ADVERTISEMENT

ಅಂತರ್ಜಾಲ ಸಮಾನತೆ: ಬೆಂಬಲಕ್ಕೆ ಮನವಿ

ಸ್ಟಾರ್ಟ್‌ಅಪ್‌ ಸ್ಥಾಪಕರಿಂದ ಪ್ರಧಾನಿ ಮೋದಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ಅಂತರ್ಜಾಲ ಸಮಾನತೆ: ಬೆಂಬಲಕ್ಕೆ ಮನವಿ
ಅಂತರ್ಜಾಲ ಸಮಾನತೆ: ಬೆಂಬಲಕ್ಕೆ ಮನವಿ   

ನವದೆಹಲಿ (ಪಿಟಿಐ): ಇಂಟರ್‌ನೆಟ್‌ನಲ್ಲಿ ಯಾವುದೇ ತಾರತಮ್ಯ ಇಲ್ಲದೆ ಮಾಹಿತಿ ಪಡೆಯಲು ಅವಕಾಶ ಒದಗಿಸುವ ‘ಅಂತರ್ಜಾಲ ಸಮಾನತೆ’ ತತ್ವವನ್ನು ಸಮರ್ಥಿಸಬೇಕು ಎಂದು ನೂರಾರು ಸ್ಟಾರ್ಟ್‌ಅಪ್‌ಗಳು  ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ.

ಕ್ಲಿಯರ್‌ಟ್ರಿಪ್‌, ಝೋಮಟೊ, ಪೇಟಿಎಂ ನಂತಹ ಬೃಹತ್‌ ಸಂಸ್ಥೆಗಳೂ ಸೇರಿದಂತೆ ಅನೇಕ ಸ್ಟಾರ್ಟ್‌ಅಪ್‌ ಸ್ಥಾಪಕರು ಪ್ರಧಾನಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಝೋಮಟಾ ಸ್ಥಾಪಕ ದೀಪಿಂದರ್‌  ಗೋಯಲ್‌, ಕ್ಲಿಯರ್‌ಟ್ರಿಪ್‌ನ ಎಚ್‌. ಭಟ್‌ ಮತ್ತು ಪೇಟಿಎಂನ ವಿಜಯ್‌ ಶೇಖರ್‌ ಶರ್ಮಾ ಸೇರಿದಂತೆ 681 ಸ್ಟಾರ್ಟ್‌ಅಪ್‌ಗಳ ಸ್ಥಾಪಕರು  ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ‘ಅಂತರ್ಜಾಲ ಸಮಾನತೆಗೆ ನಿಮ್ಮ ನಿರಂತರ ಬೆಂಬಲ ಕೋರಿ ನಾವು ಈ ಪತ್ರ ಬರೆಯುತ್ತಿದ್ದೇವೆ’ ಎಂದು ನವೋದ್ಯಮಿಗಳು ಪ್ರಧಾನಿಯ ಗಮನ ಸೆಳೆದಿದ್ದಾರೆ.

ಇಂಟರ್‌ನೆಟ್‌ನ ಮುಕ್ತ ನೀತಿಯು, ಪ್ರತಿಯೊಬ್ಬ ವ್ಯಕ್ತಿಯನ್ನು ಆತನ ಇಚ್ಛಾಶಕ್ತಿ ಮತ್ತು ಆಯ್ಕೆಗೆ ಅನುಗುಣವಾಗಿ ಸಂಶೋಧಕನನ್ನಾಗಿ ಮತ್ತು ಹೊಸ ಉದ್ಯಮದ ಸೃಷ್ಟಿಕರ್ತನನ್ನಾಗಿ ರೂಪಿಸಲು ನೆರವಾಗುತ್ತದೆ. ‘ಅಲಿಪ್ತ ಅಂತರ್ಜಾಲ’ ನೀತಿಯನ್ನು  ಉಲ್ಲಂಘಿಸುವುದರಿಂದ ನಮ್ಮ ಪ್ರತಿಭಾನ್ವಿತ ನವೋದ್ಯೋಮಿಗಳು  ತಾರತಮ್ಯರಹಿತವಾದ ಇಂಟರ್‌ನೆಟ್‌ ಸೌಲಭ್ಯ ಪಡೆಯುವುದನ್ನು ರ್ಬಂಧಿಸಿದಂತಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 ಭಾರತೀಯ ದೂರಸಂಪರ್ಕ ನಿಯಂತ್ರಣ  ಪ್ರಾಧಿಕಾರವು (ಟ್ರಾಯ್‌), ಬೆಲೆ ವ್ಯತ್ಯಾಸದ ಮಾಹಿತಿ ಸೇವೆಗಳ ಕುರಿತು  ತನ್ನ ನಿಲುವನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಿರುವುದರಿಂದ, ಸ್ಟಾರ್ಟ್‌ಅಪ್‌ ಸ್ಥಾಪಕರು ಪ್ರಧಾನಿಗೆ ಈ ಪತ್ರ ಬರೆದಿದ್ದಾರೆ. ಇಂಟರ್‌ನೆಟ್‌ ಸೌಲಭ್ಯವು ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿದೆ. ಸಂಪರ್ಕ ಜಾಲ ಒದಗಿಸುವ ಸಂಸ್ಥೆಗಳು ಎಲ್ಲ ಮಾಹಿತಿ, ಸೇವಾ ಸೌಲಭ್ಯಗಳನ್ನು ಯಾವುದೇ ತಾರತಮ್ಯ ಇಲ್ಲದೆ ಸಮಾನವಾಗಿ  ಕಾಣುವಂತಹ ವ್ಯವಸ್ಥೆಯೇ  ಅಲಿಪ್ತ ಅಂತರ್ಜಾಲ ನೀತಿಯಾಗಿದೆ ಎಂದು ನವೋದ್ಯೋಮಿಗಳು ವ್ಯಾಖ್ಯಾನಿಸಿದ್ದಾರೆ.

