ADVERTISEMENT

ಅನುದಾನ: ಬಿಜೆಪಿ ಸರ್ಕಾರ ವಿರುದ್ಧ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST
ಮೈಸೂರಲ್ಲಿ ಭಾನುವಾರ ಕನ್ನಡ ರಂಗಭೂಮಿಯ ಮುನ್ನೋಟ ವಿಚಾರ ಸಂಕಿರಣವು `ರಂಗಭೂಮಿ ಉಳಿಸಿ, ರಂಗಾಯಣ ಬೆಳೆಸಿ' ಎನ್ನುವ ಘೋಷಣೆಯೊಂದಿಗೆ ಉದ್ಘಾಟನೆಗೊಂಡಿತು. ಜನ್ನಿ, ಎಚ್.ಆರ್. ರಮೇಶ್, ರಾಜಶೇಖರ ಕದಂಬ, ಡಾ.ಕೆ. ಮರುಳಸಿದ್ಧಪ್ಪ, ಶ್ರೀನಿವಾಸ ಕಪ್ಪಣ್ಣ, ಲೋಕೇಶ್, ನಂದಾ ಹಳೆಮನೆ, ವಿಮಲಾ ಹಾಗೂ ರಂಗಾಯಣದ ಕಲಾವಿದರು ಇದ್ದಾರೆ
ಮೈಸೂರಲ್ಲಿ ಭಾನುವಾರ ಕನ್ನಡ ರಂಗಭೂಮಿಯ ಮುನ್ನೋಟ ವಿಚಾರ ಸಂಕಿರಣವು `ರಂಗಭೂಮಿ ಉಳಿಸಿ, ರಂಗಾಯಣ ಬೆಳೆಸಿ' ಎನ್ನುವ ಘೋಷಣೆಯೊಂದಿಗೆ ಉದ್ಘಾಟನೆಗೊಂಡಿತು. ಜನ್ನಿ, ಎಚ್.ಆರ್. ರಮೇಶ್, ರಾಜಶೇಖರ ಕದಂಬ, ಡಾ.ಕೆ. ಮರುಳಸಿದ್ಧಪ್ಪ, ಶ್ರೀನಿವಾಸ ಕಪ್ಪಣ್ಣ, ಲೋಕೇಶ್, ನಂದಾ ಹಳೆಮನೆ, ವಿಮಲಾ ಹಾಗೂ ರಂಗಾಯಣದ ಕಲಾವಿದರು ಇದ್ದಾರೆ   

ಮೈಸೂರು:`ಸಂಸ್ಕೃತಿಯ ಹೆಸರಲ್ಲಿ ಬಿಜೆಪಿ ಸರ್ಕಾರ ವಿವಿಧ ಸಂಘ-ಸಂಸ್ಥೆಗಳಿಗೆ ನೀಡಿದ ಅನುದಾನ ಹಾಗೂ ಜಮೀನು ಕುರಿತು ತನಿಖೆ ನಡೆಯಬೇಕು' ಎಂದು ಹಿರಿಯ ರಂಗತಜ್ಞ ಡಾ.ಕೆ.ಮರುಳಸಿದ್ಧಪ್ಪ ಆಗ್ರಹಿಸಿದರು.

ಸಾಹಿತಿ ಕಲಾವಿದರ ಒಕ್ಕೂಟ ನಗರದ ರಂಗಾಯಣದಲ್ಲಿ ಭಾನುವಾರ ಏರ್ಪಡಿಸಿದ `ಕನ್ನಡ ರಂಗಭೂಮಿಯ ಮುನ್ನೋಟ (ರಂಗಾಯಣದ ಹಿನ್ನೆಲೆಯಲ್ಲಿ)' ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳೆದ ಸರ್ಕಾರ ರೂ300 ಕೋಟಿ ಅನುದಾನ ನೀಡಿತ್ತು. ಅದು ಹೇಗೆ ಖರ್ಚಾಯಿತು, ಎಷ್ಟು `ಕೇಶವಕೃಪಾ'ಕ್ಕೆ ಹೋಗಿದೆ ಎನ್ನುವ ಕುರಿತು ಗಂಭೀರವಾಗಿ ತನಿಖೆ ಆಗಬೇಕು. ಇದರೊಂದಿಗೆ ಗೋದಾಮಿನಲ್ಲಿದ್ದ ರೂ18 ಕೋಟಿ ಬೆಲೆಯ ಪುಸ್ತಕಗಳನ್ನು ರಾಜ್ಯದ ಎಲ್ಲ ಶಾಲೆಗಳಿಗೆ ವಿತರಿಸಲಾಯಿತು. ಈ ಪುಸ್ತಕಗಳೆಲ್ಲ ಸಂಘಟನೆಯೊಂದಕ್ಕೆ ಸಂಬಂಧಿಸಿದವು. ಈ ಕುರಿತು ತನಿಖೆಯಾದರೆ ಆಸಕ್ತಿಕರ ವಿಷಯಗಳು ಹೊರಬರುತ್ತವೆ' ಎಂದು ಅವರು ಒತ್ತಾಯಿಸಿದರು.

