ADVERTISEMENT

ಆಭರಣ ಆಮದು ದುಬಾರಿ

ಸುಂಕ ಶೇ 15ಕ್ಕೆ ಏರಿಕೆ; ಅಕ್ಕಸಾಲಿಗರ ಹಿತರಕ್ಷಣೆಗಾಗಿ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಆಭರಣ ಆಮದು ದುಬಾರಿ
ಆಭರಣ ಆಮದು ದುಬಾರಿ   

ನವದೆಹಲಿ(ಪಿಟಿಐ): ಚಿನ್ನ ಮತ್ತು ಬೆಳ್ಳಿ ಆಭರಣಗಳ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇ 15ಕ್ಕೆ ಏರಿಸಿದೆ. ಪ್ರಸ್ತುತ ಆಮದು ಸುಂಕ ಶೇ 10ರಷ್ಟಿತ್ತು. ಇದು ಬಂಗಾರ ಪ್ರಿಯ ಗ್ರಾಹಕರ ಪಾಲಿಗೆ ಆಭರಣಗಳನ್ನು ಇನ್ನಷ್ಟು ದುಬಾರಿಯಾಗಿಸುವ ಸಾಧ್ಯತೆ ಇದೆ.

ದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಆಭರಣಗಳನ್ನು ತಯಾರಿಸುವ ಅಕ್ಕಸಾಲಿಗರ ಹಿತವನ್ನು ರಕ್ಷಿಸುವ ದೃಷ್ಟಿಯಿಂದ ಆಮದು ಚಿನ್ನ–ಬೆಳ್ಳಿ ಆಭರಣಗಳ ಸುಂಕವನ್ನು ಶೇ 5ರಷ್ಟು ಹೆಚ್ಚಿಸಲಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸದ್ಯ ಬಂಗಾರ ಮತ್ತು ಸಿದ್ಧವಾದ ಚಿನ್ನದ ಆಭರಣಗಳ ಆಮದು ಸುಂಕದಲ್ಲಿ ವ್ಯತ್ಯಾಸ ಕಾಯ್ದುಕೊಳ್ಳಲಾಗಿದೆ. ಸಣ್ಣ ಪ್ರಮಾಣದಲ್ಲಿ ಆಭರಣಗಳನ್ನು ವಿನ್ಯಾಸ­ಗೊಳಿಸುವ ಚಿನ್ನ–ಬೆಳ್ಳಿ ಕುಶಲಕರ್ಮಿಗಳ ವೃತ್ತಿಬದುಕಿನ ಹಿತದೃಷ್ಟಿಯಿಂ­ದಲೇ ಈ ಸುಂಕ ಹೆಚ್ಚಳ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸದ್ಯ ಆಮದು ಮಾಡಿಕೊಳ್ಳಲಾಗುತ್ತಿರುವ ಆಭರಣಗಳೆಲ್ಲವೂ ಯಂತ್ರಗಳಿಂದ ವಿನ್ಯಾಸಗೊಳಿಸಿದವಾಗಿವೆ. ಹಾಗಾಗಿ ಇವುಗಳ ವಿನ್ಯಾಸ ವೆಚ್ಚವೂ ಕಡಿಮೆ ಇದೆ. ಇದು ದೇಶೀಯ ಅಕ್ಕಸಾಲಿಗರ ವೃತ್ತಿಗೆ ಸವಾಲಾಗಿದ್ದಿತು ಎಂದು ಹೇಳಿಕೆ ಗಮನ ಸೆಳೆದಿದೆ.ಸರ್ಕಾರದ ಕ್ರಮಕ್ಕೆ ದೇಶದ ಚಿನಿವಾರ ಪೇಟೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಚಿನ್ನಾಭರಣ ವರ್ತಕರು ಮತ್ತು ರಫ್ತುದಾರರು ಆಮದು ಸುಂಕ ಏರಿಕೆ ಕ್ರಮವನ್ನು ಸ್ವಾಗತಿಸಿದ್ದಾರೆ.

ಸಕಾರಾತ್ಮಕ ಪ್ರತಿಕ್ರಿಯೆ
‘ಸರ್ಕಾರ ಸರಿಯಾದ ಕ್ರಮವನ್ನೇ ತೆಗೆದುಕೊಂಡಿದೆ. ಇದರಿಂದ ದೇಶದ ಕುಶಲಕರ್ಮಿಗಳಿಗೆ ಒಳಿತಾಗಲಿದೆ’ ಎಂದು ಪಿ.ಸಿ.ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ್‌ ಗರ್ಗ್‌ ಪ್ರತಿಕ್ರಿಯಿಸಿದ್ದಾರೆ.

‘ಇದು ನಮ್ಮಲ್ಲಿನ ಅಕ್ಕಸಾಲಿಗರ ಹಿತರಕ್ಷಿಸುವುದಷ್ಟೇ ಅಲ್ಲ, ಚಿನ್ನಾಭರಣ ರಫ್ತು ಚಟುವಟಿಕೆಗೂ ಪ್ರೋತ್ಸಾಹದಾಯಕವಾಗಿದೆ’ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಅಧ್ಯಕ್ಷ ವಿಪುಲ್‌ ಷಾ ಹೇಳಿದ್ದಾರೆ.

2012–13ರಲ್ಲಿ ಭಾರತದ ಚಿನ್ನಾಭರಣ ವರ್ತಕರು 504 ಕೋಟಿ ಅಮೆರಿಕನ್‌ ಡಾಲರ್‌(ಅಂದಾಜು ರೂ27,720 ಕೋಟಿ) ಮೌಲ್ಯದ ಚಿನ್ನಾಭರಣ ಆಮದು ಮಾಡಿಕೊಂಡಿದ್ದರು. ಈ ಸಾಲಿನಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ 11.20 ಕೋಟಿ ಡಾಲರ್‌(ಸುಮಾರು ರೂ728 ಕೋಟಿ) ಬೆಲೆಯ ಚಿನ್ನಾಭರಣ ಆಮದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.