ನವದೆಹಲಿ(ಪಿಟಿಐ): ನೌಕರರ ಭವಿಷ್ಯನಿಧಿಯ ಬಡ್ಡಿದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 8.6ಕ್ಕೆ ಏರಿಸಲಾಗುವುದು. ಇದರಿಂದ ದೇಶದ 5 ಕೋಟಿ ನೌಕರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ತಮ್ಮ ಖಾತೆಗೆ ಸಂಬಂಧಿಸಿದ ಚರ್ಚೆ ವೇಳೆ ಮಾತನಾಡಿದ ಅವರು, ಭವಿಷ್ಯನಿಧಿ ಯಲ್ಲಿನ ಹಣವನ್ನು ವಿಶೇಷ ಠೇವಣಿ ಯೋಜನೆಗಳಲ್ಲಿ ಹೂಡಿದ್ದರಿಂದ ಕಡಿಮೆ ಆದಾಯ ಬಂದಿತು. ಇದರಿಂದ ಬಡ್ಡಿದರ (ಶೇ. 8.25) ಕಡಿಮೆ ಮಾಡಲಾಯಿತು. ಇಲ್ಲಿ ಕನಿಷ್ಠ-ಗರಿಷ್ಠ ಬಡ್ಡಿದರದ ಪ್ರಶ್ನೆ ಎದುರಾಗದು. ಮುಂದಿನ ದಿನಗಳಲ್ಲಿ ಶೇ. 8.6ಕ್ಕೆ ಏರಿಸಲಾಗುವುದು ಎಂದರು.
ಪ್ರತಿ ಬ್ಲಾಕ್‌ನಲ್ಲೂ ಎಲ್‌ಪಿಜಿ ಏಜೆನ್ಸಿ: ಕೇಂದ್ರ ಚಿಂತನೆ
ನವದೆಹಲಿ (ಪಿಟಿಐ): ಪ್ರತಿಯೊಬ್ಬರಿಗೂ ಎಲ್‌ಪಿಜಿ ಅಡುಗೆ ಸಿಲಿಂಡರ್ ತಲುಪಿಸುವ ಗುರಿಯೊಂದಿಗೆ ರಾಷ್ಟ್ರದ ಪ್ರತಿ ಬ್ಲಾಕ್‌ನಲ್ಲೂ ಸಿಲಿಂಡರ್ ವಿತರಣಾ ಏಜೆನ್ಸಿ ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಆರ್‌ಪಿಎನ್ ಸಿಂಗ್ ಗುರುವಾರ ಲೋಕಸಭೆಯಲ್ಲಿ ಪ್ರಶೋತ್ತರ ವೇಳೆ ಇದನ್ನು ತಿಳಿಸಿದರು.
2009-12ರ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು 905 ಸಾಮಾನ್ಯ ಎಲ್‌ಪಿಜಿ ವಿತರಣಾ ಏಜೆನ್ಸಿಗಳನ್ನು ಹಾಗೂ 1026 ರಾಜೀವ್ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಣಾ ಏಜೆನ್ಸಿಗಳನ್ನು ಆರಂಭಿಸಿವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.