ADVERTISEMENT

ಆದಾಯ ತೆರಿಗೆ ವಿನಾಯ್ತಿ: ಮಿತಿ ಹೆಚ್ಚಳಕ್ಕೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಮಸೂದೆ ಪರಿಶೀಲಿಸುತ್ತಿರುವ ಸಂಸತ್ತಿನ ಸ್ಥಾಯಿ ಸಮಿತಿಯು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ.3 ಲಕ್ಷಕ್ಕೆ ಮತ್ತು ಉಳಿತಾಯಕ್ಕೆ ಸಂಬಂಧಿಸಿದ ಕಡಿತದ ಮಿತಿಯನ್ನೂ ರೂ.2.5 ಲಕ್ಷಗಳಿಗೆ ಹೆಚ್ಚಿಸಲು  ಸಲಹೆ ನೀಡಿದೆ.

ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ  ಸಿಲುಕಿರುವ ಆದಾಯ ತೆರಿಗೆ ಪಾವತಿಸುವವರಿಗೆ ಇದರಿಂದ ಸಾಕಷ್ಟು ಪರಿಹಾರ ದೊರೆಯಲಿದೆ. ಕೆಲ ಸಂಸತ್ ಸದಸ್ಯರು ಈ ಮಿತಿಯನ್ನು ರೂ.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದೂ ಸಲಹೆ ನೀಡಿದ್ದರು. ಆದರೆ, ಸಮಿತಿಯು ಈ ಸಲಹೆಗೆ ಅಂತಿಮವಾಗಿ ಸಮ್ಮತಿಸಿಲ್ಲ. ಸದ್ಯದ ರೂ.1.8 ಲಕ್ಷದಿಂದ ರೂ.3 ಲಕ್ಷಕ್ಕೆ ಹೆಚ್ಚಿಸಲು ಕೊನೆಗೂ ಒಪ್ಪಿಗೆ ನೀಡಿದೆ.

ಸಮಿತಿಯು ವರದಿಯನ್ನು ಅಂಗೀಕರಿಸಿದೆ. ಕಂಪನಿ ತೆರಿಗೆ ದರವನ್ನೂ ಶೇ 30ರ ಮಟ್ಟದಲ್ಲಿಯೇ ಉಳಿಸಿಕೊಳ್ಳಲು ಸಲಹೆ ನೀಡಲಾಗಿದೆ.  ಭವಿಷ್ಯ ನಿಧಿ, ಜೀವ ವಿಮೆ, ಮಕ್ಕಳ ಶಿಕ್ಷಣ, ಮೂಲ ಸೌಕರ್ಯ ಬಾಂಡ್‌ಗಳಲ್ಲಿ ತೊಡಗಿಸುವ ಉಳಿತಾಯಕ್ಕೆ ಸಂಬಂಧಿಸಿದಂತೆ ಒಟ್ಟು ಆದಾಯದಲ್ಲಿನ ತೆರಿಗೆ ಕಡಿತ ಪ್ರಮಾಣವನ್ನು ಕೂಡ ಸದ್ಯದ ರೂ.1.20 ಲಕ್ಷದಿಂದ ರೂ.2.5 ಲಕ್ಷಕ್ಕೆ ಹೆಚ್ಚಿಸುವುದಕ್ಕೆ ಸಮ್ಮತಿ ನೀಡಿರುವ ಸಮಿತಿಯು, ವಾರದೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯ ವರದಿ ಆಧರಿಸಿ ಸಂಸತ್ತಿನಲ್ಲಿ `ಡಿಟಿಸಿ~ ಮಸೂದೆ ಮೇಲೆ ಚರ್ಚೆ ನಡೆಯಲಿದೆ.ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮೂರು ಹಂತಗಳು (ಶೇ 10, ಶೇ 20 ಮತ್ತು ಶೇ 30ರಷ್ಟು)  ಇರಬೇಕು ಎಂದೂ ಸಮಿತಿ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.