ADVERTISEMENT

ಅತ್ಯಾವಶ್ಯಕ ಹಾಗೂ ತುರ್ತು!

ಸತ್ಯೇಶ್ ಎನ್ ಬೆಳ್ಳೂರು
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST
ಅತ್ಯಾವಶ್ಯಕ ಹಾಗೂ ತುರ್ತು!
ಅತ್ಯಾವಶ್ಯಕ ಹಾಗೂ ತುರ್ತು!   

ಎರಡು ಕೋಣೆಗಳಲ್ಲಿ ನಿನ್ನೆಲ್ಲ ಕೆಲಸಗಳ /
ಹರಡಿ ಬಿಡು ನಿನ್ನದೇ ಮಾನ್ಯತೆಯ ಮೇರೆ //
ಜರಗಿಸಿರು ತುರ್ತಾದ ಕೆಲಸಗಳ ಮೊದಲಲ್ಲಿ /
ಹೊರೆ ಹಗುರವಾಗುವುದು
   - ನವ್ಯಜೀವಿ 

ನಮ್ಮ ಹಿಂದಿನವರಿಗೂ ಹಾಗೂ ನಮಗೂ ಒಂದು ಮೂಲಭೂತವಾದ ವ್ಯತ್ಯಾಸವುಂಟು. ಬದುಕಿನ ಎಲ್ಲ ಮಜಲುಗಳಲ್ಲಿ ಒಂದೆರಡು ಆಯ್ಕೆಗಳಷ್ಟೆ. ಒಂದನ್ನು ತಬ್ಬಿ ನಡೆಯುವಾಗ ಆಯ್ಕೆಯ ಮತ್ತೊಂದು ತಿರುವು ಅವರಿಗೆ ಒದಗುತ್ತಿದ್ದದ್ದು ಮತ್ತೆಂದೋ ಏನೊ.

ಉದಾಹರಣೆಗೆ ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಮನರಂಜನೆಗೆ ಇದ್ದದ್ದು ರೇಡಿಯೋ. ಅದರಲ್ಲಿ ಮೊಳಗುತ್ತ್ದ್ದಿದದ್ದು ಆಕಾಶವಾಣಿಯ ತರಂಗಗಳು ಮಾತ್ರ. ರೇಡಿಯೋ ಆನ್ ಮಾಡಿ ಆರಾಮ ಕುರ್ಚಿಯಲ್ಲಿ ಕಾಫಿ ಹೀರುತ್ತಾ ಪುಸ್ತಕವೊಂದರಲ್ಲಿ ಮುಖ ಹುದುಗಿಸಿ ಬಿಟ್ಟರೆ `ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುತ್ತಿದ್ದ~ ಸರ್ವಜ್ಞ.

ಹೀಗಾಗಿ ನಮ್ಮ ಹಿರಿಯರ ಬದುಕು ಅತ್ಯಂತ ಸರಳವಾಗಿತ್ತು. ಸ್ಪಷ್ಟವಾಗಿತ್ತು. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲೇ ಜೀವನದ ಎಲ್ಲ ಅದ್ಭುತಗಳನ್ನೂ ಮನಸಾರೆ ಸವಿದು ತೃಪ್ತರಾಗಿರುತ್ತಿದ್ದರು.

ನಮ್ಮ ಇಂದಿನ ಬದುಕನ್ನು ಒಮ್ಮೆ ಅವಲೋಕಿಸಿ ನೋಡಿ. ಗಳಿಗೆ ಗಳಿಗೆಗೆ ಅದೆಷ್ಟು ವಿಭಿನ್ನವಾದ ಕೆಲಸ ಕಾರ್ಯಗಳು. ಒಂದೇ ಕೆಲವನ್ನು ಮಾಡಲು ಅದೆಷ್ಟು ವಿಧ ವಿಧದ ಕವಲುಗಳು.

ಜೀವನದ ಪ್ರತಿಯೊಂದು ಮಜಲಿನಲ್ಲೂ ಆಯ್ಕೆ ಮಾಡಲು ಸಾಧ್ಯವಾಗದಿರುವಷ್ಟು ವೈವಿಧ್ಯಮಯವಾದ ಬೇಕು ಬೇಡಗಳು ಹೇಗೋ ಆಯ್ಕೆಯೊಂದನ್ನು ತಬ್ಬಿ ಮುಂದಡಿ ಇಟ್ಟಾಗ ಮರು ಅಡಿಗೆ ಮತ್ತೆ ಸಹಸ್ರ ಆಯ್ಕೆಗಳು.

