ADVERTISEMENT

ಆರ್‌ಬಿಐ: ಬಡ್ಡಿ ದರ ಕಡಿತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 19:59 IST
Last Updated 29 ಜನವರಿ 2013, 19:59 IST
ಆರ್‌ಬಿಐ: ಬಡ್ಡಿ ದರ ಕಡಿತ
ಆರ್‌ಬಿಐ: ಬಡ್ಡಿ ದರ ಕಡಿತ   

ಮುಂಬೈ (ಪಿಟಿಐ):  `ಹೆಚ್ಚಿನ ಹೂಡಿಕೆ ಆಕರ್ಷಿಸುವ ಮೂಲಕ ಆರ್ಥಿಕ ವೃದ್ಧಿಗೆ ಉತ್ತೇಜನ ನೀಡುವುದು ಸದ್ಯದ ಅಗತ್ಯ. ಈ  ನಿಟ್ಟಿನಲ್ಲಿ ಬಡ್ಡಿ ದರ ತಗ್ಗಿಸಲಾಗಿದೆ. ಇದೇ ವೇಳೆ `ಆರ್‌ಬಿಐ' ಹಣದುಬ್ಬರದ ಮೇಲೆ ತೀವ್ರ ನಿಗಾ ವಹಿಸಲಿದೆ. ಹಣದುಬ್ಬರ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿದರೆ ಮುಂದಿನ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಬಡ್ಡಿ ದರ ಇನ್ನಷ್ಟು ತಗ್ಗಿಸಲಾಗುವುದು ಎಂದು ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ. 

 ಮಂಗಳವಾರ ಇಲ್ಲಿ ಕೇಂದ್ರೀಯ ಬ್ಯಾಂಕ್‌ನ   ಹಣಕಾಸು ನೀತಿಯ ತ್ರೈಮಾಸಿಕ ಪರಾಮರ್ಶೆ ಪ್ರಕಟಿಸಿ ಅವರು ಮಾತನಾಡುತ್ತಿದ್ದರು. `ಇದೊಂದು ಸಕಾರಾತ್ಮಕ ನಿರ್ಧಾರ. ಇದರಿಂದ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರಲಿದ್ದು, ಆರ್ಥಿಕ ಪ್ರಗತಿಗೆ ಉತ್ತೇಜನ ಲಭಿಸಲಿದೆ' ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿದ್ದ `ಜಿಡಿಪಿ' ಪ್ರಗತಿಯನ್ನು `ಆರ್‌ಬಿಐ' ಶೇ 5.8ರಿಂದ ಶೇ 5.5ಕ್ಕೆ ತಗ್ಗಿಸಿದೆ.

ಹೂಡಿಕೆಗೆ ಉತ್ತೇಜನ

`ನಗದು ಮೀಸಲು ಅನುಪಾತ (ಸಿಆರ್‌ಆರ್) ತಗ್ಗಿರುವುದರಿಂದ ಫೆಬ್ರುವರಿ 9ರ ನಂತರ ಮಾರುಕಟ್ಟೆಗೆ ್ಙ18 ಸಾವಿರ ಕೋಟಿ ಬಂಡವಾಳ ಹರಿದು ಬರಲಿದ್ದು, ಹೂಡಿಕೆ ಚಟುವಟಿಕೆಗಳು ಹೆಚ್ಚಲಿವೆ. ಸಾಲದ ಮೇಲಿನ ಬಡ್ಡಿ ದರಗಳು ಗಣನೀಯವಾಗಿ ಇಳಿಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಗತ್ಯದ ಕ್ರಮವಾಗಿತ್ತು. ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಗೆ `ಆರ್‌ಬಿಐ' ಬಡ್ಡಿ ದರ ಕಡಿತ ಇನ್ನಷ್ಟು ಬಲ ತುಂಬಿದೆ' ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮ ವಲಯ ಸ್ವಾಗತ
ಸಾಲದ ಮೇಲಿನ ಬಡ್ಡಿ ದರ ಏರಿಕೆಯು ಒಟ್ಟಾರೆ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ರೆಪೊ ದರ ತಗ್ಗಿರುವುದರಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಲಿದೆ. ಉದ್ಯಮ ವಲಯ ಈ ಕ್ರಮವನ್ನು ಸ್ವಾಗತಿಸುತ್ತದೆ' ಎಂದು `ಜೆಎಸ್‌ಡಬ್ಲ್ಯು' ಸ್ಟೀಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶೇಷಗಿರಿ ರಾವ್ ಹೇಳಿದ್ದಾರೆ.

`ಕೈಗಾರಿಕೆ ಮತ್ತು ತಯಾರಿಕೆ ವಲಯಕ್ಕೆ ಇದರಿಂದ ಗರಿಷ್ಠ ಉತ್ತೇಜನ ಲಭಿಸಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ     (ಫಿಕ್ಕಿ) ಅಧ್ಯಕ್ಷೆ ನೈನಾ ಲಾಲ್ ಕಿದ್ವಾಯಿ ಹೇಳಿದ್ದಾರೆ. `ಸಿಆರ್‌ಆರ್' ಕಡಿತದ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸಲಿವೆ. ಇದರಿಂದ ಆರ್ಥಿಕ ವೃದ್ಧಿಗೆ ಉತ್ತೇಜನ ಲಭಿಸಲಿದೆ ಎಂದು `ಅಸೋಚಾಂ' ಅಧ್ಯಕ್ಷ ರಾಜ್‌ಕುಮಾರ್ ದೂತ್ ಅಭಿಪ್ರಾಯಪಟ್ಟಿದ್ದಾರೆ.

ಚಾಲ್ತಿ ಖಾತೆ ಕೊರತೆ
ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚುತ್ತಿರುವುದು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಿದ್ದು, ಪ್ರಗತಿಗೆ ತಡೆಯಾಗಿದೆ ಎಂದು `ಆರ್‌ಬಿಐ' ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ      `ಸಿಎಡಿ'        `ಜಿಡಿಪಿ' ಯ  ಶೇ 5.4ಕ್ಕೆ ಏರಿಕೆ ಕಂಡಿದೆ. ವಿದೇಶಿ ವಿನಿಮಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು `ಆರ್‌ಬಿಐ' ಕಳವಳ  ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT