ADVERTISEMENT

ಇನ್ಸುಲಿನ್, ಸಿನಿಮಾ ಟಿಕೆಟ್, ಪ್ರಿಂಟರ್ ಸೇರಿ 66 ವಸ್ತುಗಳ ತೆರಿಗೆ ದರ ಇಳಿಕೆ

ಪಿಟಿಐ
Published 11 ಜೂನ್ 2017, 12:06 IST
Last Updated 11 ಜೂನ್ 2017, 12:06 IST
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಜಿಎಸ್‌ಟಿ ಸಭೆಯಲ್ಲಿ ಆದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ(ಎಡ) ಜತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತುಕತೆ ನಡೆಸುತ್ತಿರುವುದು (ಪಿಟಿಐ ಚಿತ್ರ)
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಜಿಎಸ್‌ಟಿ ಸಭೆಯಲ್ಲಿ ಆದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ(ಎಡ) ಜತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತುಕತೆ ನಡೆಸುತ್ತಿರುವುದು (ಪಿಟಿಐ ಚಿತ್ರ)   

ನವದೆಹಲಿ: ಆಹಾರ ವಸ್ತುಗಳಾದ ಉಪ್ಪಿನಕಾಯಿ, ಸಾಸಿವೆ ಸಾಸ್, ಮಧುಮೇಹದ ಚಿಕಿತ್ಸೆಗೆ ಬಳಸುವ ಇನ್ಸುಲಿನ್, ಎಲೆಕ್ಟ್ರಾನಿಕ್ ವಸ್ತುವಾದ ಪ್ರಿಂಟರ್, ₹ 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್‌ ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ.

ಭಾನುವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ 16ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇನ್ಸುಲಿನ್ ಮತ್ತು ಅಗರಬತ್ತಿ ಮೇಲಿನ ತೆರಿಗೆ ದರವನ್ನು ಶೇಕಡ 18ರಿಂದ 5ಕ್ಕೆ ಇಳಿಕೆ ಮಾಡಲಾಗಿದೆ. ₹ 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್‌ಗೆ ಇನ್ನು ಶೇಕಡ 18ರ ತೆರಿಗೆ ಅನ್ವಯವಾಗಲಿದೆ. ಈ ಹಿಂದೆ ಶೇಕಡ 28ರಷ್ಟು ತೆರಿಗೆ ವಿಧಿಸಲು ಪ್ರಸ್ತಾವಿಸಲಾಗಿತ್ತು.

ADVERTISEMENT

ಉಪ್ಪಿನಕಾಯಿ, ಸಾಸಿವೆ ಸಾಸ್ ಮತ್ತು ಮೊರಬ್ಬಾಕ್ಕೆ ಈ ಹಿಂದೆ ಪ್ರಸ್ತಾವಿಸಲಾಗಿದ್ದ ಶೇಕಡ 18ರ ತೆರಿಗೆಗೆ ಬದಲಾಗಿ ಶೇಕಡ 12ರ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.

₹ 75 ಲಕ್ಷ ಮತ್ತು ಅದಕ್ಕಿಂತ ಕಡಿಮೆ ವಹಿವಾಟು ನಡೆಸುವ ವ್ಯಾಪಾರಿಗಳಿಗೆ, ರೆಸ್ಟೋರೆಂಟ್ ಮಾಲೀಕರಿಗೆ ಮತ್ತು ಉತ್ಪದನಾ ಕಪೆನಿಗಳ ಮಾಲೀಕರಿಗೆ ಶೇಕಡ 1, 2 ಮತ್ತು 5ರ ದರದಲ್ಲಿ ತೆರಿಗೆ ಪಾವತಿಸುವ ಯೋಜನೆಯ ಆಯ್ಕೆಯ ಅವಕಾಶ ನೀಡಲಾಗಿದೆ.

ರೇಖಾಚಿತ್ರ ಪುಸ್ತಕಕ್ಕಿಲ್ಲ ತೆರಿಗೆ: ಶಾಲಾ ಮಕ್ಕಳ ರೇಖಾಚಿತ್ರ ಪುಸ್ತಕಕ್ಕೆ ಶೇಕಡ 12ರ ತೆರಿಗೆ ವಿಧಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಇದನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.