ADVERTISEMENT

ಆರ್‌ಬಿಐ: ಬಡ್ಡಿ ದರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 19:30 IST
Last Updated 31 ಜುಲೈ 2012, 19:30 IST
ಆರ್‌ಬಿಐ: ಬಡ್ಡಿ ದರ ಯಥಾಸ್ಥಿತಿ
ಆರ್‌ಬಿಐ: ಬಡ್ಡಿ ದರ ಯಥಾಸ್ಥಿತಿ   

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಇಲ್ಲಿ ಮೊದಲ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಿದ್ದು, ಅಲ್ಪಾವಧಿ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸ ತರದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

`ಗರಿಷ್ಠ ಹಣದುಬ್ಬರ ದರ ಮತ್ತು ಮುಂಗಾರು ಕುಂಠಿತಗೊಂಡಿರುವ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಚೇತರಿಕೆಗೆ (ಜಿಡಿಪಿ) ಆದ್ಯತೆ ನೀಡುವುದು ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ತೈಲ ಮತ್ತು ರಸಗೊಬ್ಬರ ಸಬ್ಸಿಡಿ ಕಡಿತಕ್ಕೆ ಮುಂದಾಗಬೇಕು~ ಎಂದು `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ. 

ರೆಪೊ ಮತ್ತು ರಿವರ್ಸ್ ರೆಪೊ ದರ   ಲ್ಲಿ ಯಾವುದೇ ವ್ಯತ್ಯಾಸ ತರದಿದ್ದರೂ, `ಆರ್‌ಬಿಐ~ ಬ್ಯಾಂಕುಗಳ `ಶಾಸನಬದ್ಧ ನಗದು ಅನುಪಾತ~ (ಎಸ್‌ಎಲ್‌ಆರ್) ದಲ್ಲಿ ಶೇ 1ರಷ್ಟು ಇಳಿಕೆ ಮಾಡಿದ್ದು, ಶೇ 23ಕ್ಕೆ ತಗ್ಗಿಸಿದೆ.  ಬ್ಯಾಂಕುಗಳು ಸರ್ಕಾರಿ ಸಾಲ ಪತ್ರಗಳ ಮೇಲೆ ಹೂಡಿರುವ ಠೇವಣಿ ಇದಾಗಿದ್ದು, ಪರಿಷ್ಕೃತ ದರ ಆಗಸ್ಟ್ 11ರಿಂದ ಅನ್ವಯವಾಗಲಿದೆ.

ಕಳವಳಕಾರಿ ಸಂಗತಿ ಎಂದರೆ `ಆರ್‌ಬಿಐ~ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಶೇ 7.3ರಿಂದ  6.5ಕ್ಕೆ ತಗ್ಗಿಸಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ಹಿನ್ನಲೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ದಾಖಲಿಸುವುದು ಕಷ್ಟ ಎಂದು ಹೇಳಿದೆ.

ಸದ್ಯ ರೆಪೊ ದರ ಶೇ 8, ರಿವರ್ಸ್ ರೆಪೊ ದರ ಶೇ 7  ಮತ್ತು ಬ್ಯಾಂಕುಗಳ ನಗದು ಮೀಸಲು ಅನುಪಾತ (ಸಿಆರ್‌ಆರ್) ಶೇ 4.75ರಷ್ಟಿದೆ.  ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡಲು  `ಆರ್‌ಬಿಐ~ ಕನಿಷ್ಠ ಪಕ್ಷ `ಸಿಆರ್‌ಆರ್~ ದರವಾದರೂ ತಗ್ಗಿಸಬಹುದು ಎಂದು ಉದ್ಯಮ ವಲಯ ನಿರೀಕ್ಷಿಸಿತ್ತು. ಆದರೆ, ಹಣದುಬ್ಬರ `ಹಿತಕರ ಮಟ್ಟಕ್ಕೆ~ ಇಳಿಯದ ಹೊರತು ಬಡ್ಡಿ ದರ ತಗ್ಗಿಸುವುದಿಲ್ಲ ಎಂಬ ಸೂಚನೆ ನೀಡಿರುವ `ಆರ್‌ಬಿಐ~ ಆರ್ಥಿಕ ಚೇತರಿಕೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಶೇ 6.5ರಷ್ಟು `ಜಿಡಿಪಿ~
ನವದೆಹಲಿ (ಐಎಎನ್‌ಎಸ್):  `
ದೇಶದ ಆರ್ಥಿಕ ಪ್ರಗತಿಯು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6 ರಿಂದ ಶೇ 6.5ರ ನಡುವೆ ಇರಲಿದೆ. ಶೇ 8ರಷ್ಟು ವೃದ್ಧಿ ದಾಖಲಿಸಲು ಇನ್ನೂ ಕನಿಷ್ಠ 2 ವರ್ಷಗಳಾದರೂ ಬೇಕು~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

