ADVERTISEMENT

ಆಹಾರ ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಅಕ್ಟೋಬರ್ 1ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು  ಶೇ 9.32ಕ್ಕೆ ಇಳಿದಿದ್ದರೂ, ಸತತ ಮೂರನೇ ವಾರವೂ ಶೇ 9ರ ಮಟ್ಟದಲ್ಲಿಯೇ ಇದೆ.

ತರಕಾರಿ, ಹಣ್ಣು ಮತ್ತು ಹಾಲಿನ ಬೆಲೆಗಳು ಈಗಲೂ ದುಬಾರಿ ಮಟ್ಟದಲ್ಲಿಯೇ ಇರುವುದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ  ಆಹಾರ ಬೆಲೆಏರಿಕೆಯು ಹಿಂದಿನ ವಾರ ಶೇ 9.41ರಷ್ಟಿತ್ತು.

ಆಹಾರ ಧಾನ್ಯಗಳ ಬೆಲೆ ಏರಿಕೆಯು ಭಾಗಶಃ ಇಳಿಕೆಯಾಗುತ್ತಿದ್ದರೂ, ವಾರದ ಕುಸಿತವು ದೀರ್ಘಾವಧಿಯಲ್ಲಿಯೂ ಕಾರ್ಯಗತಗೊಂಡು ಹಿತಕರ ಮಟ್ಟಕ್ಕೆ ಇಳಿಯಬೇಕಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕದ ಪ್ರಕಾರ, ತರಕಾರಿಗಳು ಶೇ 13, ಹಣ್ಣು, ಶೇ 12, ಹಾಲು ಶೇ 10ರಷ್ಟು ತುಟ್ಟಿಯಾಗಿವೆ. ಪ್ರೋಟಿನ್ ಆಧಾರಿತ ಮೊಟ್ಟೆ, ಮಾಂಸ ಮತ್ತು ಮೀನು ಶೇ 10ರಷ್ಟು ತುಟ್ಟಿಯಾಗಿವೆ.ದವಸಧಾನ್ಯಗಳು ವಾರ್ಷಿಕವಾಗಿ ಶೇ 5, ಅಕ್ಕಿ ಶೇ 6, ಬೇಳೆಕಾಳು ಶೇ 7ರಷ್ಟು ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.