ಕೆಲಸ ಮುಗಿಸಿ ಈಗ ಮನೆಗೆ ಬಂದರೆ ಮನರಂಜನೆಗೆಂದು ಈಗ ರೇಡಿಯೋ ಜತೆ ಟೇಪ್‌ರೆಕಾರ್ಡರ್, ಎಂಪಿತ್ರಿ, ವಿಸಿಆರ್, ಗಣಕ ಯಂತ್ರ ಹಾಗೂ ಅದರಲ್ಲಿನ ಎಲ್ಲೆ ಮೀರಿದ ಇಂಟರ್‌ನೆಟ್, ಟಿ.ವಿ. ಹೀಗೆ ನಕ್ಷತ್ರಗಳ ಎಣಿಕೆ ನಿರಂತರ. ಕಡೆಗೆ ಟಿ.ವಿ.ಯನ್ನು ಆಯ್ದು ಕೈಗೆ ರಿಮೋಟ್ ತೆಗೆದುಕೊಂಡರೆ ಅದರಲ್ಲಿ ನೂರಾರು ಕಾರ್ಯಕ್ರಮಗಳು.

ಗುಂಡಿಯೊಂದನ್ನು ಒತ್ತುವುದರಿಂದಲೇ ಆ ಕ್ಷಣದ ಜೀವನ ಕಪ್ಪೆಯ ಜಿಗಿತವಾಗಿ ಬಿಡುತ್ತದೆ.
ಟಿ.ವಿ.ಯ ಮುಂದೆ ಆರಾಮ ಕುರ್ಚಿಯಲ್ಲಿ ಕುಳಿತಾಗ ಕಾಫಿ, ಪುಸ್ತಕಗಳ ಮಾತಿರಲಿ, ಟಿ.ವಿ.ಯ ಕಾರ್ಯಕ್ರಮವನ್ನೂ ಸಂಪೂರ್ಣ ಆನಂದಿಸುವ ಸ್ಥಿತಿಯಲ್ಲಿ ಕೊಂಬೆಯಿಂದ ಕೊಂಬೆಗೆ ಹಾರುತ್ತಿರುವ ಕಪಿಯ ಮನಸ್ಸು ಸಿದ್ಧವಿರುವುದಿಲ್ಲ.
 
ನಮ್ಮ ನಡುವೆ ಈಗ ಸರ್ವಜ್ಞ ಇದ್ದಿದ್ದರೆ - `ಸ್ವರ್ಗಕ್ಕೆ ನಿಜಕ್ಕೂ ಕಿಚ್ಚು ಹಚ್ಚಿಬಿಡಿ. ನಿಮಗದು ದಕ್ಕುವುದಿಲ್ಲ!~ ಎಂದೆನ್ನುತ್ತಿದ್ದನೋ ಏನೊ. ಹಾಗಾಗಿ ನಮ್ಮ ಬದುಕು ಅತ್ಯಂತ ಗೊಂದಲಮಯವಾಗಿ ಬಿಟ್ಟಿದೆ. ದಿನದಲ್ಲಿರುವ ಅದೇ ಇಪ್ಪತ್ನಾಲ್ಕು ಗಂಟೆಗಳಲ್ಲಿ ಜೀವನದ ಯಾವುದೇ ಅದ್ಭುತವನ್ನು ಮನಸಾರೆ ಸವಿಯದೆ ಸದಾ ಅತೃಪ್ತರಾಗಿಯೇ ಇರುತ್ತೇವೆ.

ಕಂಪೆನಿಯಲ್ಲಿನ ಬದುಕು ಕೂಡ ಮನೆ ಮನೆಗಳ ಇದೇ ವಾತಾವರಣದ ತದ್ರೂಪು. ಇಲ್ಲಿ ಸಲ್ಲುವುದೆಲ್ಲ ಅಲ್ಲಿಯೂ ಸಲ್ಲುತ್ತದೆ. ನಿಮ್ಮದೇ ಕಂಪೆನಿಗಳಲ್ಲಿನ ನಿಮ್ಮ ಕಾರ್ಯ ವೈಖರಿಯನ್ನು ಒಮ್ಮೆ ಪರಾಮರ್ಶಿಸಿ ನೋಡಿ.

