ADVERTISEMENT

ಅಡಿಕೆಯಲ್ಲಿ ಔಷಧೀಯ ಗುಣ ಸರ್ಕಾರಕ್ಕೆ ಮಧ್ಯಂತರ ವರದಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಅಡಿಕೆಯಲ್ಲಿ ಔಷಧೀಯ ಗುಣ  ಸರ್ಕಾರಕ್ಕೆ ಮಧ್ಯಂತರ ವರದಿ
ಅಡಿಕೆಯಲ್ಲಿ ಔಷಧೀಯ ಗುಣ ಸರ್ಕಾರಕ್ಕೆ ಮಧ್ಯಂತರ ವರದಿ   

ಮಂಗಳೂರು: ‘ಅಡಿಕೆಯ ಔಷಧಿಯ ಗುಣಗಳ ಕುರಿತು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು (ಸಿಪಿಸಿಆರ್‌ಐ) ತನ್ನ ಮಧ್ಯಂತರ ವರದಿಯನ್ನು ಇದೇ 5 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಅಡಿಕೆ ಕ್ಯಾನ್ಸರ್‌ಕಾರಕವಲ್ಲ. ಬದಲಿಗೆ ಅಡಿಕೆಯಿಂದ ಕ್ಯಾನ್ಸರ್ ಗುಣಪಡಿಸಬಹುದಾಗಿದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ. ಈ ವರದಿಯನ್ನು ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಹಾಗೂ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಲಾಗಿದೆ’ ಎಂದರು.

‘ಸಿಎಸ್‌ಐಆರ್‌, ಸಿಐಎಂಎಪಿ, ಸಿಎಫ್‌ಟಿಆರ್‌ಐ, ಸಿಸಿಎಂಬಿ ಮತ್ತು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಸಂಸ್ಥೆಗಳ ಜತೆಗೂಡಿ ಅಡಿಕೆಯ ಔಷಧೀಯ ಗುಣಗಳ ಕುರಿತು ಸಂಶೋಧನೆಗಾಗಿ ಫೆಬ್ರುವರಿಯಲ್ಲಿ ಸಿಪಿಸಿಆರ್‌ಐ ಅನ್ನು ನೋಡೆಲ್‌ ಏಜೆನ್ಸಿಯನ್ನಾಗಿ ಮಾಡಲಾಗಿತ್ತು. ಇದೀಗ ಸಿಪಿಸಿಆರ್‌ಐ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ’ ಎಂದು ಹೇಳಿದರು.

ADVERTISEMENT

‘ಅಡಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಇರುವ ದಾವೆಯನ್ನು ಸಂಶೋಧನೆಯ ಪೂರ್ಣ ಪ್ರಮಾಣದ ವರದಿ ಬರುವವರೆಗೆ ಮುಂದುವರಿಸಲು ಕೋರ್ಟ್‌ಗೆ ಮನವಿ ಮಾಡುವಂತೆ ಸಚಿವದ್ವಯರಿಗೆ ಮನವಿ ಮಾಡಲಾಗಿದೆ’ ಎಂದರು.

‘ಅಡಿಕೆ ಅನರ್ಘ್ಯ ಔಷಧೀಯ ಗುಣವನ್ನು ಹೊಂದಿದೆ. ಮನುಷ್ಯ ಮತ್ತು ಪ್ರಾಣಿಗಳ ಹಲವಾರು ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿ ಬಳಕೆ ಮಾಡಬಹುದಾಗಿದೆ.

‘1974 ರಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆಯು ಅಡಿಕೆ ಕ್ಯಾನ್ಸರ್‌ ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ವರದಿ ನೀಡಿದೆ. ಅಲ್ಲದೇ 2016 ರಲ್ಲಿ ಅಮೆರಿಕದ  ವಿಜ್ಞಾನಿಗಳ ತಂಡವೂ ಕ್ಯಾನ್ಸರ್‌ ನಿವಾರಣೆಗೆ ಅಡಿಕೆ ರಾಮಬಾಣ ಎಂದು ಅಭಿಪ್ರಾಯಪಟ್ಟಿದೆ’ ಎಂದು ಕರ್ನಾಟಕ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.