ADVERTISEMENT

ಇದು `ಟ್ಯಾಬ್ಲೆಟ್' ಸಮಯ

ಕೆ.ಎಸ್.ಗಿರೀಶ್
Published 5 ಫೆಬ್ರುವರಿ 2013, 19:59 IST
Last Updated 5 ಫೆಬ್ರುವರಿ 2013, 19:59 IST
ಇದು `ಟ್ಯಾಬ್ಲೆಟ್' ಸಮಯ
ಇದು `ಟ್ಯಾಬ್ಲೆಟ್' ಸಮಯ   

ಡೆಸ್ಕ್‌ಟಾಪ್ ಕಂಪ್ಯೂಟರ್, ಲ್ಯಾಪ್‌ಟಾಪ್, ನೋಟ್‌ಬುಕ್, ಟ್ಯಾಬ್ಲೆಟ್... ಆಧುನಿಕ ಗಣಕ ಯಂತ್ರ ಲೋಕದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ಪರಿಕರಗಳಿವು.

ಇವು ನಗರಗಳಲ್ಲಿನ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿ ಪರಿಣಮಿಸಿವೆ. ಊಟ, ತಿಂಡಿ, ನಿದ್ದೆಯಂತಹ ಮೂಲಭೂತ ಅಗತ್ಯದ ಜತೆಗೆ ಹಾಸುಹೊಕ್ಕಾಗಿ ಮನೆಗಳ ಒಳಗಿನ ಕೋಣೆಗಳನ್ನೂ ಹೊಕ್ಕಿವೆ. ಇಂದು ಈ ಎಲೆಕ್ಟ್ರಾನಿಕ್ ಸಾದನವಿಲ್ಲದೆ ಉಸಿರಾಡುವುದೂ ಸಾಧ್ಯವಿಲ್ಲವೇನೋ ಎಂಬಷ್ಟರ ಮಟ್ಟಿಗೆ ಪರ್ಸನಲ್ ಕಂಪ್ಯೂಟರ್(ಪಿ.ಸಿ), ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳು ಜನರ ಜೀವನವನ್ನು ಆವರಿಸಿಕೊಂಡಿವೆ.

ಮೊದಲಿಗೆ ಕೇವಲ ಲೆಕ್ಕ ಮಾಡುವುದಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಗಣಕಯಂತ್ರಗಳು ಕ್ರಮೇಣ ಉದ್ಯಮದ ಎಲ್ಲಾ ರಂಗಗಳಿಗೂ ತಮ್ಮ ಪ್ರಭಾವ ವಿಸ್ತರಿಸಿಕೊಂಡವು. ಕಚೇರಿಗಳಿಂದ ಆರಂಭಿಸಿ ಮನೆಯ ಸ್ಟಡಿ ರೂಂವರೆಗೂ, ದೊಡ್ಡ ಷಾಪಿಂಗ್ ಮಾಲ್‌ನಿಂದ ಹಿಡಿದು ಚಿಕ್ಕ ಕಿರಾಣಿ ಅಂಗಡಿವರೆಗೂ, ಮೆಡಿಕಲ್ ಸ್ಟೋರ್‌ನಿಂದ ಸಿನಿಮಾ-ಬಸ್ ಟಿಕೆಟ್ ವಿತರಿಸುವವರೆಗೂ ಗಣಕಗಳು ಸರ್ವವ್ಯಾಪಿಯಾಗಿವೆ.

ಕಂಪ್ಯೂಟರ್‌ನ `ಸಿಆರ್‌ಟಿ' ಮಾನಿಟರ್ ಮೊದಲಿಗೆ ದೊಡ್ಡ ಟಿವಿ ಗಾತ್ರದಲ್ಲಿ, ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್(ಸಿಪಿಯು) ಸೂಟ್‌ಕೇಸ್ ರೀತಿ ದೊಡ್ಡದಾಗಿ ಇರುತ್ತಿತ್ತು. ಕೀಲಿಮಣೆಯೂ ಆರಂಭದ ದಿನಗಳಲ್ಲಿ ಹೆಚ್ಚಿನಂಶ ಟೈಪ್‌ರೈಟರ್ ಮಾದರಿಯಲ್ಲಿಯೇ ಇದ್ದಿತು. ಮೌಸ್ ತನ್ನ ಬಾಲವನ್ನು ಸಿಪಿಯುಗೆ ಜೋಡಿಸಿಕೊಂಡೇ ಇರುತ್ತಿತ್ತು. ನಂತರದ ದಿನಗಳಲ್ಲಿ ಕಾಯ, ಆಕಾರ ಮತ್ತು ಸ್ವರೂಪದಲ್ಲಿ ಬದಲಾವಣೆಗಳನ್ನು ಪಡೆದುಕೊಂಡ ಕಂಪ್ಯೂಟರ್, ಗಾತ್ರದಲ್ಲಿ ಪುಟ್ಟದಾಗುತ್ತಾ ಈಗ ಟ್ಯಾಬ್ಲೆಟ್ ಗಾತ್ರಕ್ಕೆ ಇಳಿದಿದೆ.

