ADVERTISEMENT

ಆರ್‌ಐಎಲ್ ಲಾಭ ಶೇ 21 ಕುಸಿತ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಮುಂಬೈ (ಐಎಎನ್‌ಎಸ್): ಕಳೆದ ಹಣಕಾಸು ವರ್ಷದ (2011-12) ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ.(ಆರ್‌ಐಎಲ್) ರೂ 4,236 ಕೋಟಿ  ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಶೇ 21.20ರಷ್ಟು ಭಾರಿ ಕುಸಿತ ಕಂಡಿದೆ.

ಜನವರಿ-ಮಾರ್ಚ್ ನಡುವಿನ ಅವಧಿಯಲ್ಲಿ ಕಂಪನಿಯ ವರಮಾನ ಶೇ. 18.86ರಷ್ಟು ಹೆಚ್ಚಿದ್ದು, ರೂ87,477 ಕೋಟಿಗಳಷ್ಟಾಗಿದೆ. ಮಾರಾಟದಲ್ಲಿಯೂ ಶೇ. 17.21ರಷ್ಟು ಪ್ರಗತಿಯಾಗಿದ್ದು, ರೂ 85,182 ಕೋಟಿಗಳಷ್ಟಾಗಿದೆ. 2010-11ರ ಇದೇ ಅವಧಿಯಲ್ಲಿ  ಕಂಪನಿ ರೂ73,591 ಕೋಟಿವರಮಾನ ಗಳಿಸಿತ್ತು.
ನಿವ್ವಳ ಲಾಭ ಇಳಿಕೆಯಾದ ಹಿನ್ನೆಲೆಯಲ್ಲಿ ಕಂಪನಿಯ ಷೇರು ದರ ಶುಕ್ರವಾರದ ಷೇರುಪೇಟೆ ವಹಿವಾಟಿನಲ್ಲಿ ಶೇ. 1.39ರಷ್ಟು ಕುಸಿತ ಕಂಡವು.

2011-12ನೇ ಹಣಕಾಸು ವರ್ಷದಲ್ಲಿ (ನಾಲ್ಕೂ ತ್ರೈಮಾಸಿಕ ಸೇರಿ) ಕಂಪನಿ ನಿವ್ವಳ ಲಾಭದಲ್ಲಿ ಶೇ 1.21ರಷ್ಟು ಕುಸಿತ ಕಂಡಿದೆ. 2010-11ರಲ್ಲಿ ರೂ20,286 ಕೋಟಿಯಷ್ಟಿದ್ದ ನಿವ್ವಳ ಲಾಭ ನಂತರದ ವರ್ಷದಲ್ಲಿ ರೂ20,040 ಕೋಟಿಗೆ  ಇಳಿದಿದೆ. ಒಟ್ಟಾರೆ ವರಮಾನ ವಾರ್ಷಿಕ ಶೇ. 33.78ರಷ್ಟು ಹೆಚ್ಚಿ, ರೂ3,36,096 ಕೋಟಿಯಷ್ಟಾಗಿದೆ. ಒಟ್ಟಾರೆ ಮಾರಾಟವೂ ಶೇ. 32.93ರಷ್ಟು ಹೆಚ್ಚಿದ್ದು,ರೂ3,29,904 ಕೋಟಿಗಳಷ್ಟಾಗಿದೆ. ಕಂಪನಿ ರೂ10 ಮುಖಬೆಲೆಯ ಪ್ರತಿ ಷೇರಿಗೆ ರೂ8.50ರಂತೆ  ಲಾಭಾಂಶ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.