ADVERTISEMENT

ಅಕ್ರಮ ನಡೆದಿಲ್ಲ: ಧೂತ್‌

ವಿಡಿಯೊಕಾನ್‌ಗೆ ಸಾಲ ನೀಡಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ವೇಣುಗೋಪಾಲ್ ಧೂತ್‌
ವೇಣುಗೋಪಾಲ್ ಧೂತ್‌   

ಮುಂಬೈ / ನವದೆಹಲಿ : ‘ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೊಕಾನ್‌ಗೆ ₹3,250 ಕೋಟಿ ಸಾಲ ನೀಡಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ವಿಡಿಯೊಕಾನ್‌ ಸಮೂಹದ ಅಧ್ಯಕ್ಷ ವೇಣುಗೋಪಾಲ್ ಧೂತ್‌ ಹೇಳಿದ್ದಾರೆ.

‍ಪರಸ್ಪರ ನೆರವು ಪಡೆಯುವ ಉದ್ದೇಶದಿಂದ ವಿಡಿಯೊಕಾನ್‌ಗೆ ಸಾಲ ನೀಡಿಕೆಯಲ್ಲಿ ಕೊಚ್ಚರ್‌ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ವಿಡಿಯೊಕಾನ್‌ ಮತ್ತು ಚಂದಾ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಸೇರಿದ ಎನ್‌ಯುಪವರ್‌ ರಿನ್ಯೂವಬಲ್ಸ್‌ ಸಂಸ್ಥೆ ನಡುವಣ ಅನುಮಾನಾಸ್ಪದ ವಹಿವಾಟಿನ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣದ ಕುರಿತು ಮರಾಠಿಯ ‘ಎಬಿಪಿ ಮಾಝಾ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಧೂತ್ ನಿರಾಕರಿಸಿದ್ದಾರೆ.

ADVERTISEMENT

‘ಸಾಲ ಮಂಜೂರು ಮಾಡುವ ಸಮಿತಿಯಲ್ಲಿ ಇರುವ 12 ಸದಸ್ಯರೂ ನನಗೆ ಬಹಳ ಚೆನ್ನಾಗಿ ಗೊತ್ತಿದ್ದಾರೆ. ಅವರಲ್ಲಿ ಚಂದಾ ಕೊಚ್ಚರ್ ಅವರೂ ಒಬ್ಬರು. ಪರಿಚಯ ಅಥವಾ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದ ಮಾತ್ರಕ್ಕೆ ಅಕ್ರಮ ನಡೆಸಲು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವುದು ಸರಿಯಲ್ಲ’ ಎಂದು ಹೇಳುವಮೂಲಕ, ಸಾಲ ಮಂಜೂರಾತಿಯಲ್ಲಿ ಪರಸ್ಪರ ನೆರವಾಗಲು ಎರಡು ಸಂಸ್ಥೆಗಳು ಒಳ ಒಪ್ಪಂದಕ್ಕೆ ಬಂದಿರುವ ಅಥವಾ ಸಹಕರಿಸಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

‘ಸಾಲ ಮಂಜೂರು ಮಾಡಿರುವ ಪ್ರತಿಯೊಬ್ಬರನ್ನೂ ನಾನು ಚೆನ್ನಾಗಿ ಬಲ್ಲೆ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್‌ ಅವರೊಂದಿಗೆ ಊಟವನ್ನೂ ಮಾಡಿದ್ದೇನೆ. ನಮ್ಮ ಮಧ್ಯೆ ಉತ್ತಮ ಸ್ನೇಹವಿದೆ ಎಂದಾಕ್ಷಣ ನಾವು ಪರಸ್ಪರ ನೆರವಾಗಿದ್ದೇವೆ ಎಂದು ಹೇಳುವುದು ತಪ್ಪು.

‘ತೈಲ ಮತ್ತು ಅನಿಲ ವಲಯಕ್ಕೆ ಸಂಬಂಧಿಸಿದ ಯೋಜನೆಯ ಅರ್ಹತೆಯನ್ನು ಪರಿಗಣಿಸಿಯೇ ಸಾಲ ಮಂಜೂರು ಮಾಡಲಾಗಿದೆ. ಹೀಗಾಗಿ ಅಕ್ರಮ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದಾರೆ.
**
ಇಬ್ಬರು ವ್ಯಕ್ತಿಗಳ ನಡುವಣ ವೈಯಕ್ತಿಕ ಬಾಂಧವ್ಯವು ಯಾವಾಗಲೂ ಅಪರಾಧ ಕೃತ್ಯಕ್ಕೆ ದಾರಿ ಮಾಡಿಕೊಡುವುದಿಲ್ಲ.
–ವೇಣುಗೋಪಾಲ್ ಧೂತ್‌, ವಿಡಿಯೊಕಾನ್‌ ಸಮೂಹದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.