ದಶಕದ ಹಿಂದೆ ಕಂಪ್ಯೂಟರ್ `ಲ್ಯಾಪ್‌ಟಾಪ್' ಅವತಾರ ತಾಳಿತು. `ತೊಡೆ ಮೇಲೆ'(ಲ್ಯಾಪ್ ಟಾಪ್) ಕೂರುವಷ್ಟು ಹಗುರವಾಗಿದ್ದರೂ ಆರಂಭದ ದಿನಗಳಲ್ಲಿ ಬಹಳ ದುಬಾರಿಯೇ ಆಗಿದ್ದಿತು. ಸಂಶೋಧನೆ-ಅಭಿವೃದ್ಧಿ ನಡೆದಂತೆಲ್ಲ ಲ್ಯಾಪ್‌ಟಾಪ್ ಇನ್ನಷ್ಟು ಹಗುರವಾಯಿತು, ಬೆಲೆಯೂ ತಗ್ಗಿ(ರೂ. 15 ಸಾವಿರಕ್ಕೂ ಲಭ್ಯ) ಎಲ್ಲರ ಕೈಗೂ ಸಿಗುವಂತಾಯಿತು.

ಡೆಸ್ಕ್‌ಟಾಪ್ ಕಚೇರಿ ಮತ್ತು ಮನೆಯ ಟೇಬಲ್ ಮೇಲ್ಲಷ್ಟೆ ಇದ್ದರೆ, ಲ್ಯಾಪ್‌ಟಾಪ್, ಹೊರಗಿದ್ದಾಗ, ಪ್ರಯಾಣ ಮಾಡುವಾಗ, ಎಲ್ಲೆಡೆಯೂ ಸೇವೆಗೆ ಲಭ್ಯ ಎನ್ನುವಂತಾಯಿತು. ಇದೀಗ ಅದರ ಮುಂದುವರೆದ ಭಾಗವೆಂಬಂತೆ ಟ್ಯಾಬ್ಲೆಟ್ ಅವತರಿಸಿದ್ದು, `ಎಲ್ಲೆಲ್ಲೂ ನಾನೇ' ಎನ್ನುವಂತೆ ಗಮನ ಸೆಳೆಯುತ್ತಿದೆ. ಒಂದು ಕಂಪ್ಯೂಟರ್ ಮಾಡುವ ಎಲ್ಲಾ ಕೆಲಸಗಳನ್ನು ಮಾಡಬಲ್ಲಷ್ಟು ಈ ಅಂಗೈ ಅಗಲದ ಟ್ಯಾಬ್ಲೆಟ್ ಸಮರ್ಥವಾಗಿದೆ.

ಏನೇ ಮಾಡಬೇಕಿದ್ದರೂ ಮನೆಗೆ ಬಂದು ಡೆಸ್ಕ್‌ಟಾಪ್‌ಗಳ ಕದ ತಟ್ಟುವಷ್ಟು ವ್ಯವಧಾನ ಇಂದು ಯಾರಿಗಿದೆ? ಅದಕ್ಕೆಂದೇ ಟ್ಯಾಬ್ಲೆಟ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ `ಡೆಸ್ಕ್‌ಟಾಪ್'ಗಳಿಗೆ ದೊಡ್ಡ ಪೆಟ್ಟು ನೀಡಿವೆ. `ಡೆಸ್ಕ್‌ಟಾಪ್ ಗಣಕ'ಗಳ ಮಾರಾಟ ಭರಾಟೆ ಜಾಗತಿಕವಾಗಿ ಕುಗ್ಗಿದ್ದು, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳು ಭಾರಿ ಪ್ರಮಾಣದಲ್ಲಿ ಬಿಕರಿಯಾಗುತ್ತಿವೆ.

ಆದರೆ ಭಾರತದ ಪರಿಸ್ಥಿತಿಯೇ ಬೇರೆ. ಇಲ್ಲಿ ನಿತ್ಯ ಮಾರುಕಟ್ಟೆಗೆ ಹೊಸ ಹೊಸ ಟ್ಯಾಬ್ಲೆಟ್ ಅವತರಿಸುತ್ತಿದ್ದರೂ `ಪಿ.ಸಿ'ಗಳಿಗೆ, ಲ್ಯಾಪ್‌ಟಾಪ್‌ಗಳಿಗೆ ಮಹತ್ವವೇನೂ ಕಡಿಮೆ ಆಗಿಲ್ಲ. ದೊಡ್ಡ ಸಂಸ್ಥೆಗಳ, ಬ್ಯಾಂಕ್, ಆಸ್ಪತ್ರೆ, ಸರ್ಕಾರಿ ಕಚೇರಿಗಳ ಕೆಲಸಕ್ಕೆ ಈಗಲೂ ಡೆಸ್ಕ್‌ಟಾಪ್‌ಗಳೇ ಬೇಕಿದೆ. ಇದೇ ಕಾರಣವಾಗಿ 2012-13ನೇ ಹಣಕಾಸು ವರ್ಷದ ಪ್ರಥಮಾರ್ಧದಲ್ಲಿಯೂ `ಪಿ.ಸಿ'ಗಳು ಎಂದಿನಂತೆ ತಮ್ಮ ಮಾರಾಟ ಮುಂದುವರಿಸಿದವು. ನಂತರದ ದಿನಗಳಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳ ಮಿಂಚಿನ ದಾಳಿಯಿಂದಾಗಿ ಡೆಸ್ಕ್‌ಟಾಪ್ ತುಸು ಮಂಕಾದಂತೆ ಕಂಡು ಬಂದರೂ ಇನ್ನೂ ಭಾರತದಲ್ಲಿ ಪಿ.ಸಿ ಮಾರುಕಟ್ಟೆಗೆ ಅಂತಹ ದೊಡ್ಡ ಹೊಡೆತವಂತೂ ಬಿದ್ದಿಲ್ಲ.

ದೊಡ್ಡ ದೊಡ್ಡ ಕಂಪೆನಿಗಳು, ಮಧ್ಯಮ ಪ್ರಮಾಣದ ಸಂಸ್ಥೆಗಳಷ್ಟೇ ಅಲ್ಲ, ಭಾರತದ ಉದ್ಯಮ, ಶೈಕ್ಷಣಿಕ, ಆರೋಗ್ಯ ಮೊದಲಾದ ಎಲ್ಲ ಕ್ಷೇತ್ರಗಳು ಬಹಳ ವೇಗವಾಗಿ ಗಣಕೀಕರಣಗೊಳ್ಳುತ್ತಿವೆ. ಮೊದಲಿಗೆ ಕೇವಲ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಮಾತ್ರವೇ ಕಂಪ್ಯೂಟರ್‌ಗಳ ಬಳಕೆ ಕಾಣುತ್ತಿತ್ತು. ಈಗ ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೂ ಕಂಪ್ಯೂಟರ್ ಬಳಕೆ ಇದೆ.

ನಗರ ಪ್ರದೇಶದ ಬ್ಯಾಂಕ್‌ಗಳಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶದ ಸಣ್ಣ ಹಣಕಾಸು ಸಂಸ್ಥೆಗಳೂ ಕಂಪ್ಯೂಟರ್ ಬಳಸಿಯೇ ವಹಿವಾಟು ನಡೆಸುತ್ತಿವೆ. ಸರ್ಕಾರದ ಮಟ್ಟದಲ್ಲಿಯೂ ಎಲ್ಲಾ ಆಡಳಿತ, ಟೆಂಡರ್, ಸಿಬ್ಬಂದಿ ನೇಮಕ ಪ್ರಕ್ರಿಯೆ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಕಂಪ್ಯೂಟರ್ ಬಳಕೆ ಅನಿವಾರ್ಯ ಎನ್ನುವಂತಾಗಿದೆ.

ಶೈಕ್ಷಣಿಕ ರಂಗದಲ್ಲಿಯಂತೂ ಕಂಪ್ಯೂಟರ್‌ಗಳ ಪ್ರವೇಶ ದೊಡ್ಡಮಟ್ಟದಲ್ಲೇ ಆಗಿದೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಗಣಕ ಯಂತ್ರವಿಲ್ಲದೆ ಕೆಲಸವೇ ಸಾಗದು. ಇತ್ತೀಚೆಗೆ ನಗರ ಪ್ರದೇಶದ `ಸ್ಮಾರ್ಟ್' ಶಾಲೆಗಳಲ್ಲಿ ಬೋರ್ಡ್‌ಗಳೇ ಇಲ್ಲ. ಅಲ್ಲೇನಿದ್ದರೂ ವಿಶಾಲವಾದ ಕಂಪ್ಯೂಟರ್ ಸ್ಪರ್ಶಪರದೆ ಪ್ಯಾನೆಲ್ ಮೇಲೆಯೇ ಶಿಕ್ಷಕರು ಪಾಠ ಹೇಳುತ್ತಿದ್ದಾರೆ.

ಪ್ರಮುಖ ಸಾರಿಗೆ ಸೇವೆಗಳಾದ ವಿಮಾನ, ರೈಲು, ಬಸ್ ಪ್ರಯಾಣ ನಿಗದಿ, ಟಿಕೆಟ್ ಮಾರಾಟವೂ ಕಂಪ್ಯೂಟರ್‌ನಿಂದಲೇ ನಡೆಯುತ್ತಿದೆ. ಕಡೆಗೆ ತರಕಾರಿ ಅಂಗಡಿಗಳಲ್ಲೂ ಸಂಗ್ರಹದ ಲೆಕ್ಕ, ಮಾರಾಟ ವಹಿವಾಟು, ಬಿಲ್ಲಿಂಗ್ ಎಲ್ಲದಕ್ಕೂ ಕಂಪ್ಯೂಟರ್ ಬಳಕೆ ಸಾಮಾನ್ಯವಾಗಿದೆ. ಹಳ್ಳಿಗಾಡನ್ನೂ ಗಣಕಯಂತ್ರ ಬಿಟ್ಟಿಲ್ಲ.

ನೆಮ್ಮದಿ ಕೇಂದ್ರ, ಗ್ರಾಮ ಪಂಚಾಯಿತಿ, ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿ ಎಲ್ಲ ಕೆಲಸಕ್ಕೂ ಕಂಪ್ಯೂಟರ್ ನೆರವಾಗುತ್ತಿದೆ. ಒಟ್ಟಾರೆ ಕಂಪ್ಯೂಟರ್ ಸವಾಂತರ್ಯಾಮಿ ಆಗಿದೆ. ಪರಿಣಾಮ ಕಂಪ್ಯೂಟರ್ ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಲೇ ಇದೆ.

ಹೀಗೆ, ಭಾರತದ ಸಕಲ ಕ್ಷೇತ್ರಗಳೂ ಗಣಕೀಕರಣಗೊಳ್ಳುವ ಪ್ರಕ್ರಿಯೆ ನಡೆದಿರುವುದರಿಂದ ಕಂಪ್ಯೂಟರ್‌ಗಳ ಮಾರಾಟ ಜೋರಾಗಿದೆ. ಸಂಸ್ಥೆಗಳಲ್ಲಿನ ಬಳಕೆಗೆ ಡೆಸ್ಕ್‌ಟಾಪ್ ಕಂಪ್ಯೂಟರ್ ಅಗತ್ಯವಾಗಿದೆ. ಹಾಗಾಗಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಬಂದಿದ್ದರೂ ಡೆಸ್ಕ್‌ಟಾಪ್‌ಗೆ ಬೇಡಿಕೆ ಕುಗ್ಗುವ ಪ್ರಶ್ನೆಯೇ ಇಲ್ಲ ಎನ್ನುವಂತಾಗಿದೆ.

ಆದರೆ ಮಹಾ ನಗರಗಳಲ್ಲಿ ಈಗ ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮೊಬೈಲ್ ಫೋನ್‌ಗಿಂತ ಗಾತ್ರದಲ್ಲಿ ಕೊಂಚ ಹಿರಿದಾದ, ಆದರೆ ಬೆಲೆಯಲ್ಲಿ ಕಡಿಮೆ ಇರುವ ಟ್ಯಾಬ್ಲೆಟ್ ಯುವಜನರ ಮೆಚ್ಚಿನ ಗ್ಯಾಡ್ಜೆಟ್ ಆಗಿಬಿಟ್ಟಿದೆ. ಸದಾ ಗೇಮಿಂಗ್, ಇಂಟರ್ನೆಟ್, ವೀಡಿಯೋ ಷೇರಿಂಗ್, ಫೇಸ್‌ಬುಕ್ ಚಟುವಟಿಕೆ ನಡೆಸುವವರಿಗೆ ಟ್ಯಾಬ್ಲೆಟ್ ಎಂಬುದು ಸದಾ ಜತೆಯಲ್ಲಿರುವ `ಆಪ್ತಮಿತ್ರ' ಎನ್ನುವಂತಾಗಿದೆ.

ಟ್ಯಾಬ್ಲೆಟ್‌ಗಳ ಗಾತ್ರ ಅಂಗೈ ಅಗಲಕ್ಕಿಳಿದಿರುವುದು, ಕೆಲವದರಲ್ಲಿ ಸಿಮ್ ಕಾರ್ಡ್ ಬಳಸಲು ಅನುಕೂಲವಿದ್ದು ದೂರವಾಣಿ ಕರೆ ಮಾಡಲೂ ಅನುಕೂಲ ಇರುವುದು, ಹೋದಲ್ಲಿಗೆಲ್ಲಾ ಜೇಬಿನಲ್ಲೋ, ಪುಟ್ಟ ಕೈಚೀಲದಲ್ಲೋ ಇಟ್ಟುಕೊಂಡು ಸುಲಭವಾಗಿ ಒಯ್ಯುವಂತೆ ಇರುವುದು ಟ್ಯಾಬ್ಲೆಟ್ ಬಳಕೆ ಹೆಚ್ಚಲು ಕಾರಣವಾಗಿದೆ. ಜತೆಗೆ ಬೆಲೆಯೂ ಅಗ್ಗ ಎನ್ನುವಷ್ಟು (ಕೇಂದ್ರ ಸರ್ಕಾರ ಪ್ರಾಯೋಜಿತ ಆಕಾಶ್ ಟ್ಯಾಬ್ಲೆಟ್ ರೂ. 1500) ತಗ್ಗಿರುವುದು ಸಹ ಟ್ಯಾಬ್ಲೆಟ್ ಮಾರುಕಟ್ಟೆ ವಿಸ್ತರಿಸುತ್ತಾ ಹೋಗಲು ಕಾರಣವಾಗಿದೆ.

ಡೆಸ್ಕ್‌ಟಾಪ್ ಕಂಪ್ಯೂಟರ್
ಟ್ಯಾಬ್ಲೆಟ್‌ಗಳು, ನೋಟ್‌ಬುಕ್‌ಗಳ ತೀವ್ರ ಪೈಪೋಟಿಯಲ್ಲೂ ಡೆಸ್ಕ್‌ಟಾಪ್ ಕಂಪ್ಯೂಟರ್ ಮಾರುಕಟ್ಟೆ ಭಾರತದಲ್ಲಿ ಕಳೆಗುಂದಿಲ್ಲ. 2012-13ನೇ ಹಣಕಾಸು ವರ್ಷದ 1ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 29 ಲಕ್ಷ ಕಂಪ್ಯೂಟರ್‌ಗಳು ಭಾರತದಲ್ಲಿ ಮಾರಾಟವಾಗಿವೆ. 2ನೇ ತ್ರೈಮಾಸಿಕದಲ್ಲಿ ಡೆಸ್ಕ್‌ಟಾಪ್‌ಗಳ ಮಾರಾಟ ಕ್ಷೇತ್ರ ಶೇ 17ರಷ್ಟು ಪ್ರಗತಿ ದಾಖಲಿಸಿದೆ(ಗಾರ್ಟ್‌ನರ್ ವರದಿ).

ಆದರೆ 3ನೇ ತ್ರೈಮಾಸಿಕದ ಕೊನೆ ಹೊತ್ತಿಗೆ ಭಾರತದಲ್ಲಿ `ಪಿ.ಸಿ' ಮಾರಾಟ (2011-12ರ ಮೂರನೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ) ಶೇ 5.9ರಷ್ಟು ಕುಸಿದಿದೆ. ಜಾಗತಿಕವಾಗಿಯೂ ಡೆಸ್ಕ್‌ಟಾಪ್‌ಗಳ ಮಾರಾಟ ಹಿನ್ನಡೆ ಕಂಡಿದೆ. ಇನ್ನೊಂದೆಡೆ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಶೈಕ್ಷಣಿಕ ರಂಗದಿಂದಲೂ ಲ್ಯಾಪ್‌ಟಾಪ್‌ಗಳಿಗೆ ಅಪಾರ ಬೇಡಿಕೆ ಬರುತ್ತಿದೆ. ತಮಿಳುನಾಡು ಸರ್ಕಾರವೇ ವಿದ್ಯಾರ್ಥಿಗಳಿಗೆ 9 ಲಕ್ಷ ಲ್ಯಾಪ್‌ಟಾಪ್‌ಗಳನ್ನು ನೀಡಿದೆ. ತಮಿಳುನಾಡು ಸರ್ಕಾರದ ಕ್ರಮದಿಂದ ಲಾಭವಾಗಿದ್ದು ಲೆನೊವೊ ಕಂಪೆನಿಗೆ. ಲೆನೊವೊ, ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಮಾರಾಟದಲ್ಲಿ ಶೇ 86ರಷ್ಟು ಹೆಚ್ಚಳ ಸಾಧಿಸಿ ಭಾರತೀಯ ಕಂಪ್ಯೂಟರ್ ರಂಗದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿತು.