`ರಂಗಾಯಣ ಗಬ್ಬೆದ್ದು ಹೋಗಲು ಬಿಜೆಪಿ ಸರ್ಕಾರ ಕಾರಣ. ರಂಗಾಯಣದತ್ತ ಯಾಕೆ ನಿರಾಸಕ್ತಿ ವಹಿಸಿತು? ನಿರಾಸಕ್ತಿಯ ಹಿಂದೆ ಹುನ್ನಾರವಿತ್ತೆ? ಮೈಸೂರಿನ ರಂಗಾಯಣ ಒಡೆದು ಶಿವಮೊಗ್ಗ ಹಾಗೂ ಧಾರವಾಡ ಕಟ್ಟುವ ಅಗತ್ಯವಿಲ್ಲ. ಸದ್ಯದ ಮೈಸೂರು ರಂಗಾಯಣ ಅರ್ಧಂಬರ್ಧ ಕಟ್ಟಿದ ಕಟ್ಟಡದ ಹಾಗಾಗಿದೆ. ಇದಕ್ಕಾಗಿ ರಂಗಾಯಣದ ಕಲಾವಿದರು ಹಾಗೂ ರಂಗತಜ್ಞರು ಒಂದೆಡೆ ಕುಳಿತು ಚರ್ಚಿಸಿ ಸರ್ಕಾರವನ್ನು ಮನಗಾಣಿಸಬೇಕು' ಎಂದು ಅವರು ಸಲಹೆ ನೀಡಿದರು. ಇದಕ್ಕೂ ಮೊದಲು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ರಂಗಾಯಣ ಹೇಗೆ ಮುಂದುವರಿಯಬೇಕು, ರಂಗ ಸಮಾಜಕ್ಕೆ ಯಾರು ಸದಸ್ಯರಾಗಬೇಕು ಕುರಿತು ಸ್ಪಷ್ಟತೆ ಇರಬೇಕು ಎಂದರು.

ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ ಮಾತನಾಡಿ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋದರೆ ದಲ್ಲಾಳಿ ಕೇಂದ್ರಕ್ಕೆ ಹೋದ ಅನುಭವ ಆಗುತ್ತದೆ. ಅಲ್ಲಿಯ ಸಿಬ್ಬಂದಿಗೆ ಕನ್ನಡದ ಮೇಲೆ ಪ್ರೀತಿ ಹಾಗೂ ಸಂಸ್ಕೃತಿ ಕುರಿತು ಕಾಳಜಿ ಇರಬೇಕು ಎಂದರು. `ರಾಜ್ಯದ ವಿವಿಧೆಡೆ ನಡೆಯುವ ಉತ್ಸವಗಳಿಗೆ ಬೆಂಗಳೂರಿನಿಂದಲೇ ಶಾಮಿಯಾನ, ಮೈಕು ಹಾಗೂ ಕಲಾವಿದರನ್ನು ಕಳುಹಿಸುವುದು ನಿಲ್ಲಬೇಕು. ಸ್ಥಳೀಯ ಸಂಘ-ಸಂಸ್ಥೆ ಹಾಗೂ ಪ್ರತಿಭಾವಂತರಿಗೆ ಅವಕಾಶಗಳು ಸಿಗಬೇಕು.

ಅಕಾಡೆಮಿಗಳಿಗೆ ಹಾಗೂ ರಂಗಾಯಣಕ್ಕೆ ರಾಜಕೀಯ ಪಕ್ಷದವರನ್ನು ನೇಮಿಸಬಾರದು. ಹವ್ಯಾಸಿ ತಂಡಗಳು ಮಾಡುವ ನಾಟಕಗಳನ್ನು ರಂಗಾಯಣ ಪ್ರಯೋಗಿಸಬಾರದು. ಪ್ರಯೋಗಶೀಲತೆಯಲ್ಲಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

`ರಂಗಾಯಣದಲ್ಲಿ ರಂಗ ಸಂಶೋಧನ ಕೇಂದ್ರ ಹಾಗೂ ರಂಗ ವಸ್ತುಸಂಗ್ರಹಾಲಯ ಅಭಿವೃದ್ಧಿಪಡಿಸಬೇಕು. ವೃತ್ತಿ ರಂಗಭೂಮಿಯ ಕಲಾವಿದರು ನೆಮ್ಮದಿಯಿಂದ ಬಾಳ್ವೆ ಮಾಡುವಂತಾಗಬೇಕು. ರಾಜ್ಯದಲ್ಲಿಯ ರಂಗಮಂದಿರಗಳ ನಿರ್ವಹಣೆಗೆ ಪ್ರಾಧಿಕಾರ ರಚಿಸಬೇಕು' ಎಂದು ಜಂಬೆ ಕೋರಿದರು.

ಮೂರು ನಿರ್ಣಯಗಳು
ಹಿರಿಯ ರಂಗಕರ್ಮಿ ನ. ರತ್ನ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ 3 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶಿವಮೊಗ್ಗ ಹಾಗೂ ಧಾರವಾಡಕ್ಕೆ ನಿಯೋಜಿತಗೊಂಡ ರಂಗಾಯಣದ ಕಲಾವಿದರನ್ನು ವಾಪಸು ಮೈಸೂರಿಗೆ ಕರೆಸಬೇಕು. ರಂಗ ಸಮಾಜವನ್ನು ರದ್ದುಗೊಳಿಸಬೇಕು ಹಾಗೂ ರಂಗ ತಜ್ಞರ ಸಮಿತಿ ರಚಿಸಿ ರಂಗ ಸಮಾಜ ಹಾಗೂ ರಂಗತಜ್ಞರನ್ನು ಆಯ್ಕೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.