`ಮಂಗಳವಾರ ಇಲ್ಲಿ `ಆರ್‌ಬಿಐ~ ಹಣಕಾಸು ನೀತಿ ಕುರಿತು ಪ್ರತಿಕ್ರಿಯಿಸಿದ ಅವರು, `ಹಣದುಬ್ಬರ ಇನ್ನೂ ಗರಿಷ್ಠ ಮಟ್ಟದಲ್ಲಿದೆ ಎನ್ನುವುದನ್ನು `ಆರ್‌ಬಿಐ~ ನೀತಿ ಸ್ಪಷ್ಟಪಡಿಸುತ್ತದೆ. ಹಣದುಬ್ಬರ  ಹಿತಕರ ಮಟ್ಟವಾದ ಶೇ 4ರಿಂದ ಶೇ 5ಕ್ಕೆ ತಗ್ಗಿಸುವುದು ಸದ್ಯದ ತುರ್ತು ಅಗತ್ಯ~ ಎಂದರು.

`ರೆಪೊ ಅಥವಾ ರಿವರ್ಸ್ ರೆಪೊ ದರದಲ್ಲಿ ಆಗುವ ಪರಿಷ್ಕರಣೆ  ಹೂಡಿಕೆ ಚಟುವಟಿಕೆಗಳ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ `ಆರ್‌ಬಿಐ~ ನೀತಿಯೊಂದೇ  ದೇಶದ ಆರ್ಥಿಕ ಪ್ರಗತಿ ನಿರ್ಧರಿಸುವ ಪ್ರಮುಖ ಮಾನದಂಡ ಅಲ್ಲ~ ಎಂದರು.

`ಸರಿಯಾದ ಕ್ರಮ-ಬಸು~
ನವದೆಹಲಿ (ಪಿಟಿಐ): `
ಆರ್‌ಬಿಐ~ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಂಡಿದೆ~ ಎಂದು ಹಿರಿಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ.ಎಎಲ್‌ಆರ್~ ದರ ತಗ್ಗಿಸಿರುವುದು ಉತ್ತಮ ಕ್ರಮ. ಇದು ಸ್ವಲ್ಪ ಮಟ್ಟಿಗೆ ಮಾರುಕಟ್ಟೆಗೆ ಚೇತರಿಕೆ ನೀಡಲಿದೆ. ಸದ್ಯ ದೇಶದ ಆರ್ಥಿಕತೆ ಅತ್ಯಂತ ದುರ್ಗಮ ಹಾದಿಯಲ್ಲಿದ್ದು, ಮುಂದಿನ ತ್ರೈಮಾಸಿಕ ಅವಧಿಯಲ್ಲೂ (ಜುಲೈ-ಸೆಪ್ಟೆಂಬರ್) `ಜಿಡಿಪಿ~ ಶೇ 6ಕ್ಕಿಂತ ಕಡಿಮೆ ಇರಲಿದೆ.  ಸೆಪ್ಟೆಂಬರ್ ನಂತರ ಹಣದುಬ್ಬರ ಶೇ 7ಕ್ಕೆ ಇಳಿಕೆ ಕಾಣಬಹುದು ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.