`ಎಚ್‌ಪಿ' ಕಂಪೆನಿ ಶೇ. 36ರಷ್ಟು ಹೆಚ್ಚಳ ಸಾಧಿಸಿದೆ. 2ನೇ ತ್ರೈಮಾಸಿಕ ಅವಧಿಯಲ್ಲೂ `ಪಿ.ಸಿ'ಗಳು ಮಾರಾಟ ಕ್ಷೇತ್ರದಲ್ಲಿ ರಾಜನಾಗಿ ಮೆರೆದದ್ದು ಇದೇ ಲೆನೋವೊ. ಈ ಅವಧಿಯಲ್ಲಿ ಅದು ಶೇ 31.8ರಷ್ಟು ಹೆಚ್ಚಳ ಸಾಧಿಸಿತು.

ಟ್ಯಾಬ್ಲೆಟ್‌ಗಳಿಗೆ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಡೆಸ್ಕ್‌ಟಾಪ್‌ಗಳಿಗೆ ಭಾರಿ ಹೊಡೆತ ನೀಡಿರುವುದು ಈ ಪುಟಾಣಿ ಟ್ಯಾಬ್ಲೆಟ್. ಅಂಗೈ ಅಗಲದಿಂದ ಹಿಡಿದು ಪ್ರಾಥಮಿಕ ಶಾಲೆ ಮಕ್ಕಳು ಬಳಸುತ್ತಿದ್ದ `ಸ್ಲೇಟ್' ಆಕಾರದವರೆಗೂ ಇರುವ ಟ್ಯಾಬ್ಲೆಟ್ ಎಂಬ ಜಾದೂ ಸಾಧನ ಕಂಪ್ಯೂಟರ್‌ಗಳಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳಿಗೂ ಅವಕಾಶ ಮಾಡಿಕೊಡುತ್ತದೆ.

ಮೊಬೈಲ್ ಫೋನ್‌ನಲ್ಲಿ ಬಳಸುವ ಸಿಮ್ ಕಾರ್ಡ್ ಸಹ ಟ್ಯಾಬ್ಲೆಟ್‌ನಲ್ಲಿ ಬಳಸಿ ದೂರವಾಣಿ ಕರೆ ಮಾಡಬಹುದಾಗಿದೆ. ಈ ವಿಚಾರದಲ್ಲಿ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ಗಳಿಗಿಂತ ಟ್ಯಾಬ್ಲೆಟ್ ಒಂದು ಹೆಜ್ಜೆ ಮುಂದೆ ಇದೆ.

ವನಿತೆಯರ ವ್ಯಾನಿಟ್ ಬ್ಯಾಗ್‌ನೊಳಕ್ಕೂ ತೂರಿಕೊಳ್ಳಬಲ್ಲಷ್ಟು ಚಿಕ್ಕಗಾತ್ರ ಮತ್ತು ಹಗುರವಾಗಿರುವ ಟ್ಯಾಬ್ಲೆಟ್, ಕಾಲೇಜು ಲಲನೆಯರು, ಇತ್ತೀಚೆಗಷ್ಟೇ ಐಟಿ ಕ್ಷೇತ್ರದ ಕಂಪೆನಿ ಕೆಲಸಕ್ಕೆ ಸೇರಿದವರ ಯುವತಿಯರ ಪಾಲಿನ ಅಚ್ಚುಮೆಚ್ಚಿನ ಗ್ಯಾಜೆಟ್ ಅಗಿಬಿಟ್ಟಿದೆ.

ಯುವಕರಿಗೂ ಟ್ಯಾಬ್ಲೆಟ್ ಹುಚ್ಚು ಹಿಡಿಸಿದೆ. ಅಂತರ್ಜಾಲ ಪ್ರಿಯರಿಗಂತೂ ಟ್ಯಾಬ್ಲೆಟ್ ಬಹಳ ಸುಲಭದ ಸಾಧನ. ಎಲ್ಲೆಂದರಲ್ಲಿ, ಹೇಗಿದ್ದರೆ ಹಾಗೆ, ವೇಗವಾಗಿ ಇಂಟರ್‌ನೆಟ್ ಡೌನ್‌ಲೋಡ್‌ಗೆ ಸಹಕರಿಸುವ ಟ್ಯಾಬ್ಲೆಟ್, ಕಡಿಮೆ ಬೆಲೆಯಲ್ಲಿ ಲಭಿಸುತ್ತಿರುವುದೂ ಸಹ ಅದರ ಜನಪ್ರಿಯತೆಗೆ ಕಾರಣವಾಗಿದೆ.

ಭಾರತದಲ್ಲಿ 2011-12ರ ಸಾಲಿನ ಏಪ್ರಿಲ್-ಜೂನ್ ಅವಧಿಯಲ್ಲಿ 71,788 ಟ್ಯಾಬ್ಲೆಟ್‌ಗಳಷ್ಟೇ ಮಾರಾಟವಾಗಿದ್ದವು. ಆದರೆ, ಮರು ವರ್ಷ ಈ ಪ್ರಮಾಣ ಏಳೂವರೆ ಪಟ್ಟು ಹಿಗ್ಗಿತು. 2012-13ನೇ ಹಣಕಾಸು ವರ್ಷದ 1ನೇ ತ್ರೈಮಾಸಿಕ(ಏಪ್ರಿಲ್-ಜೂನ್) ಅವಧಿಯಲ್ಲಿ 5.5 ಲಕ್ಷ ಟ್ಯಾಬ್ಲೆಟ್‌ಗಳು ಮಾರಾಟವಾದವು.

ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮಸಂಗ್ ಶೇ 23.9ರಷ್ಟು ಷೇರುಪಾಲು ಹೊಂದಿ ಮೊದಲ ಸ್ಥಾನದಲ್ಲಿತ್ತು. ಪ್ರತಿ ತಿಂಗಳೂ ಹೊಸ ಹೊಸ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಪರಿಚಯವಾಗುತ್ತಲೇ ಇವೆ. ನಿಧಾನವಾಗಿ `ಡೆಸ್ಕ್‌ಟಾಪ್' ಮತ್ತು `ಲ್ಯಾಪ್‌ಟಾಪ್' ಸ್ಥಾನವನ್ನು ಆಕ್ರಮಮಿಸಿಕೊಳ್ಳುವ ಹಾದಿಯಲ್ಲಿ ಟ್ಯಾಬ್ಲೆಟ್ ಹೆಜ್ಜೆ ಊರುತ್ತಿದೆ.

2012-13ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಒಟ್ಟು 11 ಲಕ್ಷ ಟ್ಯಾಬ್ಲೆಟ್ ಮಾರಾಟವಾಗಿವೆ. ಹಿಂದಿನ ಹಣಕಾಸು ವರ್ಷದ 2ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಟ್ಯಾಬ್ಲೆಟ್ ಮಾರುಕಟ್ಟೆ ಶೇ 1,026.5ರಷ್ಟು ಭಾರಿ ಪ್ರಮಾಣದ ಪ್ರಗತಿ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ಮೈಕ್ರೋಮ್ಯಾಕ್ಸ್ ಶೇ 18.4ರಷ್ಟು ಮಾರುಕಟ್ಟೆ ಪಾಲು ಗಳಿಸಿ ದೊಡ್ಡ ಬ್ರಾಂಡ್‌ನ ಟ್ಯಾಬ್ಲೆಟ್‌ಗಳಿಗೆ ಸ್ಪರ್ಧೆ ಒಡ್ಡಿದೆ.

2012-13ರ ಏಪ್ರಿಲ್-ಜೂನ್‌ನ ಅವಧಿಗೆ ಹೋಲಿಸಿದಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಟ್ಯಾಬ್ಲೆಟ್ ಮಾರಾಟದಲ್ಲಿ ಶೇ 99.3ರಷ್ಟು ಹೆಚ್ಚಳವಾಗಿದೆ. ಅಂದರೆ, ತಿಂಗಳಿಂದ ತಿಂಗಳಿಗೆ ಟ್ಯಾಬ್ಲೆಟ್ ಮಾರಾಟ ಶರವೇಗದಲ್ಲಿ ಹೆಚ್ಚುತ್ತಾ ಸಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಶೇ 50ರಷ್ಟು ಮಂದಿಯ ಕೈಗಳಲ್ಲಿ ಟ್ಯಾಬ್ಲೆಟ್ ಕಾಣುವಂತಾದರೆ ಅಚ್ಚರಿ ಪಡಬೇಕಿಲ್ಲ. ಬಹಳ ಅಗ್ಗ ಎನಿಸಿರುವ ಅಂಶವೂ ಟ್ಯಾಬ್ಲೆಟ್ ಮಾಯೆ ಜೋರಾಗಲು ಕಾರಣವಾಗಿದೆ.

