ADVERTISEMENT

ಇನ್ಫೊಸಿಸ್ ಲಾಭ ₹ 3,690 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:27 IST
Last Updated 13 ಏಪ್ರಿಲ್ 2018, 19:27 IST
ಸಿಎಫ್‌ಒ ರಂಗನಾಥ, ಸಿಒಒ ಯು. ಬಿ. ಪ್ರವೀಣ್‌ ರಾವ್‌ ಮತ್ತು ಸಿಇಒ ಸಲೀಲ್‌ ಪಾರೇಖ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ
ಸಿಎಫ್‌ಒ ರಂಗನಾಥ, ಸಿಒಒ ಯು. ಬಿ. ಪ್ರವೀಣ್‌ ರಾವ್‌ ಮತ್ತು ಸಿಇಒ ಸಲೀಲ್‌ ಪಾರೇಖ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ಇನ್ಫೊಸಿಸ್‌, ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ₹ 3,690 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಅವಧಿಯ ಇದೇ ತ್ರೈಮಾಸಿಕದಲ್ಲಿ ಇದ್ದ ₹ 3,603 ಕೋಟಿಗೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 2.4 ರಷ್ಟು ಅಲ್ಪ ಏರಿಕೆ ಆಗಿದೆ. ಸಂಸ್ಥೆಯ ವರಮಾನ ₹ 17,120 ಕೋಟಿಗಳಿಂದ ₹ 18,083 ಕೋಟಿಗಳಿಗೆ ವೃದ್ಧಿಯಾಗಿದೆ.

‘ಆರೋಗ್ಯಕರ ಬೆಳವಣಿಗೆ ಮತ್ತು ಲಾಭದಿಂದ ಸಂತೋಷವಾಗಿದೆ. ಈ ಪ್ರಗತಿಯು ಸಂಸ್ಥೆಯು ಗ್ರಾಹಕರೊಂದಿಗೆ ಹೊಂದಿರುವ ಸಂಬಂಧ ಮತ್ತು ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಪ್ರತಿಬಿಂಬಿಸುತ್ತಿದೆ’ ಎಂದು ಸಂಸ್ಥೆಯ ಸಿಇಒ ಸಲೀಲ್‌ ಪಾರೇಖ್‌ ತಿಳಿಸಿದ್ದಾರೆ.

ADVERTISEMENT

‘ಡಿಜಿಟಲ್‌ ವಹಿವಾಟು ವೃದ್ಧಿ, ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲನಾ ವ್ಯವಸ್ಥೆಯ ಮೂಲಕ ಗ್ರಾಹಕರ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದು, ಉದ್ಯೋಗಿಗಳ ಕೌಶಲ ವೃದ್ಧಿ ಮತ್ತು ಅಮೆರಿಕ, ಯೂರೋಪ್‌ ಮತ್ತು ಆಸ್ಟ್ರೇಲಿಯಾದಂತಹ ಮಾರುಕಟ್ಟೆಗಳಲ್ಲಿ ಪ್ರಾದೇಶಿಕ ವಹಿವಾಟು ವಿಸ್ತರಣೆಗೆ ತಂತ್ರಗಾರಿಕೆ ರೂಪಿಸುವುದಾಗಿ’ ಅವರು ಹೇಳಿದ್ದಾರೆ.

ಹೆಚ್ಚುವರಿ ನಗದು ಮಾರಾಟ: ಸಂಸ್ಥೆಯ ಬಳಿ ಇರುವ ಹೆಚ್ಚುವರಿ ನಗದನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಿಒಒ ಪ್ರವೀಣ್‌ ರಾವ್ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬರುವ ನಗದಿನಲ್ಲಿ ಶೇ 70 ರವರೆಗೂ ಷೇರುದಾರರಿಗೆ ಮರಳಿಸಲೂ ಆಡಳಿತ ಮಂಡಳಿ ನಿರ್ಧರಿಸಿದೆ.

‘ಷೇರುದಾರರಿಗೆ ₹ 13 ಸಾವಿರ ಕೋಟಿಯವರೆಗೂ ನೀಡಲಾಗುವುದು. ಇದರಲ್ಲಿ ವಿಶೇಷ ಲಾಭಾಂಶದ ರೂಪದಲ್ಲಿ ಪ್ರತಿ ಷೇರಿಗೆ ₹ 10ರಂತೆ 2018ರ ಜೂನ್‌ನಲ್ಲಿ ಒಟ್ಟು ₹ 2,600 ಕೋಟಿ ನೀಡಲು ನಿರ್ಧರಿಸಲಾಗಿದೆ. 2018–19ನೇ ಆರ್ಥಿಕ ವರ್ಷಕ್ಕೆ ಷೇರುದಾರರಿಗೆ
₹ 10,400 ಕೋಟಿ ನೀಡಲು ನಿರ್ಧರಿಸಲಾಗಿದೆ. ಆದರೆ ಯಾವ ರೂಪದಲ್ಲಿ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.