ನೀವು ತಂತ್ರಾಂಶ ತಜ್ಞರಾಗಿರಬಹುದು. ಬ್ಯಾಂಕೊಂದರಲ್ಲಿ ನೌಕರಿಯಲ್ಲಿರಬಹುದು. ಕಾಲೇಜಿನ ಅಧ್ಯಾಪಕರಾಗಿರಬಹುದು. ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯಾಗಿರಬಹುದು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ದೇಹದ ಭಾಗವೊಂದರ ವಿಶಿಷ್ಟ ಪರಿಣತರಾಗಿರಬಹುದು. ನಿಮ್ಮದೇ ಉದ್ಯಮದಲ್ಲಿರಬಹುದು.

`ಬದುಕುವುದನ್ನು ಕಲಿಯಿರಿ~ ಎಂದು ಪ್ರವಚನ ನೀಡುವ ಮಠಗಳ ಸ್ವಾಮಿಗಳಿಂದ ಹಿಡಿದು `ಬದುಕುವುದನ್ನು ಕಲಿಸುತ್ತೇವೆ~ ಎಂದು ವಚನ ಮಾಡುವ ರಾಜಕಾರಣದ ಆಸಾಮಿಗಳವರೆಗೆ ಎಲ್ಲರಿಗೂ ಎಲ್ಲ ಕಡೆಯೂ ಅದೇ ಬಿರುಸಿನ ಓಟ. ಅಡಿಗಡಿಗೂ ಸಹಸ್ರ ಆಯ್ಕೆಗಳು! ಎಲ್ಲರದ್ದೂ ಗೊಂದಲಮಯ ಜೀವನವೇ ಆಗಿರುವುದು ಆಧುನಿಕತೆಯ ಒಂದು ಕರಾಳ ಸತ್ಯ.

`ಹೀಗೂ ಉಂಟೆ~ ಎಂಬ ಹಿಂದಿನ ಅಂಕಣದಲ್ಲಿ ಶತಾವಧಾನಿಗಳಾದ ಡಾ. ಆರ್. ಗಣೇಶರ ವಿಶಿಷ್ಠತೆಯ ಬಗ್ಗೆ ಚರ್ಚಿಸುತ್ತ ಆಧುನಿಕ ಮ್ಯಾನೇಜರ್ ಒಬ್ಬ ಯಶಸ್ವಿಯಾಗಬೇಕಾದರೆ ಆತ ಮೊದಲಲ್ಲಿ ಹತ್ತಾರು ಕೆಲಸಗಳನ್ನು ಒಂದೇ ಉಸಿರಿನಲ್ಲಿ, ಒಂದೇ ಕಾಲದ ಮಿತಿಯಲ್ಲಿ ಮಾಡುವಂತವನಾಗಬೇಕು ಎಂದು ತಿಳಿಸಿದ್ದು ಇದೇ ಕಾರಣಕ್ಕಾಗಿ.
 
ಬಹುರೂಪಿಯಾಗಿ ಆತ ಹೊರಹೊಮ್ಮಿ ಬರಬೇಕಾದದ್ದು ಅವನದೇ ವ್ಯಕ್ತಿವಿಕಸನಕ್ಕೆ ಅವಶ್ಯಕ ಮಾತ್ರವಲ್ಲ ಅವನು ಬದುಕುಳಿಯುವುದಕ್ಕೆ ಅನಿವಾರ್ಯ ಕೂಡ. ಅವಶ್ಯಕತೆ  ಪೂರೈಸದ ಹೊರತು ತಿಳಿವಿಲ್ಲ. ಅನಿವಾರ್ಯತೆಯನ್ನು ನೀಗಿಸಿದ ಹೊರತು ಉಳಿವಿಲ್ಲ.

ಮುಂದಿರುವ ಹತ್ತಾರು ಕೆಲಸಗಳಿಗೆ ನೂರಾರು ಆಯ್ಕೆಗಳಿದ್ದಾಗ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರ. ಆದರೆ, ನಾವು ಈ ಸಂಕೀರ್ಣತೆಯನ್ನು ಕಂಡು ಹತಾಶರಾಗುವ ಬದಲು ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದೆಂಬ ಚಿಂತನೆ ನಡೆಸುವುದು ನಾವಿಡುವ ಮೊದಲು ಸಕಾರಾತ್ಮಕವಾದ ಹೆಜ್ಜೆಯೂ ಆದೀತು!

