ADVERTISEMENT

ಆರ್ಥಿಕ ಅಸ್ಥಿರತೆ-ತೈಲ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST

ನ್ಯೂಯಾರ್ಕ್ (ಐಎಎನ್‌ಎಸ್): `ಅಮೆರಿಕಕ್ಕೆ ನೆಗಡಿಯಾದರೆ ಉಳಿದ ದೇಶಗಳಿಗೆ ಸೀನು ಬರುತ್ತದೆ~ ಎನ್ನುವ ಮಾತಿದೆ. ಅಮೆರಿಕದ ಉದ್ಯೋಗ ಮಾರುಕಟ್ಟೆ ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಶುಕ್ರವಾರ ಜಾಗತಿಕ ಷೇರುಪೇಟೆಗಳು ಸಾಕಷ್ಟು ಕುಸಿತ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿಯೂ  (ಜುಲೈ ಸರಬರಾಜಿನ ಫ್ಯೂಚರ್ ಟ್ರೇಡಿಂಗ್) ದಿಢೀರ್ ಕುಸಿತವಾಗಿದೆ.

ಅಮೆರಿಕದ ಕಾರ್ಮಿಕ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಹೊಸದಾಗಿ 29 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಇದು ಸರ್ಕಾರಿ ಅಂದಾಜಿಗಿಂತ ತುಂಬಾ ಕಡಿಮೆ ಇದ್ದು,  ನಿರುದ್ಯೋಗ ದರ ಮತ್ತೆ ಶೇ 8.2ಕ್ಕೆ ಏರಿಕೆಯಾಗಿದೆ. ಜೂನ್ 2011ರ ನಂತರ ದಾಖಲಾಗಿರುವ ಗರಿಷ್ಠ ಮಟ್ಟದ ನಿರುದ್ಯೋಗ ಪ್ರಮಾಣ ಇದಾಗಿದೆ. ಈ ವರದಿಯ ಪರಿಣಾಮ ಅಲ್ಲಿನ ಷೇರುಪೇಟೆ ಡೌ ಜೋನ್ಸ್ ಮೇಲೂ ಆಗಿದೆ. ಅದರ ಕೈಗಾರಿಕಾ ಪ್ರಗತಿ ಶುಕ್ರವಾರ ಸರಾಸರಿ 158 ಅಂಶಗಳಷ್ಟು (ಶೇ 1.28) ಕುಸಿದಿದೆ.

ಇದೇ ವೇಳೆ, ಯೂರೋಪ್ ಮತ್ತು ಚೀನಾಗಳಲ್ಲೂ ಪರಿಕರ ತಯಾರಿಕಾ ವಲಯದ ಪ್ರಗತಿಯೂ ಕುಂಠಿತಗೊಂಡಿದೆ. ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿನ ಕೈಗಾರಿಕಾ ಪ್ರಗತಿಯೂ 2009ರ ಹಿಂದಿನ ಮಟ್ಟಕ್ಕೆ ಇಳಿದಿದೆ. ಜತೆಗೆ, ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ಹೆಚ್ಚುತ್ತಿರುವುದರಿಂದ ಜಾಗತಿಕ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಿದೆ. ಈ ನಡುವೆ ಸ್ಪೇನ್ ಸಾಲದ ನೆರವು ಕೇಳಿದೆ ಎನ್ನುವ ವದಂತಿಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಲ್ಲಗಳೆದಿದೆ. ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳಿಗೆ ನೇರ ಪರಿಹಾರ ವಿತರಿಸುವ ಯಾವುದೇ ಯೋಜನೆಯೂ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

ಇದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಒತ್ತಡ ಹೆಚ್ಚಿದ್ದು, ಹೂಡಿಕೆದಾರರು ಬಂಡವಾಳ ವಾಪಸ್ ಪಡೆದು, ಚಿನ್ನ, ಡಾಲರ್, ಬಾಂಡ್ ಮತ್ತಿತರ ಸುರಕ್ಷಿತ ಹೂಡಿಕೆಗಳಲ್ಲಿ ತೊಡಗಿಸುತ್ತಿದ್ದಾರೆ.  ಕಚ್ಚಾತೈಲ ಆಮದಿಗೆ ಡಾಲರ್ ಬೇಡಿಕೆ ಹೆಚ್ಚಿರುವುದರಿಂದ ಡಾಲರ್  ಎದುರು ಯೂರೋ ವಿನಿಮಯ ಮೌಲ್ಯವೂ 23 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಯೂರೋ ವಲಯದ ನಿರುದ್ಯೋಗ ಪ್ರಮಾಣವೂ ದಾಖಲೆ (ಶೇ 11ರಷ್ಟು) ಮಟ್ಟಕ್ಕೇರಿದೆ.

ಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಸೂಚನೆಗಳೂ ಹೊರಬಿದ್ದಿವೆ. ಹೆಚ್ಚುತ್ತಿರುವ ಸಾಲದ ಬಿಕ್ಕಟ್ಟಿನಿಂದ ಯೂರೋ ವಲಯದಲ್ಲಿ ವ್ಯಾಪಾರ ಇಳಿಮುಖವಾಗಿದೆ. ಇನ್ನೊಂದೆಡೆ ಸರ್ಕಾರದ ಸಾಲದ ಹೊರೆಯೂ ಹೆಚ್ಚುತ್ತಿದೆ.

ತೈಲ ಇಳಿಕೆ: ಅಮೆರಿಕದ ಉದ್ಯೋಗ ಮಾರುಕಟ್ಟೆ ಕುಸಿತ ಮತ್ತಿತರ ಜಾಗತಿಕ ಸಂಗತಿಗಳಿಂದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ (ಜುಲೈ ಸರಬರಾಜಿನ ವಹಿವಾಟು) ಪ್ರತಿ ಬ್ಯಾರಲ್‌ಗೆ 3.80 ಡಾಲರ್‌ನಷ್ಟು(ಶೇ 3.81) ಕುಸಿತ ಕಂಡಿದೆ. ಕಳೆದ ಅಕ್ಟೋಬರ್ ನಂತರ ದಾಖಲಾಗಿರುವ ಕನಿಷ್ಠ ದರ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.