ADVERTISEMENT

ಆಹಾರ ಹಣದುಬ್ಬರ ಮತ್ತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:00 IST
Last Updated 21 ಏಪ್ರಿಲ್ 2011, 19:00 IST
ಆಹಾರ ಹಣದುಬ್ಬರ ಮತ್ತೆ ಹೆಚ್ಚಳ
ಆಹಾರ ಹಣದುಬ್ಬರ ಮತ್ತೆ ಹೆಚ್ಚಳ   

ನವದೆಹಲಿ (ಪಿಟಿಐ): ಸತತ ಮೂರು ವಾರಗಳ ಕಾಲ ಕುಸಿತ ದಾಖಲಿಸಿದ್ದ ಆಹಾರ ಹಣದುಬ್ಬರವು, ಏಪ್ರಿಲ್ 9ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ 8.74ಕ್ಕೆ ಏರಿಕೆಯಾಗಿದೆ.ಹಣ್ಣು, ಪ್ರೋಟಿನ್ ಆಧಾರಿತ ಪದಾರ್ಥಗಳು, ಈರುಳ್ಳಿ ದುಬಾರಿಯಾಗಿದ್ದರಿಂದ ಹಣದುಬ್ಬರ ಮತ್ತೆ ಏರಿಕೆ ಹಾದಿಗೆ ಮರಳಿದೆ.

ಹಿಂದಿನ ವಾರದಲ್ಲಿ ಇದು ಒಂದೂವರೆ ವರ್ಷದ ಹಿಂದಿನ (ಶೇ 8.28ರಷ್ಟು) ಮಟ್ಟದಲ್ಲಿತ್ತು. ಮಾರ್ಚ್ ತಿಂಗಳಲ್ಲಿ ಸಮಗ್ರ ಹಣದುಬ್ಬರವೂ ಶೇ 8.98ರಷ್ಟಾಗಿತ್ತು.

ಗರಿಷ್ಠ ಪ್ರಮಾಣದ ಹಣದುಬ್ಬರವು, ಅದರಲ್ಲೂ ವಿಶೇಷವಾಗಿ ಆಹಾರ ಪದಾರ್ಥಗಳಲ್ಲಿನ ಹೆಚ್ಚಳವು ಕಳವಳಕ್ಕೆ ಎಡೆ ಮಾಡಿಕೊಟ್ಟಿದೆ. ಕೃಷಿ ಉತ್ಪಾದನೆ ಹೆಚ್ಚಳದಿಂದಲೇ ಈ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನಸಂಖ್ಯೆ ಹೆಚ್ಚಳ ಮತ್ತು ಆದಾಯ ಹೆಚ್ಚಳಕ್ಕೆ ವೈವಿಧ್ಯಮಯ ಕೃಷಿ ಉತ್ಪಾದನೆಗಳ ಹೆಚ್ಚಳವೊಂದೇ ಪರಿಹಾರ ಒದಗಿಸಬಲ್ಲದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಅಭಿಪ್ರಾಯಪಟ್ಟಿದ್ದಾರೆ. ಮೂರು ವಾರಗಳ ಕುಸಿತದ ನಂತರ ಆಹಾರ ಹಣದುಬ್ಬರವು ಮತ್ತೆ ಹಠಾತ್ತಾಗಿ ಏರಿಕೆ ಕಂಡಿರುವುದು ಸರ್ಕಾರದ ಚಿಂತೆಯನ್ನೂ ಹೆಚ್ಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2010ರ ಮಾರ್ಚ್ ತಿಂಗಳಿನಿಂದೀಚೆಗೆ 8 ಬಾರಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದರೂ, ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಲೆ ಏರಿಕೆ ಪರಿಸ್ಥಿತಿ ನಿಭಾಯಿಸುವಲ್ಲಿ ಬ್ಯಾಂಕ್‌ನ ಹಣಕಾಸು ನೀತಿ ಸಫಲವಾಗಿಲ್ಲ. ಬಡ್ಡಿ ದರಗಳ ಹೆಚ್ಚಳವು ಆಹಾರ ಪದಾರ್ಥಗಳ ಬೆಲೆ ಮೇಲೆ ಸೀಮಿತ ಪ್ರಭಾವ ಬೀರಿದೆ ಎಂದು ‘ಆರ್‌ಬಿಐ’ ಅಭಿಪ್ರಾಯಪಟ್ಟಿದೆ. ಸರಕುಗಳ ಪೂರೈಕೆಯಲ್ಲಿನ ಅಡಚಣೆಗಳೇ ಈ ವಿದ್ಯಮಾನಕ್ಕೆ ಪ್ರಮುಖ ಕಾರಣ.

ಹಣ್ಣು ಹಾಗೂ ಪ್ರೋಟಿನ್ ಆಧಾರಿತ ಮೊಟ್ಟೆ, ಮಾಂಸ, ಮೀನು ಬೆಲೆಗಳು ಏರಿಕೆಯಾಗಿವೆ. ವರ್ಷದ ಲೆಕ್ಕದಲ್ಲಿ ಇವುಗಳ ಬೆಲೆಗಳು ಕ್ರಮವಾಗಿ ಶೇ 25 ಮತ್ತು ಶೇ 14.96ರಷ್ಟು ಹೆಚ್ಚಳಗೊಂಡಿದ್ದರೆ, ದ್ವಿದಳ ಧಾನ್ಯಗಳು ಶೇ 4.48ರಷ್ಟು ತುಟ್ಟಿಯಾಗಿವೆ. ಅಕ್ಕಿ ಮತ್ತು ಗೋಧಿ ಬೆಲೆ ಶೇ 2.08, ಶೇ 1.31 ಮತ್ತು ಈರುಳ್ಳಿ ಶೇ 8.28ರಷ್ಟು ದುಬಾರಿಯಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.