ನವದೆಹಲಿ (ಪಿಟಿಐ): ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸಿರುವುದು ದೃಢಪಟ್ಟರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತ ಮಾಡಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.
ಇಂತಹ ಚಂದಾದಾರರ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಎರಡು ವರ್ಷಗಳ ಕಾಲ ಇವರಿಗೆ ಎಲ್ಲ ರೀತಿಯ ದೂರವಾಣಿ ಸೇವಾ ಸೌಲಭ್ಯ ನಿರ್ಬಂಧಿಸಲಾಗುವುದು ಎಂದೂ `ಟ್ರಾಯ್' ಪ್ರಕಟಣೆ ತಿಳಿಸಿದೆ.
ದೂರವಾಣಿ ವಾಣಿಜ್ಯ ಸಂವಹನ ಗ್ರಾಹಕ ಆದ್ಯತಾ ನಿಯಮ ತಿದ್ದುಪಡಿ ಅನ್ವಯ ದೂರವಾಣಿ ಸೇವಾ ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ. ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸುವ ಚಂದಾದಾರರ ವಿರುದ್ಧ ಸೂಕ್ತ ದೂರು ದಾಖಲಾದರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತಗೊಳಿಸಿ, ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಕೆಲವು ಟೆಲಿಮಾರುಕಟ್ಟೆ ಕಂಪೆನಿಗಳು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಅನಪೇಕ್ಷಿತ ಕರೆ, ಸಂದೇಶ ಕಳುಹಿಸುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು `ಟ್ರಾಯ್' ಸದಸ್ಯ ಆರ್.ಕೆ ಅರ್ನಾಲ್ಡ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವ್ಯವಹಾರ ಉದ್ದೇಶದ `ಎಸ್‌ಎಂಎಸ್'ಗಳಿಗೆ ಜೂನ್ 1ರಿಂದ 5 ಪೈಸೆ ಶುಲ್ಕ ಅನ್ವಯವಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.