ADVERTISEMENT

ಅನಿಲ ಕೊಳವೆ ಮಾರ್ಗ ಲೋಕಾರ್ಪಣೆ

ದಾಭೋಲ್‌–ಬೆಂಗಳೂರು ನಡುವೆ 1000 ಕಿ.ಮೀ ಉದ್ದ; ರೂ 4500 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ನವದೆಹಲಿ: ರಾಷ್ಟೀಯ ಅನಿಲ ಪೂರೈಕೆ ಜಾಲಕ್ಕೆ ದಕ್ಷಿಣ ಭಾರತವನ್ನು ಇದೇ ಮೊದಲ ಬಾರಿ ಜೋಡಿಸುವ 1,000 ಕಿ.ಮೀ ಉದ್ದದ ‘ದಾಭೋಲ್‌, ಬೆಂಗ ಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ’ವನ್ನು ಪ್ರಧಾನಿ ಮನಮೋ­ಹನ್‌ ಸಿಂಗ್‌ ಅವರು ಮಂಗಳವಾರ ಇಲ್ಲಿ ಲೋಕಾರ್ಪಣೆ ಮಾಡಿದರು.

₨4500 ಕೋಟಿ ವೆಚ್ಚದ ಈ ಯೋಜನೆಯ ಕಾಮಗಾರಿ  ವರ್ಷಾರಂಭದಲ್ಲಿಯೇ ಪೂರ್ಣಗೊಂಡಿತ್ತು.
ಮಹಾರಾಷ್ಟ್ರದ ದಾಭೋಲ್‌ನಲ್ಲಿ ಆರಂಭಗೊಳ್ಳುವ ಈ ಕೊಳವೆ ಮಾರ್ಗ,  ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹಾದು ಬಂದಿದೆ. 18 ರಾಷ್ಟ್ರೀಯ ಹೆದ್ದಾರಿಗಳು, 382 ಪ್ರಮುಖ ರಸ್ತೆಗಳು, 20 ಕಡೆ ರೈಲ್ವೆ ಹಳಿಗಳು, ಘಟಪ್ರಭಾ ಸೇರಿದಂತೆ 11  ಮುಖ್ಯ ನದಿಗಳು ಮತ್ತು 276 ಕೆರೆಗಳನ್ನು ಕೊಳವೆ ಮಾರ್ಗ ದಾಟಿ ಬಂದಿದೆ.

ನಂತರ ಮಾತನಾಡಿದ ಪ್ರಧಾನಿ, ಸದ್ಯ ಭಾರತ ವಿಶ್ವದಲ್ಲಿ ಅತಿಹೆಚ್ಚು ಇಂಧನ ಉತ್ಪಾದಿಸುವ ದೇಶಗಳ ಸಾಲಿನಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ, ಇಂದನ ಬಳಕೆ ವಿಚಾರದಲ್ಲಿ ಮಾತ್ರ ವಿಶ್ವದಲ್ಲೇ ನಾಲ್ಕನೇ ದೊಡ್ಡ ಬಳಕೆದಾರ ದೇಶ ಎನಿಸಿಕೊಂಡಿದೆ. ಹಾಗಾಗಿ, ಮುಂದಿನ ಎರಡು ದಶಕಗಳಲ್ಲಿ ದೇಶ ಇಂಧನ ಪೂರೈಕೆ ಸಾಮರ್ಥ್ಯವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹೊಸ ಇಂಧನ ಸಂಪನ್ಮೂಲಗಳನ್ನು ಪತ್ತೆ ಹಚ್ಚುವವರನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಸ್ಥಿರವಾದ ಹಾಗೂ ಪ್ರೋತ್ಸಾಹದಾಯಕವಾದ ನೀತಿ ರೂಪಿಸಲಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವವರಿಗೆ ಅಗತ್ಯ ನೆರವನ್ನೂ ಸರ್ಕಾರ ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ, ದೇಶದಲ್ಲಿ ಸದ್ಯ 15 ಸಾವಿರ ಕಿ.ಮೀ.ಗಳಷ್ಟು ಉದ್ದ ಅನಿಲ ಕೊಳವೆ ಮಾರ್ಗವಿದೆ. ಇದನ್ನು ಒಂದು ದಶಕದೊಳಗೆ ದುಪ್ಪಟ್ಟುಗೊಳಿಸಬೇಕಾದ ಅಗತ್ಯವಿದೆ. ಆ ಮೂಲಕ ರಾಷ್ಟ್ರೀಯ ಅನಿಲ ಸರಬರಾಜು ಜಾಲವನ್ನು ಹೆಚ್ಚು ಸಮರ್ಥಗೊಳಿಸಿ ದೇಶದ ಮೂಲೆ ಮೂಲೆಗೂ ಪರಿಸರ ಸ್ನೇಹಿ ಇಂಧನ ತಲುಪುವಂತೆ ಮಾಡಬೇಕಿದೆ ಎಂದು ಹೇಳಿದರು.

ವಿಶ್ವದ ಐದು ಅತಿ ಹೆಚ್ಚು ಇಂಧನ ಬಳೆಕದಾರ ದೇಶಗಳ ಪಟ್ಟಿಯಲ್ಲಿರುವ ಭಾರತ, ಚೀನಾ, ಜಪಾನ್‌ ಮತ್ತು ಕೊರಿಯಾ ಮೈತ್ರಿ ಸಾಧಿಸಿಕೊಂಡು ಕಡಿಮೆ ಬೆಲೆಗೆ ನೈಸರ್ಗಿಕ ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಕೊಲ್ಲಿ ದೇಶಗಳಿಂದ ಅಥವಾ ಬೇರಾವುದಾದರೂ ಮೂಲದಿಂದ ಪಡೆಯಲು ಪ್ರಯತ್ನಿಸಬೇಕಿದೆ ಎಂಬ ಸಲಹೆಯನ್ನೂ ಮೊಯ್ಲಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.