ADVERTISEMENT

ಅಂಚೆ: ದರ್ಪಣ್‌ ಆ್ಯಪ್‌ಗೆ ಚಾಲನೆ

ಶೀಘ್ರವೇ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ

ಪಿಟಿಐ
Published 18 ಏಪ್ರಿಲ್ 2018, 19:51 IST
Last Updated 18 ಏಪ್ರಿಲ್ 2018, 19:51 IST
ಅಂಚೆ: ದರ್ಪಣ್‌ ಆ್ಯಪ್‌ಗೆ ಚಾಲನೆ
ಅಂಚೆ: ದರ್ಪಣ್‌ ಆ್ಯಪ್‌ಗೆ ಚಾಲನೆ   

ನವದೆಹಲಿ: ಅಂಚೆ ಇಲಾಖೆಯು ದೇಶದಾದ್ಯಂತ ಇರುವ ಎಲ್ಲ ಅಂಚೆ ಕಚೇರಿಗಳನ್ನು ಸದ್ಯದಲ್ಲೇ ಇಲಾಖೆಯ ಪೇಮೆಂಟ್ಸ್‌ ಬ್ಯಾಂಕ್‌ಗಳಿಗೆ ಜೋಡಿಸಲಿದೆ.

‘ಮುಂದಿನ 5 ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದ್ದು, ಇದರಿಂದ ದೇಶದಾದ್ಯಂತ ಪೂರ್ಣ ಪ್ರಮಾಣದ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ಒದಗಿಸಲು  ಸಾಧ್ಯವಾಗಲಿದೆ’ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ.

‘ಸದ್ಯಕ್ಕೆ ಎರಡು ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ಗಳು ಕಾರ್ಯಾರಂಭ ಮಾಡಿವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಒಟ್ಟು 650 ಪೇಮೆಂಟ್ಸ್‌ ಬ್ಯಾಂಕ್‌ಗಳಿಗೆ ಗ್ರಾಮೀಣ ಪ್ರದೇಶದಲ್ಲಿನ  ಅಂಚೆ ಕಚೇರಿಗಳ ಸಂಪರ್ಕ ಕಲ್ಪಿಸಲಾಗುವುದು. ಇದರಿಂದ 1.5 ಲಕ್ಷ ಹೊಸ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದಂತೆ ಆಗಲಿದೆ. ಇವೆಲ್ಲವೂ ದೊಡ್ಡ ವಾಣಿಜ್ಯ ಬ್ಯಾಂಕ್‌ಗಳಂತೆಯೇ ಕಾರ್ಯನಿರ್ವಹಿಸಲಿವೆ’ ಎಂದರು.

ADVERTISEMENT

ಅಂಚೆ ಇಲಾಖೆಯ ವಿಮೆ ಸೇವೆಯ ಮೊಬೈಲ್‌ ಕಿರುತಂತ್ರಾಂಶ ‘ದರ್ಪಣ್‌ ಪಿಎಲ್‌ಐ’ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಆ್ಯಪ್‌ ಮೂಲಕ ಗ್ರಾಮೀಣ ಪ್ರದೇಶದ ಜನರು ವಿಮೆ ಕಂತನ್ನು ಪಾವತಿಸಿ ತಕ್ಷಣಕ್ಕೆ ರಸೀದಿ ಪಡೆಯಬಹುದಾಗಿದೆ.

‘ಅಂಚೆ ಕಚೇರಿ ವಿಮೆ ಯೋಜನೆಯ ಕಂತು ಎಲ್‌ಐಸಿ ನೀಡುವ ವಿಮೆಗಿಂತ ಕಡಿಮೆ ಇದೆ. ವೃತ್ತಿನಿರತರಿಗಾಗಿ ಅಂಚೆ ಜೀವ ವಿಮೆ ಆರಂಭಿಸಲಾಗಿದೆ. ನಾಲ್ಕು ತಿಂಗಳಲ್ಲಿ  ವಿಮೆ ಸೇವೆಯ ವರಮಾನ ₹ 6 ಕೋಟಿಗಳಷ್ಟು ಹೆಚ್ಚಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.