2012-13ರ 2ನೇ ತ್ರೈಮಾಸಿದಲ್ಲಿ ಮಾರಾಟವಾದ ಟ್ಯಾಬ್ಲೆಟ್‌ಗಳಲ್ಲಿ ವೈಫೈ ಸಂಪರ್ಕ ಇರುವ ಟ್ಯಾಬ್ಲೆಟ್‌ಗಳು ಶೇ 63.2ರಷ್ಟು ಮಾರಾಟವಾಗಿವೆ. 7 ಇಂಚು ಅಗಲದ ಸ್ಕ್ರೀನ್ ಇರುವ ಟ್ಯಾಬ್ಲೆಟ್‌ಗಳಿಗೆ ಶೇ 77.9ರಷ್ಟು ಬೇಡಿಕೆ ಬಂದಿದ್ದಿತು. ಆ್ಯಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಟ್ಯಾಬ್ಲೆಟ್‌ಗಳು ಶೇ 91.3ರಷ್ಟು ಬೇಡಿಕೆ ಗಿಟ್ಟಿಸಿದ್ದವು.

1 ಗಿಗಾಹರ್ಟ್ಸ್ ಪ್ರೊಸೆಸರ್ ವೇಗದ ಟ್ಯಾಬ್ಲೆಟ್‌ಗಳು ಶೇ 62.8ರಷ್ಟು ಬೇಡಿಕೆ ಪಡೆದುಕೊಂಡಿದ್ದರೆ, 512 ಎಂಬಿ ರ‌್ಯಾಮ್ ಟ್ಯಾಬ್ಲೆಟ್‌ಗಳಿಗೆ ಶೇ 56.4ರಷ್ಟು ಬೇಡಿಕೆ ಇದ್ದಿತು. ವಾಯ್ಸ ಕಾಲಿಂಗ್ ಸೌಲಭ್ಯವಿಲ್ಲದ ಟ್ಯಾಬ್ಲೆಟ್‌ಗಳಿಗೆ ಶೇ 62.9ರಷ್ಟು ಬೇಡಿಕೆ ಇದ್ದಿತು ಎಂಬ ಮಾಹಿತಿ ಸೈಬರ್ ಮೀಡಿಯಾ ರೀಸರ್ಚ್ ನಲ್ಲಿದೆ.

ಟ್ಯಾಬ್ಲೆಟ್ ವರ್ಷ 2013
2013ರಲ್ಲಿ ಟ್ಯಾಬ್ಲೆಟ್‌ಗಳ ಮಾರಾಟ ದ್ವಿಗುಣವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಶೋಧನಾ ಸಂಸ್ಥೆ `ಸೈಬರ್ ಮೀಡಿಯಾ ಫೋರ್‌ಕ್ಯಾಸ್ಟ್' ಭವಿಷ್ಯ ನುಡಿದಿದೆ.

2011ರಲ್ಲಿ ಕೇವಲ 5 ಲಕ್ಷ ಟ್ಯಾಬ್ಲೆಟ್‌ಗಳು ಮಾರಾಟವಾಗಿದ್ದರೆ, 2012ರಲ್ಲಿ 30 ಲಕ್ಷ ಟ್ಯಾಬ್ಲೆಟ್‌ಗಳು ಮಾರಾಟವಾಗಿವೆ. 2013ರ ಕೊನೆ ವೇಳೆಗೆ 60 ಲಕ್ಷ ಟ್ಯಾಬ್ಲೆಟ್‌ಗಳು ಮಾರಾಟವಾಗುವ ಅಂದಾಜು ಇದೆ ಎಂದಿದೆ `ಸೈಬರ್ ಮೀಡಿಯಾ ಫೋರ್‌ಕ್ಯಾಸ್ಟ್'.

ಲ್ಯಾಪ್‌ಟಾಪ್‌ನ ಅತಿ ಚಿಕ್ಕ ರೂಪವಾದ ನೆಟ್‌ಬುಕ್ ಹಾಗೂ ನೋಟ್‌ಬುಕ್‌ಗಳನ್ನು ಮೀರಿ ಟ್ಯಾಬ್ಲೆಟ್ ಭಾರತದಲ್ಲಿ ಹೆಚ್ಚು ಬಿಕರಿಯಾಗುತ್ತಿದೆ. 2012ರ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿಯೇ ಟ್ಯಾಬ್ಲೆಟ್ ಮಾರಾಟ ಮೂರು ಪಟ್ಟು ಹೆಚ್ಚಿದೆ ಎಂದು ಭಾರತೀಯ ಗಣಕಯಂತ್ರ ತಯಾರಕರ ಒಕ್ಕೂಟ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.