ADVERTISEMENT

ಟಾಟಾ ನ್ಯಾನೊ: 2019ರಲ್ಲಿ ಶೂನ್ಯ ತಯಾರಿಕೆ, ಕೇವಲ 1 ಕಾರು ಮಾರಾಟ

ಏಜೆನ್ಸೀಸ್
Published 6 ಜನವರಿ 2020, 12:57 IST
Last Updated 6 ಜನವರಿ 2020, 12:57 IST
ಟಾಟಾ ನ್ಯಾನೊ ಕಾರು
ಟಾಟಾ ನ್ಯಾನೊ ಕಾರು   

ನವದೆಹಲಿ: ಆಟೊ ಮೊಬೈಲ್‌ ಕ್ಷೇತ್ರದಿಂದ ರತನ್‌ ಟಾಟಾ ಅವರ ಕನಸಿನ ಕಾರು 'ನ್ಯಾನೊ' ಅಧಿಕೃತವಾಗಿ ಇನ್ನೂ ಮರೆಗೆ ಸರಿಯದಿದ್ದರೂ 2019ರಲ್ಲಿ ಒಂದೂ ಕಾರು ತಯಾರಿಸಲಾಗಿಲ್ಲ.

2019ರ ಡಿಸೆಂಬರ್‌ನಲ್ಲಿ ಟಾಟಾ ಮೋಟಾರ್ಸ್‌ ಒಂದೂ ನ್ಯಾನೊ ಕಾರು ತಯಾರಿಸಿಲ್ಲ. 2018 ಡಿಸೆಂಬರ್‌ನಲ್ಲಿ 82 ನ್ಯಾನೊ ಕಾರು ತಯಾರಿಸಿದ್ದ ಕಂಪನಿ 88 ಕಾರುಗಳನ್ನು ಮಾರಾಟ ಮಾಡಿತ್ತು. 2019ರ ಯಾವುದೇ ತಿಂಗಳಲ್ಲೂ ನ್ಯಾನೊ ಕಾರು ತಯಾರಿಸಿಲ್ಲ ಹಾಗೂ ಫೆಬ್ರುವರಿಯಲ್ಲಿ ಮಾತ್ರ ಒಂದೇ ಒಂದು ಕಾರು ಮಾರಾಟ ಮಾಡಿದೆ.

ಪ್ರಸ್ತುತ ನ್ಯಾನೊ ಕಾರು ಬಿಎಸ್‌–6 ಗುಣಮಟ್ಟವನ್ನು ಹಾಗೂ ಸುರಕ್ಷತಾ ನಿಯಮಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ಟಾಟಾ ಮೋಟಾರ್ಸ್‌ ಒಪ್ಪಿಕೊಂಡಿದೆ. 2020ರ ಏಪ್ರಿಲ್‌ನಲ್ಲಿ ಅಧಿಕೃತವಾಗಿ ನ್ಯಾನೊ ತಯಾರಿಕೆ ನಿಲ್ಲಿಸುವ ಸುಳಿವುಗಳನ್ನು ಕಂಪನಿ ನೀಡಿದೆ.

ADVERTISEMENT

'ಜನರ ಕಾರು', '₹ 1 ಲಕ್ಷದ ಕಾರು',..ಎಂದೆಲ್ಲ ಕರೆಸಿಕೊಂಡ ನ್ಯಾನೊ 2008ರ ಜನವರಿಯಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತು. ಹಲವು ಅಡೆತಡೆಗಳ ನಡುವೆ 2009ರ ಮಾರ್ಚ್‌ನಲ್ಲಿ ನ್ಯಾನೊ ಬಿಡುಗಡೆಯಾಯಿತು. ಪಶ್ಚಿಮ ಬಂಗಾಳದ ಸಿಂಗೂರ್‌ ಬದಲು ಗುಜರಾತ್‌ನ ಸಾನಂದದಲ್ಲಿ ಟಾಟಾ 'ನ್ಯಾನೊ' ಉತ್ಪಾದನೆ ನಡೆಸಿತು. 10 ವರ್ಷಗಳಲ್ಲೇ ನ್ಯಾನೊ ಮಾರುಕಟ್ಟೆಯಿಂದ ದೂರ ಸರಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.