ADVERTISEMENT

ಅಕ್ಕಿ ಗಿರಣಿ ಮುಷ್ಕರ ವಾಪಸ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಬೆಂಗಳೂರು: ಲೆವಿ ನೀತಿ ವಿರೋಧಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಸೋಮವಾರದಿಂದ ನಡೆಸುತ್ತಿದ್ದ ಮುಷ್ಕರವನ್ನು ವಾಪಸ್‌ ಪಡೆದಿದೆ. ಹೀಗಾಗಿ ಗುರುವಾರದಿಂದ ಗಿರಣಿಗಳು ಪುನರಾರಂಭವಾಗಲಿವೆ.

ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆಹಾರ  ಸಚಿವ ದಿನೇಶ್ ಗುಂಡೂರಾವ್‌, ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರು ಬುಧವಾರ ಇಲ್ಲಿ ಸಂಘದ ಅಧ್ಯಕ್ಷ ಡಿ.ಜಿ.ಶಾಂತನಗೌಡ ಮತ್ತು  ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಯಚಂದ್ರ, ವಾರ್ಷಿಕ ಐದು ಲಕ್ಷ ಟನ್‌ ಬದಲು 2.5 ಲಕ್ಷ ಟನ್‌ ಅಕ್ಕಿಯನ್ನು ಮಾತ್ರ ಲೆವಿ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಪ್ರಕಟಿಸಿದರು.

1.5 ಲಕ್ಷ ಟನ್‌ ಅಕ್ಕಿಯನ್ನು ಮಾರ್ಚ್‌ ಒಳಗೆ ಹಾಗೂ ಉಳಿದ ಒಂದು ಲಕ್ಷ ಟನ್‌ ಅಕ್ಕಿಯನ್ನು ಸೆಪ್ಟೆಂಬರ್‌ ಒಳಗೆ ನೀಡಬೇಕು. ಗಿರಣಿ ಮಾಲೀಕರು ಇದಕ್ಕೆ ಒಪ್ಪಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ಒಂದು ರೂಪಾಯಿಗೆ ನೀಡುವ ಅಕ್ಕಿಯನ್ನು ವಾಮಮಾರ್ಗದ ಮೂಲಕ ಖರೀದಿ ಮಾಡುವುದಿಲ್ಲ ಎಂದು ಗಿರಣಿ ಮಾಲೀಕರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕೆ.ಜಿ.ಗೆ 24 ರೂಪಾಯಿ ದರದಲ್ಲಿ ಗಿರಣಿಗಳಿಂದ ಅಕ್ಕಿ ಖರೀದಿ ಮಾಡಲಾಗುವುದು. ಇದಕ್ಕೆ ಮಾಲೀಕರು ಒಪ್ಪಿದ್ದಾರೆ ಎಂದರು. 90 ದಿನಗಳ ಕಾಲ ಭತ್ತದ ದಾಸ್ತಾನು ಇಟ್ಟುಕೊಳ್ಳಲು ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗು­ವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.