ADVERTISEMENT

ಇನ್ಫೊಸಿಸ್‌ ಲಾಭ ₹ 3,726 ಕೋಟಿ

ಇಸ್ರೇಲ್‌ನ ಪನಯಾ ಸ್ವಾಧೀನದಲ್ಲಿ ಅಕ್ರಮ ನಡೆದಿಲ್ಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಇನ್ಫೊಸಿಸ್‌ ಲಾಭ ₹ 3,726 ಕೋಟಿ
ಇನ್ಫೊಸಿಸ್‌ ಲಾಭ ₹ 3,726 ಕೋಟಿ   

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌, ಸೆಪ್ಟೆಂಬರ್‌ಗೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 3,726 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

‘ಕಳೆದ ವರ್ಷದ ಈ ಅವಧಿಯಲ್ಲಿನ ₹ 3,606 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.3ರಷ್ಟು ಏರಿಕೆ ದಾಖಲಿಸಿದೆ. ಒಟ್ಟಾರೆ ವರಮಾನವು ಶೇ 1.4ರಷ್ಟು ಹೆಚ್ಚಳಗೊಂಡು ₹ 17,567 ಕೋಟಿ ಗಳಿಗೆ ತಲುಪಿದೆ. 2017–18ರಲ್ಲಿ ವರಮಾನ ಹೆಚ್ಚಳದ ಅಂದಾಜನ್ನು ಶೇ 6.5–8.5 ದಿಂದ ಶೇ 5.5–6.5ಕ್ಕೆ ತಗ್ಗಿಸಲಾಗಿದೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮ ನಡೆದಿಲ್ಲ: ಇಸ್ರೇಲ್‌ನ ತಂತ್ರಜ್ಞಾನ ಸಂಸ್ಥೆ ಪನಯಾ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ADVERTISEMENT

‘ ಸ್ವತಂತ್ರ ತನಿಖಾ ಸಂಸ್ಥೆಯ ವರದಿ ಸರಿಯಾಗಿರುವುದು  ನಿರ್ದೇಶಕ ಮಂಡಳಿಗೆ ಮನವರಿಕೆಯಾಗಿದೆ’ ಎಂದು ನಿಲೇಕಣಿ ಹೇಳಿದ್ದಾರೆ.

ಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ ಎನ್ನುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಬಾಹ್ಯ ತನಿಖಾ ಸಂಸ್ಥೆ  ನೀಡಿದ್ದ ವರದಿಯನ್ನು ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ನೇತೃತ್ವದಲ್ಲಿನ ನಿರ್ದೇಶಕ ಮಂಡಳಿಯು ಒಪ್ಪಿಕೊಂಡಿದೆ.

ಈ ಸ್ವಾಧೀನ ಒಪ್ಪಂದ ಕುರಿತ ಸಂಪೂರ್ಣ ತನಿಖಾ ವರದಿಯನ್ನು ಬಹಿರಂಗಪಡಿಸದಿರುವ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ಅವರ ನಿಲುವನ್ನೇ ಹೊಸ  ನಿರ್ದೇಶಕ ಮಂಡಳಿಯು ಅನುಮೋದಿಸಿದೆ. ತನಿಖಾ ವರದಿಯ ಸಂಪೂರ್ಣ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಸಂಸ್ಥೆಯ ಸಹ ಸ್ಥಾಪಕ ಎನ್‌. ಆರ್. ನಾರಾಯಣಮೂರ್ತಿ ಅವರು ಒತ್ತಾಯಿಸಿದ್ದರು.

ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ, ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ರಾಜೀವ್‌ ಬನ್ಸಲ್‌ ಅವರಿಗೆ ಹೆಚ್ಚುವರಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದ ವಿವರಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದೂ ಮಂಡಳಿಯು ತಿಳಿಸಿದೆ.

ಮಂಡಳಿ ನಡೆಗೆ ಮೂರ್ತಿ ಅಸಮಾಧಾನ

ಕಾರ್ಪೊರೇಟ್‌ ಆಡಳಿತ ನಿಯಮಗಳನ್ನು ಪಾಲಿಸುವ ವಿಷಯದಲ್ಲಿ ಪಾರದರ್ಶಕತೆ ತೋರದ ಹೊಸ ನಿರ್ದೇಶಕ ಮಂಡಳಿಯ ಧೋರಣೆಗೆ ಇನ್ಫೊಸಿಸ್‌ನ ಸಹ ಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅವರು ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಾಜಿ ಸಿಎಫ್‌ಒ ರಾಜೀವ್‌ ಬನ್ಸಲ್‌ ಅವರಿಗೆ ಸೇವಾ ಒಪ್ಪಂದ ರದ್ದತಿ ಅನ್ವಯ ಗರಿಷ್ಠ ಮೊತ್ತದ ಪರಿಹಾರ ಒದಗಿಸಿರುವುದಕ್ಕೆ ಸಂಬಂಧಿಸಿದಂತೆ ನಾನು ಕೇಳಿದ್ದ  ಪ್ರಶ್ನೆಗಳಿಗೆ ನಿರ್ದೇಶಕ ಮಂಡಳಿಯು ಸಮಾಧಾನಕರ ಉತ್ತರ ನೀಡಿಲ್ಲ. ಅದರ ನಡವಳಿಕೆಯಲ್ಲಿ ಪಾರದರ್ಶಕತೆ ಕಂಡು ಬಂದಿಲ್ಲ. ಇದರಿಂದ ನನಗೆ ನಿರಾಶೆಯಾಗಿದೆ. ಅದಕ್ಷ ಆಡಳಿತ ಕುರಿತು ನಾನು ಪ್ರಸ್ತಾಪಿಸಿದ್ದ ಪ್ರತಿಯೊಂದು ಪ್ರಶ್ನೆಗೆ ನಾನು ಈಗಲೂ ಬದ್ಧನಾಗಿರುವೆ’. ಸಂಸ್ಥೆಯ ನಿರ್ದಿಷ್ಟ ಗುತ್ತಿಗೆ ಒಪ್ಪಂದಕ್ಕಿಂತ ಶೇ 1000ರಷ್ಟು ಹೆಚ್ಚಿನ ಮೊತ್ತವನ್ನು ಬನ್ಸಲ್‌ ಅವರಿಗೆ ಪಾವತಿಸಿರುವುದಕ್ಕೆ ಕಾರಣಗಳೇನು ಎನ್ನುವುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ. ಮಂಡಳಿಯು ಈ ಮಾಹಿತಿ ಬಹಿರಂಗಪಡಿಸದಿರಲು ಕಾರಣವೇನು’ ಎಂದು ಅವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.