ಮುಂಬೈ (ಪಿಟಿಐ): ದೇಶದ ಎರಡನೇ ಅತಿ ದೊಡ್ಡ ದೈತ್ಯ ಸಾಫ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ಪ್ರತಿ ತ್ರೈಮಾಸಿಕ ಲಾಭಾಂಶದಲ್ಲಿ ಕ್ರಮವಾಗಿ ಶೇ. 2.4 ರಷ್ಟು ಇಳಿಕೆ ಆಗುತ್ತಿದ್ದು, ಕಷ್ಟದ ದಿನಗಳು ಮುಂದಿವೆ ಎಂದು ಆತಂಕ ವ್ಯಕ್ತಪಡಿಸಿದೆ.
2011-12ರ ಹಣಕಾಸು ವರ್ಷದ ಕಡೆಯ ತ್ರೈಮಾಸಿಕ ಅವಧಿ (ಜನವರಿ 2012ರಿಂದ ಮಾರ್ಚಿ 2012)ಯಲ್ಲಿ ಕಂಪೆನಿ ಶೇ.27.4 ರಷ್ಟು ಲಾಭಾಂಶ ಪಡೆದಿದೆ. ಇದೇ ಅವಧಿಯಲ್ಲಿ ಅದು ಪಡೆದ ಲಾಭಾಂಶ 2,316 ಕೋಟಿ ರೂಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1818 ಕೋಟಿ ರೂಗಳಷ್ಟು ಆದಾಯ ಪಡೆದಿತ್ತು.
ಆದರೆ ಪ್ರತಿ ತ್ರೈಮಾಸಿಕ ಅವಧಿಯಲ್ಲೂ ಲಾಭದಲ್ಲಿ ಕ್ರಮವಾಗಿ ಶೇ. 2.4 ರಷ್ಟು ಕುಸಿತ ಉಂಟಾಗುತ್ತಿರುವುದು ಇನ್ಫೋಸಿಸ್‌ನ ತಲೆ ನೋವಿಗೆ ಕಾರಣವಾಗಿದೆ. ಭವಿಷ್ಯದಲ್ಲಿ ಅಪಾಯ ಕಾದಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.
ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ರೂಪಾಯಿಯ ಮೌಲ್ಯ ಕುಸಿಯುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿವೆ ಎಂದು ದೇಶದ 2ನೆ ಅತಿ ದೊಡ್ಡ ಸಾಫ್ಟ್‌ವೇರ್ ಕಂಪೆನಿ ಹೇಳಿದೆ. ತಕ್ಷಣಕ್ಕೆ ಯಾವುದೇ ಉತ್ತೇಜಕ ವಾತಾವರಣ ಇಲ್ಲ ಎಂದೂ ಅದು ಹೇಳಿದ್ದು, ಮುಂಬರುವ ದಿನಗಳು ನಿಜಕ್ಕೂ ಸವಾಲಿನ ದಿನಗಳೇ ಆಗಿವೆ ಎಂದು ತಿಳಿಸಿದೆ.
ಇದರಿಂದಾಗಿ ಷೇರುಮಾರುಕಟ್ಟೆಯಲ್ಲೂ ಕಂಪೆನಿಯ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡವು.
ಆದಾಗ್ಯೂ 2011-12ರ ಹಣಕಾಸು ವರ್ಷದ ಅಂತ್ಯಕ್ಕೆ ಕಂಪೆನಿ ಪಡೆದ ನಿವ್ವಳ ಲಾಭ 8,316 ಕೋಟಿ ರೂಗಳು. ಇದು ಹಿಂದಿನ ವರ್ಷ ಅಂದರೆ 2010-11ಕ್ಕೆ ಹೋಲಿಸಿದರೆ ಶೇ. 22.66 ರಷ್ಟು ಹೆಚ್ಚಳವಾಗಿದೆ. ಆದರೆ ಕಳೆದ ತ್ರೈಮಾಸಿಕ ಅವಧಿಯಾದ 2011ರ ಅಕ್ಟೋಬರ್-ಡಿಸೆಂಬರ್ ಅವಧಿಗೆ ಹೋಲಿಸಿದರೆ ಈ ಬಾರಿಯ ತ್ರೈಮಾಸಿಕ ಲಾಭಾಂಶದಲ್ಲಿ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.