ಇದಕ್ಕೊಂದು ಉಪಾಯ ಮಾಡಿ. ನಿಮ್ಮ  ಮನಸ್ಸಿನಲ್ಲಿ ಎರಡು ಕೋಣೆಗಳನ್ನು ಮಾಡಿಕೊಳ್ಳಿ. ಒಂದರ ಹೆಸರನ್ನು `ಅತ್ಯಾವಶ್ಯಕ~ ಎಂದಿಟ್ಟುಕೊಳ್ಳಿ. ಇನ್ನೊಂದನ್ನು `ಅನಿವಾರ್ಯ~ ಎಂದೆನ್ನೋಣ. ಯಾವುದೇ ಕ್ಷಣದಲ್ಲಿ ನಿಮ್ಮ ಮುಂದಿರುವ ಎಲ್ಲ ಕೆಲಸಗಳನ್ನೂ ಈ ಎರಡು ಕೋಣೆಗಳಲ್ಲಿ ವಿಂಗಡಿಸಿಬಿಡಿ.
 
ಹಾಗೆ ಮಾಡುವ ಮುನ್ನ ಆ ಕೆಲಸಕ್ಕೆ `ತುರ್ತು~ ಅಥವಾ `ಆರಾಮ~ ಎಂಬ ಒಂದು ಲೇಬಲ್ ಹಚ್ಚಿ. ಅವಧಾನಿಗಳಂತೆ ಕುಳಿತಿರುವ ನಿಮ್ಮ ಮುಂದೆ ಈಗ ಆ ಹತ್ತಾರು ಕೆಲಸಗಳೆಲ್ಲ ಕೇವಲ ನಾಲ್ಕು ವಿಧಗಳಷ್ಟೆ!
 
ಅತ್ಯಾವಶ್ಯಕ - ತುರ್ತು, ಅನಿವಾರ್ಯ - ತುರ್ತು, ಅತ್ಯಾವಶ್ಯಕ - ಆರಾಮ ಹಾಗೂ ಅನಿವಾರ್ಯ - ಆರಾಮ. ಇದೇ ಕ್ರಮದಲ್ಲಿ ನಿಮ್ಮೆಲ್ಲ ಕೆಲಸಗಳನ್ನು ಮಾಡಿಕೊಂಡು ಬನ್ನಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಬಹುರೂಪಿಯಾಗುವುದು ಅಷ್ಟೇನೂ ಕಷ್ಟವಾಗುವುದಿಲ್ಲ.

ಉದಾಹರಣೆಗೆ ನಿಮ್ಮ ಪ್ರವಾಸದ ವೆಚ್ಚದ ವಿವರಣಾ ಪಟ್ಟಿಯನ್ನು ತಯಾರು ಮಾಡುತ್ತಿದ್ದೀರಿ. ಅದು ಅನಿವಾರ್ಯವಾದರೂ ಆರಾಮದ ಗುಂಪಿಗೆ ಸೇರಿದ್ದು. ಅಷ್ಟರಲ್ಲಿ ನಿಮ್ಮ ಗುಂಪಿನ ಸಹೋದ್ಯೋಗಿಗೆ ನೀವು ನೀಡಬೇಕಾದ ತರಬೇತಿಯ ನೆನಪಾಗುತ್ತದೆ. ಇದು ಅತ್ಯಾವಶ್ಯಕವಾದರೂ ಆರಾಮದ ಕೆಲಸವೇ ಹೌದು.
 
ಈಗಿರುವ ಈ ಎರಡು ಕೆಲಸಗಳಲ್ಲಿ ಮಾಡುತ್ತಿರುವ ಮೊದಲನೆಯ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಎರಡನೆಯ ಕೆಲಸವನ್ನು ಶುರು ಮಾಡಿಕೊಳ್ಳಿ. ನಿಮ್ಮ ಬಾಸ್ ಈಗ ನಿಮ್ಮಿಂದ ಆ ದಿನದ ವ್ಯಾಪಾರದ ಸೇಲ್ಸ್ ರಿಪೋರ್ಟ್ ಬಯಸಿದ್ದಾರೆ. ಇದು ಅನಿವಾರ್ಯ ಹಾಗೂ ತುರ್ತಿನದ್ದು.

ಏಕೆಂದರೆ ನಿಮ್ಮ ರಿಪೋರ್ಟಿನ ಆಧಾರದ ಮೇಲೆ ನಿಮ್ಮ ಬಾಸ್‌ಗೆ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಆದ್ದರಿಂದ ನಿಮ್ಮ ಸಹೋದ್ಯೋಗಿಗೆ ನೀಡುತ್ತಿರುವ ತರಬೇತಿಗೆ ಸ್ವಲ್ಪ ಬ್ರೇಕ್ ಹಾಕಿ ನಿಮ್ಮ ಬಾಸ್‌ನ ಕೆಲಸವನ್ನು ಪೂರೈಸಿ.

ಆದರೆ, ಬೋರ್ಡ್‌ರೂಮಿನ ಸುತ್ತಮುತ್ತ ಸಮಸ್ಯೆ ಅಷ್ಟು ಸುಲಭದಲ್ಲ. ನೀವು ಈ ರಿಪೋರ್ಟ್ ಬರೆಯುವಾಗಲೇ ನಿಮ್ಮ ನೆಚ್ಚಿನ ಗ್ರಾಹಕ ಕರೆ ಮಾಡುತ್ತಾನೆ. ಅವರು ಕೊಳ್ಳಲಿರುವ ವಸ್ತುಗಳಿಗೆ ಜರೂರಿಯಾಗಿ ಪ್ರಸ್ತುತ ಬೆಲೆಗಳ ಪಟ್ಟಿಯನ್ನು ಕಳುಹಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಇದು ಅತ್ಯಾವಶ್ಯಕ ಹಾಗೂ ತುರ್ತಿನ ಕೆಲಸ.
 
ನಿಮ್ಮೆಲ್ಲ ಇತರೆ ಕೆಲಸಗಳನ್ನು ಅಲ್ಲೇ ಬಿಟ್ಟು ಇದನ್ನು ಮೊದಲು ಪೂರೈಸಿ. ನಂತರ ಬಾಸ್‌ನ ರಿಪೋರ್ಟಿಗೆ ಮತ್ತೆ ಬನ್ನಿ. ಅದಾದ ನಂತರ ಇನ್ನುಳಿದವುಗಳದು.ಹೀಗೆ ಮಾಡುವುದರಿಂದ ನಿಮ್ಮ ಬಾಸ್‌ನ ಕೋಪಕ್ಕೆ ತುತ್ತಾಗಬಹುದೆಂದೋ ಅಥವಾ ನಿಮ್ಮ ಸಹೋದ್ಯೋಗಿಯ ಅತೃಪ್ತಿಗೆ ಕಾರಣವಾಗಬಹುದೆಂದೋ ಚಿಂತಿಸಬೇಡಿ. ಅವರಿಬ್ಬರಿಗೂ ನೀವು ಮಾಡುತ್ತಿರುವ ಕೆಲಸದ ನಿಜ ಮಹತ್ವವನ್ನು ಸರಿಯಾಗಿ ತಿಳಿಹೇಳಿದರೆ, ಬಹುತೇಕ ಅನೇಕ ಸಮಯಗಳಲ್ಲಿ ಎಲ್ಲೂ ಯಾವುದೇ ಘರ್ಷಣೆಗಳಿಗೆ ಅವಕಾಶವಿರುವುದಿಲ್ಲ.

ನಿಮ್ಮ ಎಲ್ಲ ಕೆಲಸಗಳನ್ನೂ ಎರಡು ಕೋಣೆಗಳಲ್ಲಿಟ್ಟು, ನಿಮಗೆ ಸರಿ ಎನ್ನಿಸಿದ ಲೇಬಲ್ ಹಚ್ಚಿ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿದರೆ, ನಿಮ್ಮ ಕೆಲಸ ಹೂವನ್ನು ಎತ್ತುವಷ್ಟು ಹಗುರವಾಗದಿದ್ದರೂ ಹೊರೆಯಷ್ಟು ಭಾರವಾಗಲಾರದೆಂಬ ಧೈರ್ಯವನ್ನಂತೂ ನಾನಿಲ್ಲಿ ನೀಡಬಲ್ಲೆ.

ಕ್ರಮಬದ್ಧವಾದ ಈ ದಿಸೆಯಲ್ಲಿ ಕೆಲಸ ಮಾಡುವಾಗಲೂ ನಮ್ಮೆಲ್ಲರ ಒಂದು ವೈಯಕ್ತಿಕ ಗುಣ ಇದರ ಅನುಷ್ಠಾನದಲ್ಲಿ ಅಡ್ಡಿಯಾಗುತ್ತದೆ. ಬಹುತೇಕ ಎಲ್ಲರಲ್ಲೂ ಒಂದು ಪ್ರಮಾಣದಲ್ಲಿ ಮನೆ ಮಾಡಿರುವ `ವಿಳಂಬ ನೀತಿ~ ಎಂಬ ಅವಗುಣವೇ ಅದು. ಅದರ ಜೊತೆಗೆ `ಆಲಸ್ಯ~ವೂ ಸೇರಿಬಿಟ್ಟರೆ ಆತ ಎರಡಲ್ಲ, ನಾಲ್ಕಾರು ಕೋಣೆಗಳನ್ನು ಮಾಡಿಕೊಂಡರೂ ತನ್ನ ಯಾವುದೇ ಕೆಲಸವನ್ನೂ ಸರಿಯಾಗಿ ಪೂರ್ಣಗೊಳಿಸಲಾರ.

