ADVERTISEMENT

ಇನ್ಫೋಸಿಸ್: ರೂ. 2,316 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಬೆಂಗಳೂರು: ಮಾರ್ಚ್ 31ಕ್ಕೆ ಕೊನೆಗೊಂಡ 2011-12ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್ ಸೇವೆಗಳ ರಫ್ತು ಸಂಸ್ಥೆ ಇನ್ಫೋಸಿಸ್ ರೂ 2,316 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಹಿಂದಿನ ಹಣಕಾಸು ವರ್ಷದ (2010-11) ಇದೇ ಅವಧಿಗೆ ಹೋಲಿಸಿದರೆ (ಜನವರಿ-ಮಾರ್ಚ್) ನಿವ್ವಳ ಲಾಭ ಪ್ರಮಾಣ ಶೇ. 27.4ರಷ್ಟು ಏರಿಕೆ ಕಂಡಿದೆ. ಆದರೆ,    2011-12ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ನಿವ್ವಳ ಲಾಭ ಶೇ. 2.4ರಷ್ಟು ಕುಸಿತ ಕಂಡಿದೆ.

2011-12ನೇ ಹಣಕಾಸು ವರ್ಷದಲ್ಲಿ ಕಂಪನಿ ಒಟ್ಟಾರೆ ರೂ 8,316 ಕೋಟಿ (ನಾಲ್ಕೂ ತ್ರೈಮಾಸಿಕ ಅವಧಿ ಸೇರಿ) ನಿವ್ವಳ ಲಾಭ ಗಳಿಸಿದ್ದು, ಶೇ. 21.88ರಷ್ಟು ಏರಿಕೆ ಕಂಡಿದೆ.  2010-11ರಲ್ಲಿ ಇದು ರೂ6,823 ಕೋಟಿಯಷ್ಟಿತ್ತು.

2011-12ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ವರಮಾನವೂ ಶೇ. 22ರಷ್ಟು ಹೆಚ್ಚಿದ್ದು, ಹಿಂದಿನ ವರ್ಷದ ರೂ7,250 ಕೋಟಿಯಿಂದ ರೂ8,852 ಕೋಟಿಗೆ ಏರಿಕೆ ಕಂಡಿದೆ. ಆದರೆ, ಮೂರನೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ವರಮಾನ ಶೇ. 4.8ರಷ್ಟು ಕುಸಿತ ಕಂಡಿದೆ.

`ಒಂದು ತ್ರೈಮಾಸಿಕದಿಂದ ಮತ್ತೊಂದು ತ್ರೈಮಾಸಿಕ ಅವಧಿಗೆ ಕಂಪನಿಯ ವರಮಾನ ಗಣನೀಯ ಇಳಿಕೆ ಕಂಡಿದೆ. ಜಾಗತಿಕ ಕರೆನ್ಸಿ ವಿನಿಮಯ ಮಾರುಕಟ್ಟೆಯ ಏರಿಳಿತವೇ ಇದಕ್ಕೆ ಪ್ರಮುಖ ಕಾರಣ~ ಎಂದು ಇನ್ಫೋಸಿಸ್  ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ವಿಶ್ಲೇಷಿಸಿದ್ದಾರೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ರೂ9,391ರಿಂದ ರೂ9,412 ಕೋಟಿಯಷ್ಟು ವರಮಾನ ದಾಖಲಾಗಬಹುದು ಎಂದು ಕಂಪನಿ ಈ ಮೊದಲು ಅಂದಾಜಿಸಿತ್ತು. ಆದರೆ, ಈ ಲೆಕ್ಕಾಚಾರ ಹುಸಿಯಾಗಿದೆ. 2011-12ನೇ ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟಾರೆ ರೂ33,734 ಕೋಟಿಯಷ್ಟು (ನಾಲ್ಕೂ ತ್ರೈಮಾಸಿಕ ಅವಧಿ ಸೇರಿ) ವರಮಾನ ದಾಖಲಿಸಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಶೇ. 22.66ರಷ್ಟು ಏರಿಕೆ ಕಂಡಿದೆ.  2010-11ರಲ್ಲಿ ಇದು ರೂ27,501 ಕೋಟಿಯಷ್ಟಿತ್ತು.

