ADVERTISEMENT

ಆಹಾರ ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:20 IST
Last Updated 17 ಫೆಬ್ರುವರಿ 2011, 17:20 IST

ನವದೆಹಲಿ (ಪಿಟಿಐ): ಈರುಳ್ಳಿ ಮತ್ತು ಬೇಳೆಕಾಳು ಅಗ್ಗವಾಗಿರುವುದರಿಂದ ಫೆಬ್ರುವರಿ 5ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 11.05ರಷ್ಟಾಗಿ ಎರಡು ತಿಂಗಳ ಹಿಂದಿನ ಮಟ್ಟಕ್ಕೆ ಇಳಿದಿದೆ.

ಹಿಂದಿನ ವಾರಕ್ಕೆ ಹೋಲಿಸಿದರೆ ಆಹಾರ ಬೆಲೆಗಳು ಶೇ 13.07ರಿಂದ ಶೇ 11.05ಕ್ಕೆ (ಶೇ 2.02ರಷ್ಟು) ಇಳಿಕೆ ದಾಖಲಿಸಿವೆ.‘ಇನ್ನು ಕೆಲವೇ ವಾರಗಳಲ್ಲಿ ಆಹಾರ ಹಣದುಬ್ಬರ ಒಂದಂಕಿಗೆ ಇಳಿಯಲಿದೆ. ಆಹಾರ ಬೆಲೆ ಏರಿಕೆಯಲ್ಲಿ ಪ್ರತಿ ವಾರ ಇಳಿಕೆಯಾಗುತ್ತಿರುವುದನ್ನು ಪೂರ್ಣವಾಗಿ ನಂಬಲಿಕ್ಕೂ ಆಗುವುದಿಲ್ಲ.  ಒಟ್ಟಾರೆ ವಾರ್ಷಿಕ ಹಣದುಬ್ಬರವು ಮಾರ್ಚ್ ತಿಂಗಳಾಂತ್ಯದ ಹೊತ್ತಿಗೆ, ಜನವರಿ ತಿಂಗಳ ಶೇ 8.23ರಿಂದ ಶೇ 7ಕ್ಕೆ ಕುಸಿಯಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಂದಾಜಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಆಹಾರ ಹಣದುಬ್ಬರವು ಎರಡಂಕಿಯಲ್ಲಿಯೇ ಮುಂದುವರೆದಿತ್ತು. ತರಕಾರಿಗಳ ದುಬಾರಿ ಬೆಲೆ ಫಲವಾಗಿ ಡಿಸೆಂಬರ್ ತಿಂಗಳಾಂತ್ಯದಲ್ಲಿ ಶೇ 18ರ ಗಡಿಯನ್ನೂ ದಾಟಿತ್ತು.

ವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ ಆಲೂಗಡ್ಡೆ ಬೆಲೆ  ಶೇ 13.63, ಬೇಳೆಕಾಳು ಶೇ 5.88 ಮತ್ತು ಗೋಧಿ ಶೇ 2.54ರಷ್ಟು ಅಗ್ಗವಾಗಿವೆ.ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಆತಂಕ ಮೂಡಿಸಿದ್ದವು. ಈ ತಲೆಬಿಸಿಯಿಂದ ಪಾರಾಗಲು ಸರ್ಕಾರ ಹಲವಾರು ಕ್ರಮಗಳನ್ನೂ ಕೈಗೊಂಡಿತ್ತು.

ಇತ್ತೀಚಿನ ದಿನಗಳಲ್ಲಿ ಆಹಾರ ಬೆಲೆ ಏರಿಕೆ ಯಲ್ಲಿ ಇಳಿಕೆ ಗೋಚರಿಸುತ್ತಿರುವ ಪ್ರವೃತ್ತಿ ಇನ್ನಷ್ಟು ಮುಂದುವರೆಯಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ತರಕಾರಿ ಬೆಲೆಗಳು ಇನ್ನಷ್ಟು ಇಳಿಕೆ ದಾಖಲಿಸಿದರೂ ಈ ತಿಂಗಳ ಉಳಿದ ಅವಧಿಯಲ್ಲಿ ಆಹಾರ ಬೆಲೆ ಏರಿಕೆಯು ಎರಡಂಕಿಯಲ್ಲಿಯೇ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ.

ವಾರ್ಷಿಕ ಸರಾಸರಿ ಆಹಾರ ಹಣದುಬ್ಬರವು ಈಗಲೂ ಗರಿಷ್ಠ ಮಟ್ಟದಲ್ಲಿಯೇ ಇದೆ. ಈರುಳ್ಳಿ ಮತ್ತು ತರಕಾರಿಗಳು ದುಬಾರಿಯಾಗಿರುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ ಎಂದು ಧನಲಕ್ಷ್ಮಿ ಬ್ಯಾಂಕ್‌ನ ಸಂಶೋಧನೆ ಮತ್ತು ನೀತಿ ನಿರೂಪಣಾ ವಿಭಾಗದ ಮುಖ್ಯಸ್ಥ ರಾಜ್‌ರಿಷಿ ಸಿಂಘಾಲ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.