ADVERTISEMENT

ಆರ್‌ಬಿಐ ಬಡ್ಡಿ ದರ ಮತ್ತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಮುಂಬೈ (ಪಿಟಿಐ): ಹಣದುಬ್ಬರವು ಎರಡಂಕಿ ಮಟ್ಟಕ್ಕೆ ಏರಿಕೆಯಾಗುತ್ತಿರುವುದು ಮತ್ತು ಕಾರ್ಖಾನೆಗಳ ಉತ್ಪಾದನೆ ಹೆಚ್ಚಳ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಶೇ 0.25ರಷ್ಟು ಹೆಚ್ಚಿಸಿದೆ.

ಇದರಿಂದ ವಾಣಿಜ್ಯ, ಗೃಹ, ವಾಹನ ಖರೀದಿ ಸಾಲಗಳು ತುಟ್ಟಿಯಾಗುವ ಸಾಧ್ಯತೆಗಳು ಇದ್ದರೂ, ಬ್ಯಾಂಕ್ ಬಡ್ಡಿ ದರಗಳು ತಕ್ಷಣಕ್ಕೆ ಹೆಚ್ಚುವ ನಿರೀಕ್ಷೆಗಳು ಇಲ್ಲ ಎಂದು ಬ್ಯಾಂಕ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ತೃತೀಯ ತ್ರೈಮಾಸಿಕದ ಹಣಕಾಸು ಸಾಧನೆ ಪರಾಮರ್ಶೆಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 6.25ರಿಂದ ಶೇ 6.50ಕ್ಕೆ ಮತ್ತು ರಿವರ್ಸ್ ರೆಪೊ ದರವನ್ನು ಶೇ 5.25ದಿಂದ ಶೇ 5.50ಕ್ಕೆ ಏರಿಸಿದೆ. ಬೆಲೆಗಳ ಏರಿಕೆಗೆ ಕಡಿವಾಣ ವಿಧಿಸಲು ಮತ್ತು ಆರ್ಥಿಕ ಅಭಿವೃದ್ಧಿ ವೇಗ ಕಾಯ್ದುಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ದುವ್ವೆರಿ ಸುಬ್ಬರಾವ್, ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವರ್ಷಾಂತ್ಯದ ಹೊತ್ತಿಗೆ ಬಡ್ಡಿ ದರವು ಶೇ  7ರಷ್ಟು ಮತ್ತು ಆರ್ಥಿಕ ವೃದ್ಧಿ ದರ ಶೇ 8.5ರಷ್ಟು ಇರುವ ಅಂದಾಜು ಮಾಡಲಾಗಿದೆ ಎಂದರು.ರೆಪೊ ದರವು- ವಾಣಿಜ್ಯ ಬ್ಯಾಂಕ್‌ಗಳು ತನ್ನಿಂದ ಪಡೆಯುವ ಸಾಲಕ್ಕೆ ಕೇಂದ್ರೀಯ ಬ್ಯಾಂಕ್ ವಿಧಿಸುವ ಬಡ್ಡಿ ದರವಾಗಿದೆ. 

 ಇದರಿಂದ ಬ್ಯಾಂಕ್‌ಗಳು ಸಾಲ ಪಡೆಯುವುದು ದುಬಾರಿಯಾಗಿ ಪರಿಣಮಿಸಲಿದೆ. ರಿವರ್ಸ್ ರೆಪೊ ದರವು-ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವಾಗಿದೆ. ಇದು ಹೆಚ್ಚಳಗೊಂಡರೆ, ಬ್ಯಾಂಕ್‌ಗಳು ತಮ್ಮ ಬಳಿಯಲ್ಲಿನ ಹಣವನ್ನು ಆರ್‌ಬಿಐನಲ್ಲಿ ಠೇವಣಿ ಇಡುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ನಗದು ಮೀಸಲು ಅನುಪಾತ (ಸಿಆರ್‌ಆರ್) ಮತ್ತು ಶಾಸನಬದ್ಧ ನಗದು ಅನುಪಾತಗಳು (ಎಸ್‌ಎಲ್‌ಆರ್), ಬ್ಯಾಂಕ್‌ಗಳು  ತಮ್ಮಲ್ಲಿನ ಠೇವಣಿಗಳಿಗೆ ಪ್ರತಿಯಾಗಿ ನಗದು ಹಣ, ಚಿನ್ನ ಮತ್ತು ಸರ್ಕಾರಿ ಬಾಂಡ್‌ಗಳ ಪ್ರಮಾಣ ನಿರ್ಧರಿಸುತ್ತವೆ.

ಆರ್‌ಬಿಐನಲ್ಲಿ ವಾಣಿಜ್ಯ ಬ್ಯಾಂಕ್‌ಗಳು ನಗದು ಠೇವಣಿ ಇರಿಸುವ  ಶೇ 6ರಷ್ಟು ‘ಸಿಆರ್‌ಆರ್’ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸಾಲಗಳ ಅಗತ್ಯ ಈಡೇರಿಸಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು  ಪ್ರಮಾಣದ ನಗದು ಲಭ್ಯತೆ ಇರುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ.   ಎಸ್‌ಎಲ್‌ಆರ್’  ನಲ್ಲಿಯೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 2010ರಲ್ಲಿ ಆರ್‌ಬಿಐ ತನ್ನ ಪ್ರಮುಖ ನೀತಿ ನಿರೂಪಣಾ ಅಲ್ಪಾವಧಿ ಬಡ್ಡಿ ದರಗಳನ್ನು 6 ಬಾರಿ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.