿಸ್ಟಂ ಉತ್ತಮ ಗುಣಮಟ್ಟದ್ದಾಗಿರಬೇಕು’ ಎಂದು ಹೇಳುತ್ತಾರೆ.

ಕಾರಿನ ಎಂಜಿನ್‌ಗಿಂತ ಮ್ಯೂಸಿಕ್‌ ಸಿಸ್ಟಂಗೆ ಹೆಚ್ಚಿನ ಗಮನ ನೀಡುವಿರಾ ಎಂದು ಕೇಳಿದರೆ, ‘ಹಾಗೇನೂ ಇಲ್ಲ. ಆದರೆ, ಲಾಂಗ್ ಡ್ರೈವ್ ಹೋಗುವಾಗ, ಸಂಗೀತ ಆಲಿಸುತ್ತ ಡ್ರೈವ್‌ ಮಾಡುವುದು ಖುಷಿ ಕೊಡುತ್ತದೆ. ಹಾಗಾಗಿ, ಉತ್ತಮ ಮ್ಯೂಸಿಕ್‌ ಸಿಸ್ಟಂ ಕಾರಿನಲ್ಲೇ ಇದ್ದರೆ ಒಳ್ಳೆಯದು. ಕಾರು ಖರೀದಿಸಿದ ನಂತರ, ಬೇರೆ ಕಡೆ ಮ್ಯೂಸಿಕ್‌ ಸಿಸ್ಟಂ ಅಳವಡಿಸುವುದಕ್ಕಿಂತ, ಕಾರಿನ ಕಂಪನಿ ಕಡೆಯಿಂದಲೇ ಅದು ಬಂದರೆ ಚೆನ್ನ’ ಎಂದು ಉತ್ತರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.