ADVERTISEMENT

ಆಹಾರ ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಆಹಾರ ಹಣದುಬ್ಬರ ಇಳಿಕೆ
ಆಹಾರ ಹಣದುಬ್ಬರ ಇಳಿಕೆ   

ನವದೆಹಲಿ (ಪಿಟಿಐ): ಆಲೂಗಡ್ಡೆ ಮತ್ತು ಬೇಳೆಕಾಳು ಬೆಲೆಗಳು ಅಗ್ಗವಾಗಿದ್ದರಿಂದ ಮಾರ್ಚ್ 5ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು  ಶೇ 9.42ರಷ್ಟಾಗಿ ಮೂರುವರೆ ತಿಂಗಳ ಹಿಂದಿನ ಮಟ್ಟಕ್ಕೆ ಇಳಿದಿದೆ.

ಹಿಂದಿನ ವಾರದಲ್ಲಿ ಇದು ಶೇ 9.52ರಷ್ಟಿತ್ತು. ಈ ಇಳಿಕೆ ಪ್ರವೃತ್ತಿಯು ಮುಂಬರುವ ವಾರಗಳಲ್ಲಿಯೂ ಇದೇ ಬಗೆಯಲ್ಲಿ ಮುಂದುವರೆಯುವ ನಿರೀಕ್ಷೆ ಇದೆ.

ಈಗಲೂ ಆಹಾರ ಹಣದುಬ್ಬರವು ಹಿತಕರ ಮಟ್ಟದಲ್ಲಿ ಇರದಿದ್ದರೂ, ಅವಶ್ಯಕ ಸರಕುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಸರ್ಕಾರದ ಪಾಲಿಗೆ ಸದ್ಯಕ್ಕೆ ಕೊಂಚ ಸಮಾಧಾನ ತಂದಿದೆ.ಹಣ್ಣು, ಹಾಲು ಮತ್ತು ಪ್ರೋಟಿನ್ ಆಧಾರಿತ ಪದಾರ್ಥಗಳು ಈಗಲೂ ದುಬಾರಿಯಾಗಿಯೇ ಮುಂದುವರೆದಿವೆ. ಹಣ್ಣು      ಶೇ 19.39ರಷ್ಟು, ಹಾಲು ಶೇ 7.16 ಮತ್ತು ಮೊಟ್ಟೆ. ಮಾಂಸ, ಮೀನಿನ ಬೆಲೆ ಶೇ 13.10ರಷ್ಟು ಹೆಚ್ಚಳಗೊಂಡಿವೆ.

ಗೋಧಿ ಮತ್ತು ಬೇಳೆಕಾಳು ಬೆಲೆಗಳೂ ಏರಿಕೆ ಹಾದಿಯಲ್ಲಿ ಇವೆ. ದ್ವಿದಳ ಧಾನ್ಯಗಳು  ಶೇ 3.88, ಅಕ್ಕಿ ಶೇ 2.75, ತರಕಾರಿಗಳು ಶೇ 8.71ಮತ್ತು ಈರುಳ್ಳಿ  ಶೇ 6.65ರಷ್ಟು ತುಟ್ಟಿಯಾಗಿವೆ. ಸದ್ಯಕ್ಕೆ ಆಹಾರ ಹಣದುಬ್ಬರದ ಮೇಲೆ ತೈಲದಂತಹ ಆಹಾರೇತರ ಸರಕುಗಳ ಒತ್ತಡ ಹೆಚ್ಚಿಗಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಯು ಸದ್ಯಕ್ಕಂತೂ ಸ್ಥಗಿತಗೊಂಡಂತೆ ಆಗಿದೆ ಎಂದು ಕ್ರೈಸಿಲ್‌ನ ಮುಖ್ಯ ಆರ್ಥಿಕ ತಜ್ಞ ಡಿ. ಜೆ. ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.