ಲಾಭಾಂಶ: ಪ್ರತಿ ಷೇರಿಗೆ ರೂ22ರಂತೆ ( ಶೇ. 440) ಅಂತಿಮ ಲಾಭಾಂಶ ವಿತರಿಸಲು ಕಂಪನಿಯ ಆಡಳಿತ ಮಂಡಳಿ ನಿರ್ಧರಿಸಿದೆ.  ಇನ್ಫೋಸಿಸ್‌ನ `ಬಿಪಿಒ~  ಕಂಪನಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಲಾಭಾಂಶ ರೂ10 ನೀಡಲಾಗುವುದು ಎಂದು ಘೋಷಿಸಿದೆ.

2013ರ ಮುನ್ನೋಟ: ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿನ ಏರಿಳಿತದಿಂದ ಇನ್ಫೋಸಿಸ್ 2012-13ನೇ ಸಾಲಿನ   ಲಾಭಾಂಶ ಮತ್ತು ವರಮಾನ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಕಡಿಮೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.
 
2013ರಲ್ಲಿ ವರಮಾನ ಶೇ. 8ರಿಂದ 10ರಷ್ಟು ಹೆಚ್ಚಿ 7,553 ದಶಲಕ್ಷ ಡಾಲರ್‌ಗಳಿಂದ 7,692 ದಶಲಕ್ಷ ಡಾಲರ್ ನಡುವೆ ಇರುವ ನಿರೀಕ್ಷೆ ಇದೆ. ಇದು `ನಾಸ್ಕಾಂ~ ಅಂದಾಜು ಮಾಡಿರುವುದಕ್ಕಿಂತ (ಶೇ. 11ರಿಂದ 14) ಕಡಿಮೆ ಇರುವುದು ಭವಿಷ್ಯದ ದಿನಗಳಲ್ಲಿನ ಪ್ರಗತಿ ಗತಿಯ ಚಿತ್ರಣ.
 

ಸೂಚ್ಯಂಕ ಕುಸಿತ

ಇನ್ಫೋಸಿಸ್‌ನ ಹಣಕಾಸು ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ, ಷೇರುಪೇಟೆ ಶುಕ್ರವಾರ ಋಣಾತ್ಮಕವಾಗಿ ಸ್ಪಂದಿಸಿದ್ದು, ಸಂವೇದಿ ಸೂಚ್ಯಂಕ 238 ಅಂಶಗಳಷ್ಟು ಕುಸಿತ ಕಂಡಿತು. ಇನ್ಫೋಸಿಸ್ ಷೇರು ದರ ಶೇ. 12ರಷ್ಟು (ರೂ2,403) ಕುಸಿಯಿತು.

ADVERTISEMENT

35 ಸಾವಿರ ಉದ್ಯೋಗ

ಪ್ರಸಕ್ತ ಹಣಕಾಸು ವರ್ಷದಲ್ಲಿ (2012-13) ಒಟ್ಟು 35 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಶಿಬುಲಾಲ್ ಹೇಳಿದ್ದಾರೆ.

`ಬಿಪಿಒ~ ವಿಭಾಗಕ್ಕೆ 13 ಸಾವಿರ ಮಂದಿ ನೇಮಕಗೊಳ್ಳಲಿದ್ದಾರೆ. ಅಮೆರಿಕದಲ್ಲಿ  ಕೂಡ 1,200 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದರು. ಇನ್ಫೋಸಿಸ್‌ನಲ್ಲಿ ಸದ್ಯ 1,49,994 ಉದ್ಯೋಗಿಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.