ವಿಲೇವಾರಿ ಮಾಡಿದ ಫೈಲುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತ ಆಫೀಸಿಗೆ ಅವನನ್ನು ಕಾಣಲು ಬಂದವರಿಗೆ ಫೈಲುಗಳ ಹಿಂದೆ ಅವಿತಿರುವ ಅವನ ಮುಖ ಕಾಣದಂತಾಗುತ್ತದೆ! ಸಂಖ್ಯೆಯಲ್ಲಿ ಬೆಳೆಯುತ್ತಿರುವ ಮುಗಿಸದ ಅವನ ಕೆಲಸ ಕಾರ್ಯಗಳನ್ನು ಅವನ ರಕ್ತದೊತ್ತಡವನ್ನೂ ಹೆಚ್ಚಿಸುತ್ತದೆ. ಅಂದೇ ಅವನ ಅವನತಿಯ ಶುರುವಾತು!

ಆದ್ದರಿಂದ ಮುಂದಿರುವ ಕೆಲಸಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ, ಅವುಗಳ ಮಾನ್ಯತೆಯ ಮೇರೆಗೆ ಅವುಗಳನ್ನು ಪೂರೈಸುತ್ತ, ಯಾವುದೇ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಹಿಡಿದ ಕೆಲಸವನ್ನು ಮುಂದೂಡುತ್ತ, ವಿಳಂಬ ಮಾಡುತ್ತ ಆಲಸ್ಯದ ಮಡುವಿನಲ್ಲಿ ಬೀಳದಿರುವುದೇ ಒಳಿತು. ಆಗ ಕಂಪೆನಿಯ ಕೆಲಸಗಳೆಲ್ಲ ಸರಾಗವಾಗುತ್ತದೆ.

ಇದು ಬರಿಯ ಕಂಪೆನಿಯೊಂದರ ಮಾತಲ್ಲ. ನಮ್ಮ ಮನೆಮನೆಗಳಲ್ಲೂ ಇದರದೇ ಪುನರಾವರ್ತಿ. ನಮ್ಮ ವೈಯಕ್ತಿಕ ಬದುಕಿನ ಪ್ರತಿ ಹಂತದಲ್ಲಿ ಸಹಸ್ರ ಆಯ್ಕೆಗಳು. ನಮ್ಮ ಎದುರಿಗಿದ್ದರೂ ಅವುಗಳನ್ನು ನಿಮ್ಮದೇ ಮಾನ್ಯತೆಯ ಪರಿಭಾಷೆಯಲ್ಲಿ ಸೂಕ್ತವಾಗಿ ವಿಂಗಡಿಸುತ್ತ, ಕ್ರಮಬದ್ಧವಾಗಿ ಅವುಗಳ ಪಾಲನೆಯಲ್ಲಿ ತೊಡಗಿಕೊಂಡರೆ ಅವೆಲ್ಲದರ ಅನುಷ್ಠಾನದಲ್ಲಿ ನಿಮಗೆ ಆನಂದ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.

ನಮ್ಮ ಜೀವನ ನಮ್ಮ ಹಿರಿಯರಷ್ಟು ಸರಳವಾಗದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಗೊಂದಲಮಯವಾಗಿ ಸಂಕೀರ್ಣತೆಯ ಶಿಖರದಲ್ಲಿರುವ ನಮ್ಮ ಜೀವನ ಶೈಲಿಯಲ್ಲಿ ನಾವು ಯಶಸ್ಸು ಕಾಣಬೇಕಿದ್ದರೆ, ಈ ಅಂಕಣದಲ್ಲಿ ಉದಹರಿಸಿರುವ ಶಿಸ್ತು ಹಾಗೂ ಕ್ರಮವನ್ನು ಪಾಲಿಸದೆ ಅನ್ಯ ಮಾರ್ಗವೇ ಇಲ್ಲ. ಅದು ಎಲ್ಲ ರೀತಿಯಲ್ಲೂ `ಅತ್ಯಾವಶ್ಯಕ ಹಾಗೂ ತುರ್ತು!~ 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.