ದೂರಸಂಪರ್ಕ ಸೇವಾ ಸಂಸ್ಥೆಗಳು ನಿರ್ದಿಷ್ಟ ಆ್ಯಪ್‌, ಸೇವೆಗಳನ್ನು ಬೆಲೆ ಅಥವಾ ಗುಣಮಟ್ಟದ ಆಧಾರದ ಮೇಲೆ ಪ್ರತ್ಯೇಕವಾಗಿ ಒದಗಿಸುವ ವ್ಯವಸ್ಥೆಯೂ ಇದಲ್ಲ’ ಎಂದು ಅವರು ವಿವರಿಸಿದ್ದಾರೆ. ಮೊಬೈಲ್‌ ಸೇವಾ ಸಂಸ್ಥೆ  ಏರ್‌ಟೆಲ್‌, 2014ರಲ್ಲಿ  ಇಂಟರ್‌ನೆಟ್‌ ಆಧಾರಿತ ಕರೆಗಳಿಗೆ  ಪ್ರತ್ಯೇಕ ದರ ನಿಗದಿಪಡಿಸಿದಾಗ ಅಂತರ್ಜಾಲ ಸಮಾನತೆ ಚರ್ಚೆಗೆ ಚಾಲನೆ ಸಿಕ್ಕಿತ್ತು.  ಆದರೆ, ಈ ಯೋಜನೆಗೆ ದೇಶವ್ಯಾಪಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಏರ್‌ಟೆಲ್‌ ಈ ಯೋಜನೆಯನ್ನು ರದ್ದುಪಡಿಸಿತ್ತು.

ಪ್ರತ್ಯೇಕ ಸ್ಟಾರ್ಟ್‌ ಅಪ್‌ ನೀತಿ ಪ್ರಕಟಿಸಲು ರಾಜ್ಯಗಳ ಆಸಕ್ತಿ
ಕೇಂದ್ರ ಸರ್ಕಾರ ಪ್ರಕಟಿಸಿದ ಸ್ಟಾರ್ಟ್‌ಅಪ್‌ ಕ್ರಿಯಾ ಯೋಜನೆಯಿಂದ  ಸ್ಫೂರ್ತಿಗೊಂಡಿರುವ ಅನೇಕ ರಾಜ್ಯಗಳು  ತಮ್ಮದೇ ಆದ ಸ್ಟಾರ್ಟ್‌ಅಪ್‌ ನೀತಿ ಪ್ರಕಟಿಸಲು ಮುಂದಾಗಿವೆ. ಉತ್ಸಾಹಿ ಯುವ ಉದ್ಯಮಶೀಲರಿಗೆ ಅಗತ್ಯ ನೆರವು ನೀಡಲು ಉತ್ತರಪ್ರದೇಶ, ಛತ್ತೀಸಗಡ ಸೇರಿದಂತೆ ಅನೇಕ ರಾಜ್ಯಗಳು ಸ್ಟಾರ್ಟ್‌ಅಪ್‌ ನೀತಿ ಜಾರಿಗೆ ತರಲು ಆಸಕ್ತಿ ತಳೆದಿವೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಈಗಾಗಲೇ ಇಂತಹ ನೀತಿ ಜಾರಿಗೆ ತಂದಿವೆ. ರಾಜ್ಯಗಳ ಸ್ಟಾರ್ಟ್‌ಅಪ್‌ ನೀತಿಗಳು  ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಿದ್ದು, ಹೊಸ ಉದ್ಯೋಗ ಅವಕಾಶ ಸೃಷ್ಟಿಸಲಿವೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಜತೆ ಸೇರಿ ಕೆಲಸ ಮಾಡಲಿದೆ. ಕಚೇರಿ ಸ್ಥಾಪನೆ, ಯಂತ್ರೋಪಕರಣ ಅಳವಡಿಕೆ, ಸಂಶೋಧನಾ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಗತ್ಯ ನೆರವು ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT