ADVERTISEMENT

ಆರ್‌ಬಿಐಗೆ ಸುಬ್ಬರಾವ್ ವಿದಾಯ

ಇಂದು ರಘುರಾಂ ರಾಜನ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): `ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ ತಮ್ಮ ಅಧಿಕಾರ ಅವಧಿಯಲ್ಲಿ, ವಿಶೇಷವಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಗಿ ಹಣಕಾಸು ನೀತಿ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಕೈಗೊಂಡ ಕ್ರಮಗಳಿಂದ ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿದಿದೆ. ಆರ್ಥಿಕ ಸಮತೋಲನ ಸಾಧ್ಯವಾಗಿದೆ'  ಎಂದು ಪ್ರಮುಖ ಬ್ಯಾಂಕಿಂಗ್ ತಜ್ಞರು ಶ್ಲಾಘಿಸಿದ್ದಾರೆ.

ಸುಬ್ಬರಾವ್ ಇಂದು (ಸೆ.4) `ಆರ್‌ಬಿಐ' ಗವರ್ನರ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಹೊಸ ಗವರ್ನರ್ ಆಗಿ ರಘುರಾಂ ರಾಜನ್ ಅಧಿಕಾರ ಸ್ವೀಕರಿಸಲಿದ್ದಾರೆ. ಸುಬ್ಬರಾವ್ ಕಾರ್ಯವೈಖರಿಗೆ ಬ್ಯಾಂಕಿಂಗ್ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

`ಸುಬ್ಬರಾವ್ ಗವರ್ನರ್ ಆಗಿದ್ದ 5 ವರ್ಷಗಳು ಅತ್ಯಂತ ಸವಾಲಿನ ಮತ್ತು ಕಷ್ಟದ ದಿನಗಳಾಗಿದ್ದವು. ಒಂದೆಡೆ ಜಾಗತಿಕ ಆರ್ಥಿಕ ಅಸ್ಥಿರತೆ ಇನ್ನೊಂದೆಡೆ ದೇಶೀಯ ಹಣಕಾಸು ಮಾರುಕಟ್ಟೆಯಲ್ಲಿನ  ಬಿಕ್ಕಟ್ಟು. ಇವೆರಡನ್ನೂ ಅವರು ಸಮರ್ಥವಾಗಿ ನಿಭಾಯಿಸಿದರು. ಇಂದು ಭಾರತದ ಆರ್ಥಿಕತೆ ಮತ್ತು ಜಗತ್ತಿನ ಆರ್ಥಿಕತೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಜಾಗತಿಕ ಮಟ್ಟದ ಅರ್ಥವ್ಯವಸ್ಥೆಗಿಂತಲೂ ಉತ್ತಮವಾದ ಆರ್ಥಿಕ ಸ್ಥಿತಿಯನ್ನು ದೇಶ ಹೊಂದಿದೆ. ಇದಕ್ಕೆ ಸುಬ್ಬರಾವ್ ಕಾರಣ. ಸವಾಲುಗಳ ನಡುವೆಯೂ ಇಷ್ಟೊಂದು ಉತ್ತಮವಾಗಿ ಕಾರ್ಯನಿರ್ವಹಿಸಲು ಅವರಿಂದ ಮಾತ್ರ ಸಾಧ್ಯ' ಎಂದು ಆಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಶಿಕ್ಷಾ ಶರ್ಮಾ ಅಭಿನಂದನೆ  ಸೂಚಿಸಿದ್ದಾರೆ.

ಆರ್‌ಬಿಐನ ಗವರ್ನರ್ ಆಗಿ ಸುಬ್ಬರಾವ್ ಅಧಿಕಾರ ಸ್ವೀಕರಿಸುವ (ಸೆ.5, 2008) ಎರಡು ವಾರಗಳ ಹಿಂದಷ್ಟೇ ಜಾಗತಿಕ ಮಟ್ಟದ ಹೂಡಿಕೆ ಬ್ಯಾಂಕ್ ಲೀಮನ್ ಬ್ರದರ್ಸ್ ದಿವಾಳಿ ಪ್ರಕಟಿಸಿತ್ತು. ಈ ಘಟನೆ    ಪ್ರಪಂಚದಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿತ್ತು. ಸಾಲದ ಬಿಕ್ಕಟ್ಟಿನಿಂದ ಹಲವು ಬ್ಯಾಂಕುಗಳು ಮುಚ್ಚಿಹೋದವು. ಇಂತಹ ಪರಿಸ್ಥಿತಿಯಲ್ಲಿ ಸುಬ್ಬರಾವ್, ಕೇಂದ್ರ ಸರ್ಕಾರ ಮತ್ತು ಇತರೆ ಹಣಕಾಸು ಸಂಸ್ಥೆಗಳ ಜತೆ ಉತ್ತಮ ಸಮನ್ವಯತೆ ಸಾಧಿಸಿ ಆರ್ಥಿಕತೆ ಚೇತರಿಸಿಕೊಳ್ಳುವಂತೆ ಮಾಡಿದರು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

`ದೇಶದ ಆರ್ಥಿಕತೆ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಸುಬ್ಬರಾವ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಈಗಿನ ಬಿಕ್ಕಟ್ಟನ್ನು ಎದುರಿಗಿಟ್ಟುಕೊಂಡು ಅವರನ್ನು ಟೀಕಿಸುವುದು ತಪ್ಪು. ಅವರೊಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ' ಎಂದು ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯಸ್ಥ ಆದಿತ್ಯಾ ಪುರಿ ಅಭಿಪ್ರಾಯಪಟ್ಟಿದ್ದಾರೆ.

`ಸುಬ್ಬರಾವ್ ಅಧಿಕಾರ ಅವಧಿಯಲ್ಲಿ ಬ್ಯಾಂಕುಗಳ ನಗದು ಮೀಸಲು ಅನುಪಾತ (ಸಿಆರ್‌ಆರ್) ಮತ್ತು `ಎಸ್‌ಎಲ್‌ಆರ್' ಶೇ 4ರಷ್ಟು ಇಳಿಕೆ ಕಂಡಿದೆ. ಹಾಗಾಗಿ ಇದೊಂದು ಮಹತ್ವದ ಕಾಲಘಟ್ಟ' ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಅಧ್ಯಕ್ಷ ಪ್ರತೀಪ್ ಚೌಧರಿ ಶ್ಲಾಘಿಸಿದ್ದಾರೆ.

23ನೇ ಗವರ್ನರ್
ನವದೆಹಲಿ (ಐಎಎನ್‌ಎಸ್): ಭಾರತೀಯ ರಿಸರ್ವ್ ಬ್ಯಾಂಕಿನ 23ನೇ ಗವರ್ನರ್ ಆಗಿ ರಘುರಾಂ ಜಿ. ರಾಜನ್ ಇಂದು (ಸೆ.4 ) ಅಧಿಕಾರ ಸ್ವೀಕರಿಸಲಿದ್ದಾರೆ.

`ಆರ್‌ಬಿಐ'ನ ಗವರ್ನರ್ ಹುದ್ದೆಗೇರಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ರಾಜನ್ ಕೂಡ ಒಬ್ಬರು. ಪ್ರಧಾನಿ ಮನಮೋಹನ್ ಸಿಂಗ್ ಅವರ ನೇಮಕವನ್ನು ಆ.6ರಂದು ಅನುಮೋದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.