ADVERTISEMENT

37 ವರ್ಷಗಳ ಹಿಂದೆ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಆಯ್ತು ರಶೀದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2023, 10:56 IST
Last Updated 3 ಜನವರಿ 2023, 10:56 IST
ಬುಲೆಟ್ ಬೈಕ್
ಬುಲೆಟ್ ಬೈಕ್   

ಬೆಂಗಳೂರು: ತನ್ನ ಗಟ್ಟಿತನ, ಗಜ ಗಾಂಭೀರ್ಯದ ನೋಟಕ್ಕೆ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ಹೆಸರಾಗಿರುವ ರಾಯಲ್ ಎನ್‌ಫೀಲ್ಡ್‌ ಕಂಪನಿಯ ಬೈಕುಗಳಿಗೆ ಭಾರತವೂ ಸೇರಿದಂತೆ ಜಗತ್ತಿನಲ್ಲಿ ಅಪಾರ ಅಭಿಮಾನಿಗಳು, ಬಳಕೆದಾರರು ಇದ್ದಾರೆ.

ಅದರಲ್ಲೂ ರಾಯಲ್‌ ಎನ್‌ಫೀಲ್ಡ್‌ನ (ಆರ್‌ಇ) ಬುಲೆಟ್ 350 ಕ್ಲಾಸಿಕ್ ಮಾಡೆಲ್ ಭಾರಿ ಜನಪ್ರಿಯ ಬೈಕ್ ಆಗಿದೆ. ಈ ಕಂಪನಿಯ ಬೈಕುಗಳು ಹೇಗೆ ಖ್ಯಾತಿಯಾಗಿವೆಯೋ ಹಾಗೇ ಇತ್ತೀಚೆಗೆ ಅದರ ಬೆಲೆಯೂ ಬೈಕ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ.

ಇತ್ತೀಚೆಗಂತೂ ವಿವಿಧ ಕಾರಣಗಳಿಂದ ‘ಆರ್‌ಇ’ ಬೈಕ್‌ ಬೆಲೆ (ಕ್ಲಾಸಿಕ್ 350 ಮಾಡೆಲ್) ಮೂರು ಲಕ್ಷ ರೂಪಾಯಿ ಸನಿಹದಲ್ಲಿದೆ. ಆದರೆ, ಕೆಲ ದಶಕಗಳ ಹಿಂದೆ ಈ ಪರಿ ಬೆಲೆ ಈ ಬೈಕ್‌ಗಳಿಗೆ ಇರಲಿಲ್ಲ. ಆರ್‌ಇ ಪ್ರೇಮಿಯೊಬ್ಬರು ಕಳೆದ 37 ವರ್ಷಗಳ ಹಿಂದೆ ಈ ಬೈಕ್ ಬೆಲೆ ಎಷ್ಟಿತ್ತು ಎಂಬುದರ ಡೀಲರ್ ರಶೀದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಹಲವರ ಗಮನ ಸೆಳೆದಿದೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ royalenfield_4567k ಎನ್ನುವ ಅಕೌಂಟ್ ಬಳಕೆದಾರರೊಬ್ಬರು 23-1-1986 ರಲ್ಲಿ ಕ್ಲಾಸಿಕ್ 350 ಮಾಡೆಲ್ ಖರೀದಿಯ ರಶೀದಿಯನ್ನು ಹಂಚಿಕೊಂಡಿದ್ದಾರೆ. ಆ ರಶೀದಿ ಪ್ರಕಾರ ಅಂದು ಈ ಬೈಕ್ ಬೆಲೆ ₹18,700 ಇತ್ತು. ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದಾರೆ. ಜಾರ್ಖಂಡ್‌ನ ಬೊಕಾರೊದಲ್ಲಿನ ಸಂದೀಪ್ ಆಟೋ ಕಂಪನಿ ಕಡೆಯಿಂದ ಈ ಬೈಕ್ ರಶೀದಿ ಡೆಲಿವರಿ ಆಗಿದೆ.

‍ಪ್ರಸ್ತುತ ಈ ಮಾದರಿಯ ಬೈಕ್‌ ಬೆಲೆ ಬೆಂಗಳೂರಿನಲ್ಲಿ ₹2.50 ಲಕ್ಷದಿಂದ ₹3 ಲಕ್ಷ ಸನಿಹ ಇದೆ. ಬ್ರಿಟಿಷ್ ಮೂಲದ ರಾಯಲ್‌ ಎನ್‌ಫೀಲ್ಡ್‌ ಕಂಪನಿ ಎನ್‌ಫೀಲ್ಡ್‌ ಮೋಟಾರ್ಸ್‌ ಹೆಸರಿನಲ್ಲಿ 68 ವರ್ಷಗಳ ಹಿಂದೆಯೇ ಭಾರತದಲ್ಲಿ ಸ್ಥಾಪಿತಗೊಂಡಿದೆ. ಈ ಕಂಪನಿ ಜಗತ್ತಿನ ಅತ್ಯಂತ ಹಳೆಯ ಮೋಟಾರ್ ಸೈಕಲ್ ಕಂಪನಿ ಎಂದು ಹೆಸರಾಗಿದೆ.

ಗಟ್ಟಿತನ, ಸೊಗಸಾದ ಚಾಲನೆ, ಆಫ್‌ರೋಡ್‌ನಲ್ಲೂ ಎದೆಗುಂದದೆ ಚಲಿಸುವ ಎನ್‌ಫೀಲ್ಡ್‌ ಬೈಕುಗಳು ಭಾರತೀಯ ಸೇನೆಯಲ್ಲೂ ಅನೇಕ ವರ್ಷದಿಂದ ಬಳಕೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.