ADVERTISEMENT

ಆರ್‌ಬಿಐ ಅಧಿಸೂಚನೆ: ಆದ್ಯತಾ ಸಾಲ ಮಿತಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಮುಂಬೈ(ಪಿಟಿಐ): ಕೃಷಿ, ಗೃಹ ನಿರ್ಮಾಣ, ಸಣ್ಣ ಮತ್ತು ಅತಿಸಣ್ಣ ಗಾತ್ರದ ಉದ್ಯಮಗಳ ಕ್ಷೇತ್ರದ ಆದ್ಯತಾ ಸಾಲ ಪ್ರಮಾಣವನ್ನು ಹೆಚ್ಚಿಸಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗುರುವಾರ ಅಧಿಸೂಚನೆ ಹೊರಡಿಸಿದೆ.

ಆಯ್ದ ಕೆಲವು ಬ್ಯಾಂಕ್‌ಗಳ ಅಧ್ಯಕ್ಷರು ಹಾಗೂ ಆ ಬ್ಯಾಂಕ್‌ಗಳ ಆಧ್ಯತಾ ಸಾಲ ವಿಭಾಗದ ಪ್ರಮುಖರ ಜತೆ ಈ ಬಗ್ಗೆ ಚರ್ಚಿಸಲಾಯಿತು. ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಆದ್ಯತಾ ವಲಯದ ಸಾಲ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಯಿತು ಎಂದು `ಆರ್‌ಬಿಐ~ ತಿಳಿಸಿದೆ.

ಕಾರ್ಪೊರೇಟ್ ಸಂಸ್ಥೆಗಳು, ಕೃಷಿಕರ ಒಡೆತನದ ಕೃಷಿ ಉತ್ಪನ್ನ ಸಂಸ್ಥೆಗಳು, ರೈತರೇ ಪಾಲುದಾರರಾಗಿರುವ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸಂಸ್ಥೆ ಮತ್ತು ಸಹಕಾರಿ ಸಂಘ, ಕ್ಷೀರೋತ್ಪಾದನೆ, ಮೀನುಗಾರಿಕೆ, ಪಶುಸಂಗೋಪನೆ, ಕುಕ್ಕಟೋದ್ಯಮ, ಜೇನುಸಾಕಣೆ ಮತ್ತು ರೇಷ್ಮೆ ಬೆಳೆಗೆ ಸಂಬಂಧಿಸಿದ ಸಂಘಗಳಿಗೆ ಆದ್ಯತಾ ಸಾಲವನ್ನು ಬ್ಯಾಂಕ್‌ಗಳು ಗರಿಷ್ಠ ರೂ.2 ಕೋಟಿವರೆಗೂ ನೀಡಬಹುದಾಗಿದೆ.
 
ಆದರೆ ಈ ಹಣವನ್ನು ಬೆಳೆ ತೆಗೆಯುವುದು, ಗುಣಮಟ್ಟ ಕಾಪಾಡುವುದು, ಕೃಷಿ ಉತ್ಪನ್ನ ರಫ್ತು ಮತ್ತಿತರ ನಿರ್ದಿಷ್ಟ ಚಟುವಟಿಕೆಗಳಿಗೇ ಬಳಸಬೇಕು. ಸಾಲ ಮೊತ್ತ ರೂ.2 ಕೋಟಿ ಮೀರಿದರೆ ಅದನ್ನು `ಪರೋಕ್ಷ ಕೃಷಿ ಸಾಲ~ ಎಂದು ಪರಿಗಣಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಬಡವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೀಡುವ ಸಾಲ, ಗೃಹ ಸಾಲ ನೀಡುವ ಸಂಸ್ಥೆಗಳು ಸಾಲ ಪರಿಷ್ಕರಣೆ, ಮನೆ ಖರೀದಿ, ನಿರ್ಮಾಣ, ಮರು ನಿರ್ಮಾಣಕ್ಕೆ ನೀಡುವ ಸಾಲ ರೂ.10 ಲಕ್ಷದವರೆಗಿದ್ದರೆ ಅದ್ಯತಾ ವಲಯದ್ದು ಎಂದು ಪರಿಗಣಿಸುವಂತೆ ಸೂಚಿಸಿದೆ.

ಠೇವಣಿ-ಸಾಲ ವಿತರಣೆ ಹೆಚ್ಚಳ
ಅಕ್ಟೋಬರ್ 5ಕ್ಕೂ ಹಿಂದಿನ 12 ತಿಂಗಳಲ್ಲಿ ದೇಶದ ಬ್ಯಾಂಕ್‌ಗಳ ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆ ಪ್ರಮಾಣ ಕ್ರಮವಾಗಿ ಶೇ 13.80 ಮತ್ತು 15.80ರಷ್ಟು ಹೆಚ್ಚಿದೆ. ಠೇವಣಿ ರೂ.56.29 ಲಕ್ಷ ಕೋಟಿಯಿಂದ ರೂ.64.11 ಲಕ್ಷ ಕೋಟಿಗೂ, ಸಾಲ ವಿತರಣೆ ರೂ.41.50 ಲಕ್ಷ ಕೋಟಿಯಿಂದ ರೂ.48.09 ಲಕ್ಷ ಕೋಟಿಗೂ ಹೆಚ್ಚಿದೆ ಎಂದು ಆರ್‌ಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.