ADVERTISEMENT

ಟೆಸ್ಲಾದ 26 ಸಾವಿರ ಕಡತ ಕಳವು

ಏಜೆನ್ಸೀಸ್
Published 24 ಜನವರಿ 2021, 15:51 IST
Last Updated 24 ಜನವರಿ 2021, 15:51 IST
ಟೆಸ್ಲಾದ ಕಾರು–ಸಾಂದರ್ಭಿಕ ಚಿತ್ರ
ಟೆಸ್ಲಾದ ಕಾರು–ಸಾಂದರ್ಭಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ: ತನ್ನ ಮಾಜಿ ನೌಕರನೊಬ್ಬ ಕಂಪನಿಯ 26 ಸಾವಿರ ಗೋಪ್ಯ ಕಡತಗಳನ್ನು ಕದ್ದಿದ್ದಾನೆ ಎಂದುಟೆಸ್ಲಾ ಕಂಪನಿ ಆರೋಪಿಸಿದೆ. ಆ ಮಾಜಿ ನೌಕರ, ಕಂಪನಿಯಲ್ಲಿ ಕೆಲಸ ಆರಂಭಿಸಿದ ಮೊದಲ ವಾರದಲ್ಲಿಯೇ ಇಂತಹ ಕೆಲಸ ಮಾಡಿದ್ದಾನೆ ಎಂದಿದೆ. ಆತನ ವಿರುದ್ಧ ಕಂಪನಿ ದಾವೆ ಹೂಡಿದೆ.

ಅಲೆಕ್ಸ್ ಖಾಟಿಲೊವ್ ಎನ್ನುವ ಸಾಫ್ಟ್‌ವೇರ್‌ ಎಂಜಿನಿಯರ್‌ ತನಗೆ ಕೆಲಸ ಕೊಟ್ಟ ಮೂರನೆಯ ದಿನವೇ ‘ಸಹಸ್ರಾರು ಕಡತಗಳನ್ನು ಕದ್ದಿದ್ದಾನೆ’ ಎಂದು ಟೆಸ್ಲಾ ಕಂಪನಿಯು ಹೇಳಿದೆ. ಕಡತಗಳನ್ನು ಕದ್ದಿದ್ದಕ್ಕೆ ಸಾಕ್ಷಿಗಳನ್ನು ಆತ ನಾಶ ಮಾಡಲು ಯತ್ನಿಸುತ್ತಿದ್ದಾಗ ಟೆಸ್ಲಾ ಕಂಪನಿ ತಂಡವು ಆತನನ್ನು ಪ್ರಶ್ನೆಗೆ ಒಳಪಡಿಸಿದೆ. ಆಗ ಆತ, ‘ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ಒಂದೆರಡು ದಾಖಲೆಗಳನ್ನು ಮಾತ್ರ ನಾನು ವರ್ಗಾವಣೆ ಮಾಡಿಕೊಂಡಿದ್ದೇನೆ’ ಎಂದು ಉತ್ತರಿಸಿದ್ದ.

ಕಂಪನಿಯ ಕಡತಗಳು ಅಚಾತುರ್ಯದಿಂದಾಗಿ ತನ್ನ ‘ಡ್ರಾಪ್‌ಬಾಕ್ಸ್‌’ಗೆ ಬಂದುಬಿಟ್ಟವು ಎಂದು ಖಾಟಿಲೊವ್ ಹೇಳಿಕೆ ನೀಡಿದ್ದಾನೆ. ಈ ಕಡತಗಳನ್ನು ಸಿದ್ಧಪಡಿಸಲು ವರ್ಷಗಳೇ ಬೇಕಾಗಿದ್ದವು. ಅವು ಕಂಪನಿಯ ಮುಂದಿನ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಬಲ್ಲವು ಎಂದು ಟೆಸ್ಲಾ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.